ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026: ಶಿಕ್ಷಣ–ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಭರ್ಜರಿ ಉತ್ತೇಜನ; ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್‌, 3 ಹೊಸ ಆಯುರ್ವೇದ ಏಮ್ಸ್‌ ಸ್ಥಾಪನೆ

ಕೇಂದ್ರ ಬಜೆಟ್ 2026ರಲ್ಲಿ ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್‌ಗಳು, ಐದು ಹೊಸ ವಿಶ್ವವಿದ್ಯಾಲಯ ಪಟ್ಟಣ, 15,000 ಶಾಲೆಗಳಲ್ಲಿ ಪ್ರಯೋಗಾಲಯಗಳು, ಮೂರು ಹೊಸ ಆಯುರ್ವೇದ ಏಮ್ಸ್‌ಗಳ ಸ್ಥಾಪನೆ ಮತ್ತು ಯೋಗ–ಕ್ಷೇಮ ಸೇವೆಗಳ ವಿಸ್ತರಣೆ ಪ್ರಮುಖ ಘೋಷಣೆಗಳಾಗಿವೆ.

ಕೇಂದ್ರ ಬಜೆಟ್ 2026: ಶಿಕ್ಷಣ–ಆರೋಗ್ಯ ಕ್ಷೇತ್ರಕ್ಕೆ ಒತ್ತು

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ) -

Profile
Sushmitha Jain Feb 1, 2026 2:15 PM

ನವದೆಹಲಿ, ಫೆ. 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಭಾನುವಾರ ಲೋಕಸಭೆಯಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್ (Union Budget 2026) ಮಂಡಿಸುವ ಸಂದರ್ಭದಲ್ಲಿ, ದೇಶದ ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

ಅವುಗಳಲ್ಲಿ ಮುಖ್ಯವಾಗಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಬಾಲಕಿಯರಿಗಾಗಿ ಹಾಸ್ಟೆಲ್‌ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆ ಮೂಲಕ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರ ವಸತಿ ಶಾಲೆಗಳ ನಿರ್ಮಾಣವಾಗಲಿದೆ. ಈ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಾಲಕಿಯರ ಶಿಕ್ಷಣಕ್ಕೆ ಹೊಸ ಬಲ ನೀಡಲಿದೆ.

ಇದರ ಜತೆಗೆ, ರಾಷ್ಟ್ರೀಯ ಆತಿಥ್ಯ ಸಂಸ್ಥೆ ಸ್ಥಾಪನೆ ಹಾಗೂ ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳ ಸಮೀಪ ಐದು ಹೊಸ ವಿಶ್ವವಿದ್ಯಾಲಯ ಪಟ್ಟಣಗಳನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರ ಮುಂದಿಟ್ಟಿದೆ. ಈ ಪಟ್ಟಣಗಳಲ್ಲಿ ಹಲವು ವಿಶ್ವವಿದ್ಯಾಲಯಗಳು, ಕಾಲೇಜುಗಳು, ವಸತಿ ಸೌಲಭ್ಯಗಳು ಮತ್ತು ಉನ್ನತ ಮಟ್ಟದ ಸಂಶೋಧನಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಬಜೆಟ್‌ ಭಾಷಣ:



ಪಶು ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಹಾಗೂ ರೋಗನಿರ್ಣಯ ಪ್ರಯೋಗಾಲಯಗಳಿಗೆ ಸಾಲಾಧಾರಿತ ಬಂಡವಾಳ ಸಬ್ಸಿಡಿ ಬೆಂಬಲ ನೀಡುವ ಹೊಸ ಯೋಜನೆಯನ್ನೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಮತ್ತು ಸೃಜನಶೀಲ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಮುಂಬೈಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಮೂಲಕ ದೇಶಾದ್ಯಂತ 15,000ಕ್ಕೂ ಹೆಚ್ಚು ಮಾಧ್ಯಮಿಕ ಶಾಲೆಗಳಲ್ಲಿ ವಿಷಯಾಧಾರಿತ ಪ್ರಯೋಗಾಲಯಗಳನ್ನು ಸ್ಥಾಪಿಸಲು ಬೆಂಬಲ ಘೋಷಿಸಲಾಗಿದೆ.

ಕೇಂದ್ರ ಬಜೆಟ್ ಪ್ರತಿ ವರ್ಷ ಫೆಬ್ರವರಿ 1ರಂದೇ ಏಕೆ ಮಂಡಿಸಲಾಗುತ್ತದೆ?

ವಿನ್ಯಾಸ ಮತ್ತು ನವೀನ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ, ಭಾರತದ ಪೂರ್ವ ಭಾಗದಲ್ಲಿ ಹೊಸ ವಿನ್ಯಾಸ ಸಂಸ್ಥೆ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಇದು ದೇಶದ ಸೃಜನಶೀಲ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿಯೂ ಮಹತ್ವದ ಹೆಜ್ಜೆ ಇಡಲಾಗಿದ್ದು, ಖಗೋಳ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಅಧ್ಯಯನ ವಿಸ್ತರಣೆಗಾಗಿ ನಾಲ್ಕು ಪ್ರಮುಖ ದೂರದರ್ಶಕ ಹಾಗೂ ಖಗೋಳಶಾಸ್ತ್ರ ಸೌಲಭ್ಯಗಳನ್ನು ಸ್ಥಾಪಿಸಿ ಮೇಲ್ದರ್ಜೆಗೇರಿಸುವ ಯೋಜನೆ ಪ್ರಕಟಿಸಲಾಗಿದೆ. ಇದರ ಮೂಲಕ ಜಾಗತಿಕ ಖಗೋಳ ಸಂಶೋಧನೆಯಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವಿದೆ.

ಮೂರು ಹೊಸ ಆಯುರ್ವೇದ ಏಮ್ಸ್‌

ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ಘೋಷಿಸಲಾಗಿದೆ. ಅದರ ಭಾಗವಾಗಿ ದೇಶಾದ್ಯಂತ ಮೂರು ಹೊಸ ಆಯುರ್ವೇದ ಏಮ್ಸ್‌ಗಳನ್ನು ಸ್ಥಾಪಿಸುವ ಘೋಷಣೆಯೂ ಬಜೆಟ್‌ನಲ್ಲಿ ಹೊರ ಬಿದ್ದಿದೆ. ಆಯುರ್ವೇದಾಧಾರಿತ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಪ್ರವೇಶ ಕಲ್ಪಿಸುವುದು ಹಾಗೂ ಆಯುಷ್ ವ್ಯವಸ್ಥೆಯ ಸೇವಾ ಗುಣಮಟ್ಟವನ್ನು ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶ. ಇದಲ್ಲದೆ ಕ್ಷೇಮ ಮತ್ತು ಯೋಗ ಸೇವೆಗಳ ವಿಸ್ತರಣೆಗೆ 1.5 ಲಕ್ಷ ಆರೈಕೆದಾರರಿಗೆ ತರಬೇತಿ ನೀಡುವ ರಾಷ್ಟ್ರೀಯ ಯೋಜನೆಯನ್ನೂ ಸರ್ಕಾರ ಘೋಷಿಸಿದೆ.

ನಿರ್ಮಲಾ ಸೀತಾರಾಮನ್ ಸತತ ಒಂಬತ್ತನೇ ಬಾರಿ ಬಜೆಟ್ ಮಂಡಿಸುವ ಮೂಲಕ ಸಂಸತ್ತಿನ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.