ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಮಾಜಮುಖಿ ಸಂತನಿಗೆ ದಸರಾ ಉದ್ಘಾಟನೆಯ ಗೌರವ : ಹಾಗರಗುಂಡಗಿ ಪರ್ವತಯ್ಯ ಜ್ಞಾನದ ಮೇರುಪರ್ವತ

ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಅ.11ರಂದು ನಾಡದೇವಿ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳು ಉದ್ಘಾಟಿಸಲಿದ್ದಾರೆ. ನಾಡಿನ ಸಾಂಸ್ಕೃ ತಿಕ ಪರಂಪರೆಯ ಪ್ರತೀಕವಾದ ದಸರೆಯ ಉದ್ಘಾಟನೆಗೆ ಆಯ್ಕೆಯಾಗಿರುವ ಶ್ರೀಗಳ ಬದುಕು, ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳು ಈ ಸಂದರ್ಭದಲ್ಲಿ ವಿಶೇಷ ಗಮನ ಸೆಳೆಯುತ್ತಿವೆ.

ಹಾಗರಗುಂಡಗಿ ಪರ್ವತಯ್ಯ ಜ್ಞಾನದ ಮೇರುಪರ್ವತ

-

Profile
Ashok Nayak Oct 10, 2026 5:19 PM

ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾ ಸ್ವಾಮೀಜಿ ಬದುಕು ಪ್ರೇರಣೆ

ಕೆ.ಜೆ.ಲೋಕೇಶ್ ಬಾಬು

ಮೈಸೂರು: ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ಶಿಕ್ಷಣವೇ ಮೊಟಕುಗೊಳ್ಳುವ ಆತಂಕ ಎದುರಿಸಿದ್ದ ಬಾಲಕ ಇಂದು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವ ಶಿಕ್ಷಣದ ಆಶ್ರಯದಾತ. ಅನ್ನಕ್ಕಾಗಿ ಪರದಾಡುವವರಿಗೆ ಅನ್ನದಾತ, ಜ್ಞಾನಕ್ಕಾಗಿ ಹಂಬಲಿಸುವವರಿಗೆ ಜ್ಞಾನದಾತ, ಬರದ ನಾಡಿನಲ್ಲಿ ಹಸಿರು ಬೆಳೆಸಲು ಸಂಕಲ್ಪ ತೊಟ್ಟ ಪರಿಸರ ಪ್ರೇಮಿ, ನೀರಿನ ಹನಿಯಲ್ಲೂ ಭವಿಷ್ಯ ಕಾಣುವ ಸಮಾಜಮುಖಿ ಸಂತ. ಇವರೇ ಕೊಪ್ಪಳದ ಸಂಸ್ಥಾನ ಗವಿಮಠದ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು. ಈಗ ಇವರ ಸೇವಾ ಪಯಣಕ್ಕೆ ಮತ್ತೊಂದು ಮಹತ್ವದ ಘಟ್ಟ ಸೇರ್ಪಡೆಯಾಗುತ್ತಿದೆ.

ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಅ.11ರಂದು ನಾಡದೇವಿ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳು ಉದ್ಘಾಟಿಸಲಿದ್ದಾರೆ. ನಾಡಿನ ಸಾಂಸ್ಕೃ ತಿಕ ಪರಂಪರೆಯ ಪ್ರತೀಕವಾದ ದಸರೆಯ ಉದ್ಘಾಟನೆಗೆ ಆಯ್ಕೆಯಾಗಿರುವ ಶ್ರೀಗಳ ಬದುಕು, ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳು ಈ ಸಂದರ್ಭದಲ್ಲಿ ವಿಶೇಷ ಗಮನ ಸೆಳೆಯುತ್ತಿವೆ.

