WaterMelon: ಕಲ್ಲಂಗಡಿ ಫಸಲು ಭರ್ಜರಿ: ಗ್ರಾಹಕರಿಗೆ ಸುದ್ದಿ
ಚಾಮರಾಜನಗರ, ಮಂಡ್ಯ, ಕೊಪ್ಪಳ, ಗದಗ, ಹಾವೇರಿ ಹೀಗೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಕಾವೇರಿ ನದಿಯ ಅಕ್ಕಪಕ್ಕದ ರೈತರು ಯಥೇಚ್ಛವಾಗಿ ಬೆಳೆಯುತ್ತಾರೆ. ಪ್ರಸಕ್ತ ವರ್ಷ ಶೇ.80ರಷ್ಟು ಬೆಳೆ ಇಳುವರಿ ಬಂದಿದ್ದು, ಉತ್ಪಾದನೆ 1110.93 ಲಕ್ಷ ಟನ್‌ರಷ್ಟು ಆಗಿದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯದಲ್ಲಿ ಕಟಾವಿಗೆ ಬರುತ್ತಿದ್ದ ಕಲ್ಲಂಗಡಿ ಹಣ್ಣು ಈ ಬಾರಿ ಜನವರಿಯಲ್ಲೇ ಬಂದಿದೆ.
-
ಹೂವಪ್ಪ. ಐ ಹೆಚ್ ಬೆಂಗಳೂರು
ಆಂಧ್ರ, ತಮಿಳುನಾಡಿನಿಂದಲೂ ಕಲ್ಲಂಗಡಿ ಪೂರೈಕೆ
ಕೈಗೆಟಕುವ ದರದಲ್ಲಿ ಲಭ್ಯ
ಬಿಸಿಲಿನ ದಾಹ ತಣಿಸಲು ಮಾರುಕಟ್ಟೆಗೆ ಲಗ್ಗೆ ಹಾಕಿರುವ ಬೇಸಿಗೆ ಮಿತ್ರ ಕಲ್ಲಂಗಡಿ ಹಣ್ಣಿಗೆ ಈ ಬಾರಿಯೂ ಬೇಡಿಕೆ ಕಂಡು ಬರುತ್ತಿದೆ. ಚಳಿಗೆ ನಡುಗುತ್ತಿದ್ದ ಜನತೆ ಈಗ ಬಿಸಿಲಿನ ತಾಪಕ್ಕೆ ಬೆವರುತ್ತಿದ್ದು, ವಾತಾವರಣದ ವೈಪರೀತ್ಯದಿಂದ ನಿಧಾನವಾಗಿ ಬೇಸಿಗೆಯತ್ತ ವಾಲುತ್ತಿದೆ.
ಈಗಾಗಲೇ ಕಲ್ಲಂಗಡಿ, ಸೌತೆಕಾಯಿ ಹಾಗೂ ತಂಪು ಪಾನೀಯಗಳ ಮಾರಾಟಗಾರರು ಜನ ಸಂದಣಿ ಪ್ರದೇಶಗಳು, ಪ್ರಮುಖ ವೃತ್ತಗಳು ಮತ್ತು ರಸ್ತೆ ಬದಿಗಳಲ್ಲಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ದಕ್ಷಿಣ ಭಾಗಗಳಿಂದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ, ಯಶವಂತಪುರ, ಮಡಿವಾಳ ಮತ್ತು ಹಾಪ್‌ಕಾಮ್ಸ್‌ನಂತಹ ಸಗಟು ಹಣ್ಣಿನ ಹಬ್‌ಗಳಿಗೆ ಟ್ರಕ್‌ಲೋಡ್ ಕಲ್ಲಂಗಡಿ ಆಗಮಿಸುತ್ತಿವೆ.
ಪ್ರಮುಖ ಪಟ್ಟಣಗಳ ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣುಗಳ ವ್ಯಾಪಾರ ಕಂಡುಬರುತ್ತಿದ್ದು, ಹಣ್ಣುಗಳನ್ನು ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುವ ಸಾಧ್ಯತೆ ಇದೆ, ಬೆಲೆಯೂ ಜನಸಾಮಾನ್ಯರ ಕೈಗೆಟುಕುವಂತಿದೆ. ಇದು ಸಹಜವಾಗಿಯೇ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಿದೆ.
ಇದನ್ನೂ ಓದಿ: Consuming Fruits: ಹಣ್ಣುಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
ಪ್ರತೀ ವರ್ಷದಂತೆ ಈ ಬಾರಿಯೂ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ನಿರೀಕ್ಷೆಗಿಂತಲೂ ಹೆಚ್ಚು ಬಂದಿದ್ದು, ಸಾರ್ವಜನಿಕರು ಕಲ್ಲಂಗಡಿ ಹಣ್ಣು ಖರೀದಿಸಲು ಮುಗಿಬೀಳುತ್ತಿದ್ದಾರೆ.
