ಸೋನಿಪತ್ ಸತ್ಲೋಕ್ ಆಶ್ರಮದಲ್ಲಿ 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಸ್ವಯಂಸೇವಕನ ಬಂಧನ
Crime News: ಹರಿಯಾಣದ ಸೋನಿಪತ್‌ನ ಧನಾನಾ ಗ್ರಾಮದಲ್ಲಿರುವ ಸತ್ಲೋಕ್ ಆಶ್ರಮದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಾಂದರ್ಭಿಕ ಚಿತ್ರ -
ಚಂಡೀಗಢ, ಸೆ. 28: ಹರಿಯಾಣದ ಸೋನಿಪತ್‌ನ ಧನಾನಾ ಗ್ರಾಮದಲ್ಲಿರುವ ಸತ್ಲೋಕ್ ಆಶ್ರಮದಲ್ಲಿ (Satlok Ashram) ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ (Crime News). ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಸೇವಕನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸೋನಿಪತ್‌ನ ಕಾನ್ಸ್ಡಿ ಗ್ರಾಮದ ನಿವಾಸಿ ಸಚಿನ್ ಎಂದು ಗುರುತಿಸಲಾಗಿದ್ದು, ಆಶ್ರಮದಲ್ಲಿ ಸೇವಕರಾಗಿ ಕೆಲಸ ಮಾಡುತ್ತಿದ್ದ.
ದೂರಿನ ಪ್ರಕಾರ, ಉತ್ತರ ಪ್ರದೇಶದ ಮೂಲದ ಸಂತ್ರಸ್ತ ಬಾಲಕನ ಕುಟುಂಬವು ಆಶ್ರಮಕ್ಕೆ ಸೇವೆ ಸಲ್ಲಿಸಲು ಬಂದಿತ್ತು. ಮಾಹಿತಿಯ ಪ್ರಕಾರ, ಈ ಘಟನೆ ಸೆಪ್ಟೆಂಬರ್ 23ರಂದು ಸಂಭವಿಸಿದೆ. ಘಟನೆಯ ನಂತರ, ಆಶ್ರಮದಿಂದ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅವರು ಈ ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ತಲುಪಿತು.
ಸಿಡಬ್ಲ್ಯುಸಿ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಸೆಪ್ಟೆಂಬರ್ 24ರಂದು ಸೋನಿಪತ್‌ನ ಬರೋಡಾ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 74 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜ್ಞೆ ತಪ್ಪಿದ ಗರ್ಭಿಣಿಯನ್ನು 275 ಕಿ.ಮೀ. ದೂರ ಕರೆದೊಯ್ದು ಜೀವಂತವಾಗಿ ಸುಟ್ಟ ಪಾಪಿಗಳು
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಘಟನೆ ಸೆಪ್ಟೆಂಬರ್ 23ರಂದು ಬೆಳಕಿಗೆ ಬಂದಿದೆ ಎಂದು ಗೋಹಾನಾ ಡಿಸಿಪಿ ಜಿತೇಂದರ್ ಗೆಹ್ಲಾವತ್ ಹೇಳಿದ್ದಾರೆ. ಆಶ್ರಮಕ್ಕೆ ಭೇಟಿ ನೀಡಿದ್ದ 11 ವರ್ಷದ ಬಾಲಕನೊಂದಿಗೆ ಅನುಚಿತ ದೈಹಿಕ ಸಂಪರ್ಕ ನಡೆಸಲಾಗಿದೆ ಎಂದು ಆರೋಪಿಸಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ದೊರೆತ ನಂತರ, ಪೊಲೀಸರ ತಂಡ ಆಶ್ರಮಕ್ಕೆ ತೆರಳಿ ಅಪ್ರಾಪ್ತ ಬಾಲಕನನ್ನು ಆತನ ತಂದೆಯೊಂದಿಗೆ ಸುರಕ್ಷಿತವಾಗಿ ವಶಕ್ಕೆ ಪಡೆದುಕೊಂಡಿತು. ಬಳಿಕ ಕಾನೂನು ನೆರವು, ಸಮಾಲೋಚನೆ ಮತ್ತು ವೈದ್ಯಕೀಯ ಪ್ರಕ್ರಿಯೆಗಳಿಗಾಗಿ ಬಾಲಕನನ್ನು ಆತನ ತಂದೆಯೊಂದಿಗೆ ಖಾನ್‌ಪುರ ಕಲಾನ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರು ತಿಳಿಸಿದ್ದಾರೆ. ಸಮಾಲೋಚನೆಯ ವೇಳೆ, ಬಾಲಕನು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ.
ಘಟನೆ ಯಾವಾಗ ಮತ್ತು ಎಲ್ಲಿ ನಡೆಯಿತು ಮತ್ತು ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ಸೇರಿ ಪೊಲೀಸರು ಈಗ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಅಪ್ರಾಪ್ತ ವಯಸ್ಕನ ಹೇಳಿಕೆ ಮತ್ತು ಇತರ ಸಾಕ್ಷ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ.
ಧನಾನಾ ಆಶ್ರಮದ ಮುಖ್ಯಸ್ಥ ರಾಮ್‌ಪಾಲ್ ಈ ವರ್ಷದ ಏಪ್ರಿಲ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಹಿಸಾರ್‌ನ ಸತ್ಲೋಕ್ ಆಶ್ರಮ ಪ್ರಕರಣಕ್ಕೆ ಸಂಬಂಧಿಸಿದ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ದೊರೆತ ನಂತರ ಜೈಲಿನಿಂದ ಬಿಡುಗಡೆಯಾದ ರಾಮ್‌ಪಾಲ್ ಮತ್ತೆ ಧನಾನಾ ಆಶ್ರಮಕ್ಕೆ ಮರಳಿದ್ದಾರೆ.