Congress: ಕೈಜಾರಿದ ಅಲ್ಪಸಂಖ್ಯಾತರ ಮತ, ಕೈಗೆ ನೋವು
ಕಾಂಗ್ರೆಸ್ ಹಿರಿಯ ನಾಯಕರ ಪ್ರಕಾರ, ಎರಡೂ ಉಪ ಚುನಾವಣೆಗಳ ಪೈಕಿ ಬಾಗಲಕೋಟೆ ಉಪಚುನಾವಣೆಯಲ್ಲಿ ಲಭಿಸಿರುವ ಗೆಲುವಿಗೆ ಕೈ ಪಕ್ಷಕ್ಕೆ ಕೊಂಚ ಸಮಾಧಾನವಾದರೂ ಇದೆ. ಆದರೆ ದಾವಣಗೆರೆ ವಿಚಾರದಲ್ಲಿ ತೀರಾ ಬೇಸರ ಇರುವುದು ವ್ಯಕ್ತವಾಗಿದೆ. ಅಂದರೆ ಉಪಚುನಾವಣೆ ಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಭಾಗಶಃ ಜಯ ಸಾಧಿಸಿದ್ದು, ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಅವರು ಪಕ್ಷವನ್ನು ಸೋಲಿನ ದವಡೆಯಿಂದ ತಪ್ಪಿಸಿದ ರಕ್ಷಕರು ಎನಿಸಿಕೊಂಡಿದ್ದಾರೆ.
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಜಮೀರ್, ರಿಜ್ವಾನ್, ಸಲೀಂಗೆ ಗೆಲುವು, ಸೋಲಿನ ರೀತಿಯ ಬೇಸರದಲ್ಲಿ ಪಕ್ಷದ ಕಾರ್ಯಕರ್ತರು
ರಾಜ್ಯದಲ್ಲಿ ಸರಕಾರ ಮತ್ತು ಪಕ್ಷಕ್ಕೆ ತೀರಾ ಆತಂಕ ತಂದಿದ್ದ ದಾವಣಗೆರೆ ದಕ್ಷಿಣ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದರೂ ಅದರ ಸಂಭ್ರಮ ಮಾತ್ರ ಕಾಣುತ್ತಿಲ್ಲ. ಅಷ್ಟೇ ಏಕೆ, ಕೇರಳ ದಲ್ಲಿ ತನ್ನದೇ ನೇತೃತ್ವದ ಯುಡಿಎಫ್ ಜಯ ಸಾಧಿಸಿರುವುದಕ್ಕೆ ಇರುವ ಸಂಭ್ರಮ ಕೂಡ ರಾಜ್ಯ ದಲ್ಲಿನ ಉಪಸಮರದಲ್ಲಿ ಸಿಕ್ಕಿರುವ ಗೆಲುವಿಗೆ ಲಭಿಸುತ್ತಿಲ್ಲ. ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಿಕ್ಕಿದ ಪ್ರಯಾಸದ ಗೆಲುವು.
ಅಷ್ಟೇ ಅಲ್ಲ, ಕಳೆದ ಮೂರು ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸುಮಾರು 25000 ಮತಗಳನ್ನು ಕಳೆದುಕೊಂಡಿದೆ. ಕಳೆದ ಬಾರಿಗೆ ಹೋಲಿಸಿ ದರೆ ಸುಮಾರು 22000 ಮತಗಳ ಲೀಡ್ ಅನ್ನು ಕಳೆದುಕೊಂಡಿದೆ. ಹೀಗಾಗಿ ಕಾಂಗ್ರೆಸ್ ಬರೀ ದಾಖಲೆ ಯಲ್ಲಿ ಗೆದ್ದಿದ್ದರೂ ವಾಸ್ತವದಲ್ಲಿ ಸೋತಷ್ಟೇ ಬೇಸರದಲ್ಲಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಹಿರಿಯ ನಾಯಕರ ಪ್ರಕಾರ, ಎರಡೂ ಉಪ ಚುನಾವಣೆಗಳ ಪೈಕಿ ಬಾಗಲಕೋಟೆ ಉಪಚುನಾವಣೆಯಲ್ಲಿ ಲಭಿಸಿರುವ ಗೆಲುವಿಗೆ ಕೈ ಪಕ್ಷಕ್ಕೆ ಕೊಂಚ ಸಮಾಧಾನವಾದರೂ ಇದೆ. ಆದರೆ ದಾವಣಗೆರೆ ವಿಚಾರದಲ್ಲಿ ತೀರಾ ಬೇಸರ ಇರುವುದು ವ್ಯಕ್ತವಾಗಿದೆ. ಅಂದರೆ ಉಪಚುನಾವಣೆ ಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಭಾಗಶಃ ಜಯ ಸಾಧಿಸಿದ್ದು, ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಅವರು ಪಕ್ಷವನ್ನು ಸೋಲಿನ ದವಡೆಯಿಂದ ತಪ್ಪಿಸಿದ ರಕ್ಷಕರು ಎನಿಸಿಕೊಂಡಿದ್ದಾರೆ.
