ಆಸ್ತಿ ಕಲಹಕ್ಕೆ ಕುಟುಂಬವೇ ನಾಶ: ಪೋಷಕರು, ಸೋದರಿಯನ್ನು ಹತ್ಯೆ ಮಾಡಿದ ವ್ಯಕ್ತಿ, ಕೊನೆಗೆ ಸ್ನೇಹಿತನಿಂದಲೇ ಕೊಲೆ
Crime News: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆತ್ತವರು ಮತ್ತು ಸಹೋದರಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊನೆಗೆ ಆತನ ಸಹಚರ ಮತ್ತು ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಪ್ರಯಾಗ್‌ರಾಜ್, ಜೂ.4: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆತ್ತವರು ಮತ್ತು ಸಹೋದರಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh) ದಲ್ಲಿ ನಡೆದಿದೆ. ಬೆಲೆಬಾಳುವ ವಸ್ತುಗಳ ಹಂಚಿಕೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯದಿಂದಾಗಿ ಆತನ ಸಹಚರ (Crime News) ಮತ್ತು ಸ್ನೇಹಿತನಿಂದಲೇ ಪೋಷಕರನ್ನು ಕೊಂದವನೇ ಹತ್ಯೆಯಾಗಿದ್ದಾನೆ .
ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ದಕ್ಷಿಣ ಮಲಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೀರೇಂದ್ರ ವೈಶ್ಯ (70), ಅವರ ಪತ್ನಿ ಅನಿತಾ (65) ಮತ್ತು ಮಗಳು ಮೀನಾಕ್ಷಿ (45) ಅವರ ಮೃತದೇಹಗಳು ಮನೆಯೊಳಗೆ ಪತ್ತೆಯಾಗಿವೆ. ಮೃತರ ಮಗ ಅಭಿಷೇಕ್ ವೈಶ್ಯ (40) ಅವರ ಶವ ಅದೇ ಕಟ್ಟಡದ ನೆಲ ಮಹಡಿಯಲ್ಲಿರುವ ಅಂಗಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಭಿಷೇಕ್ ಸ್ನೇಹಿತ ಸನ್ನಿ ಗುಪ್ತಾನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು ಒಂದರಿಂದ ಎರಡು ಗ್ರಾಂ ಚಿನ್ನ ಮತ್ತು ಸುಮಾರು 360 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪೊಲೀಸ್ ತನಿಖೆಯ ಪ್ರಕಾರ, ವೀರೇಂದ್ರ ವೈಶ್ಯ ಮತ್ತು ಅವರ ಪತ್ನಿ ತಮ್ಮ ಮಗನಿಗೆ ಆಸ್ತಿಯಲ್ಲಿ ಸಮಪಾಲು ಕೊಡದಿದ್ದರಿಂದ ಕೋಪಗೊಂಡಿದ್ದ. ಹೀಗಾಗಿ ತನ್ನ ಪೋಷಕರು ಹಾಗೂ ಸೋದರಿಯ ಹತ್ಯೆಗೆ ಸಂಚು ರೂಪಿಸಿದ್ದಾನೆ.
ಗರ್ಭಿಣಿಯ ಹೊಟ್ಟೆ ಸೀಳಿ ವೈದ್ಯ ನಾಪತ್ತೆ; ಮಹಿಳೆ ಸಾವು, ಪವಾಡ ಸದೃಶವಾಗಿ ಬದುಕುಳಿದ ಮಗು
ಮೇ 31 ರ ಸಂಜೆ ಅಭಿಷೇಕ್, ಸ್ನೇಹಿತ ಸನ್ನಿ ಗುಪ್ತಾ ಜೊತೆ ಸೇರಿ ವೀರೇಂದ್ರ, ಅನಿತಾ ಮತ್ತು ಮೀನಾಕ್ಷಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಮಾಡಿದ ನಂತರ, ಇಬ್ಬರೂ ಮನೆಯಿಂದ ತೆಗೆದುಕೊಂಡ ಬೆಲೆಬಾಳುವ ವಸ್ತುಗಳನ್ನು ಹಂಚಿಕೊಳ್ಳಲು ನೆಲ ಮಹಡಿಯಲ್ಲಿರುವ ಅಂಗಡಿಗೆ ಹೋಗಿದ್ದರು ಎನ್ನಲಾಗಿದೆ. ಹಂಚುವ ವೇಳೆ, ಅವರ ನಡುವೆ ಜಗಳ ಉಂಟಾಗಿದೆ.
ಈ ವೇಳೆ ನಡೆದ ಜಗಳದಲ್ಲಿ ಅಭಿಷೇಕ್‌ನನ್ನು ಕೊಲೆ ಮಾಡಿದ ಸನ್ನಿ ಗುಪ್ತಾ, ಮೃತದೇಹವನ್ನು ಅಂಗಡಿಯೊಳಗೆ ಬಿಟ್ಟು, ಆವರಣಕ್ಕೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆರೋಪಿ ಸನ್ನಿ ಗುಪ್ತಾನನ್ನು ಬಂಧಿಸಿದರು. ವಿಚಾರಣೆಯ ವೇಳೆ ಗುಪ್ತಾ ತನ್ನ ಅಪರಾಧವನ್ನು ಒಪ್ಪಿಕೊಂಡನು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
60 ವರ್ಷದ ಮಹಿಳೆಯ ಹತ್ಯೆ
60 ವರ್ಷದ ಮಹಿಳೆಯೊಬ್ಬರ ಕುತ್ತಿಗೆ ಸೀಳಿ, ಕಿವಿ ಕತ್ತರಿಸಿ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ. ಆಕೆಯ ಪತಿ, ವ್ಯಾಪಾರಿ ಸಂಜಯ್ ಮಿತ್ತಲ್ ತನ್ನ ಪತ್ನಿಯ ಫೋನ್‌ನಿಂದ ಕರೆ ಬಂದ ನಂತರ ಮನೆಗೆ ಧಾವಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದ ಪತ್ನಿಯ ಮೃತದೇಹ ಕಂಡು ಅವರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ.