ಮಣಿಪುರದಲ್ಲಿ ಭೀಕರ ಸ್ಫೋಟ; ಇಬ್ಬರಿಗೆ ಗಾಯ, ಗ್ರಾಮಸ್ಥರಿಂದ ಪ್ರತಿಭಟನೆ
Explosion in Bishnupur: ಮಣಿಪುರದ ಬಿಷ್ಣುಪುರದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮೊದಲ ಸ್ಫೋಟ ಬೆಳಗ್ಗೆ 5 ರಿಂದ 6 ಗಂಟೆಯ ನಡುವೆ ಪಾಳುಬಿದ್ದ ಮನೆಯೊಳಗೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಗುವಾಹಟಿ, ಜ. 5: ಪಾಳುಬಿದ್ದ ಮನೆಯ ಬಳಿ ಸೋಮವಾರ (ಜನವರಿ 5) ಬೆಳಗ್ಗೆ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ. ಮಣಿಪುರದ (Manipur) ಬಿಷ್ಣುಪುರ ಜಿಲ್ಲೆಯ ಮೈತೈ ಕುಟುಂಬವೊಂದಕ್ಕೆ ಸೇರಿದ ಮನೆ ಬಳಿ ಈ ಘಟನೆ ನಡೆದಿದೆ. ಮೊದಲ ಸ್ಫೋಟ ಬೆಳಗ್ಗೆ 5ರಿಂದ 6 ಗಂಟೆಯ ನಡುವೆ ಪಾಳುಬಿದ್ದ ಮನೆಯೊಳಗೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಿಷ್ಣುಪುರದ ಸೈಟನ್ ಗ್ರಾಮದಲ್ಲಿ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು, ಒಬ್ಬ ಪುರುಷ ಮತ್ತು ಮಹಿಳೆ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಒಂದರ ನಂತರ ಒಂದರಂತೆ ಸ್ಫೋಟಗಳು ಸಂಭವಿಸಿದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಎರಡನೇ ಸ್ಫೋಟದಲ್ಲಿ ಗಾಯಗೊಂಡ ಇಬ್ಬರು ವ್ಯಕ್ತಿಗಳನ್ನು ಸೋಯಿಬಮ್ ಸನತೊಂಬ ಸಿಂಗ್ (52) ಮತ್ತು ನೊಂಗ್ಥೊಂಬಮ್ ಇಂದುಬಾಲಾ ದೇವಿ (37) ಎಂದು ಗುರುತಿಸಲಾಗಿದೆ. ಸೈಟನ್ ರಾಜ್ಯ ರಾಜಧಾನಿ ಇಂಫಾಲ್‌ನಿಂದ ಸುಮಾರು 55 ಕಿ.ಮೀ. ದೂರದಲ್ಲಿದೆ. ಚುರಚಂದಪುರ ಮತ್ತು ಬಿಷ್ಣುಪುರ ಅಂತರ ಜಿಲ್ಲಾ ಗಡಿಯಲ್ಲಿ ಬರುತ್ತದೆ. ಗಾಯಗೊಂಡ ಇಬ್ಬರನ್ನು ಬಿಷ್ಣುಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣ; ಪಾಕಿಸ್ತಾನಿ ಹ್ಯಾಂಡ್ಲರ್‌ಗಳನ್ನು ಉಗ್ರರು ಸಂಪರ್ಕಿಸಿದ್ದು ಹೇಗೆ?
ಈ ಮನೆ 70 ವರ್ಷದ ಸಲಾಂ ಮಣಿ ಸಿಂಗ್ ಎಂಬುವವರಿಗೆ ಸೇರಿದ್ದು, 2023ರಲ್ಲಿ ಮೈತೈ-ಕುಕಿ ಜನಾಂಗೀಯ ದ್ವೇಶ ಪ್ರಾರಂಭವಾದಾಗಿನಿಂದ ಈ ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ. ಸಲಾಂ ಮಣಿ ಸಿಂಗ್ ಸದ್ಯ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಸಂಘರ್ಷ ಪೀಡಿತ ಮಣಿಪುರದಲ್ಲಿ ನಡೆದ ಈ ಸ್ಫೋಟ ಬೆಚ್ಚಿ ಬೀಳಿಸಿದೆ.
ಕುಕಿ ಬುಡಕಟ್ಟು ಜನಾಂಗದ ಸದಸ್ಯರು ಐಇಡಿಗಳನ್ನು ಇಟ್ಟಿದ್ದಾರೆ ಎಂದು ಮೈತೈ ಸಮುದಾಯದ ಗ್ರಾಮಸ್ಥರು ಆರೋಪಿಸಿದ್ದಾರೆ. ಪದೇ ಪದೆ ದಾಳಿ ನಡೆದರೂ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಲು ತಾವು ಒಟ್ಟುಗೂಡಿದ್ದೇವೆ. ಕೇಂದ್ರ ಪಡೆಗಳು ತಕ್ಷಣವೇ ಕಾರ್ಯನಿರ್ವಹಿಸುವಂತೆ ಕೇಳಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಮಣಿಪುರವು ರಾಷ್ಟ್ರಪತಿ ಆಳ್ವಿಕೆಯಲ್ಲಿದೆ. ಇದು 2025ರ ಫೆಬ್ರವರಿಯಲ್ಲಿ ಜಾರಿಗೆ ಬಂದಿತು. ಮೊದಲ ಆರು ತಿಂಗಳು ಮುಗಿದ ನಂತರ ಇದನ್ನು ಆರು ತಿಂಗಳವರೆಗೆ ವಿಸ್ತರಿಸಲಾಯಿತು. ಆದರೆ ಮತ್ತೊಂದು ವಿಸ್ತರಣೆ ಮಾಡಲು ಕೆಲವು ಸಂವಿಧಾನಾತ್ಮಕ ಷರತ್ತುಗಳನ್ನು ಪೂರೈಸಬೇಕು. ಅವುಗಳಲ್ಲಿ ಒಂದೆಂದರೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು.
2012ರ ಪುಣೆ ಸ್ಫೋಟ ಪ್ರಕರಣದ ಆರೋಪಿ ಮೇಲೆ ಗುಂಡಿನ ದಾಳಿ
ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುವ ಮೊದಲು, ಅಂದಿನ ಮಣಿಪುರ ಸರ್ಕಾರವು ಬಫರ್ ಝೋನ್ ಎಂಬುದೇ ಇಲ್ಲ ಎಂದು ಹೇಳಿತ್ತು. ಆದರೆ ಸೂಕ್ಷ್ಮ ಪ್ರದೇಶಗಳು ಇವೆ ಎಂದು ಹೇಳಿತ್ತು. ಬಫರ್ ಝೋನ್ ಎಂಬ ಪದದ ಬಳಕೆಯು ಜನರನ್ನು ದಾರಿ ತಪ್ಪಿಸುವುದು ಎಂದು ಸರ್ಕಾರ ಹೇಳಿತ್ತು.