Indian Air Force Day 2025: ಇಂದು ಭಾರತೀಯ ವಾಯುಪಡೆ ದಿನ- IAFನಿಂದ ಪ್ರೇರಿತವಾದ ಸಿನಿಮಾಗಳು
Movies inspired by IAF: ದೇಶಾದ್ಯಂತ ಇಂದು ಭಾರತೀಯ ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತದೆ. ಐಎಎಫ್ ಸಿಬ್ಬಂದಿಯ ಸೇವೆ, ಸಾಧನೆ, ಸಮರ್ಪಣೆಯನ್ನು ಗೌರವಿಸುವ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳು ಇಂತಿವೆ.

-

ಬೆಂಗಳೂರು: ದೇಶದ ರಕ್ಷಣೆಯಲ್ಲಿ ಭಾರತೀಯ ವಾಯುಪಡೆಯ (Indian Air Force) ಸಾಧನೆಯನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಭಾರತೀಯ ವಾಯುಪಡೆ ದಿನವನ್ನು (Indian Air Force Day) ಅಕ್ಟೋಬರ್ 8ರಂದು ಅಂದರೆ ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಭಾರತೀಯ ವಾಯುಪಡೆಯ ಸಾಧನೆಯಿಂದ ಪ್ರೇರಿತವಾದ ಹಲವಾರು ಸಿನಿಮಾಗಳು (Indian Air Force related film) ತೆರೆಗೆ ಬಂದಿವೆ. ಇವುಗಳು ಭಾರತೀಯ ವಾಯುಪಡೆಯಲ್ಲಿನ ಸಿಬ್ಬಂದಿಯ (Indian Air Force staff) ಸೇವೆ, ಸಮರ್ಪಣೆಯನ್ನು ಗೌರವಿಸುತ್ತದೆ. ಭಾರತದ ವಾಯುಪ್ರದೇಶವನ್ನು ರಕ್ಷಿಸುವಲ್ಲಿ ಮತ್ತು ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸುವಲ್ಲಿನ ತಾಂತ್ರಿಕ ಪ್ರಗತಿಯನ್ನು ಬಣ್ಣಿಸುತ್ತವೆ.
1932ರ ಅಕ್ಟೋಬರ್ 8ರಲ್ಲಿ ಸ್ಥಾಪನೆಯಾದ ಭಾರತೀಯ ವಾಯುಪಡೆಯು ದೇಶದ ವಾಯುಪ್ರದೇಶವನ್ನು ಸುರಕ್ಷಿತಗೊಳಿಸುವಲ್ಲಿ ಮತ್ತು ಭಾರತದ ರಾಷ್ಟ್ರೀಯ ಮತ್ತು ಮಾನವೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಸ್ಥಾಪನೆಯಾದ ಭಾರತೀಯ ವಾಯುಪಡೆಗೆ ಆರಂಭದಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್ (RIAF) ಎಂದು ಹೆಸರಿಡಲಾಗಿತ್ತು. ಇದರ ಮೊದಲ ಕಾರ್ಯಾಚರಣೆ 1933ರ ಏಪ್ರಿಲ್ 1ರಂದು ನಡೆದಿದ್ದು, ತರಬೇತಿ ಪಡೆದ ಆರು ಮಂದಿ ಅಧಿಕಾರಿಗಳು 19 ಹವಾಯಿ ಸಿಪಾಯಿಗಳನ್ನು ಕರೆದುಕೊಂಡು ಹೋಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಇದು ನೀಡಿರುವ ಕೊಡುಗೆ ಗಮನಾರ್ಹವಾಗಿತ್ತು. 1950ರಲ್ಲಿ ಭಾರತ ಗಣರಾಜ್ಯವಾದಾಗ ರಾಯಲ್ ಇಂಡಿಯನ್ ಏರ್ ಫೋರ್ಸ್ ಗೆ ಭಾರತೀಯ ವಾಯುಪಡೆ ಎಂದು ಹೆಸರಿಸಲಾಯಿತು. 1947, 1965, 1971 ಮತ್ತು 1999 ರ ಇಂಡೋ-ಪಾಕ್ ಯುದ್ಧಗಳು ಹಾಗೂ 1962 ರ ಚೀನಾ-ಭಾರತ ಯುದ್ಧಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿರುವ ಭಾರತೀಯ ವಾಯುಪಡೆ 1987ರ ಆಪರೇಷನ್ ಪೂಮಲೈ, 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಗಣನೀಯ ಕೊಡುಗೆಯನ್ನು ನೀಡಿತ್ತು.
ಇದನ್ನೂ ಓದಿ: Mohammed Siraj: ʼಮನೆಯಲ್ಲಿಡಲು ಸ್ಥಳವಿಲ್ಲದಷ್ಟು ಹಣ ಗಳಿಸುವೆʼ; ನಿಜವಾಯಿತು ಸಿರಾಜ್, ತಾಯಿಗೆ ನೀಡಿದ ಭರವಸೆ
ಐದು ಪ್ರಮುಖ ಸಿನಿಮಾಗಳು
ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್: 1999ರ ಕಾರ್ಗಿಲ್ ಯುದ್ಧದಲ್ಲಿ ಮೊದಲ ಭಾರತೀಯ ಮಹಿಳಾ ಯುದ್ಧ ಪೈಲಟ್ ಆಗಿದ್ದ ಭಾರತೀಯ ವಾಯುಪಡೆಯ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿದ ಚಿತ್ರ ಇದಾಗಿದೆ. ಶರಣ್ ಶರ್ಮ ನಿರ್ದೇಶಿಸಿರುವ ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಫೈಟರ್: ಪುಲ್ವಾಮ ದಾಳಿಯ ಬಳಿಕ ಭಾರತೀಯ ಸಶಸ್ತ್ರ ಪಡೆಗಳು ನಡೆಸಿರುವ ಮಿಲಿಟರಿ ಸಂಘರ್ಷದ ಸಾಧನೆಯನ್ನು ಬಣ್ಣಿಸಿದೆ. ಪಾಕಿಸ್ತಾನದಲ್ಲಿನ ಶಂಕಿತ ಭಯೋತ್ಪಾದಕ ಶಿಬಿರಗಳ ಮೇಲೆ ಬಾಲಕೋಟ್ ವೈಮಾನಿಕ ದಾಳಿಯನ್ನು ವರ್ಣಿಸುವ ಈ ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದು, ಹೃತಿಕ್ ರೋಷನ್; ದೀಪಿಕಾ ಪಡುಕೋಣೆ; ಅನಿಲ್ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಭುಜ್: ದಿ ಪ್ರೈಡ್ ಆಫ್ ಇಂಡಿಯಾ: 1971ರ ಭಾರತ- ಪಾಕಿಸ್ತಾನ ಯುದ್ಧವನ್ನು ಆಧರಿಸಿರುವ ಈ ಚಿತ್ರ ಭುಜ್ ವಾಯುಪಡೆ ನೆಲೆಯ ಉಸ್ತುವಾರಿ ವಹಿಸಿದ್ದ ಮಾಜಿ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ನಾಯಕಿ ವಿಜಯ್ ಕಾರ್ಣಿಕ್ ಅವರ ಜೀವನಾಧಾರಿತ ಕಥೆಯನ್ನು ಉಲ್ಲೇಖಿಸುತ್ತದೆ. ಮಾಧಾಪರ್ ಗ್ರಾಮದ 300 ಸ್ಥಳೀಯ ಮಹಿಳೆಯರು 72 ಗಂಟೆಗಳ ಒಳಗೆ ನೆಲೆಯ ಲ್ಯಾಂಡಿಂಗ್ ಸ್ಟ್ರಿಪ್ ಅನ್ನು ಪುನರ್ನಿರ್ಮಿಸಲು ಹೇಗೆ ಸಹಾಯ ಮಾಡಿದರು ಎನ್ನುವುದನ್ನು ವರ್ಣಿಸುವ ಈ ಚಿತ್ರವನ್ನು ಅಭಿಷೇಕ್ ದುಧೈಯಾ ನಿರ್ದೇಶಿಸಿದ್ದಾರೆ. ಅಜಯ್ ದೇವಗನ್; ಸಂಜಯ್ ದತ್; ಶರದ್ ಕೇಳ್ಕರ್; ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಂಗ್ ದೇ ಬಸಂತಿ: ಭಾರತೀಯ ವಾಯುಪಡೆಯ ಪೈಲಟ್ ಸ್ನೇಹಿತ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಅನಂತರ ಬಲವಾದ ದೇಶಭಕ್ತಿಯ ಜಾಗೃತಿಯನ್ನು ವರ್ಣಿಸುವ ಈ ಚಿತ್ರವನ್ನು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ್ದಾರೆ. ಅಮೀರ್ ಖಾನ್, ಸೋಹಾ ಅಲಿ ಖಾನ್, ಸಿದ್ದಾರ್ಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಪರೇಷನ್ ವ್ಯಾಲೆಂಟೈನ್: 2019 ರ ಪುಲ್ವಾಮಾ ದಾಳಿಯ ಬಳಿಕ ನಡೆದ ಬಾಲಕೋಟ್ ವಾಯುದಾಳಿಯನ್ನು ವರ್ಣಿಸುವ ಈ ಚಿತ್ರವನ್ನು ಶಕ್ತಿ ಪ್ರತಾಪ್ ಸಿಂಗ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವರುಣ್ ತೇಜ್, ಮಾನುಷಿ ಛಿಲ್ಲರ್, ಪರೇಶ್ ಪಹುಜಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.