ಕೊಪ್ಪಳದ ಗವಿಮಠದಲ್ಲಿ ಶಿಕ್ಷಣ, ದಾಸೋಹ, ಪರಿಸರ ಸಂರಕ್ಷಣೆ, ಜಲಜಾಗೃತಿ ಮತ್ತು ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿರುವ ಶ್ರೀಗಳ ಬದುಕು, ನಾಡಿನ ಜನರಿಗೆ ಪರಿಚಯವಾಗುವ ಮತ್ತೊಂದು ಅವಕಾಶ ಇದಾಗಿದೆ. ಈ ಬಾರಿ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ದಸರೆ ಯನ್ನು ಉದ್ಘಾಟಿಸಲಿರುವ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಜೀವನ ಮತ್ತು ಸೇವಾ ಪಯಣವು ಶಿಕ್ಷಣ, ಮಾನವೀಯತೆ ಹಾಗೂ ಸಮಾಜದ ಒಗ್ಗಟ್ಟಿನ ಮಹತ್ವವನ್ನು ಮತ್ತೊಮ್ಮೆ ನೆನಪಿಸುವ ಸಂದರ್ಭವಾಗಿದೆ.

ಇದನ್ನೂ ಓದಿ: Gavisiddesh K Column: ಮಹಾಲಯದ ಮಹಾತ್ಮೆ: ಸ್ಮರಣೆಯಿಂದ ಸಂಸ್ಕಾರದವರೆಗೆ

ಸಂಕಷ್ಟದಿಂದ ಸಂಕಲ್ಪದತ್ತ: 1977ರಲ್ಲಿ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದಲ್ಲಿ ಸಾಮಾನ್ಯ ಜಂಗಮ ಕುಟುಂಬದಲ್ಲಿ ಜನಿಸಿದ ಬಾಲಕ ಪರ್ವತಯ್ಯ ಹಿರೇಮಠ ಅವರ ಬಾಲ್ಯ ಆರ್ಥಿಕ ಸಂಕಷ್ಟಗಳ ನಡುವೆ ಸಾಗಿತು. ಕುಟುಂಬದ ಪರಿಸ್ಥಿತಿಯಿಂದಾಗಿ ಅವರ ಶಿಕ್ಷಣ ಪದೇಪದೇ ಅಡಚಣೆಗಳನ್ನು ಎದುರಿಸಬೇಕಾಯಿತು. 1989-90ರ ಅವಧಿಯಲ್ಲಿ ಹಾಗರಗುಂಡಗಿ ಗ್ರಾಮಕ್ಕೆ ಆಗಮಿಸಿದ್ದ ವಿಜಯಪುರದ ತಮದಡ್ಡಿ ಮಠದ ಶ್ರೀ ಶಿವಶಂಕರ ಸ್ವಾಮೀಜಿಗಳು, ಪರ್ವತಯ್ಯನವರ ಶಿಕ್ಷಣದ ಸಮಸ್ಯೆಯನ್ನು ಗಮನಿಸಿದರು. ಬಾಲಕನ ಓದು ನಿಲ್ಲಬಾರದು ಎಂಬ ಉದ್ದೇಶದಿಂದ ಆತನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಮಠವೊಂದರಲ್ಲಿ ಸೇರಿಸಿ ಶಿಕ್ಷಣ ಕೊಡಿಸುವ ನಿರ್ಧಾರ ಕೈಗೊಂಡರು. ಅವರ ಗುರಿ ಗದಗ ಜಿಲ್ಲೆಯ ಮುಂಡರಗಿಯ ಶ್ರೀ ಅನ್ನದಾನೇಶ್ವರ ಮಠದ ವಸತಿನಿಲಯವಾಗಿತ್ತು. ಆದರೆ, ಕೊಪ್ಪಳದಿಂದ ಮುಂಡರಗಿಗೆ ತೆರಳುವ ಕೊನೆಯ ಬಸ್ ತಪ್ಪಿ ಹೋಯಿತು. ಹೀಗಾಗಿ ಅಂದು ರಾತ್ರಿ ಕೊಪ್ಪಳದ ಗವಿಮಠದಲ್ಲಿ ತಂಗುವ ಸಂದರ್ಭ ಎದುರಾ ಯಿತು. ಆ ಅನಿರೀಕ್ಷಿತ ತಂಗುವಿಕೆಯೇ ಪರ್ವತಯ್ಯನವರ ಬದುಕಿನ ದಿಕ್ಕು ಬದಲಿಸಿದ ಮಹತ್ವದ ತಿರುವಾಯಿತು. ಅಂದಿನ ಗವಿಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮೀಜಿ ಗಳು ಬಾಲಕನ ಕುರಿತು ವಿಚಾರಿಸಿ, ಗವಿಮಠದಲ್ಲಿಯೇ ಉತ್ತಮ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಇರುವುದಾಗಿ ತಿಳಿಸಿದರು. ಬಳಿಕ ಪರ್ವತಯ್ಯನವರು ಗವಿಮಠದಲ್ಲಿಯೇ ತಮ್ಮ ಶಿಕ್ಷಣ ಮುಂದುವರಿಸಲು ನಿರ್ಧರಿಸಿದರು. ಮುಂಡರಗಿಗೆ ತಲುಪಬೇಕಿದ್ದ ಪಯಣ ಕೊಪ್ಪಳದಲ್ಲಿ ಹೊಸ ದಾರಿಯನ್ನು ಕಂಡುಕೊಂಡಿತು. ಶಿಕ್ಷಣದ ಅವಕಾಶಕ್ಕಾಗಿ ಆರಂಭವಾದ ಪ್ರಯಾಣವು ಮುಂದೆ ಸಮಾಜಸೇವೆಯ ವಿಶಾಲ ಪಥವಾಗಿ ಬೆಳೆಯಿತು.

ವಿದ್ಯಾರ್ಥಿಯಿಂದ ಅಭಿನವ ಗವಿಸಿದ್ಧೇಶ್ವರರಾಗಿ: ಗವಿಮಠದಲ್ಲಿ ಶಿಕ್ಷಣ ಪಡೆಯುತ್ತಲೇ ಪರ್ವತ ಯ್ಯನವರು ಮಠದ ಸೇವೆಯಲ್ಲೂ ತೊಡಗಿಸಿಕೊಂಡರು. ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳ ಮಾರ್ಗ ದರ್ಶನ, ಶಿಸ್ತು ಮತ್ತು ಪ್ರೋತ್ಸಾಹ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಅಧ್ಯಯನದೊಂದಿಗೆ ಆಧ್ಯಾತ್ಮಿಕ ಚಿಂತನೆ, ಬಸವಾದಿ ಶರಣರ ವಚನಗಳ ಅಧ್ಯಯನ ಹಾಗೂ ಮಠದ ದೈನಂದಿನ ಸೇವೆಯಲ್ಲಿ ತೊಡಗಿಸಿಕೊಂಡ ಅವರು ಕ್ರಮೇಣ ಪರ್ವತದೇವರಾಗಿ ಬೆಳೆದರು. ಗುಣಮಟ್ಟದ ಶಿಕ್ಷಣದ ಮೇಲಿನ ಆಸಕ್ತಿಯನ್ನು ಮುಂದುವರಿಸಿದ ಅವರು ಗುಲ್ಬರ್ಗಾ ವಿಶ್ವವಿ ದ್ಯಾಲಯದಲ್ಲಿ ಬಿ.ಎ.ಪದವಿಯನ್ನು ‌ ರ್ಯಾಂಕ್‌ʼನೊಂದಿಗೆ ಪೂರ್ಣಗೊಳಿಸಿದರು. ಬಳಿಕ ಪುಣೆ ಮತ್ತು ತಿರುಪತಿಯಲ್ಲಿ ತತ್ವಶಾಸ್ತ್ರ, ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದರು.

