ಮೀನಿನ ಹೆಸರಿನಲ್ಲಿ ಗೋಮಾಂಸ ಅಕ್ರಮ ಮಾರಾಟ: ಉತ್ತರ ಪ್ರದೇಶದಲ್ಲಿ 1.68 ಕೋಟಿ ರುಪಾಯಿ ಮೌಲ್ಯದ ಕಸಾಯಿಖಾನೆಗೆ ಬೀಗ
Crime News: ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧ ಉತ್ತರ ಪ್ರದೇಶದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗತ್ತಿದೆ. ಇದರ ಭಾಗವಾಗಿ ಸುಮಾರು 1.68 ಕೋಟಿ ರುಪಾಯಿ ಮೌಲ್ಯದ ಮಾಂಸ ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಗೋಮಾಂಸ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಆರೋಪದ ಹಿನ್ನೆಲೆಯಲ್ಲಿ, ಮಾಂಸ ಸಂಸ್ಕರಣಾ ಘಟಕದ ಮಾಲಕ ಅತೀಕ್ ಅಹ್ಮದ್ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಜೂ. 4: ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧ ಉತ್ತರ ಪ್ರದೇಶದಲ್ಲಿ ಸಮರ ಸಾರಲಾಗಿದ್ದು, ಇದರ ಭಾಗವಾಗಿ ಸುಮಾರು 1.68 ಕೋಟಿ ರುಪಾಯಿ ಮೌಲ್ಯದ ಮಾಂಸ ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ ಜಿಲ್ಲೆಯ ಸಹಸ್ಪುರ್ ಪ್ರದೇಶದಲ್ಲಿರುವ ಉಮರ್ ಅಂತಾರಾಷ್ಟ್ರೀಯ ಮಾಂಸ ಸಂಸ್ಕರಣಾ ಘಟಕ ಮುಚ್ಚಲಾಗಿದೆ. ಧಂಪುರ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಸ್ಮೃತಿ ಮಿಶ್ರಾ ಅವರ ಮೇಲ್ವಿಚಾರಣೆಯಲ್ಲಿ ಬಿಜ್ನೋರ್ ಮತ್ತು ಜಲೌನ್ ಪೊಲೀಸರ ಜಂಟಿ ತಂಡವು ಈ ಕಾರ್ಯಾಚರಣೆಯನ್ನು ನಡೆಸಿತು (Crime News).
ಗೋಮಾಂಸ ಕಳ್ಳಸಾಗಣೆ ಆರೋಪದ ಹಿನ್ನೆಲೆಯಲ್ಲಿ ಮಾಂಸ ಸಂಸ್ಕರಣಾ ಘಟಕದ ಮಾಲಕ ಅತೀಕ್ ಅಹ್ಮದ್ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಅದರ ಭಾಗವಾಗಿ ಈ ಘಟಕವನ್ನು ಸೀಲ್ ಮಾಡಲಾಗಿದೆ. ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಯ ಅಂದಾಜು ಮೌಲ್ಯ ಸುಮಾರು 1.68 ಕೋಟಿ ರುಪಾಯಿ ಎಂದು ಮೂಲಗಳು ತಿಳಿಸಿವೆ.
ಜಲೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದ ನಂತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಈ ಘಟಕದಿಂದ ಮೀಸು ಮಾಂಸದ ಹೆಸರಿನಲ್ಲಿ ಸರಬರಾಜು ಮಾಡಲಾಗುತ್ತಿದ್ದುದು ಗೋಮಾಂಸವಾಗಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಇದರ ಪರಿಣಾಮವಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಆಪರೇಷನ್ ಡೆಲ್ಟಾ ಹಂಟ್: ಗುಜರಾತ್‌ನಲ್ಲಿ 362 ಅಕ್ರಮ ಬಾಂಗ್ಲಾದೇಶಿಗರ ಬಂಧನ
ಅಧಿಕಾರಿಗಳು ಹೇಳಿದ್ದೇನು?
ಆರೋಪಿಗಳು ಗೋಮಾಂಸವನ್ನು, ಮೀನು ಆಹಾರ ಎಂದು ಹೇಳಿ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಥುರಾದಲ್ಲಿ ನಡೆಸಿದ ತಪಾಸಣೆಯಲ್ಲಿ ಕಾರ್ಯಾಚರಣೆಗೆ ಸಂಬಂಧಿಸಿದ ವಾಹನಗಳಲ್ಲಿ ಗೋಮಾಂಸ ಇರುವುದು ದೃಢಪಟ್ಟಿದೆ ಎಂದು ಹೇಳಲಾದ ನಂತರ ಜಲೌನ್ ಮತ್ತು ಬಿಜ್ನೋರ್ ಎರಡೂ ಜಿಲ್ಲೆಯಲ್ಲೂ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರುಮಾಹಿತಿ ನೀಡಿದ್ದಾರೆ. ಅಕ್ರಮ ವ್ಯಾಪಾರದಿಂದ ಸಂಪಾದಿಸಲಾಗಿದೆ ಎಂದು ಶಂಕಿಸಲಾದ ಆಸ್ತಿ-ಪಾಸ್ತಿಗಳನ್ನು, ಗ್ಯಾಂಗ್‌ಸ್ಟರ್ ಕಾಯ್ದೆಯ ವಿಧಿಗಳ ಅಡಿಯಲ್ಲಿ ಅಧಿಕಾರಿಗಳು ಜಪ್ತಿ ಮಾಡುತ್ತಿದ್ದಾರೆ.
ಮಧ್ಯ ಪ್ರದೇಶದಲ್ಲಿ ಗೋಹತ್ಯೆ ಮತ್ತು ಗೋಮಾಂಸ ವ್ಯಾಪಾರದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಇಂದೋರ್ ಜಿಲ್ಲಾಡಳಿತವು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ ಕೇವಲ ಎರಡು ದಿನಗಳ ನಂತರ ಬಿಜ್ನೋರ್‌ನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳನ್ನು ಖಾದಿರ್ ಮೊಹಮ್ಮದ್ (35) ಮತ್ತು ಮೊಹಮ್ಮದ್ ಆಬಾದ್ ಅಲಿಯಾಸ್ ಕಲ್ಲಾ (29) ಎಂದು ಗುರುತಿಸಲಾಗಿದೆ. ಇವರಿಬ್ಬರ ವಿರುದ್ಧ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿವಂ ವರ್ಮಾ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದಾರೆ.
ಆರೋಪಿಗಳ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ, ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪ ಮತ್ತು ಇತರ ಗಂಭೀರ ಅಪರಾಧಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.