Economic Survey 2025: ಶೇ. 6.8ರವರೆಗೆ ಜಿಡಿಪಿ ಹೆಚ್ಚಳ ನಿರೀಕ್ಷೆ; ಆರ್ಥಿಕ ಸಮೀಕ್ಷೆಯಲ್ಲಿ ಏನೇನಿದೆ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ 2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ 2025-26ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 6.3ರಿಂದ 6.8ರ ದರದಲ್ಲಿ ವಿಸ್ತರಿಸುವ ನಿರೀಕ್ಷೆಯಿದೆ. ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಆರ್ಥಿಕ ಸಮೀಕ್ಷೆ ಬಿಡುಗಡೆಯಾಗಿದೆ.

ನಿರ್ಮಲಾ ಸೀತಾರಾಮನ್.

ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಂಸತ್ತಿನಲ್ಲಿ ಮಂಡಿಸಿದ 2024-25ರ ಆರ್ಥಿಕ ಸಮೀಕ್ಷೆಯ(Economic Survey) ಪ್ರಕಾರ 2025-26ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (Gross Domestic Product) ಬೆಳವಣಿಗೆ ಶೇ. 6.3ರಿಂದ ಶೇ. 6.8 ದರದಲ್ಲಿ ಇರಲಿದೆ.
ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯು ಬಲವಾದ ದೇಶೀಯ ಆರ್ಥಿಕ ಮೂಲ, ಕುಸಿಯುತ್ತಿರುವ ನಿರುದ್ಯೋಗ ದರ, ಸ್ಥಿರ ಹಣದುಬ್ಬರ ಮತ್ತು ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳಲು ಹೆಚ್ಚಿನ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದೆ.
ನೇರ ಮತ್ತು ಪರೋಕ್ಷ ತೆರಿಗೆಗಳ ಬೆಳವಣಿಗೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ದಿಂದ ಲಾಭಾಂಶದ ರೂಪದಲ್ಲಿ ಹೆಚ್ಚಿನ ತೆರಿಗೆ ಆದಾಯದಿಂದಾಗಿ ವರ್ಷದ ವಿತ್ತೀಯ ಕೊರತೆ ಜಿಡಿಪಿಯ ಶೇಕಡಾ 5.6ಕ್ಕೆ ಇಳಿದಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಬಂಡವಾಳ ವೆಚ್ಚ (Capex) 9.5 ಲಕ್ಷ ಕೋಟಿ ರೂ.ಗಳಷ್ಟಿತ್ತು ಮತ್ತು ಬಡ್ಡಿ ಪಾವತಿಗಳ ಮೇಲಿನ ಬಜೆಟ್ ವೆಚ್ಚವು 2024ರ ಹಣಕಾಸು ವರ್ಷದಲ್ಲಿ ರಾಷ್ಟ್ರದ ಆದಾಯ ವೆಚ್ಚದ 30.4% ರಷ್ಟಿತ್ತು.
ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು
ಭಾರತದ ಆರ್ಥಿಕತೆ ಸ್ಥಿರ: ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಈ ಸಮೀಕ್ಷೆಯು 2025-26ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಶೇ. 6.3 ಮತ್ತು ಶೇ. 6.8ರ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ. ಜತೆಗೆ ಜಿಎಸ್‌ಟಿ ಸಂಗ್ರಹವು ಶೇ. 11ರಷ್ಟು ಹೆಚ್ಚಾಗಲಿದೆ.
ಎಲ್ಲ ಕ್ಷೇತ್ರಗಳಿಂದ ಕೊಡುಗೆ: ಎಲ್ಲ ವಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರ್ಥಿಕ ಸಮೀಕ್ಷೆಯ ದಾಖಲೆ ತಿಳಿಸಿದೆ. ಕೃಷಿ ಕ್ಷೇತ್ರವು ಪ್ರಬಲವಾಗಿದೆ. ಕೈಗಾರಿಕಾ ವಲಯವು ಕೋವಿಡ್ 19ರ ಪೂರ್ವಕ್ಕಿಂತ ಉನ್ನತ ಮಟ್ಟದಲ್ಲಿದೆ. ಸೇವಾ ವಲಯ ಬೆಳವನಿಗೆಯೂ ಉತ್ತಮವಾಗಿದೆ.
