ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಮತ್ತೊಂದು ಬರೆ; ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
Nayara Energy Hikes Petrol Price: ಖಾಸಗಿ ಇಂಧನ ಮಾರಾಟ ಸಂಸ್ಥೆ ನಯಾರಾ ಎನರ್ಜಿ ದೇಶಾದ್ಯಂತ ತನ್ನ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 3 ರೂಪಾಯಿ ಹೆಚ್ಚಿಸಿದೆ. ನಯಾರಾದ ದೇಶಾದ್ಯಂತ ಇರುವ 7,000ಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 3: ಖಾಸಗಿ ಇಂಧನ ಮಾರಾಟ ಸಂಸ್ಥೆ ನಯಾರಾ ಎನರ್ಜಿ (Nayara Energy), ಜಾಗತಿಕ ಕಚ್ಚಾ ತೈಲ ಮತ್ತು ಇಂಧನ ಉತ್ಪನ್ನಗಳ ಬೆಲೆ ಏರಿಕೆಯಿಂದ ಚಿಲ್ಲರೆ ಮಾರಾಟದ ಲಾಭಾಂಶದ ಮೇಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ತನ್ನ ಪೆಟ್ರೋಲ್ ಬೆಲೆಯನ್ನು (Petrol Price hike) ಪ್ರತಿ ಲೀಟರ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 3 ರೂಪಾಯಿ ಹೆಚ್ಚಿಸಿದೆ. ಈ ಪರಿಷ್ಕೃತ ಬೆಲೆಗಳು ಶನಿವಾರದಿಂದ (ಅಕ್ಟೋಬರ್ 3) ಜಾರಿಗೆ ಬಂದಿವೆ.
ನಯಾರಾದ ದೇಶಾದ್ಯಂತ ಇರುವ 7,000ಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಅಂತಾರಾಷ್ಟ್ರೀಯ ಇಂಧನ ಬೆಲೆಗಳಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ಖರೀದಿ ವೆಚ್ಚ ಮತ್ತು ಚಿಲ್ಲರೆ ಮಾರಾಟ ದರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಂಪನಿ ಈ ಬೆಲೆ ಏರಿಕೆ ಮಾಡಿದೆ. ಈ ವರ್ಷ ನಯಾರಾ ಎನರ್ಜಿ ಇಂಧನ ಬೆಲೆ ಹೆಚ್ಚಿಸಿರುವುದು ಇದು ಎರಡನೇ ಬಾರಿ ಎಂದು ವರದಿಯಾಗಿದೆ.
ಈ ಹಿಂದೆ ಮಾರ್ಚ್‌ನಲ್ಲಿ, ಮಧ್ಯ ಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಉಂಟಾದ ಪೂರೈಕೆ ವ್ಯತ್ಯಯಗಳ ಹಿನ್ನೆಲೆಯಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇದೇ ರೀತಿಯ ಪ್ರಮಾಣದಲ್ಲಿ ಹೆಚ್ಚಿಸಿತ್ತು. ಆದರೆ, ಕಚ್ಚಾ ತೈಲದ ಬೆಲೆಗಳು ಇಳಿಕೆಯಾದ ಬಳಿಕ ಜುಲೈನಲ್ಲಿ ಆ ಬೆಲೆ ಏರಿಕೆಯನ್ನು ಹಿಂಪಡೆದಿತ್ತು.
ಚಾಲಕನ ನಿರ್ಲಕ್ಷ್ಯ ತಂದ ಆಪತ್ತು; ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಎಳೆದೊಯ್ದ ಕಾರ್
ಭಾರತದ 1,04,000ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಜಾಗತಿಕ ಕಚ್ಚಾ ಮಾರುಕಟ್ಟೆಗಳಲ್ಲಿನ ಏರಿಳಿತಗಳ ಹೊರತಾಗಿಯೂ ಸ್ಥಿರ ಚಿಲ್ಲರೆ ಬೆಲೆಗಳನ್ನು ಕಾಯ್ದುಕೊಂಡಿರುವ ಸಮಯದಲ್ಲಿ ಈ ಹೆಚ್ಚಳ ಮಾಡಲಾಗಿದೆ.
ಈ ವಾರದ ಆರಂಭದಲ್ಲಿ ಖಾಸಗಿ ಇಂಧನ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ನಿರ್ಬಂಧಿಸಬಾರದು ಎಂದು ಸರ್ಕಾರ ತಿಳಿಸಿತ್ತು. ಇದಲ್ಲದೆ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಅಕ್ಟೋಬರ್‌ನಿಂದ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ದರವನ್ನು 19 ಕೆಜಿ ಸಿಲಿಂಡರ್‌ಗೆ 62.50 ರೂಪಾಯಿ ಹೆಚ್ಚಿಸಿದ್ದವು. ಗೃಹ ಬಳಕೆಯ ಎಲ್‌ಪಿಜಿ ಬೆಲೆ 942 ರೂಪಾಯಿಯಲ್ಲೇ ಮುಂದುವರಿದಿದೆ.
ಇದಲ್ಲದೆ ವಿಮಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಲೀಟರ್‌ಗೆ 16 ರೂಪಾಯಿ ಹೆಚ್ಚಿಸಲಾಗಿದೆ. ದೇಶೀಯ ವಿಮಾನಯಾನ ಸಂಸ್ಥೆಗಳ ಎಟಿಎಫ್ ಬೆಲೆಗಳು ಲೀಟರ್‌ಗೆ 121 ರೂಪಾಯಿಯಿಂದ 137 ರೂಪಾಯಿಗೆ ಏರಿಕೆಯಾಗಿದೆ.