ಗುರುಗಳ ಆಶಯದಂತೆ 2002ರ ಡಿಸೆಂಬರ್ 13ರಂದು, 25ನೇ ವಯಸ್ಸಿನಲ್ಲಿ ಪರ್ವತದೇವರಿಗೆ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಎಂಬ ಹೆಸರಿನಲ್ಲಿ ನಿರಂಜನ ಪಟ್ಟಾಧಿಕಾರ ನೆರವೇರಿತು. ಹೀಗೆ ಸಂಕಷ್ಟಗಳ ನಡುವೆ ಶಿಕ್ಷಣದ ಹಾದಿ ಹಿಡಿದ ಬಾಲಕ, ಮುಂದೆ ಶಿಕ್ಷಣವನ್ನೇ ಸಮಾಜ ಪರಿವರ್ತನೆಯ ಶಕ್ತಿಯನ್ನಾಗಿ ನೋಡುವ ಮಠದ ಪೀಠಾಧಿಪತಿಯಾಗಿ ಬೆಳೆದರು.

ಬರದ ನಾಡಿಗೆ ಹಸಿರಿನ ಕನಸು: ಬಿಸಿಲು ಮತ್ತು ನೀರಿನ ಕೊರತೆಯ ಸವಾಲುಗಳನ್ನು ಎದುರಿ ಸುವ ಕೊಪ್ಪಳ ಭಾಗದಲ್ಲಿ ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಪ್ರತಿವರ್ಷ ಗಿಡಗಳನ್ನು ನೆಡುವುದು, ಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದು ಹಾಗೂ ಹಸಿರು ವಾತಾವರಣ ನಿರ್ಮಾಣದ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಗಳು ಶ್ರೀಗಳ ಸೇವಾ ಚಟುವಟಿಕೆಗಳ ಭಾಗವಾಗಿವೆ.

ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ: ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಸೇವಾ ಚಿಂತನೆಯ ಕೇಂದ್ರಬಿಂದುವಿನಲ್ಲಿ ಶಿಕ್ಷಣವಿದೆ. ಮಹಿಳಾ ಶಿಕ್ಷಣ, ಯುವಜನರ ಶಿಕ್ಷಣ, ವಿಶೇಷ ಚೇತನರ ಕಲ್ಯಾಣ, ಬಾಲ್ಯವಿವಾಹ ವಿರೋಧಿ ಜಾಗೃತಿ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ವಿಶೇಷವಾಗಿ, ಆರ್ಥಿಕ ಸಂಕಷ್ಟದಿಂದ ಮಕ್ಕಳ ಶಿಕ್ಷಣ ಮೊಟಕುಗೊಳ್ಳಬಾರದು ಎಂಬ ಆಶಯಕ್ಕೆ ಆದ್ಯತೆ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳು, ವಸತಿ ವ್ಯವಸ್ಥೆಗಳು ಮತ್ತು ಉಚಿತ ಶಿಕ್ಷಣದ ಅವಕಾಶಗಳ ಮೂಲಕ ಗ್ರಾಮೀಣ ಹಾಗೂ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ನೆರವಾಗುವ ಪ್ರಯತ್ನಗಳು ನಡೆಯುತ್ತಿವೆ. ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ವಸತಿ ಸೌಲಭ್ಯಗಳಿರುವ ಶಿಕ್ಷಣ ವ್ಯವಸ್ಥೆಗೂ ಪ್ರೋತ್ಸಾಹ ನೀಡಲಾಗಿದೆ. ಶಿಕ್ಷಣವೆಂದರೆ ಉದ್ಯೋಗ ಪಡೆಯುವ ಸಾಧನ ಮಾತ್ರವಲ್ಲ; ವ್ಯಕ್ತಿತ್ವ ರೂಪಿಸುವ, ಸ್ವಾವಲಂಬನೆ ಬೆಳೆಸುವ ಮತ್ತು ಸಮಾಜದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಶಕ್ತಿ ಎಂಬ ದೃಷ್ಟಿಕೋನ ಇಲ್ಲಿ ಪ್ರಮುಖವಾಗಿದೆ.

