Digital Revolution in KKRTC: ಕೆಕೆಆರ್ʼಟಿಸಿ ಬಸ್ʼಗಳಲಿ ಡಿಜಿಟಲ್ ಕ್ರಾಂತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋ ಗದೊಂದಿಗೆ ಹಮ್ಮಿಕೊಳ್ಳಲಾದ ಈ ಬೃಹತ್ ಡಿಜಿಟಲ್ ಜಾಲದಲ್ಲಿ ಆರಂಭದಲ್ಲಿ ಕೆಲವು ನೆಟ್‌ವರ್ಕ್ ಹಾಗೂ ಸರ್ವರ್ ಸಮಸ್ಯೆಗಳು ಎದುರಾಗಿದ್ದವು. ಆದರೆ, ಸಾರಿಗೆ ಸಂಸ್ಥೆಯು ಆ ಎಲ್ಲ ದೋಷಗಳನ್ನು ಶೀಘ್ರವಾಗಿ ಬಗೆಹರಿಸಿ, ಇದೀಗ ನಿಗಮದ ಎಲ್ಲ ಬಸ್‌ಗಳಿಗೂ ಈ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಇದರಿಂದಾಗಿಗೂ ಗಲ್ಫ್ ಪೇ, ಫೋನ್ ಪೇ ಮೂಲಕ ಕೇವಲ ಒಂದು ಸ್ಕ್ಯಾನ್‌ನೊಂದಿಗೆ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
-
ದೇವೇಂದ್ರ ಜಾಡಿ ಕಲಬುರಗಿ
ಚಿಲ್ಲರೆ ಕಿರಿಕಿರಿಗೆ ಮುಕ್ತಿ, 100% ಬಸ್‌ಗಳಲ್ಲಿ ಯುಪಿಐ ಸ್ಮಾರ್ಟ್ ಸೇವೆ ಜಾರಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ನಗದು ರಹಿತ ಪ್ರಯಾಣಕ್ಕೆ ಪೂರ್ಣ ಚಾಲನೆ ಆರಂಭಿಕ ತಾಂತ್ರಿಕ ದೋಷಗಳನ್ನು ಬಗೆಹರಿಸಿದ ನಿಗಮ ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಡಿಜಿಟಲ್ ಕ್ರಾಂತಿ
ಖಾಲಿ ಜೇಬಿನಲ್ಲಿ ಬಸ್ ಹತ್ತಿದರೂ ಇನ್ಮುಂದೆ ಕಲ್ಯಾಣ ಕರ್ನಾಟಕದ ಉದ್ದಗಲಕ್ಕೂ ನಿಶ್ಚಿಂತೆ ಯಿಂದ ಪ್ರಯಾಣಿಸಬಹುದು! ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಕೆಆರ್‌ಟಿಸಿ) ತನ್ನ ಇತಿಹಾಸದಲ್ಲೇ ಅತ್ಯಂತ ಪ್ರಮುಖ ತಾಂತ್ರಿಕ ಮೈಲಿಗಲ್ಲನ್ನು ನೆಟ್ಟಿದೆ. ಆರಂಭಿಕ ಹಂತದಲ್ಲಿದ್ದ ಕೆಲವು ತಾಂತ್ರಿಕ ಅಡಚಣೆಗಳನ್ನು ಯಶಸ್ವಿಯಾಗಿ ಬಗೆಹರಿಸಿರುವ ನಿಗಮ, ಈಗ ತನ್ನ ವ್ಯಾಪ್ತಿಯ ಶೇ.100ರಷ್ಟು ಬಸ್‌ಗಳಲ್ಲಿ ನಗದುರಹಿತ ಯುಪಿಐ ಆಪ್ ಆಧಾರಿತ ಟಿಕೆಟ್ ವಿತರಣಾ ವ್ಯವಸ್ಥೆ ಯನ್ನು ಪೂರ್ಣ ಪ್ರಮಾಣದಲ್ಲಿ ಅಧಿಕೃತವಾಗಿ ಜಾರಿಗೆ ತಂದಿದೆ.
ನಿಗಮದ ಪ್ರಮುಖ ಕೇಂದ್ರ ಸ್ಥಾನವಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯ ನಗರ ಸೇರಿ ಇಡೀ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಗ್ರಾಮೀಣ ಮತ್ತು ನಗರ ಪ್ರದೇಶದ ಸಾರಿಗೆ ಜಾಲದಲ್ಲಿ ಈ ಸ್ಮಾರ್ಟ್ ಸೇವೆ ಈಗ ಸಂಪೂರ್ಣವಾಗಿ ಲಭ್ಯವಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋ ಗದೊಂದಿಗೆ ಹಮ್ಮಿಕೊಳ್ಳಲಾದ ಈ ಬೃಹತ್ ಡಿಜಿಟಲ್ ಜಾಲದಲ್ಲಿ ಆರಂಭದಲ್ಲಿ ಕೆಲವು ನೆಟ್‌ವರ್ಕ್ ಹಾಗೂ ಸರ್ವರ್ ಸಮಸ್ಯೆಗಳು ಎದುರಾಗಿದ್ದವು. ಆದರೆ, ಸಾರಿಗೆ ಸಂಸ್ಥೆಯು ಆ ಎಲ್ಲ ದೋಷಗಳನ್ನು ಶೀಘ್ರವಾಗಿ ಬಗೆಹರಿಸಿ, ಇದೀಗ ನಿಗಮದ ಎಲ್ಲ ಬಸ್‌ಗಳಿಗೂ ಈ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಇದರಿಂದಾಗಿಗೂ ಗಲ್ಫ್ ಪೇ, ಫೋನ್ ಪೇ ಮೂಲಕ ಕೇವಲ ಒಂದು ಸ್ಕ್ಯಾನ್‌ನೊಂದಿಗೆ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
90 ಸೆಕೆಂಡ್‌ಗಳಲ್ಲೇ ಟಿಕೆಟ್ ಪಕ್ಕಾ: ಬಸ್ ಹತ್ತಿದ ಪ್ರಯಾಣಿಕರು ತಲುಪಬೇಕಾದ ಊರನ್ನು ತಿಳಿಸಿದ ತಕ್ಷಣ, ನಿರ್ವಾಹಕರು ಹೊಸ ಆಂಡ್ರಾಯ್ಡ್ ಇಟಿಎಂ ಮಷಿನ್‌ನಲ್ಲಿ ವಿವರ ದಾಖಲಿಸು ತ್ತಾರೆ. ಆಗ ಪರದೆಯ ಮೇಲೆ ಕ್ಯೂಆರ್ ಕೋಡ್ ಮೂಡಲಿದ್ದು, ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು.
ಇದನ್ನೂ ಓದಿ: Kalaburagi is number 1: ನಾಡ ಕಚೇರಿಯಿಂದ ತ್ವರಿತ ಸೇವೆ: ರಾಜ್ಯದಲ್ಲಿಯೇ ಕಲಬುರಗಿ ನಂಬರ್-1
ನಗದು ವರ್ಗಾವಣೆ ಯಶಸ್ವಿಯಾದ ಕೇವಲ 90 ಸೆಕೆಂಡುಗಳ ಒಳಗೆ ಮುದ್ರಿತ ಟಿಕೆಟ್ ಪ್ರಯಾಣಿಕರ ಕೈ ಸೇರಲಿದೆ. ಪ್ರತಿದಿನ ಸಂಗ್ರಹವಾಗುವ ಸುಮಾರು 1 ಕೋಟಿ ರುಪಾಯಿ ಆದಾಯದಲ್ಲಿ ಶೇ.50 ರಷ್ಟು ‘ಶಕ್ತಿ ಯೋಜನೆ’ಯ ಉಚಿತ ಪ್ರಯಾಣದ ಮರುಪಾವತಿಯಾಗಿದ್ದರೆ, ಉಳಿದ ನಗದು ರಹಿತ ಆದಾಯವು ನೇರವಾಗಿ ಆಯಾ ಡಿಪೋ ವ್ಯವಸ್ಥಾಪಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಇದು ಆಡಳಿತಾತ್ಮಕ ಪಾರದರ್ಶಕತೆಯನ್ನು ಹೆಚ್ಚಿಸಿದ್ದು, ಸಿಬ್ಬಂದಿಗೆ ನಗದು ಕೌಂಟರ್ʼಗಳಲ್ಲಿ ಹಣ ಜಮಾ ಮಾಡುವ ಸಮಯವನ್ನು ಉಳಿಸಿದೆ.
ಹಿಂಭಾಗ ಬರೆಯುವ ಪದ್ಧತಿಗೆ ಬಿತ್ತು ಕಾಯಂ ಬೀಗ!
ಈ ಹಿಂದೆ ಪ್ರಯಾಣಿಕರು 100ರು., 500ರು. ಮುಖಬೆಲೆಯ ನೋಟು ನೀಡಿದರೆ, ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕರು ಟಿಕೆಟ್ ಹಿಂಭಾಗದಲ್ಲಿ ಬಾಕಿ ಹಣವನ್ನು ಪೆನ್ನಿನಲ್ಲಿ ಬರೆದು ಕೊಡುತ್ತಿದ್ದರು. ಇದರಿಂದ ನಿತ್ಯ ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಮಾತಿನ ಚಕಮಕಿ, ಜಗಳಗಳು ನಡೆಯುತ್ತಿದ್ದವು. ಆದರೆ ಈಗ ಟಿಕೆಟ್ ದರ ಎಷ್ಟಿದೆ ಯೋ ಅಷ್ಟನ್ನೇ ನಿಖರವಾಗಿ ಆನ್‌ಲೈನ್ ಮೂಲಕ ಪಾವತಿಸುತ್ತಿರುವುದರಿಂದ ಚಿಲ್ಲರೆ ಕಿರಿಕಿರಿಗೆ ಶಾಶ್ವತ ಮುಕ್ತಿ ಸಿಕ್ಕಿದೆ.
ತಾಂತ್ರಿಕ ದೋಷಗಳಿಗೆ ಒಟಿಪಿಎಲ್ ಕಂಪನಿಯೇ ಹೊಣೆ
ನಿಗಮವು ಪ್ರತಿ ಡಿಜಿಟಲ್ ಮಷಿನ್‌ಗೆ ತಿಂಗಳಿಗೆ 450 ರು. ಬಾಡಿಗೆ ನೀಡುವ ಒಪ್ಪಂದದೊಂದಿಗೆ ಒಟಿಪಿಎಲ್ ಕಂಪನಿಯಿಂದ ಇಟಿಎಂಗಳನ್ನು ಪಡೆದಿದೆ. ಆರಂಭದಲ್ಲಿ ಎದುರಾದ ನೆಟ್‌ವರ್ಕ್ ಸಮಸ್ಯೆ ಹಾಗೂ ಸಾಫ್ಟ್ʼವೇರ್ ಅಡಚಣೆಗಳನ್ನು ಕಂಪನಿಯು ತಕ್ಷಣವೇ ನಿವಾರಿಸಿದೆ. ಗ್ರಾಮೀಣ ಭಾಗದಲ್ಲಿ ಮಷಿನ್ ಕೆಟ್ಟುಹೋದರೆ, ಅದನ್ನು ಉಚಿತವಾಗಿ ದುರಸ್ತಿ ಮಾಡುವ ಅಥವಾ ತಕ್ಷಣ ಹೊಸ ಮಷಿನ್ ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಕಂಪನಿಯೇ ವಹಿಸಿಕೊಂಡಿರುವು ದರಿಂದ ಸಾರಿಗೆ ಸಂಸ್ಥೆಗೆ ಯಾವುದೇ ನಷ್ಟದ ಸಾಧ್ಯವಿಲ್ಲ
![]()
ಆರಂಭದಲ್ಲಿ ಸಂಸ್ಥೆಯ 5000 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಯುಪಿಐ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಆಗ ಕಂಡುಬಂದ ಕೆಲವು ತಾಂತ್ರಿಕ ದೋಷಗಳನ್ನು ಈಗ ಸಂಪೂರ್ಣವಾಗಿ ಸರಿಪಡಿಸಲಾಗಿದ್ದು, ನಿಗಮದ ಶೇ.100ರಷ್ಟು ಬಸ್‌ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಕೇವಲ 9 ರಿಂದ 12 ಸೆಕೆಂಡುಗಳಲ್ಲಿ ಹಣ ಪಾವತಿಯಾಗಿ ಟಿಕೆಟ್ ಜನರೇಟ್ ಆಗಲಿದ್ದು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜನರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ. ಈ ನೂತನ ತಂತ್ರಜ್ಞಾನ ಬಳಕೆಯ ಬಗ್ಗೆ ನಮ್ಮ ಸಾರಿಗೆ ನಿರ್ವಾಹಕರಿಗೂ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದೆ.
-ಅರುಣಕುಮಾರ್ ಪಾಟೀಲ್, ಕೆಕೆಆರ್‌ಟಿಸಿ ಅಧ್ಯಕ್ಷ
![]()
ಬಸ್‌ಗಳಲ್ಲಿ ಶೇ.100ರಷ್ಟು ಯುಪಿಐ ಸ್ಕ್ಯಾನರ್ ವ್ಯವಸ್ಥೆ ಜಾರಿಗೆ ಬಂದಿರುವುದು ತುಂಬಾ ಅನು ಕೂಲಕರವಾಗಿದೆ. ಆರಂಭದಲ್ಲಿದ್ದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಈಗ ಪೂರ್ಣ ಪ್ರಮಾಣದಲ್ಲಿ ಬಗೆಹರಿಸಿರುವುದರಿಂದ ಗ್ರಾಮೀಣ ಭಾಗದ ಜನರಿಗೂ ಡಿಜಿಟಲ್ ಪಾವತಿ ಸುಲಭವಾಗಿದೆ. ಚಿಲ್ಲರೆಗಾಗಿ ಕಂಡಕ್ಟರ್‌ಗಳ ಜತೆ ವಾದ ಮಾಡುವ ಪ್ರಮೇಯವೇ ತಪ್ಪಿದೆ.
-ಸುರೇಶ್ ದೇಶಮುಖ, ಕಲಬುರಗಿ ಪ್ರಯಾಣಿಕ