ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರವಾಸೋದ್ಯಮದಲ್ಲಿ ಶುರುವಾಗಲಿದೆ AI ಕ್ರಾಂತಿ: ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಭಾರೀ ಸುಲಭ!

ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಕೃತಕ ಬುದ್ಧಿಮತ್ತೆಯ (ಎಐ) ಯುಗಕ್ಕೆ ಕೊಂಡೊಯ್ಯಲು ಟೆಕ್ ದೈತ್ಯ 'ಕಾಗ್ನಿಜೆಂಟ್', ಟ್ರಾವೆಲ್ ಮೂಲಸೌಕರ್ಯ ಒದಗಿಸುವ 'ಟ್ರಾವೆಲ್‌ಪೋರ್ಟ್' ಮತ್ತು ಎಐ ಅಭಿವೃದ್ಧಿಪಡಿಸುವ 'ಆಂಥ್ರೋಪಿಕ್' ಸಂಸ್ಥೆಗಳು ಕೈಜೋಡಿಸಿವೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಪ್ರವಾಸೋದ್ಯಮದಲ್ಲಿ ಶುರುವಾಗಲಿದೆ AI ಕ್ರಾಂತಿ

-

Profile
Siddalinga Swamy May 28, 2026 5:15 PM

ಬೆಂಗಳೂರು, ಮೇ 28: ಈಗ ಎಲ್ಲೆಲ್ಲೂ ಎಐನದ್ದೇ ಸದ್ದು. ಇದೀಗ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಕೃತಕ ಬುದ್ಧಿಮತ್ತೆಯ (ಎಐ) (AI) ಯುಗಕ್ಕೆ ಕೊಂಡೊಯ್ಯಲು ಟೆಕ್ ದೈತ್ಯ 'ಕಾಗ್ನಿಜೆಂಟ್', ಟ್ರಾವೆಲ್ ಮೂಲಸೌಕರ್ಯ ಒದಗಿಸುವ 'ಟ್ರಾವೆಲ್‌ಪೋರ್ಟ್' ಮತ್ತು ಎಐ ಅಭಿವೃದ್ಧಿಪಡಿಸುವ 'ಆಂಥ್ರೋಪಿಕ್' ಸಂಸ್ಥೆಗಳು ಕೈಜೋಡಿಸಿವೆ. ಹಳೆಯ ಟ್ರಾವೆಲ್ ತಂತ್ರಜ್ಞಾನಗಳನ್ನು ಆಧುನೀಕರಿಸುವುದು ಈ ಮೂರು ಸಂಸ್ಥೆಗಳ ಪಾಲುದಾರಿಕೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಕಾಗ್ನಿಜೆಂಟ್ ಸಂಸ್ಥೆಯು, ಆಂಥ್ರೋಪಿಕ್ ಡೆವಲಪ್ ಮಾಡಿರುವ 'ಕ್ಲೌಡ್' ಎಐ ಮಾಡೆಲ್ ಅನ್ನು ಬಳಸಿಕೊಂಡು 'ಟ್ರಾವೆಲ್‌ಪೋರ್ಟ್' ನ ಸಾಫ್ಟ್‌ವೇರ್‌ಗಳನ್ನು ಬಿಲ್ಡ್ ಮಾಡಲಿದ್ದು, ಟೆಸ್ಟ್‌ ಮಾಡಿ ನಿರ್ವಹಣೆಯೂ ಮಾಡಲಿದೆ. ಇದರಿಂದ ವಿಮಾನಯಾನ ಸಂಸ್ಥೆಗಳು, ಹೋಟೆಲ್‌ಗಳು ಮತ್ತು ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳಿಗೆ ಎಐ ಆಧಾರಿತ ಸೇವೆಗಳು ತ್ವರಿತವಾಗಿ ಲಭ್ಯವಾಗಲಿವೆ.

ಸಮಸ್ಯೆ ಏನು? ಹೊಸ ಎಐ ಪರಿಹಾರ ಹೇಗೆ?