ನೀರಿನ ಹನಿಯಲ್ಲಿ ನಾಳೆಯ ಬದುಕು

ಬರ ಮತ್ತು ಜಲಕ್ಷಾಮದ ಸಮಸ್ಯೆಗಳನ್ನು ಎದುರಿಸುವ ಪ್ರದೇಶದಲ್ಲಿ ನೀರಿನ ಸಂರಕ್ಷಣೆ ಅತ್ಯಂತ ಮಹತ್ವದ ವಿಚಾರ. ಈ ಹಿನ್ನೆಲೆ ಕೊಪ್ಪಳ ತಾಲೂಕಿನ ಹಿರೇಹಳ್ಳದ ಪುನಶ್ಚೇತನಕ್ಕೆ ಕೈಜೋಡಿಸಿರುವ ಪ್ರಯತ್ನಗಳು ಗಮನಾರ್ಹವಾಗಿವೆ. ಸುಮಾರು 25-26 ಕಿಲೋ ಮೀಟರ್ ವ್ಯಾಪ್ತಿಯ ಹಿರೇಹಳ್ಳ ವನ್ನು ಪುನರು ಜ್ಜೀವನಗೊಳಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಸರಕಾರದ ಸಹಕಾರದೊಂದಿಗೆ ಬ್ಯಾರೇಜ್‌ಗಳ ನಿರ್ಮಾಣ ಮತ್ತು ನೀರು ಸಂಗ್ರಹಿಸುವ ವ್ಯವಸ್ಥೆಗಳ ಮೂಲಕ ಜಲಸಂರಕ್ಷಣೆಗೆ ಉತ್ತೇಜನ ನೀಡಲಾಗಿದೆ. ಇಂತಹ ಪ್ರಯತ್ನಗಳು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಹೆಚ್ಚಿಸಲು, ಜಾನುವಾರುಗಳಿಗೆ ನೀರಿನ ಅನುಕೂಲ ಕಲ್ಪಿಸಲು ಮತ್ತು ಅಂತರ್ಜಲ ಮಟ್ಟ ಸುಧಾರಿಸಲು ನೆರವಾಗುವ ಉದ್ದೇಶ ಹೊಂದಿವೆ. ಕೆರೆಗಳ ಪುನಶ್ಚೇತನಕ್ಕೂ ಗಮನ ಹರಿಸಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಜಲದೀಕ್ಷೆಯಂತಹ ಅಭಿ ಯಾನಗಳ ಮೂಲಕ ನೀರಿನ ಸಂರಕ್ಷಣೆಯನ್ನು ಜನಜಾಗೃತಿಯ ವಿಷಯವನ್ನಾಗಿ ಮಾಡಲಾಗಿದೆ. ನೀರು ಕೇವಲ ನೈಸರ್ಗಿಕ ಸಂಪನ್ಮೂಲವಲ್ಲ. ಕೃಷಿ, ಗ್ರಾಮೀಣ ಬದುಕು ಮತ್ತು ಭವಿಷ್ಯದ ಪೀಳಿಗೆಯ ಅಸ್ತಿತ್ವಕ್ಕೆ ಆಧಾರ ಎಂಬ ಅರಿವು ಮೂಡಿ ಸುವ ಪ್ರಯತ್ನ ಇದಾಗಿದೆ.

ಗವಿಮಠದ ಹೈಟೆಕ್ ವಸತಿ ಶಾಲೆ

ಹಸಿವಿನಿಂದ ಯಾರೂ ಮಲಗಬಾರದು. ಆರ್ಥಿಕ ಸಂಕಷ್ಟದಿಂದ ಯಾರ ಶಿಕ್ಷಣವೂ ನಿಲ್ಲಬಾರದು ಎಂಬ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಗವಿಮಠದ ವಸತಿ ಮತ್ತು ಶಿಕ್ಷಣ ವ್ಯವಸ್ಥೆಗಳು ಪ್ರಮುಖ ವಾಗಿವೆ. ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸತಿ ವ್ಯವಸ್ಥೆಯನ್ನು ರೂಪಿಸಿ ನಿರ್ವಹಿಸಲಾಗುತ್ತಿದೆ. ಊಟ, ವಸತಿ ಮತ್ತು ಶಿಕ್ಷಣದ ಅಗತ್ಯಗಳಿಂದಾಗಿ ಮಕ್ಕಳು ವಿದ್ಯಾಭ್ಯಾಸದಿಂದ ದೂರವಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ. ಇತ್ತೀಚೆಗೆ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ವಿದ್ಯಾರ್ಥಿನಿಯರಿಗಾಗಿ ಉಚಿತ ಹೈಟೆಕ್ ವಸತಿ ಕಾಲೇಜನ್ನೂ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ, ಅವರು ಗೌರವಯುತ ವಾತಾವರಣದಲ್ಲಿ ಕಲಿತು ತಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳಲು ಅವಕಾಶ ಕಲ್ಪಿಸುವುದು ಇಂತಹ ಪ್ರಯತ್ನಗಳ ಮುಖ್ಯ ಗುರಿಯಾಗಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿಯೂ ಗವಿಮಠ ಮತ್ತು ಶ್ರೀಗಳು ತೋರಿದ ಸಾಮಾಜಿಕ ಕಾಳಜಿಯ ಕಾರ್ಯಗಳು ಪ್ರಶಂಸೆಗೆ ಪಾತ್ರವಾಗಿವೆ.

ಅನ್ನದ ತಟ್ಟೆಯಲ್ಲಿ ಸಮಾನತೆಯ ಸಂದೇಶ

ಗವಿಮಠದ ಪರಂಪರೆಯಲ್ಲಿ ದಾಸೋಹಕ್ಕೆ ವಿಶೇಷ ಸ್ಥಾನವಿದೆ. ಅಭಿನವ ಗವಿಸಿದ್ಧೇಶ್ವರ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಪರಂಪರೆಗೆ ಮತ್ತಷ್ಟು ವಿಸ್ತಾರ ದೊರೆತಿದೆ. ಗವಿಮಠದ ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಪ್ರಸಾದ ಒದಗಿಸುವ ಮಹಾದಾಸೋಹ ವ್ಯವಸ್ಥೆ ಗಮನಾರ್ಹ ವಾಗಿದೆ. ಭಕ್ತರು ತಮ್ಮ ಮನೆಗಳಿಂದ ರೊಟ್ಟಿ, ದವಸ-ಧಾನ್ಯ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ತಂದುಕೊಡುವುದರ ಜೊತೆಗೆ ಸ್ವಯಂಪ್ರೇರಿತರಾಗಿ ಸೇವೆಯಲ್ಲೂ ಪಾಲ್ಗೊಳ್ಳುತ್ತಾರೆ. ಇಲ್ಲಿ ದಾಸೋಹ ಎನ್ನುವುದು ಕೇವಲ ಆಹಾರ ವಿತರಣೆ ಅಲ್ಲ; ಸಾಮೂಹಿಕ ಹೊಣೆಗಾರಿಕೆ, ಸಹಕಾರ ಮತ್ತು ಸಮಾನತೆಯ ಸಂದೇಶವೂ ಹೌದು. ಯಾರು ಕೊಡುವವರು, ಯಾರು ಪಡೆಯು ವವರು ಎಂಬ ಭೇದಕ್ಕಿಂತ ಎಲ್ಲರೂ ಒಂದೇ ಸಮಾಜದ ಭಾಗ ಎಂಬ ಭಾವನೆಯನ್ನು ಬೆಳೆಸುವಲ್ಲಿ ಇಂತಹ ವ್ಯವಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ.