ಹದಿಹರೆಯದ ಬಾಲಕಿಯನ್ನು ಹತ್ಯೆ ಮಾಡಿ, ಮುಖದ ಮೇಲೆ ಆ್ಯಸಿಡ್ ಸುರಿದ ತಂದೆ; ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ
Crime News: ನಾಪತ್ತೆಯಾದ 16 ವರ್ಷದ ಬಾಲಕಿಯನ್ನು ಹುಡುಕಲು ಆರಂಭಿಸಿದ ಘಟನೆಯೊಂದರಲ್ಲಿ ಆಕೆಯ ತಂದೆಯೇ ಕೊಲೆಗಾರ ಎನ್ನುವುದು ತಿಳಿದು ಬಂದಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಪಾಪಿ ಗುರುತು ಮರೆಮಾಡಲು ಆಕೆಯ ಮುಖದ ಮೇಲೆ ಆ್ಯಸಿಡ್ ಸುರಿದಿದ್ದಾನೆ.
ಪುತ್ರಿಯನ್ನು ಕೊಂದ ತಂದೆ ಹಾಗೂ ಆತನ ಸಹಚರನ ಬಂಧನ -
ಲಖನೌ, ಏ. 21: ನಾಪತ್ತೆಯಾದ 16 ವರ್ಷದ ಬಾಲಕಿಯನ್ನು ಹುಡುಕಾಟ ಆರಂಭಿಸಿದ ಪೊಲೀಸರ ಎದುರು ತೆರೆದುಕೊಂಡಿದ್ದು ಬೆಚ್ಚಿ ಬೀಳಿಸುವ ಘಟನೆ. ಆಕೆಯ ತಂದೆಯೇ ಹದಿಹರೆಯದ ಬಾಲಕಿಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ (Uttar Pradesh) ಲಖನೌದಲ್ಲಿ ಈ ಘಟನೆ ನಡೆದಿದೆ. ವಂದನಾ ಚೌಬೆ ಎಂಬ ಬಾಲಕಿ ಕೊಲೆಯಾದ ದುರ್ದೈವಿ. ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಗುರುತು ಮರೆಮಾಡಲು ಆಕೆಯ ಮುಖದ ಮೇಲೆ ಆ್ಯಸಿಡ್ ಸುರಿಯಲಾಗಿದೆ. ಆಕೆ ತನ್ನ ಗೆಳೆಯನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರಾಕರಿಸಿದ ಕಾರಣ ಆಕೆಯನ್ನು ಹತ್ಯೆ ಮಾಡಿ ದೇಹವನ್ನು ರಸ್ತೆಬದಿಯಲ್ಲಿ ಎಸೆಯಲಾಯಿತು (Crime News) ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಕಳೆದ ವರ್ಷ ಆಗಸ್ಟ್‌ನಲ್ಲಿ ಹದಿಹರೆಯದ ಹುಡುಗಿ ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಳು. ನಂತರ ಬಾಲಕಿಯನ್ನು ಹುಡುಕಿ ಮನೆಗೆ ಕರೆತರಲಾಯಿತು. ಆಕೆಯ ಗೆಳೆಯನನ್ನು ಮೂರು ತಿಂಗಳು ಜೈಲಿಗೆ ಕಳುಹಿಸಲಾಯಿತು. ಆದರೆ ನವೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ವಂದನಾ ತನ್ನ ಪ್ರಿಯಕರನೊಂದಿಗೆ ಮತ್ತೆ ಸಂಬಂಧ ಮುಂದುವರಿಸಿದಳು.
ಬಾಲಕಿಯ ಸಂಬಂಧವು ಕುಟುಂಬಕ್ಕೆ ಅವಮಾನ ತಂದಿದೆ ಎಂದು ಹೇಳಲಾಗಿದೆ. ಇದರಿಂದ ಆಕೆಯ ತಂದೆ ವಿಜಯ್ ಕುಮಾರ್ ಚೌಬೆ ಕೆರಳಿದ್ದಾನೆ. ಲಖನೌದ ವಿಶ್ವವಿದ್ಯಾಲಯವೊಂದರಲ್ಲಿ ಬಸ್ ಚಾಲಕನಾಗಿರುವ ಚೌಬೆ, ಸಾಮಾಜಿಕ ಕಳಂಕವನ್ನು ತಪ್ಪಿಸಲು ಹಲವು ಬಾರಿ ಮನೆಗಳನ್ನು ಬದಲಾಯಿಸಬೇಕಾಯಿತು ಎಂದು ವರದಿಯಾಗಿದೆ. ಪದೇ ಪದೆ ಮನವೊಲಿಸಿದರೂ ಅಪ್ರಾಪ್ತ ಬಾಲಕಿ ತನ್ನ ಪ್ರಣಯ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಪ್ರೇಯಸಿ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!
ಇದರಿಂದ ಹತಾಶೆಗೊಂಡಿದ್ದ ಚೌಬೆ, ತನ್ನ ಸ್ನೇಹಿತ ಅಬ್ದುಲ್ ಮನ್ನನ್ ಜತೆ ಒಂದು ಯೋಜನೆ ರೂಪಿಸಿದ್ದಾನೆ. ಏಪ್ರಿಲ್ 13ರಂದು ವಿಜಯ್ ಕುಮಾರ್ ಚೌಬೆ ಬಾಲಕಿಯನ್ನು ರಾಜಸ್ಥಾನಕ್ಕೆ ದೆವ್ವ ಬಿಡಿಸುವ ಆಚರಣೆಗಳಿಗಾಗಿ ಕರೆದೊಯ್ಯಲು ಕಾರನ್ನು ಬಾಡಿಗೆಗೆ ಪಡೆದಿದ್ದಾನೆ. ಅಬ್ದುಲ್ ಮನ್ನನ್ ಅಬ್ದುಲ್ ಮನ್ನನ್ ಕೂಡ ಇವರೊಂದಿಗೆ ಸೇರಿದ್ದಾನೆ. ರಾತ್ರಿ ಅವರು ಬಾರಾಬಂಕಿಯನ್ನು ತಲುಪಿದರು. ನಿರ್ಜನ ರಸ್ತೆಯಲ್ಲಿ ಕಾರು ನಿಲ್ಲಿಸಿ ನಿಲ್ಲಿಸಿದರು. ಬಾಲಕಿ ನಿದ್ದೆಯಲ್ಲಿದ್ದ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿದರು. ಅವಳ ಗುರುತನ್ನು ಮರೆಮಾಡಲು ಮುಖದ ಮೇಲೆ ಆ್ಯಸಿಡ್ ಸುರಿದರು.
ಶಾರದಾ ಕಾಲುವೆಯಲ್ಲಿ ಶವವನ್ನು ವಿಲೇವಾರಿ ಮಾಡುವುದು ಯೋಜನೆಯಾಗಿತ್ತು. ಆದರೆ ರಸ್ತೆಯಲ್ಲಿ ವಾಹನಗಳು ಬರುತ್ತಿರುವುದನ್ನು ನೋಡಿ ವಿಜಯ್ ಕುಮಾರ್ ಚೌಬೆ ಮತ್ತು ಅಬ್ದುಲ್ ಮನ್ನನ್ ಭಯಭೀತರಾಗಿ ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
ಏಪ್ರಿಲ್ 16ರಂದು, ಚೌಬೆ ಬಾಲಕಿ ನಾಪತ್ತೆ ದೂರು ದಾಖಲಿಸಿದ್ದಾನೆ. ತನಿಖೆಯ ಸಮಯದಲ್ಲಿ, ಪೊಲೀಸರು ಕರೆ ದಾಖಲೆಗಳನ್ನು ವಿಶ್ಲೇಷಿಸಿ, ಶಂಕಿತರನ್ನು ವಿಚಾರಣೆ ನಡೆಸಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದವು. ಚೌಬೆ ತನ್ನ ಮಗಳನ್ನು ಕೊಂದಿರುವ ವಿಚಾರ ಗೊತ್ತಾಗಿದೆ.
ಇದೀಗ ಆರೋಪಿ 34 ವರ್ಷದ ವಿಜಯ್ ಕುಮಾರ್ ಚೌಬೆ ಮತ್ತು ಆತನ ಸಹಚರ 45 ವರ್ಷದ ಅಬ್ದುಲ್ ಮನ್ನನ್‌ರನ್ನು ಪೊಲೀಸರು ಬಂಧಿಸಿದ್ದಾರೆ.