ಪ್ರಸ್ತುತ ಗ್ರಾಹಕರು ತಮ್ಮ ಪ್ರವಾಸವನ್ನು ಪ್ಲ್ಯಾನ್ ಮಾಡಲು ಎಐ ಟೂಲ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಅವರಿಗೆ ಟಿಕೆಟ್ ಬುಕ್ ಮಾಡಿಕೊಡುವ ಟ್ರಾವೆಲ್ ಏಜೆನ್ಸಿಗಳ ಸಿಸ್ಟಮ್‌ಗಳು ಇನ್ನೂ ಹಳೆಯ ಕಾಲದ ತಂತ್ರಜ್ಞಾನದಲ್ಲೇ ಇವೆ. ಇದರಿಂದಾಗಿ ಟ್ರಾವೆಲ್ ಏಜೆಂಟ್‌ಗಳು ಮ್ಯಾನುಯಲ್ ಆಗಿ ಕಷ್ಟಪಟ್ಟು ಟಿಕೆಟ್ ಬುಕ್ ಮಾಡುವ ಪರಿಸ್ಥಿತಿ ಇದೆ. ಈ ಅಂತರವನ್ನು ತೆಗೆದು ಹಾಕಲು ಈ ಹೊಸ ಪಾಲುದಾರಿಕೆ ಸಹಾಯ ಮಾಡಲಿದೆ.

ಟ್ರಾವೆಲ್ ಏಜೆಂಟ್‌ಗಳಿಗೆ ಲಾಭ: ಏಜೆಂಟ್‌ಗಳು ಮಾಡುತ್ತಿದ್ದ ಸಂಕೀರ್ಣ ಕೆಲಸಗಳನ್ನು (ಉದಾ: ರದ್ದುಗೊಳಿಸಿದ ಟಿಕೆಟ್‌ಗಳಿಗೆ ಹೊಸ ಆಪ್ಷನ್ ಹುಡುಕುವುದು, ರಿಸ್ಕ್ ಕಡಿಮೆ ಇರುವ ರೂಟ್‌ಗಳನ್ನು ಸೂಚಿಸುವುದು) ಎಐ ಮಾಡಲಿದೆ. ಇದರಿಂದ ಪ್ರತಿ ಏಜೆಂಟ್‌ಗೆ ದಿನಕ್ಕೆ ಕನಿಷ್ಠ 1 ಗಂಟೆ ಸಮಯ ಉಳಿದರೂ, ದೊಡ್ಡ ಏಜೆನ್ಸಿಗಳಿಗೆ ವರ್ಷಕ್ಕೆ ಲಕ್ಷಾಂತರ ಡಾಲರ್ ಹಣ ಉಳಿತಾಯವಾಗಲಿದೆ.

ಗ್ರಾಹಕರಿಗೆ ಲಾಭ: ಆನ್‌ಲೈನ್‌ನಲ್ಲಿ ಗ್ರಾಹಕರು ಎಐ ಬಳಸಿ ಕೇಳುವ ಪ್ರಶ್ನೆಗಳನ್ನು (ಉದಾ: ʼನನಗೆ ನಾಳೆ ಮುಂಬೈಗೆ ಅಗ್ಗದ ಟಿಕೆಟ್ ಬೇಕುʼ) ಅರ್ಥಮಾಡಿಕೊಂಡು, ತಕ್ಷಣವೇ ಲೈವ್ ಆಗಿ ಟಿಕೆಟ್ ಕನ್ಫರ್ಮ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಕಾಗ್ನಿಜೆಂಟ್ ಸಿಇಒ ರವಿ ಕುಮಾರ್ ಎಸ್., ʼಪ್ರಪಂಚದಲ್ಲೇ ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನದ ಮೇಲೆ ಟ್ರಾವೆಲ್ ಇಂಡಸ್ಟ್ರಿ ನಡೆಯುತ್ತಿದೆ. ಯಾರು ಈ ತಂತ್ರಜ್ಞಾನದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಾರೋ ಅವರೇ ಭವಿಷ್ಯದ ನಾಯಕರಾಗುತ್ತಾರೆ. ಟ್ರಾವೆಲ್‌ಪೋರ್ಟ್‌ಗೆ ವೇಗವಾಗಿ ಮತ್ತು ಗುಣಮಟ್ಟದ ಸಾಫ್ಟ್‌ವೇರ್ ನೀಡಲು ನಾವು ಕ್ಲೌಡ್ ಎಐ ಬಳಸುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.

ಟ್ರಾವೆಲ್‌ಪೋರ್ಟ್‌ನ ಸಿಇಒ ಜಾನ್ ಮ್ಯಾಂಗೆಲಾರ್ಸ್ ಪ್ರತಿಕ್ರಿಯಿಸಿ, ʼಎಐ ಭವಿಷ್ಯವಲ್ಲ, ಅದು ಈಗಲೇ ನಡೆಯುತ್ತಿದೆ. ಕಾಗ್ನಿಜೆಂಟ್ ಮತ್ತು ಆಂಥ್ರೋಪಿಕ್ ಜತೆಗಿನ ಒಪ್ಪಂದ ನಮಗೆ ಎಐನ ದೊಡ್ಡ ಶಕ್ತಿ ನೀಡಿದೆ. ಆಂಥ್ರೋಪಿಕ್ ಅತ್ಯುತ್ತಮ ಎಐ ತಂತ್ರಜ್ಞಾನ ನೀಡಿದರೆ, ಕಾಗ್ನಿಜೆಂಟ್ ಅದನ್ನು ಡೆವಲಪ್ ಮಾಡುತ್ತದೆ, ನಾವು ಆ ತಂತ್ರಜ್ಞಾನವನ್ನು ನೈಜ ಪ್ರಪಂಚದ ಬುಕ್ಕಿಂಗ್ ವ್ಯವಸ್ಥೆಗೆ ತರುತ್ತೇವೆ. ಡೇಟಾ ಭದ್ರತೆಯ ದೃಷ್ಟಿಯಿಂದಲೂ ಆಂಥ್ರೋಪಿಕ್ ವಿಶ್ವಾಸಾರ್ಹವಾಗಿದೆʼ ಎಂದು ಹೇಳಿದ್ದಾರೆ.

ಆಂಥ್ರೋಪಿಕ್ ಸಂಸ್ಥೆಯ ಅಲಯನ್ಸ್‌ ವಿಭಾಗದ ಮುಖ್ಯಸ್ಥ ರಿಚ್ ಒ'ಕಾನ್ನೆಲ್, ʼಕಾಗ್ನಿಜೆಂಟ್ ನಮಗೆ ನಂಬಿಕಸ್ಥ ಪಾಲುದಾರ. ಟ್ರಾವೆಲ್‌ನಂತಹ ಸಂಕೀರ್ಣವಾದ ಇಂಡಸ್ಟ್ರಿಗೆ ನಮ್ಮ 'ಕ್ಲೌಡ್' ಎಐ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌

ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಪ್ರೋಟೀನ್ ಕ್ರೇಜ್‌; ಕೇವಲ 'ಪ್ರೋಟೀನ್ ಬಾರ್'ಗಾಗಿಯೇ 2 ಲಕ್ಷ ಖರ್ಚು ಮಾಡಿದ ಗ್ರಾಹಕ!

ಇದು ಕೇವಲ ಸಣ್ಣ ಪ್ರಯೋಗವಲ್ಲ. ಟ್ರಾವೆಲ್‌ಪೋರ್ಟ್‌ನ 'ಟ್ರಿಪ್ ಸರ್ವೀಸಸ್' (ಬುಕ್ಕಿಂಗ್, ರಿಫಂಡ್ ನಿರ್ವಹಣೆ) ವೇದಿಕೆಯನ್ನು ಸಂಪೂರ್ಣವಾಗಿ ಎಐಗೆ ಬದಲಾಯಿಸಲಾಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಗ್ರಾಹಕರು ಇದರ ಮೊದಲ ಅನುಭವವನ್ನು ಪಡೆಯಲಿದ್ದಾರೆ. ನವೆಂಬರ್ 2025ರಲ್ಲಿ ಕಾಗ್ನಿಜೆಂಟ್ ಮತ್ತು ಆಂಥ್ರೋಪಿಕ್ ಮಾಡಿಕೊಂಡಿದ್ದ ಒಪ್ಪಂದದ ಮುಂದುವರಿದ ಭಾಗವಾಗಿ ಈ ದೊಡ್ಡ ಪ್ರಾಜೆಕ್ಟ್ ನಡೆಯುತ್ತಿದೆ.