"ರಣಕಹಳೆʼಯಾದೀತೇ ʼಬಣ್ಣದ ತಗಡಿನ ತುತ್ತೂರಿʼ ?
ರಾಜ್ಯದ ಮೊದಲ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ ಮತ್ತು ಕಾಲಾನಂತರದಲ್ಲಿ ಸಿಎಂ ಆದ ಎಂ.ಕರುಣಾನಿಧಿ, ಸಿನಿಮಾ ಕಥೆ-ಚಿತ್ರಕಥೆ-ಸಂಭಾಷಣೆಯ ರಚನೆಯಲ್ಲಿ ‘ಪಂಟರ್’ ಗಳಾಗಿದ್ದರು. ಕೆ.ಆರ್.ರಾಮಸ್ವಾಮಿ, ಶಿವಾಜಿ ಗಣೇಶನ್, ಎನ್.ಎಸ್.ಕೃಷ್ಣನ್, ಎಸ್.ಎಸ್. ರಾಜೇಂ ದ್ರನ್, ಎಂ.ಆರ್. ರಾಧಾ, ವಿಜಯಕಾಂತ್ ಕೂಡ ಬೆಳ್ಳಿತೆರೆಯ ಹಿನ್ನೆಲೆಯವರೇ. ಕಮಲಹಾಸನ್ ಕೂಡ ರಾಜಕೀಯ ಪಕ್ಷ ವೊಂದನ್ನು ಹುಟ್ಟು ಹಾಕಿದ್ದು ಅದಿನ್ನೂ ಸ್ಪಷ್ಟ ಛಾಪು ಮೂಡಿಸುವುದು ಬಾಕಿಯಿದೆ.
-
ಯಗಟಿ ರಘು ನಾಡಿಗ್
ರಣಕಹಳೆಯಾದೀತೇ ಬಣ್ಣದ ತಗಡಿನ ತುತ್ತೂರಿ? ದಳಪತಿ ವಿಜಯ್ ಎದುರಿವೆ ಹಲವು ಸವಾಲುಗಳು
ಅತಿರಥ-ಮಹಾರಥರನ್ನು ಬಗ್ಗು ಬಡಿಯುವುದು ಸುಲಭವಲ್ಲ
ತಮಿಳುನಾಡಿನ ರಾಜಕಾರಣ ಮತ್ತು ಚಿತ್ರರಂಗದ ನಡುವೆ ಅನನ್ಯ ಬಾಂಧವ್ಯವಿದೆ. ಸುದೀರ್ಘ ಅವಧಿಯವರೆಗೆ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ (ಎಂಜಿಆರ್) ಹಿಂದೊ ಮ್ಮೆ ಬಣ್ಣದ ಲೋಕದಲ್ಲಿ ಸೂಪರ್ ಸ್ಟಾರ್ ಆಗಿದ್ದವರು. ಅವರ ಮರಣಾನಂತರ ಸಿಎಂ ಗದ್ದುಗೆ ಯಲ್ಲಿ ದರ್ಬಾರು ಮಾಡಿದ ಜೆ.ಜಯಲಲಿತಾ ಕೂಡ ಚಿತ್ರನಟಿಯಾಗಿದ್ದವರೇ.
ಇನ್ನು, ರಾಜ್ಯದ ಮೊದಲ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ ಮತ್ತು ಕಾಲಾನಂತರದಲ್ಲಿ ಸಿಎಂ ಆದ ಎಂ.ಕರುಣಾನಿಧಿ, ಸಿನಿಮಾ ಕಥೆ-ಚಿತ್ರಕಥೆ-ಸಂಭಾಷಣೆಯ ರಚನೆಯಲ್ಲಿ ‘ಪಂಟರ್’ ಗಳಾಗಿದ್ದರು. ಕೆ.ಆರ್.ರಾಮಸ್ವಾಮಿ, ಶಿವಾಜಿ ಗಣೇಶನ್, ಎನ್.ಎಸ್.ಕೃಷ್ಣನ್, ಎಸ್.ಎಸ್. ರಾಜೇಂ ದ್ರನ್, ಎಂ.ಆರ್. ರಾಧಾ, ವಿಜಯಕಾಂತ್ ಕೂಡ ಬೆಳ್ಳಿತೆರೆಯ ಹಿನ್ನೆಲೆಯವರೇ. ಕಮಲಹಾಸನ್ ಕೂಡ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಿದ್ದು ಅದಿನ್ನೂ ಸ್ಪಷ್ಟ ಛಾಪು ಮೂಡಿಸುವುದು ಬಾಕಿಯಿದೆ.
