ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ಸುದೀರ್ಘ ಅವಧಿಯ ಉತ್ತುಂಗ, ಐತಿಹಾಸಿಕ ದಾಖಲೆಯ ಶೃಂಗ

ನಾಡಿನ ಬಡವರು, ಹಿಂದುಳಿದವರು ಸೇರಿದಂತೆ ತುಳಿತಕ್ಕೊಳಗಾದ ಜನ ಕಣ್ಣೀರು ಒರೆಸಿದ ಶ್ರೀಮಂತ ಹೃದಯದ ಅರಸು ದಾಖಲೆಯನ್ನು ಮುರಿಯುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಪಕ್ಷಗಳ ಗಡಿ ದಾಟಿ ತಮ್ಮದೇ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡ ಅವರು ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಖ್ಯಾತಿ ಪಡೆದಿದ್ದಾರೆ.

ಸುದೀರ್ಘ ಅವಧಿಯ ಉತ್ತುಂಗ, ಐತಿಹಾಸಿಕ ದಾಖಲೆಯ ಶೃಂಗ

-

Ashok Nayak
Ashok Nayak Jan 6, 2026 7:07 AM

ವಿನಾಯಕ ಮಠಪತಿ, ಬೆಳಗಾವಿ

ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುವ ಹುಡುಗ ಈಗ ಭವ್ಯ ಭಾರತದ ಪ್ರಧಾನಿ, ಕುರಿ ಮೇಯಿಸಿ ಬದುಕು ಸಾಗಿಸುತ್ತಿದ್ದ ಕುಲಸ್ಥರ ಮಗ ಕರುನಾಡಿನ ಮುಖ್ಯಮಂತ್ರಿ, ಇಂತಹ ಅಸಂಖ್ಯಾತ ಹೊಸ ಅವಕಾಶದ ಸಾಧ್ಯತೆಗಳನ್ನು ಕೊಟ್ಟಿದ್ದು ಭಾರತದ ಸಂವಿಧಾನ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಸಾಮಾನ್ಯ ಬಡವನ ಮಗ ಮಹತ್ತರ ಸಾಧನೆ ಮಾಡಬಹುದು ಎಂಬುದಕ್ಕೆ ನಮ್ಮ ನೆಲವೇ ಸಾಕ್ಷಿ. ಇಲ್ಲಿ ಸಾಧಕರಿಗೆ ಹತ್ತಾರು ಅವಕಾಶ ಗಳಿವೆ. ಸಾಧಿಸುವ ಛಲ ಮಾತ್ರ ಅವರನ್ನು ಉತ್ತುಂಗಕ್ಕೇರಿಸಲು ಸಾಧ್ಯ. ಇಂಥ ಮಹಾನ್ ಸಾಧನೆ ಮೂಲಕ ಐತಿಹಾಸಿಕ ಮೈಲುಗಲ್ಲು ಸಾಧಿಸಿದವರ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದಾರೆ.

ಏಳು ವರ್ಷ ಏಳು ತಿಂಗಳು: ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಿ. ದೇವರಾಜ ಅರಸು ಒಟ್ಟಾರೆ 7 ವರ್ಷ, ಏಳು ತಿಂಗಳು 23 ದಿನಗಳವರೆಗೆ ಆಡಳಿತ ನಡೆಸಿದ್ದ ಅಪರೂಪದ ರಾಜಕಾರಣಿ. ಇವರ ಆಡಳಿತಾವಧಿಯಲ್ಲಿ ಕರ್ನಾಟಕ ರಾಜ್ಯ ಸಾಕಷ್ಟು ಅಭಿವೃದ್ಧಿಯ ಬೆಳಕು ಕಂಡಿದೆ.

ನಾಡಿನ ಬಡವರು, ಹಿಂದುಳಿದವರು ಸೇರಿದಂತೆ ತುಳಿತಕ್ಕೊಳಗಾದ ಜನ ಕಣ್ಣೀರು ಒರೆಸಿದ ಶ್ರೀಮಂತ ಹೃದಯದ ಅರಸು ದಾಖಲೆಯನ್ನು ಮುರಿಯುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಪಕ್ಷಗಳ ಗಡಿ ದಾಟಿ ತಮ್ಮದೇ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡ ಅವರು ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಖ್ಯಾತಿ ಪಡೆದಿದ್ದಾರೆ.

ಆಕರ್ಷಕ ವ್ಯಕ್ತಿತ್ವ: ಸಿದ್ದರಾಮಯ್ಯನವರ ಸೈದ್ಧಾಂತಿಕ ನಿಲುವು ಏನೇ ಇರಬಹುದು ಆದರೆ ಅನೇಕ ಸಂದರ್ಭಗಳಲ್ಲಿ ಅವರು ತೋರುವ ಗಟ್ಟಿ ನಿರ್ಧಾರ ಇವರೊಬ್ಬ ಮೇಧಾವಿ ಎಂಬುದನ್ನು ಸಾಬೀತುಪಡಿಸಿದೆ. ಗಟ್ಟಿಯಾದ ನಾಯಕತ್ವ ಗುಣ ಬೆಳೆಸಿಕೊಂಡು, ನಿಷ್ಠುರತೆ ಮೈಗೂಡಿಸಿಕೊಂಡ ಇವರು ಜನರನ್ನು ತನ್ನತ್ತ ಸೆಳೆಯುವ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಇದೇ ಕಾರಣಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಜೊತೆಗೆ ಕಡಿಮೆ ಅವಧಿಯಲ್ಲಿ ಎರಡನೇ ಅವಧಿಗೆ ಅಧಿಕಾರ ನಡೆಸುತ್ತಿರುವುದು ಸಾಮಾನ್ಯ ವಿಷಯವಲ್ಲ.

ಜಾತಿ ಮೀರಿದ ಜನನಾಯಕ: ಸಾಮಾನ್ಯವಾಗಿ ಎಲ್ಲಾ ಸಮುದಾಯದ ಜನ ಜಾತಿ ಮೀರಿ ಒಬ್ಬ ನಾಯಕನನ್ನು ಒಪ್ಪಿಕೊಳ್ಳಬೇಕಾದರೆ ಆತನಲ್ಲಿರುವ ಅಪರೂಪದ ಗುಣಲಕ್ಷಣಗಳು ಮುಖ್ಯವಾಗುತ್ತವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ರೈತ ನಾಯಕನಾಗಿ ಹೇಗೆ ಬೆಳೆದರೋ ಹಾಗೆಯೇ ಸಿದ್ದರಾಮಯ್ಯನವರು ಅಹಿಂದ ನಾಯಕನಾಗಿ ಬೆಳೆಯಲು ಅವರಲ್ಲಿನ ವಿಶಿಷ್ಟ ಗುಣ ಸಾಕ್ಷಿ.

ಹಳ್ಳಿ ಸೊಗಡು, ಜನರನ್ನು ಆಕರ್ಷಿಸುವ ಗುಣ, ಮಾತುಗಾರಿಕೆ, ಗಟ್ಟಿತನ, ಬುದ್ದಿವಂತಿಕೆ, ಹೀಗೇ ನಾನಾ ಕಾರಣಗಳು ಜನ ಇಷ್ಟ ಪಟ್ಟಾಗ ಮಾತ್ರವೇ ಜನಪ್ರಿಯ ನಾಯಕತ್ವ ಬೆಳೆಯಲು ಸಾಧ್ಯ. ಇದೇ ಕಾರಣಕ್ಕೆ, ಇವರು ಜನನಾಯಕರಾಗಿ ಬೆಳೆದಿದ್ದರ ಹಿಂದೆ ತಮ್ಮನ್ನು ತಾವು ಕಟ್ಟಿಕೊಂಡ ಬಗೆಯೇ ವಿಶಿಷ್ಟ.

ಸದನದಲ್ಲಿ ಶಾಲಾ ಶಿಕ್ಷಕ: ನೀವು ಏನೇ ಹೇಳಿ, ಸದನ ಎಂಬ ಶಾಲೆಯಲ್ಲಿ ನಿಂತು ಶಿಕ್ಷಕ ನಂತೆ ಸಿದ್ದರಾಮಯ್ಯ ಮಾತನಾಡುವ ರೀತಿ ನಿಜಕ್ಕೂ ವಿಶೇಷ. ಮುಂದಿನ ದಿನಮಾನದಲ್ಲಿ ಈ ರೀತಿಯ ನಾಯಕರು ಸಿಗುವುದು ನಿಜಕ್ಕೂ ಅಪರೂಪ. ಸದನ ಸದಸ್ಯರ ಮಾತುಗಳನ್ನು ಆಲಿಸುವ ಸ್ವಭಾವ ಇಂದಿನ ಅದೆಷ್ಟೋ ರಾಜಕಾರಣಿಗಳಲ್ಲಿಲ್ಲ. ಆದರೆ ಸಿದ್ದರಾಮಯ್ಯ ನವರು ಹಣಕಾಸಿಗೆ ಸಂಬಂಧಿಸಿದಂತೆ ನಾಲಿಗೆ ತುದಿಯ ಅಂಕಿ, ಅಂಶ ಹೇಳುವ ಪರಿ ಹಾಗೂ ಜ್ಞಾಪಕಶಕ್ತಿ ನಿಜಕ್ಕೂ ನಿಬ್ಬೆರಗು ಮೂಡಿಸುತ್ತದೆ. ಅಷ್ಟೇ ಅಲ್ಲದೆ ಸಂದರ್ಭಕ್ಕೆ ತಕ್ಕಂತೆ ಬಳಸುವ ವಚನ, ದಶಕಗಳ ಹಿಂದೆ ಸಂಭವಿಸಿದ ಐತಿಹಾಸಿಕ ಘಟನೆ ಮೆಲುಕು ಹಾಕುವ ಕಾರಣಕ್ಕೆ ಸಿದ್ದರಾಮಯ್ಯ ಎಲ್ಲರಿಗೂ ಇಷ್ಟವಾಗುವುದು.

ಜನಮನ ಸೆಳೆಯುವ ಕಲೆ: ಸಾಮಾನ್ಯವಾಗಿ ಓದಿನಿಂದ ರಾಜಕಾರಣಿಗಳು ದೂರ. ಆದರೆ ಸಿದ್ದರಾಮಯ್ಯನವರ ವಿಷಯದಲ್ಲಿ ಅದು ಭಿನ್ನ. ನಿರಂತರ ಓದು ಹಾಗೂ ಅಧ್ಯಯನಶೀಲ ಗುಣದಿಂದಲೇ ಅವರು ಈ ಎತ್ತರಕ್ಕೆ ಏರಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ಸರಳವಾಗಿ ಬದುಕುವ ರೀತಿ ಮತ್ತು ಸಾಮಾನ್ಯ ಜನರ ಜೊತೆ ಬೆರೆಯುವ ವ್ಯಕ್ತಿತ್ವದಿಂದಲೇ ಅವರು ಜನಪರ ನಾಯಕರಾಗಿ ಬೆಳೆದಿದ್ದಾರೆ.

ಸಾರ್ವಜನಿಕ ವೇದಿಕೆಯಲ್ಲಿ ಜನರನ್ನು ತಮ್ಮತ್ತ ಸೆಳೆಯುವ ಕಲೆ ಎಲ್ಲರಿಗೂ ಇರುವುದಿಲ್ಲ. ಹೌದೋ ಹುಲಿಯ ಎಂದು ಅಭಿಮಾನಿಗಳು ಕೊಟ್ಟ ಬಿರುದನ್ನು ಸಂಭ್ರಮಿಸಿ ಸಂತಸ ಪಡುವ ಸಿದ್ದರಾಮಯ್ಯನವರ ಗುಣ ವಿಶೇಷ.

‘ಅಹಿಂದ’ ಜೇನುಗೂಡು: ಕರ್ನಾಟಕ ರಾಜಕೀಯ ಇತಿಹಾಸ ಗಮನಿಸಿದರೆ ಒಂದು ಕಡೆ ಲಿಂಗಾಯತ ಹಾಗೂ ಮತ್ತೊಂದೆಡೆ ಒಕ್ಕಲಿಗ ಸಮುದಾಯದ ನಡುವೆ ರಾಜಕಾರಣ ಸುತ್ತು ಹೊಡೆಯುತ್ತಿತ್ತು. ಆದರೆ ರಾಜ್ಯದಲ್ಲಿ ಸಣ್ಣಪುಟ್ಟ ಸಮುದಾಯಗಳನ್ನು ಒಗ್ಗೂಡಿಸಿ ಅಹಿಂದ ಎಂಬ ಜೇನುಗೂಡು ಕಟ್ಟುವ ಮೂಲಕ ದೇವರಾಜ ಅರಸು ನಂತರದಲ್ಲಿ ರಾಜಕಾರಣದ ಹೊಸ ಯುಗಕ್ಕೆ ನಾಂದಿ ಹಾಡಿದವರು ಸಿದ್ದರಾಮಯ್ಯ. ಜನತಾ ಪರಿವಾ ರದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಇವರು ಮೊದಲಿನಿಂದಲೂ ಪ್ರಾದೇಶಿಕ ಬದ್ಧತೆ ಹಾಗೂ ಸಾಮಾಜಿಕ ಸಮಾನ ನ್ಯಾಯದ ಕುರಿತು ಒಲವು ಹೊಂದಿದವರು. ನಂತರದ ದಿನಗಳಲ್ಲಿ ಅಹಿಂದ ಸಂಘಟನೆ ಮೂಲಕ ತಮ್ಮ ಬೇರು ಗಟ್ಟಿಗೊಳಿಸುವ ಕೆಲಸ ಮಾಡಿ ಯಶಸ್ವಿಯಾದರು.

ಒಟ್ಟು 16 ಬಜೆಟ್ ಗಳ ಜನಕ: ಜನಪ್ರಿಯ ನಾಯಕನಾಗಿ ಬೆಳೆಯುವುದು ಸಾಮಾನ್ಯ ಮಾತಲ್ಲ. ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಕುರಿ ಮೇಯಿಸುವ ವ್ಯಕ್ತಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗೆ ಅರಿಯಬಲ್ಲ ಎಂದು ಚುಚ್ಚುಮಾತು ಆಡಲಾಯಿತು. ಆದರೆ ಇದೆಲ್ಲವನ್ನೂ ಲೆಕ್ಕಿಸದೆ 16 ಬಾರಿ ರಾಜ್ಯದ ಬಜೆಟ್ ಮಂಡಿಸುವ ಮೂಲಕ ತಾವೊಬ್ಬ ಪರಿಪೂರ್ಣ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದು ಇವರ ಹೆಗ್ಗಳಿಕೆ. ನಿರಂತರ ಓದು, ವಿಷಯದ ಪರಿಪೂರ್ಣತೆ, ಕೇಳಿಸಿಕೊಳ್ಳುವ ಮನಸ್ಥಿತಿಯಿಂದಲೇ ಸಿದ್ದರಾಮಯ್ಯ ತಮ್ಮದೇ ಒಂದು ಗಟ್ಟಿ ಸಾಮ್ರಾಜ್ಯ ನಿರ್ಮಿಸಿಕೊಂಡು ಆನೆ ನಡೆದz ದಾರಿ ಎಂಬಂತೆ ಸಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ನೇತಾರರ ಗರಡಿಯ ಪೈಲ್ವಾನ್: ಪ್ರಸ್ತುತ ಕರ್ನಾಟಕ ರಾಜಕಾರಣ ಒಂದು ತಲೆಮಾರು ಸರಿದು ಹೊಸ ತಲೆಮಾರಿನ ಆಗಮನದ ಕಾಲಘಟ್ಟಕ್ಕೆ ಬಂದು ತಲುಪಿದೆ. 80 ರ ದಶಕ ಗಳಿಂದ ಈಚೆಗೆ ದಿಗ್ಗಜ ರಾಜಕೀಯ ನೇತಾರರ ಗರಡಿಯಲ್ಲಿ ಬೆಳೆದಿದ್ದ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ ನವರು ಬಹುತೇಕ ತಮ್ಮ ರಾಜಕೀಯ ಬದುಕಿನ ಕೊನೆ ಘಟ್ಟದಲ್ಲಿದ್ದಾರೆ.

ಸಮಾಜವಾದ, ರೈತಪರ ಚಿಂತನೆ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಜಯಪ್ರಕಾಶ್ ನಾರಾಯಣ, ರಾಮ್ ಮನೋಹರ ಲೋಹಿಯಾ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅಂತಹ ಮಹಾನ್ ನಾಯಕರ ಚಿಂತನೆಗಳ ಅಡಿಯಲ್ಲಿ ರಾಜಕಾರಣ ಮಾಡಿದ್ದ ಒಂದು ದೊಡ್ಡ ವರ್ಗ ಹೊರ ನಡೆಯುತ್ತಿದ್ದು, ಹೊಸ ತಲೆಮಾರು ಇವರ ಸ್ಥಾನ ಅಲಂಕರಿಸುವ ಸಿದ್ಧತೆಯಲ್ಲಿ ತೊಡಗಿದೆ.

ವ್ಯವಹಾರಿಕ ರಾಜಕಾರಣ: ಇಂದಿನ ಕಾರ್ಪೋರೆಟ್ ಯುಗದಲ್ಲಿ ರಾಜಕಾರಣವೂ ಲಾಭ, ನಷ್ಟದ ವ್ಯವಹಾರಿಕ ಅಂಚಿಗೆ ನಿಂತಿದೆ. ಅರ್ಧದಷ್ಟು ರಾಜಕೀಯ ವ್ಯವಸ್ಥೆ ಏಕಮುಖ ವಾಗಿ ಚಲಿಸುತ್ತಿದೆ. ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಹಣ ಹೂಡಿ ಚುನಾವಣೆ ನಡೆಸುವುದು ನಂತರ ತಮ್ಮಿಷ್ಟದಂತೆ ರಾಜಕಾರಣ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ರಾಜಕೀಯವನ್ನೇ ಸಮಾಜಸೇವೆಯಾಗಿ ಪರಿಗಣಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲೆತ್ತುವ ಚಿಂತನೆಯೊಂದಿಗೆ ರಾಜಕೀಯ ರಂಗ ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿರುವ ಬಹುತೇಕ ನಾಯಕರು ಇಂದು ರಾಜಕಾರಣ ದ ಕೊನೆ ಘಟ್ಟಕ್ಕೆ ಬಂದು ತಲುಪಿದ್ದಾರೆ. ಸಧ್ಯ ಕರ್ನಾಟಕವೂ ಒಂದು ತಲೆಮಾರಿನ ರಾಜಕಾರಣಕ್ಕೆ ವಿದಾಯ ಹೇಳಿ ಹೊಸ ತಲೆಮಾರಿಗೆ ಅವಕಾಶ ನೀಡುವ ಕ್ಷಣಕ್ಕೆ ತಲುಪಿದೆ.

ಪಾದಯಾತ್ರೆಯ ರೂವಾರಿ: ಸಿದ್ದರಾಮಯ್ಯನವರ ರಾಜಕೀಯ ಕಾಲಘಟ್ಟದಲ್ಲಿ ಸಂಭವಿಸಿದ ಎರಡು ಘಟನೆಗಳು ಅವರನ್ನು ಜನಪ್ರಿಯ ನಾಯಕನನ್ನಾಗಿ ರೂಪಿಸಿದವು. ಮೊದಲನೆಯದು 2005ರ ಸಂದರ್ಭದಲ್ಲಿ ಜನತಾದಳದ ಪ್ರಶ್ನಾತೀತ ನಾಯಕ ದೇವೆಗೌಡ ರಿಗೆ ಸೆಡ್ಡು ಹೊಡೆದು ಅಹಿಂದ ಸಮಾವೇಶದ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು, ಹಾಗೆಯೇ 2010ರ ವೇಳೆ ಬಳ್ಳಾರಿ ಗಣಿ ಧಣಿಗಳ ವಿರುದ್ಧ ತೊಡೆ ತಟ್ಟಿ ನಡೆಸಿದ 320 ಕಿಲೋ ಮೀಟರ್ ದೂರದ ಪಾದಯಾತ್ರೆ ಅವರನ್ನು ಮುಖ್ಯಮಂತ್ರಿ ಕುರ್ಚಿಗೆ ಬರುವಂತೆ ಮಾಡಿತು. ಒಬ್ಬ ಗಟ್ಟಿ ನಾಯಕ ತನ್ನ ಬದುಕಿನಲ್ಲಿ ತಗೆದುಕೊಳ್ಳುವ ಮಹತ್ವದ ನಿರ್ಧಾರ‌ ಗಳು ಮುಂದೆ ಪರಿಣಾಮಕಾರಿಯಾಗಿ ಬೆಳೆಯಲು ಸಹಕಾರಿ ಆಗುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯವರು ಕರ್ನಾಟಕ ರಾಜಕೀಯ ಇತಿಹಾಸದ ಪುಟಗಳಲ್ಲಿ ಸದಾಕಾಲವೂ ಸ್ಮರಣೀಯರಾಗಿ ಉಳಿದಿರುವುದು.