ಹಣದುಬ್ಬರ ನಿಯಂತ್ರಣಕ್ಕೆ: ಚಿಲ್ಲರೆ ಹಣದುಬ್ಬರವು 2023-24ರ ಹಣಕಾಸು ವರ್ಷದಲ್ಲಿ ಶೇ. 5.4ರಿಂದ 2024-25ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಶೇ. 4.9ಕ್ಕೆ ಇಳಿದಿದೆ ಎಂದು ಸಮೀಕ್ಷೆ ತಿಳಿಸಿದೆ.
ಎಫ್‌ಪಿಐ, ಎಫ್‌ಡಿಐ ಪುನರುಜ್ಜೀವನದ ಲಕ್ಷಣ: ವಿದೇಶಿ ಬಂಡವಾಳ ಹೂಡಿಕೆಗಳು (FDI) 2024-25ರಲ್ಲಿ ಇಲ್ಲಿಯವರೆಗೆ ಮಿಶ್ರ ಪ್ರವೃತ್ತಿಯನ್ನು ತೋರಿಸಿವೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆ ಮತ್ತು ವಿದೇಶಿ ಪೋರ್ಟ್‌ಪೊಲಿಯೊ ಹೂಡಿಕೆದಾರರು ಲಾಭ ಪಡೆಯುವುದು ಬಂಡವಾಳದ ಹೊರಹರಿವಿಗೆ ಕಾರಣವಾಗಿದೆ. ಒಟ್ಟು ವಿದೇಶಿ ನೇರ ಹೂಡಿಕೆ (FDI)ಒಳ ಹರಿವು 2024-25ರ ಮೊದಲ 8 ತಿಂಗಳಲ್ಲಿ ಚೇತರಿಕೆಯ ಹಾದಿಯಲ್ಲಿದೆ.
ವಿದೇಶಿ ವಿನಿಮಯ ಮೀಸಲು ಬಲಗೊಳ್ಳುತ್ತಿದೆ: ಆರ್ಥಿಕ ಸಮೀಕ್ಷೆಯು ಭಾರತದ ವಿದೇಶಿ ವಿನಿಮಯ ಮೀಸಲು 2024ರ ಸೆಪ್ಟೆಂಬರ್‌ನಲ್ಲಿ 706 ಬಿಲಿಯನ್ ಡಾಲರ್‌ನಷ್ಟಿತ್ತು ಮತ್ತು 2024ರ ಡಿಸೆಂಬರ್ ವೇಳೆಗೆ 640.3 ಬಿಲಿಯನ್ ಡಾಲರ್ ತಲುಪಿದೆ ಎಂದು ತಿಳಿಸಿದೆ.
ಆರ್ಥಿಕ ಸಮೀಕ್ಷೆಯ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ (https://www.indiabudget.gov.in/economicsurvey/index.php)
ಏನಿದು ಆರ್ಥಿಕ ಸಮೀಕ್ಷೆ ?
ಆರ್ಥಿಕ ಸಮೀಕ್ಷೆ ವರದಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡಲಾಗುತ್ತದೆ. ಮಧ್ಯಮಾವಧಿ ಮತ್ತು ದೀರ್ಘಾವಧಿಗೆ ಹಣದುಬ್ಬರದ ಗತಿ, ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎನ್ನುವ ಚಿತ್ರಣ ಮತ್ತು ಅಂದಾಜು ಈ ವರದಿಯಲ್ಲಿರುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಗೆ ಸೇರಿದ ಆರ್ಥಿಕ ವಿಭಾಗವು ಈ ವರದಿಯನ್ನು ತಯಾರಿಸುತ್ತದೆ.