ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸತತ 4 ನೇ ದಿನಕ್ಕೆ ಸೆನ್ಸೆಕ್ಸ್‌ 899 ಅಂಕ ಜಿಗಿತ, ಕಾರಣವೇನು?

Stock Market: ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್‌ 3.4% ಮತ್ತು ನಿಫ್ಟಿ 3.5% ಏರಿಕೆಯಾಗಿದೆ. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳ ದರ ಇಳಿಯಿತು. ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಮೌಲ್ಯ 405 ಲಕ್ಷ ಕೋಟಿ ರುಪಾಯಿಗಳಿಂದ 408 ಲಕ್ಷ ಕೋಟಿ ರುಪಾಯಿಗೆ ಏರಿತು. ಹೂಡಿಕೆದಾರರು 4 ಲಕ್ಷ ಕೋಟಿ ರುಪಾಯಿ ಲಾಭ ಗಳಿಸಿದರು.

ಸತತ 4 ನೇ ದಿನಕ್ಕೆ ಸೆನ್ಸೆಕ್ಸ್‌ 899  ಅಂಕ ಜಿಗಿತ, ಕಾರಣವೇನು?

Profile Rakshita Karkera Mar 20, 2025 5:02 PM

ಮುಂಬಯಿ: ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಸತತ ನಾಲ್ಕನೇ ದಿನಕ್ಕೆ ಏರಿಕೆ ದಾಖಲಿಸಿವೆ(Stock Market). ಸೆನ್ಸೆಕ್ಸ್‌ 899 ಅಂಕ ಹೆಚ್ಚಳದೊಂದಿಗೆ 76,348ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 283 ಅಂಕ ಏರಿಕೊಂಡು 23,190ಕ್ಕೆ ಸ್ಥಿರವಾಯಿತು. ಎಲ್ಲ 13 ಪ್ರಮುಖ ವಲಯಗಳು ಲಾಭ ಗಳಿಸಿತು. ಐಟಿ, ಎಫ್‌ಎಂಸಿಜಿ, ಆಟೊಮೊಬೈಲ್‌, ಕನ್‌ಸ್ಯೂಮರ್‌ ಡ್ಯೂರಬಲ್ಸ್‌, ರಿಯಾಲ್ಟಿ, ಟೆಲಿಕಾಂ ವಲಯದ ಷೇರುಗಳು ಗಣನೀಯ ಚೇತರಿಸಿತು.ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿರುವುದು ಮತ್ತು ಈ ವರ್ಷ ಎರಡು ಸಲ ಬಡ್ಡಿ ದರಗಳನ್ನು ಕಡಿತಗೊಳಿಸುವ ಸುಳಿವನ್ನು ನೀಡಿರುವುದು ಷೇರು ಹೂಡಿಕೆದಾರರನ್ನು ಉಲ್ಲಸಿತಗೊಳಿಸಿತು. ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು.

ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್‌ 3.4% ಮತ್ತು ನಿಫ್ಟಿ 3.5% ಏರಿಕೆಯಾಗಿದೆ. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳ ದರ ಇಳಿಯಿತು. ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಮೌಲ್ಯ 405 ಲಕ್ಷ ಕೋಟಿ ರುಪಾಯಿಗಳಿಂದ 408 ಲಕ್ಷ ಕೋಟಿ ರುಪಾಯಿಗೆ ಏರಿತು. ಹೂಡಿಕೆದಾರರು 4 ಲಕ್ಷ ಕೋಟಿ ರುಪಾಯಿ ಲಾಭ ಗಳಿಸಿದರು.

ಸೆನ್ಸೆಕ್ಸ್‌, ನಿಫ್ಟಿ ಜಿಗಿತಕ್ಕೆ ಕಾರಣವೇನು?

ಮೊದಲನೆಯದಾಗಿ ಉನ್ನತ ಮಟ್ಟದಿಂದ ತೀವ್ರ ಕುಸಿತದ ಬಳಿಕ ಭಾರತೀಯ ಷೇರು ಮಾರುಕಟ್ಟೆಯ ಮೌಲ್ಯ ಈಗ ಖರೀದಿಗೆ ಉತ್ತಮ ಅವಕಾಶ ಕೊಟ್ಟಿದೆ. ಗುಣಮಟ್ಟದ ಷೇರುಗಳನ್ನು ಖರೀದಿಸಲು ಹೂಡಿಕೆದಾರರನ್ನು ಮಾರುಕಟ್ಟೆ ಆಕರ್ಷಿಸುತ್ತಿದೆ. ಎರಡನೆಯದಾಗಿ ಭಾರತದ ಜಿಡಿಪಿ ಚೇತರಿಸುತ್ತಿದೆ. ರಿಟೇಲ್‌ ಹಣದುಬ್ಬರ ಜನವರಿಯಿಂದ ಫೆಬ್ರವರಿ ಅವಧಿಯಲ್ಲಿ 4.26%ರಿಂದ 3.61%ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಕಾರ್ಖಾನೆಗಳಲ್ಲಿ ಉತ್ಪಾದನೆ 3.2%ರಿಂದ 5%ಕ್ಕೆ ಏರಿಕೆಯಾಗಿದೆ.

ಮೂರನೆಯದಾಗಿ ಅಮೆರಿಕದಲ್ಲಿ ನಿರೀಕ್ಷೆಯಂತೆ ಫೆಡರಲ್‌ ರಿಸರ್ವ್‌ ತನ್ನ ಮಾರ್ಚ್‌ ಪಾಲಿಸಿ ಮೀಟಿಂಗ್‌ನಲ್ಲಿ ಯಥಾಸ್ಥಿತಿಯನ್ನು ಕಾಯ್ದಿರಿಸಿದೆ. ಬಡ್ಡಿ ದರ ಕಡಿತದ ಮುನ್ಸೂಚನೆಯನ್ನೂ ಕೊಟ್ಟಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಏಪ್ರಿಲ್‌ನಲ್ಲಿ ಬಡ್ಡಿದರವನ್ನು ಇಳಿಸುವ ಸಾಧ್ಯತೆ ಇದೆ. ಈ ಬೆಳವಣಿಗೆ ಸಕಾರಾತ್ಮಕ ಪ್ರಭಾವ ಬೀರಿದೆ. ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಭಾರತೀಯ ಉದ್ದಿಮೆಗಳಲ್ಲಿ ಉತ್ಪಾದನೆ ಕೂಡ ಚೇತರಿಸುವ ಲಕ್ಷಣ ಇದೆ. ವಿದೇಶಿ ಬಂಡವಾಳ ಹೂಡಿಕೆ ಕೂಡ ಹೆಚ್ಚತೊಡಗಿದೆ. ಈ ಎಲ್ಲ ಕಾರಣಗಳಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಚೇತರಿಸುತ್ತಿದೆ. ನಿಫ್ಟಿ 23,000 ಅಂಕಗಳ ಗಡಿಯನ್ನು ದಾಟಿರುವುದರಿಂದ ದೀರ್ಘಾವಧಿಗೆ ಲಾರ್ಜ್‌ ಕ್ಯಾಪ್‌, ಮಿಡ್‌ ಕ್ಯಾಪ್‌ , ಮಲ್ಟಿ ಕ್ಯಾಪ್‌ ಅಥವಾ ಫ್ಲೆಕ್ಸಿ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮುಂದುವರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.