ಸೇಡು, ಷಡ್ಯಂತ್ರದ ಮಧ್ಯೆ ಯಾವುದು ಸತ್ಯ ..?
ಬಿಡಿಸಿಸಿ ನೌಕರನ ಮೇಲೆ ನಡೆದ ಹಲ್ಲೆಗೆ ಶಾಸಕ ಲಕ್ಷ್ಮಣ ಸವದಿ ಅಳಿಯ ಶಂಕರ ನಂದೇಶ್ವರ ಅವರನ್ನು ಅಥಣಿ ಡಿಸಿಸಿ ಬ್ಯಾಂಕಿನ ಮ್ಯಾನೆಂಜರ್ ಸ್ಥಾನದಿಂದ ವರ್ಗಾವಣೆ ಮಾಡಿದ್ದೇ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಶಾಸಕ ಲಕ್ಷ್ಮಣ ಸವದಿ ಮಾತ್ರ ಈ ಘಟನೆ ಪೂರ್ವ ನಿಯೋಜಿತವಾಗಿದೆ. ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಾಗದೇ ಜಾರಕಿಹೊಳಿ ಸಹೋದರರು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.
-
ವಿನಾಯಕ ಮಠಪತಿ
ಹರಿದ ರಕ್ತದ ಹಿಂದೆ ಅಡಗಿದೆಯಾ ರಾಜಕೀಯ ಲೆಕ್ಕಾಚಾರ
ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಎಂದ ಲಕ್ಷ್ಮಣ ಸವದಿ
ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಸಧ್ಯ ರಾಜಕೀಯ ತಿರುವು ಪಡೆದಿದೆ. ಕಳೆದ ಕೆಲ ದಿನಗಳಿಂದ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಶನಿವಾರ ಮಧ್ಯಾಹ್ನ ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ಬಂದಿದ್ದ ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ ನನ್ನ ಮೇಲೆ ಶಾಸಕ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಹಾಗೂ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ತಲೆಯಲ್ಲಿ ರಕ್ತ ಸುರಿಸುತ್ತಲೇ ಸವದಿ ಕುಟುಂಬದ ಮೇಲೆ ಮಾಡಿದ್ದ ಗಂಭೀರ ಆರೋಪ ಸಧ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದೇ ಕಾರಣ ಮುಂದಿಟ್ಟುಕೊಂಡು ರಾಜಕೀಯ ವಿರೋಧಿಗಳು ಸವದಿ ವಿರುದ್ಧ ಸಿಡಿದೆದ್ದಿ ದ್ದಾರೆ.
ಬಿಡಿಸಿಸಿ ನೌಕರನ ಮೇಲೆ ನಡೆದ ಹಲ್ಲೆಗೆ ಶಾಸಕ ಲಕ್ಷ್ಮಣ ಸವದಿ ಅಳಿಯ ಶಂಕರ ನಂದೇಶ್ವರ ಅವರನ್ನು ಅಥಣಿ ಡಿಸಿಸಿ ಬ್ಯಾಂಕಿನ ಮ್ಯಾನೆಂಜರ್ ಸ್ಥಾನದಿಂದ ವರ್ಗಾವಣೆ ಮಾಡಿದ್ದೇ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಶಾಸಕ ಲಕ್ಷ್ಮಣ ಸವದಿ ಮಾತ್ರ ಈ ಘಟನೆ ಪೂರ್ವ ನಿಯೋಜಿತವಾಗಿದೆ. ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಾಗದೇ ಜಾರಕಿಹೊಳಿ ಸಹೋದರರು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?
ಸೇಡು ತೀರಿಸಿಕೊಂಡರಾ ಜಾರಕಿಹೊಳಿ ಸಹೋದರರು : ಕಳೆದ ಕೆಲ ವರ್ಷಗಳಿಂದ ಜಾರಕಿಹೊಳಿ ಹಾಗೂ ಸವದಿ ಕುಟುಂಬದ ನಡುವೆ ವೈರತ್ವ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಳೆದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ನಡೆದ ವಾಗ್ವಾದ ಮತ್ತಷ್ಟು ವೈರತ್ವ. ಬೆಳೆಯುವಂತೆ ಮಾಡಿದೆ. ಇದೇ ಕಾರಣಕ್ಕೆ ಡಿಸಿಸಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆ ಜಾರಕಿಹೊಳಿ ಸಹೋದರರು ಅಥಣಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಶಾಸಕ ಲಕ್ಷ್ಮಣ ಸವದಿ ಅಳಿಯನನ್ನು ವರ್ಗಾವಣೆ ಮಾಡಿದ್ದರು. ಅಷ್ಟೇ ಅಲ್ಲದೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮಣ ಸವದಿಗೆ ಟಕ್ಕರ್‌ಕೊಟ್ಟ ಇವರು ಆ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಅವರನ್ನು ತರುವ ಮೂಲಕ ಮಾಸ್ಟರ್‌ಸ್ಟ್ರೋಕ್ ಕೊಟ್ಟಿದ್ದು ಸಧ್ಯ ರಾಜಕೀಯ ವೈಷಮ್ಯಕ್ಕೆ ಕಾರಣವಾಗಿದೆ.