ಚಾಮರಾಜನಗರ, ಮಂಡ್ಯ, ಕೊಪ್ಪಳ, ಗದಗ, ಹಾವೇರಿ ಹೀಗೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಕಾವೇರಿ ನದಿಯ ಅಕ್ಕಪಕ್ಕದ ರೈತರು ಯಥೇಚ್ಛವಾಗಿ ಬೆಳೆಯುತ್ತಾರೆ. ಪ್ರಸಕ್ತ ವರ್ಷ ಶೇ.80ರಷ್ಟು ಬೆಳೆ ಇಳುವರಿ ಬಂದಿದ್ದು, ಉತ್ಪಾದನೆ 1110.93 ಲಕ್ಷ ಟನ್‌ರಷ್ಟು ಆಗಿದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯದಲ್ಲಿ ಕಟಾವಿಗೆ ಬರುತ್ತಿದ್ದ ಕಲ್ಲಂಗಡಿ ಹಣ್ಣು ಈ ಬಾರಿ ಜನವರಿಯಲ್ಲೇ ಬಂದಿದೆ.
ಕಳೆದ ವರ್ಷ ಶಿವರಾತ್ರಿ ಸಮಯದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಕಲ್ಲಂಗಡಿ 40 ರು.ಗೆ ಮಾರಾಟವಾಗಿತ್ತು. ಈ ಬಾರಿ ಬೆಲೆ ಕಡಿಮೆ ಇದೆ. 20ರಿಂದ 22 ರು.ಗೆ ಕೆ.ಜಿಯಂತೆ ಕಲ್ಲಂಗಡಿ ಖರೀದಿಸುತ್ತಿದ್ದೇವೆ. ನಮಗೆ ಹಣ್ಣು ಕೊಡಿಸುವ ಮಧ್ಯವರ್ತಿಗೆ ಕೆ.ಜಿಗೆ 1 ರು. ಕಮಿಷನ್, ಲಾರಿ ಬಾಡಿಗೆ ರಸ್ತೆಯಲ್ಲಿ ಕಲ್ಲಂಗಡಿ ರಾಶಿ ಹಾಕುವುದರಿಂದ ಬಿಸಿಲಿಗೆ ತೂಕ ಕಡಿಮೆಯಾಗ ಲಿದೆ.
ಈ ಎಲ್ಲಾ ಖರ್ಚು ತೆಗೆದು ನಮ್ಮ ಲಾಭಾಂಶವೂ ಸೇರಿ ನಾಮಧಾರಿ ಹಸಿರು ಕಲ್ಲಂಗಡಿ ಕೆ.ಜಿಗೆ 25ರಿಂದ 30 ರು.ಗೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಕೆ.ಆರ್ ಮಾರುಕಟ್ಟೆ ಕಲ್ಲಂಗಡಿ ವ್ಯಾಪಾರಿ ಅಫ್ರೋಜ್. ಹಾಫ್ʼಕಾಮ್ಸ್‌ನಲ್ಲಿ ದಿನ ನಿತ್ಯ ಬೇಡಿಕೆ ತಕ್ಕಂತೆ 3-4 ಟನ್ ಮಾರಾಟವಾಗುತ್ತಿದೆ.
ಕಿರಣ್ ಕೆ.ಜಿಗೆ 34 ರು. ನಾಮಧಾರಿ 26 ರು. ಗೆ ಮಾರಾಟವಾಗುತ್ತಿದೆ. ರಸ್ತೆ ಬದಿ ಕೈಯಿಗಾಡಿ ಗಳಲ್ಲಿ ಹೆಚ್ಚಿದ ಒಂದು ಪಿಸು 15-20 ರು. ಗೆ ಮಾರಾಟವಾಗುತ್ತಿದೆ. ನಾಮಧಾರಿ ಈ ಜಿಲ್ಲೆ ಯಲ್ಲೇ ಬೆಳೆದರೆ, ಕಿರಣ್ ತಳಿ ಕಲ್ಲಂಗಡಿ ಹಣ್ಣನ್ನು ಆಂಧ್ರ ಪ್ರದೇಶದಿಂದ ತರಲಾಗುತ್ತದೆ. ನಾಮಧಾರಿ ದೊಡ್ಡ ಹಣ್ಣು ಇದ್ದಷ್ಟು ಬೇಡಿಕೆ ಹೆಚ್ಚು, ಆದರೆ ಕಿರಣ್ ತಳಿ ಹಾಗಲ್ಲ. ಅದು ನೋಡಲು ಚಿಕ್ಕ ಗಾತ್ರ ಇದ್ದರೂ ವ್ಯಾಪಾರ ಮಾತ್ರ ಚೆನ್ನಾಗಿ ಆಗುತ್ತದೆ ಎನ್ನುತ್ತಾರೆ ಎಪಿಎಂಸಿ ಕಲ್ಲಂಗಡಿ ಹಣ್ಣು ವ್ಯಾಪಾರಿ ಸೈಯದ್.
ಪೋಷಕಾಂಶಗಳ ಆಗರ: ಕಲ್ಲಂಗಡಿ ಹಣ್ಣು ದಾಹ ನಿವಾರಣೆ ಮಾತ್ರವಲ್ಲದೆ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶ ಗಳನ್ನು ಒದಗಿಸುತ್ತದೆ. ಇದರಲ್ಲಿ ಪೊಟ್ಯಾಷಿಯಮ್, ಮೆಗ್ನೀಷಿಯಮ್ ಹಾಗೂ ಸಿಟ್ರುಲಿನ್ ಹೆಚ್ಚಾಗಿ ಇದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. ವಿಟಮಿನ್ ಎ ಮತ್ತು ಸಿ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜತೆಗೆ ಹೃದಯ ಆರೋಗ್ಯ, ಕಣ್ಣಿನ ರಕ್ಷಣೆ, ಚರ್ಮದ ಆರೋಗ್ಯ, ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿಯಂತ್ರಣಕ್ಕೂ ಸಹಕಾರಿಯಾಗಿದೆ ಎನ್ನುತ್ತಾರೆ ಅರೋಗ್ಯ ತಜ್ಞರು.
ಬಯಲು ಸೀಮೆಯಲ್ಲೂ ಕಲ್ಲಂಗಡಿ ಬೆಳೆ: ಬರಗಾಲದಲ್ಲಿ ನೀರಿನ ಕೊರತೆ ಹಾಗೂ ಸರಿಯಾದ ಬೆಂಬಲ ಬೆಲೆ ಸಿಗದ ಆತಂಕದ ನಡುವೆಯೂ ಕೃಷಿಯಲ್ಲಿ ಸಾಧನೆ ಸಾಧ್ಯ ಎಂಬುದನ್ನು ಯಾದಗಿರಿ ತಾಲೂಕಿನ ಮುಂಡರಗಿ ತಾಂಡಾದ ಯುವ ರೈತ ಮಲ್ಲ ರಾಠೋಡ್ ತೋರಿಸಿ ಕೊಟ್ಟಿದ್ದಾರೆ. ಮೆಲೋಡಿ ತಳಿಯ ಕಲ್ಲಂಗಡಿ 3 ಎಕರೆ 20 ಗುಂಟೆ ಭೂಮಿಯಲ್ಲಿ ಬೆಳೆದು ಸುಮಾರು 12 ಲಕ್ಷ ಆದಾಯ ಗಳಿಸುವ ಮೂಲಕ ಜಿಲ್ಲೆಯ ರೈತರಿಗೆ ಆತ್ಮವಿಶ್ವಾಸ ನೀಡಿದ್ದಾರೆ.
ಕಲ್ಲಂಗಡಿ ಆಮದು: ಬೇಸಿಗೆ ಹಂಗಾಮಿನಲ್ಲಿ ಫೆಬ್ರವರಿಯಿಂದ ಹಂತಹಂತವಾಗಿ ಜೂನ್ ವೇಳೆಗೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ದಿನಕ್ಕೆ ಸರಾಸರಿ 2000 ರಿಂದ 4000 ಟನ್ ಕಲ್ಲಂಗಡಿ ಕರ್ನಾಟಕಕ್ಕೆ ಬರುತ್ತದೆ ಎಂದು ಅಂದಾಜಿಸಲಾಗಿದೆ.
![]()
ಈಗ ಸದ್ಯ ಬಿಸಿಲು ಕಡಿಮೆ ಇರುವುದರಿಂದ ವ್ಯಾಪಾರ ಸ್ವಲ್ಪ ಕಡಿಮೆ ಇದೆ ಬೆಲೆಯೂ ಜನಸಾಮಾನ್ಯರ ಕೈಗೆಟುಕುವಂತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ಝಳ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಲಿದೆ.
-ಸುರೇಶ್, ಕಲ್ಲಂಗಡಿ ವ್ಯಾಪಾರಿ ಬೆಂಗಳೂರು
![]()
ಕರ್ನಾಟಕದಲ್ಲಿ ಉತ್ತಮ ಬೆಳೆ ಇದೆ ಜತೆಗೆ ಆಂಧ್ರಪ್ರದೇಶ, ತಮಿಳುನಾಡು ಕಲ್ಲಂಗಡಿ ಬರುತ್ತದೆ ಈ ವರ್ಷ ರೈತರಿಗೆ ಹೆಚ್ಚು ಇಳುವರಿ ಜತೆಗೆ ಉತ್ತಮ ಬೆಲೆಯೂ ಸಿಗುತ್ತಿದೆ.
-ಟಿ. ಸೋಮು, ಹಾಪ್‌ಕಾಮ್ಸ್ ಎಂ ಡಿ.