ಪ್ರಸ್ತುತ, ತಮ್ಮ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮೂಲಕ ಈ ಸಾಲಿಗೆ ಸೇರುತ್ತಿದ್ದಾರೆ ಚಿತ್ರನಟ ವಿಜಯ್. ಆದರೆ, ಅವರೆದುರು ಇರುವುದು ಹೂವಿನ ಹಾದಿಯಲ್ಲ; ಸವಾಲುಗಳೇ ತುಂಬಿ ರುವ ಒರಟುರಸ್ತೆ. ಇಲ್ಲಿ ವಿಜಯ್ ಹೆಜ್ಜೆಹಾಕಬಲ್ಲರಾ ಎಂಬುದರ ಕಡೆಗೊಮ್ಮೆ ಕಣ್ಣು ಹಾಯಿ ಸೋಣ...
ಶಿಳ್ಳೆ-ಚಪ್ಪಾಳೆಗಳೆಲ್ಲ ಮತವಾಗದು
ದಳಪತಿ ಎಂದೇ ಕರೆಸಿಕೊಳ್ಳುವ ವಿಜಯ್ ಅವರ ‘ಫ್ಯಾನ್ ಬೇಸ್’ ಗಡದ್ದಾಗೇ ಇದೆ. ಇಲ್ಲಿ ಶಿಳ್ಳೆ-ಚಪ್ಪಾಳೆಗೇನೂ ಕೊರತೆಯಿಲ್ಲ. ಆದರೆ, ಆ ಸದ್ದು ‘ಮತಗಳಾಗಿ’ ರೂಪಾಂತರಗೊಳ್ಳುವುದೇ? ಎಂಬು ದು ಸದ್ಯದ ಯಕ್ಷಪ್ರಶ್ನೆ. ಏಕೆಂದರೆ, ವಿಜಯ್‌ಗೆ ‘ಕಟ್ಟರ್’ ಅಭಿಮಾನಿಗಳಿದ್ದರೂ ಅವರನ್ನು ಕಾರ್ಯ ಕರ್ತರಾಗಿ ‘ಕಟ್ಟುವುದು’ ಅಂದುಕೊಂಡಷ್ಟು ಸುಲಭವಲ್ಲ.
ಜತೆಗೆ, ಈಗಾಗಲೇ ದಶಕಗಳಿಂದ ಬೇರುಬಿಟ್ಟಿರುವ ‘ಡಿಎಂಕೆ’ ಮತ್ತು ‘ಎಐಎಡಿಎಂಕೆ’ಯಂಥ ‘ಅತಿರಥ-ಮಹಾರಥ’ರ ಪಾಳಯಗಳ ವಿರುದ್ಧ ತೊಡೆ ತಟ್ಟುವಷ್ಟರ ಮಟ್ಟಿಗೆ ‘ಟಿವಿಕೆ’ ಪಕ್ಷವಿನ್ನೂ ತಳವೂರಿಲ್ಲ. ಹೀಗಾಗಿ ಚುನಾವಣಾ ಗೆಲುವಿಗೆ ವಿಜಯ್ ಸಾಕಷ್ಟು ‘ರಾಗಿಬೀಸೋದು’ ಬಾಕಿಯಿದೆ!
ಬೇಕಿಲ್ಲಿ ಬೇರೆಯದೇ ಲೆಕ್ಕಾಚಾರ
‘ಬೆರಳು ತೋರಿದರೆ ಹಸ್ತವನ್ನೇ ನುಂಗುವಂಥ’ ರಣಕಲಿಗಳು ಇರುವೆಡೆಯಲ್ಲಿ ಇನ್ನೂ ‘ಬೆರಳು ಚೀಪುವ’ ಕಂದಮ್ಮನಂತಿದ್ದಾರೆ ವಿಜಯ್. ಇದು ಅವರ ಸಂಭಾವ್ಯ ಸಾಮರ್ಥ್ಯವನ್ನು ಅನುಮಾನಿ ಸುವ ಅಥವಾ ಅವಮಾನಿಸುವ ಮಾತಲ್ಲ, ಬದಲಿಗೆ ಇದು ಕಹಿವಾಸ್ತವ. ಎಂ.ಕರುಣಾನಿಧಿಯ ವರಂಥ ಅಪ್ಪ ಮತ್ತು ರಾಜಕೀಯ ಗುರುವಿನಿಂದ ‘ವೃತ್ತಿಪರ’ ದೀಕ್ಷೆ ಪಡೆದಿರುವ ಡಿಎಂಕೆ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎಐಎಡಿಎಂಕೆ ಪಕ್ಷದಲ್ಲಿ ಜೆ.ಜಯಲಲಿತಾರ ಸಾಂಗತ್ಯದಲ್ಲಿದ್ದುಕೊಂಡು ಪಳಗಿರುವ ಪಳನಿಸ್ವಾಮಿ, ದ್ರಾವಿಡ ರಾಜಕಾರಣದ ನಡುವೆ ನುಸುಳಿ ‘ಕೇಸರಿ’ ರಂಗನ್ನು ಚಿಮ್ಮಲು ಯತ್ನಿಸುತ್ತಿರುವ ಬಿಜೆಪಿ ಈ ಎಲ್ಲರೂ ರಚಿಸಿರುವ ‘ಚಕ್ರವ್ಯೂಹ’ವನ್ನು ಭೇದಿಸಬೇಕಿದೆ ವಿಜಯ್ ಎಂಬ ಅಭಿಮನ್ಯು!
ಇದನ್ನೂ ಓದಿ: TVK Vijay: ಜನರಿಗೆ ಮೋಸ ಮಾಡುವುದೇ ಡಿಎಂಕೆ ಕೆಲಸ; ಪುದುಚೇರಿಯಲ್ಲಿ ವಿಜಯ್ ವಾಗ್ದಾಳಿ
ಆದರೆ, ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. ‘ರಾಜಕೀಯವಾಗಿ ಅನನುಭವಿ’ ಯಾಗಿದ್ದರೂ ‘ಟಿವಿಕೆ’ ಪಕ್ಷದ ಪ್ರವೇಶದಿಂದಾಗಿ ಮಿಕ್ಕ ಪಕ್ಷಗಳ ಮತಗಳ ವಿಭಜನೆಯಾದರೆ ಅಚ್ಚರಿಯೇನಿಲ್ಲ; ಹಾಗೊಮ್ಮೆ ಆದರೂ ಡಿಎಂಕೆಗೆ ಅದು ಪೂರಕವಾಗುತ್ತದೆ ಎನ್ನುತ್ತಾರೆ ಬಲ್ಲವರು.
‘ಸಾಮಾಜಿಕ ನ್ಯಾಯ’ದ ಪ್ರತಿಪಾದಕರಾಗಿ ವಿಜಯ್ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರಾದರೂ, ಅಗತ್ಯ ವಸ್ತುಗಳ ಬೆಲೆಯೇರಿಕೆ, ನಿರುದ್ಯೋಗ, ಮೂಲಸೌಕರ್ಯಗಳ ಕೊರತೆಯಂಥ ಸಮಸ್ಯೆಗಳ ನಿವಾರಣೆಗೆ ತಮ್ಮಲ್ಲಿರುವ ಉಪಾಯವೇನು ಎಂಬುದನ್ನು ಅವರಿನ್ನೂ ಹೇಳಿಕೊಂಡಂತಿಲ್ಲ.
ಪ್ಲಸ್ ಪಾಯಿಂಟೂ ಐತೆ!
ರಾಜಕೀಯದಲ್ಲಿ ವಿಜಯ್ ‘ಅಪ್ರೆಂಟಿಸ್’ ಎಂದಮಾತ್ರಕ್ಕೆ ‘ಅಪ್ರಸ್ತುತರು’ ಎಂದೇನಲ್ಲ. ತಮಗಿರುವ ‘ಫ್ಯಾನ್ ಬೇಸ್’ ಅನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಹಾಗೂ ಅವರಲ್ಲಿ ಭರವಸೆ ತುಂಬಬಲ್ಲಂಥ ಯೋಜನೆಗಳನ್ನು ವಿಷಯತಜ್ಞರ ನೆರವಿನೊಂದಿಗೆ ಘೋಷಿಸಿದಲ್ಲಿ, ಈಗ ತಮಗಿರುವ ‘ಚುಂಬಕ ಶಕ್ತಿ’ಗೆ ಮತ್ತಷ್ಟು ಬಲವನ್ನು ಅವರು ತುಂಬಿಕೊಳ್ಳಬಲ್ಲರು.
ತಮಿಳುನಾಡಿನಲ್ಲಿರುವ ಶೇ.25ಕ್ಕಿಂತ ಹೆಚ್ಚು ಪ್ರಮಾಣದ ಯುವ ಮತದಾರರನ್ನು, ವಿಶೇಷವಾಗಿ ಅದರ ಭಾಗವಾಗಿರುವ ತಮ್ಮ ‘ಕಟ್ಟರ್’ ಅಭಿಮಾನಿಗಳನ್ನು ವಿಜಯ್ ಹಿಡಿದಿಟ್ಟುಕೊಳ್ಳಬಲ್ಲರು ಎಂಬುದು ಅವರಿಗಿರುವ ಪ್ಲಸ್ ಪಾಯಿಂಟ್. ಜತೆಗೆ, ಅವರ ಇದುವರೆಗಿನ ಚಿತ್ರಗಳಲ್ಲಿ ಸಾಕಷ್ಟು ಕಡೆ ಇಣುಕಿರುವ ‘ಆಪದ್ಬಾಂಧವ’ನ ಇಮೇಜು ಮತ್ತು ಸಾಮಾಜಿಕ ಕಾಳಜಿಯ ಚಿತ್ರಣಗಳು ಮಹಿಳಾ ಮತದಾರರನ್ನು ಸೆಳೆಯಬಲ್ಲದು ಎನ್ನುತ್ತಾರೆ ರಾಜಕೀಯ ಪಂಡಿತರು.
ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ‘ರಾಜಕೀಯ ಅಧಿಕಾರದ ಪರ್ಯಾಯ ಸ್ವೀಕಾರ’ದ ರೀತಿ ಯಲ್ಲಿ ದಶಕಗಳಿಂದ ಗದ್ದುಗೆಗೇ ಅಂಟಿಕೊಂಡಿರುವುದನ್ನು ಗಮನಿಸುತ್ತಲೇ ಬಂದಿರುವವರಿಗೆ ವಿಜಯ್ ‘ಭರವಸೆಯ ಕಿರಣ’ವಾಗಿ ಕಾಣುತ್ತಿದ್ದಲ್ಲಿ ಅಚ್ಚರಿಯೇನಿಲ್ಲ.
ಯಾರೇನೇ ಸಮರ್ಥಿಸಿಕೊಂಡರೂ ಡಿಎಂಕೆ ಪಕ್ಷದಲ್ಲಿ ಎಂ.ಕರುಣಾನಿಧಿಯವರ ‘ಕುಟುಂಬ ರಾಜಕಾರಣ’ದ ಘಾಟು ಹೊಡೆಯುತ್ತಿರುವುದನ್ನು ತಳ್ಳಿಹಾಕಲಾಗದು. ‘ಕರುಣಾ’ರ ನಂತರದಲ್ಲಿ ಅಧಿಕಾರವನ್ನು ಅನುಭವಿಸಿದ-ಅನುಭವಿಸುತ್ತಿರುವ ಎಂ.ಕೆ.ಸ್ಟಾಲಿನ್, ಈ ಪರಂಪರೆಯ ಮುಂದು ವರಿಕೆಯ ಕೊಂಡಿ ಎಂಬಂತೆ ಈಗಾಗಲೇ ಅಬ್ಬರಿಸುತ್ತಿರುವ ಸ್ಟಾಲಿನ್ ಪುತ್ರ ಹಾಗೂ ಉಪಮುಖ್ಯ ಮಂತ್ರಿ ಉದಯನಿಧಿ ಸ್ಟಾಲಿನ್ ಇದಕ್ಕೆ ಸಾಕ್ಷಿ. ಈ ಇಬ್ಬರಿಗೆ ಹೊರತಾದ ಮತ್ತಷ್ಟು ‘ಕರುಣಾ ಕುಟುಂಬಿಕರು’ ಡಿಎಂಕೆಯಲ್ಲಿ ವ್ಯಾಪಿಸಿರುವುದನ್ನು ಬಿಡಿಸಿ ಹೇಳಬೇಕಿಲ್ಲ.
ಇನ್ನು ಎಐಎಡಿಎಂಕೆ ಪಕ್ಷದ ಪ್ರಭಾವಲಯದಲ್ಲಿ ಜಯಲಲಿತಾ ಮೆರೆದ ‘ಡೌಲು’ ಮತ್ತು ‘ದರ್ಬಾರು’ ಗೊತ್ತಿರುವಂಥದ್ದೇ. ಹೀಗೆ ಹೆಸರಿಗೆ ರಾಜಕೀಯ ಪಕ್ಷಗಳಾಗಿದ್ದರೂ ವಸ್ತುತಃ ಪಾಳೇ ಪಟ್ಟುಗಳಾಗಿ’ ರೂಪಾಂತರಗೊಂಡಿರುವ ‘ಡಿಎಂಕೆ ಮತ್ತು ‘ಎಐಎಡಿಎಂಕೆ’ಗಳನ್ನು ಬದಿಗೆ ಸರಿಸುವ ಆಯ್ಕೆಯಾಗಿ ‘ಟಿವಿಕೆ’ಯನ್ನು ಮತದಾರರು ಪರಿಗಣಿಸಿದರೆ, ವಿಜಯ್‌ಗೆ ಜಾಕ್ ಪಾಟ್ ಹೊಡೆ ದಂತೆಯೇ!
ಸಾಮಾನ್ಯವಾಗಿ, ಹೊಸತೊಂದು ರಾಜಕೀಯ ಪಕ್ಷವು ಚುನಾವಣಾ ಅಖಾಡಕ್ಕೆ ಅಡಿಯಿಟ್ಟಾಗ, ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿ ಸಿ ಮೈ-ಕೈ ನೋಯಿಸಿಕೊಳ್ಳುವ ಬದಲು ‘ಸೇಫ್’ ಎನಿಸಿದ ಕೆಲವೇ ಕ್ಷೇತ್ರಗಳಲ್ಲಿ ಶುರುವಿನಲ್ಲಿ ಸ್ಪರ್ಧಿಸುವುದುಂಟು. ‘ಭರ್ಜರಿ ರಾಜಕೀಯ ಹೂಡಿಕೆ’ಗೆ ಇಳಿಯುವು ದಕ್ಕೂ ಮುನ್ನ ಪರಿಸ್ಥಿತಿಯ ಅಧ್ಯಯನಕ್ಕೆ ಇಂಥದೊಂದು ‘ಲಿಟ್ಮಸ್ ಟೆಸ್ಟ್’ ಕೈಗೊಳ್ಳುವ ಇಂಥ ಪಕ್ಷವು ಮುಂದೆ ‘ಮೈತ್ರಿ ರಾಜಕಾರಣ’ದ ಭಾಗವಾಗುವ ಸಾಧ್ಯತೆಯೂ ಇದೆ.