ವ್ಯವಸ್ಥಿತ ಷಡ್ಯಂತ್ರ ಎಂದ ಲಕ್ಷ್ಮಣ ಸವದಿ : ನನ್ನ ವಿರುದ್ಧ ಕಳೆದ ಎರಡು ತಿಂಗಳಿನಿಂದ ವ್ಯವಸ್ಥಿತ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ. ಅದರ ಭಾಗವಾಗಿಯೇ ಡಿಸಿಸಿ ಬ್ಯಾಂಕ್ ನೌಕರನ ಮೇಲಿನ ಹಲ್ಲೆ ಘಟನೆ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅವರ ನಿರ್ದೇಶನದ ಮೇಲೆ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಇರುವವರು ಷಡ್ಯಂತ್ರದ ಮೂಲಕ ಕುತಂತ್ರ ನಡೆಸಿದ್ದಾರೆ ಎಂದು ಜಾರಕಿಹೊಳಿ ಸಹೋದರರ ವಿರುದ್ಧ ಸಿಡಿದೆದ್ದಿದ್ದಾರೆ.
ವಿರೋಧಿಗಳಿಗೆ ಸುಲಭವಾಗಿ ಅಸ್ತ್ರ ನೀಡಿದರಾ ಸವದಿ : ಇಷ್ಟು ದಿನ ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದ ಶಾಸಕ ಲಕ್ಷ್ಮಣ ಸವದಿ ಈಗ ಸುಲಭವಾಗಿ ತಮ್ಮ ವಿರೋಧಿಗಳಿಗೆ ರಾಜಕೀಯ ಅಸ್ತ್ರ ನೀಡಿದಂತಾಗಿದೆ. ಬಿಡಿಸಿಸಿ ಬ್ಯಾಂಕ್ ನೌಕರರ ಮೇಲೆ ನಡೆದ ಹಲ್ಲೆ ಸಧ್ಯ ಶಾಸಕ ಲಕ್ಷ್ಮಣ ಸವದಿ ವಿರುದ್ಧ ವಿರೋಧಿ ಬಣ ಸಿಡಿದೆದ್ದಿದೆ. ಜೊತೆಗೆ ಇದೇ ವಿಚಾರವಾಗಿ ಡಿಸಿಸಿ ಬ್ಯಾಂಕ್ ನೌಕರರು ಸವದಿ ವಿರುದ್ಧ ಪ್ರತಿಭಟನೆಗೆ ಮಂದಾಗಿದ್ದಾರೆ. ಇನ್ನೂ ಬಿಜೆಪಿ ನೇತೃತ್ವದ ಬಣ ಇದೇ ವಿಚಾರವಾಗಿ ಸವದಿ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಇನ್ನೂ ಹಲ್ಲೆ ಘಟನೆಗೆ ಜಾತಿ ಬಣ್ಣವನ್ನು ಬಳಿಯುವ ಪ್ರಯತ್ನವು ನಡೆದಿದೆ.
*
ಮೊದಲಿನಿಂದಲೂ ಲಕ್ಷ್ಮಣ ಸವದಿ ಅಥಣಿಯಲ್ಲಿ ದ್ವೇಷದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಮೊದಲು ಯಾರಿಂದಾದರು ಹಲ್ಲೆ ಮಾಡಿಸುತ್ತಿದ್ದರು ಈಗ ಅವರೇ ಮಾಡು ತ್ತಿದ್ದಾರೆ. ಒಬ್ಬ ಶಾಸಕರಾಗಿ ಡಿಸಿಸಿ ಬ್ಯಾಂಕ್ ನೌಕರನ ಮೇಲಿನ ಹಲ್ಲೆ ಖಂಡಿಸುತ್ತೇನೆ.
-ಮಹೇಶ್ ಕುಮಠಳ್ಳಿ, ಮಾಜಿ ಶಾಸಕ
ಹಲ್ಲೆ ಆರೋಪ ಇದೊಂದು ರಾಜಕೀಯ ಷಡ್ಯಂತ್ರ. ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಾಗದವರು ಅಪಪ್ರಚಾರದ ಮೂಲಕ ರಾಜಕೀಯ ಲಾಭ ಗಳಿಸಲು ಕುತಂತ್ರ ನಡೆಸಿದ್ದು ಇದಕ್ಕೆ ಅಥಣಿ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡುತ್ತಾರೆ.
-ಲಕ್ಷ್ಮಣ ಸವದಿ, ಶಾಸಕ