ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Stock Market Rising: ಸೆನ್ಸೆಕ್ಸ್‌ 2,900 ಅಂಕ ಜಿಗಿತ, 15 ಲಕ್ಷ ಕೋಟಿ ಲಾಭ: ಇರಾನ್ ಕದನ ವಿರಾಮ ಎಫೆಕ್ಟ್; ತೈಲ ದರ ಇಳಿಕೆ!

ಇರಾನ್‌ ಮತ್ತು ಅಮರಿಕ ನಡುವೆ ಎರಡು ವಾರಗಳ ಕದನ ವಿರಾಮವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ, ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಭಾರಿ ಜಿಗಿತ ದಾಖಲಿಸಿವೆ. ಬುಧವಾರ ಬೆಳಗ್ಗೆ ಸೆನ್ಸೆಕ್ಸ್‌ 2,900 ಅಂಕ ಏರಿಕೆಯಾಗಿ 77,515ಕ್ಕೆ ಜಿಗಿದರೆ, ನಿಫ್ಟಿ 850 ಅಂಕ ಏರಿಕೆಯಾಗಿ 24,000 ಅಂಕಗಳ ಮಟ್ಟಕ್ಕೇರಿತು. ಹೂಡಿಕೆದಾರರಿಗೆ 15 ಲಕ್ಷ ಕೋಟಿ ರುಪಾಯಿಗಳ ನೋಶನಲ್‌ ಲಾಭವಾಯಿತು. ಈ ಕುರಿತ ವಿವರ ಇಲ್ಲಿದೆ.

ಸೆನ್ಸೆಕ್ಸ್‌ 2,900 ಅಂಕ ಜಿಗಿತ, 15 ಲಕ್ಷ ಕೋಟಿ ಲಾಭ!

ಸಾಂದರ್ಭಿಕ ಚಿತ್ರ. -

ಮುಂಬೈ, ಏ.8: ಇರಾನ್‌ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ, ಜಾಗತಿಕ ಷೇರು ಮಾರುಕಟ್ಟೆಯಲ್ಲಿ (Stock Market) ಸೂಚ್ಯಂಕಗಳು ಭಾರಿ ಜಿಗಿತ ದಾಖಲಿಸಿವೆ. ಬುಧವಾರ ಬೆಳಗ್ಗೆ ಸೆನ್ಸೆಕ್ಸ್‌ 2,900 ಅಂಕ ಏರಿಕೆಯಾಗಿ 77,515ಕ್ಕೆ ಜಿಗಿದರೆ, ನಿಫ್ಟಿ (Nifty) 850 ಅಂಕ ಏರಿಕೆಯಾಗಿ 24,000 ಅಂಕಗಳ ಮಟ್ಟಕ್ಕೇರಿತು. ಹೂಡಿಕೆದಾರರಿಗೆ 15 ಲಕ್ಷ ಕೋಟಿ ರುಪಾಯಿಗಳ ನೋಶನಲ್‌ ಲಾಭವಾಯಿತು. ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್‌ 2,947 ಅಂಕ ಏರಿಕೆಯಾಗಿ 77,563ಕ್ಕೆ ಸ್ಥಿರವಾಯಿತು. ನಿಫ್ಟಿ 874 ಅಂಕ ಚೇತರಿಸಿಕೊಂಡು 23,998ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಇವತ್ತು ತಲಾ 3.5 ಪರ್ಸೆಂಟ್‌ ಏರಿಕೆಯಾಯಿತು. ಕದನ ವಿರಾಮ, ಕಚ್ಚಾ ತೈಲ ದರ ಇಳಿಕೆ, ಇತರ ಸಕಾರಾತ್ಮಕ ಅಂಶಗಳು ಸ್ಟಾಕ್‌ ಮಾರ್ಕೆಟ್‌ ಮೇಲೆ ಪ್ರಭಾವ ಬೀರಿತು. ಸೆಕ್ಟರ್‌ಗಳ ಪೈಕಿ ಆಟೊಮೊಬೈಲ್‌ ಮತ್ತು ರಿಯಾಲ್ಟಿ ಸೆಕ್ಟರ್‌ ತಲಾ 6 ಪರ್ಸೆಂಟ್‌ ವೃದ್ಧಿಸಿತು.

ಇಂಡಿಯನ್‌ ಆಯಿಲ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಹಿಂದೂಸ್ತಾನ್‌ ಪೆಟ್ರೋಲಿಯಂ, ಭಾರತ್‌ ಪೆಟ್ರೋಲಿಯಂ ಷೇರುಗಳು 9 ಪರ್ಸೆಂಟ್‌ ತನಕ ಏರಿಕೆಯಾಯಿತು. ಹಾರ್ಮುಜ್‌ ಜಲಸಂಧಿ ಮತ್ತೆ ಹಡಗುಗಳ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಪ್ರಭಾವ ಬೀರಿತು.

ಅದಾನಿ ಗ್ರೂಪ್‌ ಷೇರುಗಳು ಬುಧವಾರ 13 ಪರ್ಸೆಂಟ್‌ ಏರಿಕೆಯಾಯಿತು. ಮಾರುಕಟ್ಟೆ ನಿಯಂತ್ರಕ ಸೆಬಿಯು 15 ತಿಂಗಳಿನ ಹಿಂದೆ ಗೌತಮ್‌ ಅದಾನಿ ವಿರುದ್ಧ ದಾಖಲಿಸಿದ್ದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ಕೋರ್ಟ್‌, ಅದಾನಿ ಪರ ವಕೀಲರ ಮನವಿಯನ್ನು ಸ್ವೀಕರಿಸಿದ ಬಳಿಕ ಷೇರು ದರ ಏರಿಕೆಯಾಗಿದೆ.

ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ದರ 19 ಪರ್ಸೆಂಟ್‌ ಇಳಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 94 ಡಾಲರ್‌ಗೆ ಇಳಿಕೆಯಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಇತ್ತೀಚಿನ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು 5.25 ಪರ್ಸೆಂಟ್‌ ಮಟ್ಟದಲ್ಲಿ ಇರಿಸಿದೆ. ತನ್ನ ನೀತಿಯನ್ನು " ನ್ಯೂಟ್ರಲ್‌ʼ ಆಗಿಸಿದೆ. ಅಂದರೆ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಈ ಮೂಲಕ ಕಾದು ನೋಡುವ ನೀತಿಯನ್ನು ಅನುಸರಿಸಿದೆ. 2026-27ಕ್ಕೆ 6 ಪರ್ಸೆಂಟ್‌ ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಿದೆ.

ನಿಫ್ಟಿ 50ಯಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳು

ಶ್ರೀರಾಮ್‌ ಫೈನಾನ್ಸ್‌: 1,029/- : 10%

ಇಂಟರ್‌ ಗ್ಲೋಬ್‌: 4,626/- : 8.37%

ಅದಾನಿ ಎಂಟರ್‌ಪ್ರೈಸಸ್:‌ 2,036/- : 8.23%

ಟಾಟಾ ಮೋಟಾರ್ಸ್ ಪ್ಯಾಸೆಂಜರ್‌ ವೆಹಿಕಲ್ಸ್ :‌ 333/- : 8.23%

ಎಲ್‌ &ಟಿ :‌ 4,000/- : 7.38%

ಮಾರುತಿ ಸುಜುಕಿ: 13,714/- : 7.24%

ಆದಿತ್ಯ ಬಿರ್ಲಾ ರಿಯಲ್‌ ಎಸ್ಟೇಟ್‌: 1,267/- : 7.14%

ನಿಫ್ಟಿ 50ಯಲ್ಲಿ ನಷ್ಟಕ್ಕೀಡಾದ ಪ್ರಮುಖ ಷೇರುಗಳು

ಕೋಲ್‌ ಇಂಡಿಯಾ: 448/- : 3.23%

ಟೆಕ್‌ ಮಹೀಂದ್ರಾ: 1,451/- : 1.51%

ವಿಪ್ರೊ, ನೆಸ್ಲೆ ಇಂಡಿಯಾ, ಡಾ ರೆಡ್ಡೀಸ್‌, ಪವರ್‌ ಗ್ರಿಡ್‌, ಸನ್‌ ಫಾರ್ಮಾ ಅಲ್ಪ ಇಳಿಕೆ ದಾಖಲಿಸಿವೆ.

ಕದನ ವಿರಾಮದ ಘೋಷಣೆಯ ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಹಾರ್ಮುಜ್‌ ಜಲಸಂಧಿಯನ್ನು ಬಂಧಮುಕ್ತಗೊಳಿಸುವುದರಿಂದ ವಿಶ್ವ ಶಾಂತಿಗೆ ಇದು ದೊಡ್ಡ ದಿನವಾಗಿದೆ. ಜಲಸಂಧಿಯ ಮೂಲಕ ಸರಕು, ತೈಲ, ಅನಿಲ ಹೊತ್ತ ಹಡಗುಗಳ ಸಂಚಾರಕ್ಕೆ ಹಾದಿ ಸುಗಮವಾಗಲಿದೆ. ಪಶ್ಚಿಮ ಏಷ್ಯಾದ ಸುವರ್ಣಯುಗ ಇಂದಿನಿಂದ ಆರಂಭವಾಗಲಿದೆ ಎಂದು ವಿವರಿಸಿದ್ದಾರೆ.

ಪೆಟ್ರೋಲಿಯಂ ಸಚಿವಾಲಯವು ಪಾಲಿಮರ್‌, ಕೃಷಿ, ಪ್ಯಾಕೇಜಿಂಗ್‌, ಪೇಂಟ್ಸ್‌, ಸ್ಟೀಲ್‌, ಮೆಟಲ್‌ ಮತ್ತು ಗ್ಲಾಸ್‌ ಇಂಡಸ್ಟ್ರಿಗೆ 70 ಪರ್ಸೆಂಟ್‌ ಕಮರ್ಶಿಯಲ್ ಎಲ್ಪಿಜಿ‌ ಪೂರೈಕೆಗೆ ಹಾದಿ ಸುಗಮಗೊಳಿಸಿದೆ.

Gold Price Today On 8th April 2026: ಇರಾನ್‌-ಅಮೆರಿಕ ಕದನ ವಿರಾಮ ಬೆನ್ನಲ್ಲೇ ಚಿನ್ನದ ದರದಲ್ಲಿ ಭಾರಿ ಏರಿಕೆ

ಕದನ ವಿರಾಮದ ಬೆನ್ನಲ್ಲೇ ಬಂಗಾರದ ದರದಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ 10 ಗ್ರಾಮ್‌ ದರ 1,53,820 ರುಪಾಯಿಗೆ ಏರಿಕೆಯಾಗಿದೆ. 3,980/- ಹೆಚ್ಚಳವಾಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರಕ್ಕೆ 10 ಗ್ರಾಮ್‌ ಗೆ 1,41,000 ರುಪಾಯಿಗೆ ಏರಿಕೆಯಾಗಿದೆ. 3,650/- ಹೆಚ್ಚಳವಾಗಿದೆ. ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ 10,000 ರುಪಾಯಿ ಹೆಚ್ಚಳವಾಗಿದ್ದು, 2,60,000 ರುಪಾಯಿಗೆ ಏರಿಕೆಯಾಗಿದೆ.