ಹಳ್ಳಿ ಸೊಗಡಿನ ಜವಾರಿ ಭೋಜನ :ಸರಳ ಉಡುಪು, ಹಳ್ಳಿ ಸೊಗಡಿನ ಊಟ, ಒರಟು ಮಾತು ಹಾಗೂ ಮಾನವೀಯ ಹೃದಯವಂತಿಕೆಯೇ ಒಬ್ಬ ನಾಯಕನನ್ನು ಜನಪ್ರಿಯ ಮಾಡುವುದು. ಸಿದ್ದರಾಮಯ್ಯನವರ ಒರಟು ಮಾತುಗಳೇ ಅವರನ್ನು ಪ್ರೀತಿಸುವ ಬಳಗ ಹೆಚ್ಚಿಸಿದ್ದು. ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ಭಾಗದಲ್ಲಿ ಬೆಂಬಲಿಗರ ಪಡೆಯನ್ನು ಹೊಂದಲು ಸಾಧ್ಯವಾಗಿದ್ದು. ಕೇವಲ ಜಾತಿಯಿಂದಲೇ ಗುರುತಿಸಿಕೊಳ್ಳದೆ ಎಲ್ಲಾ ಸಮುದಾಯಗಳು ಮೆಚ್ಚುವ ವ್ಯಕ್ತಿತ್ವ ರೂಪಿಸಿಕೊಂಡಾಗ ಮಾತ್ರ ಮಾಸ್ ಲೀಡರ್ ಎಂಬ ಪಟ್ಟ ಪಡೆಯಲು ಸಾಧ್ಯ. ರಾಜಕಾರಣ ಮಾಡುತ್ತಲೇ ಅನುಭವಗಳಿಂದ ಗಟ್ಟಿ ನಾಯಕತ್ವ ಕಟ್ಟಿಕೊಂಡ ವರ ಸಾಲಿನಲ್ಲಿ ಸಿದ್ದರಾಮಯ್ಯ ಅಗ್ರರು.

‘ಅನ್ನ ಭಾಗ್ಯ’ದ ಅನ್ನರಾಮಯ್ಯ : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಜಾರಿಗೆ ತಂದ ಅನ್ನ ಭಾಗ್ಯ ಯೋಜನೆಯಿಂದ ಅವರಿಗೆ ಸಾಕಷ್ಟು ಗೌರವ ಮತ್ತು ಜನಪ್ರಿಯತೆ ಲಭಿಸಿತು. ಇಂದಿರಾ ಕ್ಯಾಂಟಿನ್ ಎಂಬ ಪರಿಕಲ್ಪನೆ ಮೂಲಕ ಬಡ ವರ್ಗದ ಜನರಿಗೆ ಕಡಿಮೆ ಹಣದಲ್ಲಿ ಹೊಟ್ಟೆ ತುಂಬಿಸುವ ಚಿಂತನೆ ನಿಜಕ್ಕೂ ಶ್ಲಾಘನೀಯ. ಇಂತಹ ಚಿಂತನೆಗಳು ಬಡತನವೆಂಬ ಸಮುದ್ರ ಈಜಿ ಸದೃಢ ಬದುಕು ಕಟ್ಟಿಕೊಂಡವರಿಂದಲೇ ಮಾತ್ರ ರೂಪುಗೊಳ್ಳಲು ಸಾಧ್ಯ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಮೊದಲ ಅವಧಿಯಲ್ಲೇ ಅನ್ನರಾಮಯ್ಯ ರಾಗಿದ್ದು. ಬಡವರಿಗೆ ಹತ್ತಿರವಾಗಿರಲು ಸಾಧ್ಯವಾದದ್ದು.

ಸಮಾಜ ಪರ ಚಿಂತನೆಯ ರಾಜಕಾರಣಿ

ಸೈದ್ಧಾಂತಿಕ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ವಿರೋಧಿಸುವವರು ಇರಬಹುದು. ಆದರೆ ಮಾನವೀಯ ಮೌಲ್ಯ ಮತ್ತು ಸಮಾಜ ಪರ ಚಿಂತನೆಯೊಂದಿಗೆ ರಾಜಕಾರಣ ಮಾಡುವ ಸಿದ್ದರಾಮಯ್ಯನವರನ್ನು ವಿರೋಧಿಸಲು ಸಾಧ್ಯವಿಲ್ಲ. ಸುಮಾರು ಐದು ದಶಕಗಳವರೆಗೆ ರಾಜಕೀಯ ಬದುಕಿನಲ್ಲಿದ್ದುಕೊಂಡು ಸರಳ ಹಾಗೂ ಸಜ್ಜನಿಕೆ ಅಳವಡಿಸಿ ಕೊಂಡು ಅಧಿಕಾರ ನಡೆಸುವುದು ತುಂಬಾ ಕಷ್ಟ. ಆದರೆ ಇವೆಲ್ಲವನ್ನೂ ಮೆಟ್ಟಿ ನಿಂತ ಇವರು, ಕರ್ನಾಟಕದ ಸುದೀರ್ಘ ಅವಧಿಗೆ ಮುಖ್ಯ ಮಂತ್ರಿಯಾಗಿರುವ ಐತಿಹಾಸಿಕ ದಾಖಲೆ ಮಾಡಿದ್ದು ಕರುನಾಡಿಗೆ ಹೆಮ್ಮೆಯ ಸಂಗತಿ.