ಅಂದರೆ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ ಟಿಕೆಟ್ ರಾಜಕಾರಣದಲ್ಲಿ ಸಚಿವ ಜಮೀರ್ ಅವರು ಟಿಕೆಟ್‌ಗಾಗಿ ದನಿ ಎತ್ತಿದ್ದು, ನಂತರ ಪ್ರಚಾರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿರುವುದು, ನಂತರ ಜಮೀರ್ ವಿರುದ್ಧ ಶಾಸಕರಾದ ಸಲೀಂ ಅಹಮ್ಮದ್ ಹಾಗೂ ರಿಜ್ವಾನ್ ಅವರು ಪಕ್ಷದ ನಾಯಕರಿಗೆ ದೂರು ಸಲ್ಲಿಸಿದ್ದು, ನಂತರ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಹೊಣೆ ಹೊತ್ತಿದ್ದು ಸೇರಿದಂತೆ ಕ್ಷೇತ್ರದಲ್ಲಿ ಉಂಟಾಗಿದ್ದ ಗೊಂದಲ ಕಾಂಗ್ರೆಸ್‌ಗೆ ಸಾಕಷ್ಟು ಡ್ಯಾಮೇಜ್ ಮಾಡಿದೆ ಎಂದು ಪಕ್ಷ ನಾಯಕರೇ ಹೇಳಿದ್ದಾರೆ.
25000 ಮತ ಯಾರಿಂದ ಕೈ ತಪ್ಪಿದೆ?
ದಾವಣಗೆರೆ ಉಪಚುನಾವಣೆಯಲ್ಲಿ ನಡೆದಿರುವ ಮತದಾನ ಪ್ರಮಾಣಗಳನ್ನು ಗಮನಿಸಿದರೆ, ಅಲ್ಪ ಸಂಖ್ಯಾತರು ಹೆಚ್ಚಾಗಿರುವ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಅಂದರೆ ಒಟ್ಟಾರೆ ಮತದಾನ ಶೇ.68ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ.52ರಷ್ಟಿದೆ. ಅಂದರೆ ಸುಮಾರು ಶೇ.30ರಷ್ಟು ಮತದಾನ ಕಡಿಮೆಯಾಗಿದೆ. ಇದರ ಮಧ್ಯೆ, ಕಳೆದ ಚುನಾವಣೆಯಲ್ಲಿ ಕೇವಲ 1311 ಮತಗಳನ್ನು (ಶೇ.0.90) ಪಡೆದಿದ್ದ ಎಸ್ ಡಿಪಿಐ ಈ ಬಾರಿ 18,975 ಮತಗಳನ್ನು ಪಡೆದಿದೆ. ಅಂದರೆ 17,664 ಮತಗಳನ್ನು ಹೆಚ್ಚಾಗಿ ಗಳಿಸಿದೆ. ಅಷ್ಟಕ್ಕೂ ಈ ಪಕ್ಷದ ಅಭ್ಯರ್ಥಿ ದಾವಣಗೆರೆ ಮೂಲ ದವರಲ್ಲ. ತೀರಾ ಹಿಂದಿನಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದವರೂ ಅಲ್ಲ ಎನ್ನಲಾಗಿದೆ. ಇನ್ನು ಕಳೆದ ಬಾರಿ ಕಾಂಗ್ರೆಸ್‌ನ ಶ್ಯಾಮನೂರು ಶಿವಶಂಕರಪ್ಪ, 27,888 ಮತಗಳ ಅಂತರದಲ್ಲಿ ಜಯ ಸಾಧಿಸಿ ದ್ದರು. ಆದರೆ ಆ ಬಾರಿ ಕಾಂಗ್ರೆಸ್‌ನ ಸಮರ್ಥ್ ಕೇವಲ 5708 ಮತಗಳ ಲೀಡ್‌ನಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಅಂದರೆ ಕಳೆದ ಚುನಾವಣೆಗೆ ಹೋಲಿಸಿದರೆ, ಸುಮಾರು 22180 ಮತಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಇನ್ನೊಂದು ಅಚ್ಚರಿ ಎಂದರೆ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಬಿಜೆಪಿ ಈ ಬಾರಿ 17664 ಮತಗಳನ್ನು ಹೆಚ್ಚಾಗಿ ಪಡೆದಿದ್ದು, ಇವು ಕಾಂಗ್ರೆಸ್ ಮತಗಳು ಎನ್ನಲಾಗಿದೆ. ಇವೆರಡನ್ನೂ ಕ್ರೂಢೀಕರಿಸಿದರೆ ಕಾಂಗ್ರೆಸ್ ಸುಮಾರು 25 ಸಾವಿರಕ್ಕೂ ಹೆಚ್ಚು ಮತಗಳನ್ನು ಕಾಂಗ್ರೆಸ್ ಕಳೆದುಕೊಂಡಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಎಡವಟ್ಟಿನ ಎಫೆಕ್ಟ್
ಇದರ ಮಧ್ಯೆ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸುಮಾರು 25000ಕ್ಕೂ ಹೆಚ್ಚಿನ ಮತಗಳು ಕೈ ತಪ್ಪಿದ್ದರೂ ಸಚಿವ ಮಲ್ಲಿಕಾರ್ಜನ್ ಅವರು ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಮತಗಳು ಕಡಿಮೆ ಯಾಗಿಲ್ಲ. ಹೆಚ್ಚಾಗಿಯೇ ಬಂದಿವೆ ಎಂದು ಹೇಳಿರುವುದಕ್ಕೆ ಆ ಸಮುದಾಯದ ಸ್ಥಳೀಯ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಸಿಮುಸಿ ನಗುತ್ತಿದ್ದಾರೆ. ಏಕೆಂದರೆ, ಆರಂಭ ದಲ್ಲಿ ದಾವಣಗೆರೆ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಜಮೀರ್ ಯಾರು ಎಂದಿದ್ದು ಮತ್ತು ಅವರು ಬಾರದಿದ್ದರೆ ಏನೂ ಆಗಲ್ಲ ಎನ್ನುವ ಧಾಟಿಯಲ್ಲಿ ಸಚಿವ ಜಮೀರ್ ಅವರನ್ನು ಟೀಕಿಸಿದ್ದು, ಅಲ್ಪಸಂಖ್ಯಾತರ ಸಮುದಾಯದಲ್ಲಿ ತೀರಾ ಬೇಸರಕ್ಕೆ ಕಾರಣವಾಗಿತ್ತು. ನಂತರದಲ್ಲಿ ಮಲ್ಲಿಕಾರ್ಜುನ್ ಭೋಜನಕೂಟದ ಮೂಲಕ ದೋಸ್ತಿ ಮೆರೆದಿದ್ದು ಅಷ್ಟಾಗಿ ಕೆಲಸ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಟಿಕೆಟ್ ರಾಜಕಾರಣ, ಅಲ್ಪಸಂಖ್ಯಾತರ ನಾಯಕತ್ವ ಪ್ರಯತ್ನ ಹಾಗೂ ಸಚಿವ ಮಲ್ಲಿಕಾರ್ಜನ್ ಹೇಳಿಕೆಗಳ ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ವ್ಯಕ್ತವಾಗಿದೆ ಎಂದು ಪಕ್ಷದ ನಾಯಕರು ವಿಶ್ಲೇಷಿಸುತ್ತಿದ್ದಾರೆ.