ಆದರೆ ವಿಜಯ್ ಇಂಥ ಹೆಜ್ಜೆಯಿಡದೆ ಎಲ್ಲ 234 ಕ್ಷೇತ್ರಗಳಲ್ಲೂ ಸ್ಪರ್ಧಿಸುವಂಥ ಛಾತಿ ಮತ್ತು ಆತ್ಮವಿಶ್ವಾಸವನ್ನು ತೋರಿದ್ದಾರೆ. ‘ನಾನು ಬಂದಿರೋದು ಮತಗಳನ್ನು ಒಡೆಯುವುದಕ್ಕಲ್ಲ, ನನಗೆ ಇಡುಗಂಟು ಬೇಕು’ ಎಂಬ ಸಂದೇಶವಿಲ್ಲಿ ಮತದಾರರಿಗೆ ರವಾನೆಯಾಗುತ್ತಿದೆ. ಈ ಗ್ರಹಿಕೆ ವಿಜಯ್‌ಗೆ ಪೂರಕವಾಗಲಿದೆ.
ತಮಿಳುನಾಡಿನಲ್ಲಿ ಯಾವುದೇ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬರಲಿ, ‘ಭಾಷೆ-ಪ್ರಾದೇಶಿಕ ಅಸ್ಮಿತೆ- ದ್ರಾವಿಡ ಸಿದ್ಧಾಂತ’ ಎಂಬ ತ್ರಿವಳಿ ಶಿಶುಗಳನ್ನು ಪಾಲಿಸಿ ಪೋಷಿಸದೆ ಅದು ಏಗುವುದು ದುಸ್ತರ. ಈ ವಾಸ್ತವವನ್ನು ಸರಿಯಾಗೇ ಗ್ರಹಿಸಿರುವ ವಿಜಯ್, ದ್ರಾವಿಡ ಸಿದ್ಧಾಂತವನ್ನು ಮತ್ತದೇ ‘ಕರ್ಮಠ ವಿಧಾನ’ದಲ್ಲಿ ಬಿಂಬಿಸುವ ಬದಲಿಗೆ, ತಮ್ಮದೇ ‘ವಿನೂತನ ಶೈಲಿ’ಯಲ್ಲಿ ಸಾದರಪಡಿಸುತ್ತಿದ್ದಾರೆ.
ಜತೆಗೆ ‘ಜಾತ್ಯತೀತ’ ಸಿದ್ಧಾಂತಕ್ಕೂ ಒತ್ತುನೀಡಿದ್ದಾರೆ. ಇದು ‘ಕ್ಲಿಕ್’ ಆದಲ್ಲಿ, ವಿಜಯ್‌ರ ‘ಲಕ್’ ಕುದುರುವುದರಲ್ಲಿ ಸಂದೇಹವಿಲ್ಲ!
ಸಮೀಕ್ಷೆಗಳು ಹೇಳೋದೇನು?
ವಿಜಯ್ ಅವರ ‘ಟಿವಿಕೆ’ ಪಕ್ಷವು ಈಗಿನ್ನೂ ‘ಅಂಬೆಗಾಲು’ ಇಡುತ್ತಿದ್ದರೂ, ಚುನಾಣೆಯಲ್ಲಿ ಶೇ.15 ರಿಂದ 30ರಷ್ಟು ಮತಗಳನ್ನು ಗಳಿಸಬಲ್ಲಷ್ಟು ‘ದಾಪುಗಾಲು’ ಹಾಕಬಲ್ಲದು ಎಂದು ಅಂದಾಜಿಸಿವೆ ಸಮೀಕ್ಷೆಗಳು. ಅಲ್ಲಿಗೆ, ಸ್ವಂತಬಲದ ಮೇಲೆ ಸರಕಾರವನ್ನು ರಚಿಸುವಷ್ಟು ‘ಬಹುಮತ’ ಸಿಗದಿದ್ದ ರೂ, ಸರಕಾರವೊಂದರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ‘ಕಿಂಗ್ ಮೇಕರ್’ ಪೀಠ ‘ಟಿವಿಕೆ’ಗೆ ದಕ್ಕುವುದಂತೂ ಖಾತ್ರಿ ಎಂದಾಯಿತು.
Sometimes, it is better to be a KING MAKER, rather than a KING ಎಂಬ ಗ್ರಹಿಕೆಗೆ ವಿಜಯ್ ಜೋತುಬಿದ್ದಲ್ಲಿ, ಈ ಪೀಠ ಅವರಿಗೆ ಒಲಿಯೋದಂತೂ ಖಾತ್ರಿ....