Stabbing Case: ವೇತನ ವಿಚಾರದಲ್ಲಿ ಕಿರಿ ಕಿರಿ; ಕಾರು ಚಾಲಕನಿಗೆ ಚಾಕು ಇರಿದ ಖ್ಯಾತ ನಿರ್ದೇಶಕ
ಖ್ಯಾತ ನಿರ್ದೇಶಕ ಮನೀಶ್ ಗುಪ್ತಾ (Manish Gupta) ಅವರು ವೇತನದ ವಿಷಯದಲ್ಲಿ ಜಗಳವಾದ ಬಳಿಕ ತಮ್ಮ ಡ್ರೈವರ್ (Driver) ಲಷ್ಕರ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಗಾಯಗೊಳಿಸಿದ ಆರೋಪದ ಮೇಲೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ಮುಂಬೈ ಪೊಲೀಸ್ (Mumbai police) ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.


ಮುಂಬೈ: ತಮ್ಮ ಕಾರು ಚಾಲಕನಿಗೆ ಖ್ಯಾತ ನಿರ್ದೇಶಕ ಮನೀಶ್ ಗುಪ್ತಾ (Manish Gupta) ಚಾಕು ಇರಿದಿರುವ ಘಟನೆ ವರದಿಯಾಗಿದೆ. ಗುರುವಾರ ರಾತ್ರಿ ವರ್ಸೋವಾದ ಸಾಗರ ಸಂಜೋಗ್ ಕಟ್ಟಡದಲ್ಲಿರುವ ಗುಪ್ತಾ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ವೇತನದ ವಿಷಯದಲ್ಲಿ ಜಗಳವಾದ ಬಳಿಕ ತಮ್ಮ ಡ್ರೈವರ್ (Driver) ಲಷ್ಕರ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಈ ಬಗೆ ಮುಂಬೈ ಪೊಲೀಸ್ (Mumbai police) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಮೂರು ವರ್ಷಗಳಿಂದ ಗುಪ್ತಾ ಅವರ ಡ್ರೈವರ್ ಆಗಿದ್ದ ರಾಜಿಬುಲ್ ಇಸ್ಲಾಂ ಲಷ್ಕರ್ (32) ಗಾಯಗೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118(2) (ಆಯುಧದಿಂದ ಗಂಭೀರ ಗಾಯ), 115(2) (ಶಾಂತಿಭಂಗಕ್ಕೆ ಪ್ರಚೋದನೆ), ಮತ್ತು 352 (ಇತರ ಅಪರಾಧಗಳು) ಅಡಿಯಲ್ಲಿ ಗುಪ್ತಾ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಇದುವರೆಗೆ ಗುಪ್ತಾ ಅವರನ್ನು ಬಂಧಿಸಲಾಗಿಲ್ಲ.
ಡ್ರೈವರ್ ಆರೋಪ
ಲಷ್ಕರ್ನ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್, ಗುಪ್ತಾ ಅವರ ತಕ್ಷಣದ ಬಂಧನಕ್ಕೆ ಒತ್ತಾಯಿಸಿದ್ದಾರೆ. ವರದಿಯ ಪ್ರಕಾರ, ಲಷ್ಕರ್ ಮೂರು ವರ್ಷಗಳಿಂದ ತಿಂಗಳಿಗೆ 23,000 ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದರು. ಆದರೆ, ವೇತನವನ್ನು ಸಕಾಲದಲ್ಲಿ ಪಾವತಿಸಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಮೇ 30ರಂದು ಗುಪ್ತಾ ಅವರು ಬಾಕಿ ವೇತನವನ್ನು ನೀಡದೆ ಲಷ್ಕರ್ರನ್ನು ಕೆಲಸದಿಂದ ತೆಗೆದುಹಾಕಿದ್ದರು. ಬಾಕಿಯನ್ನು ಪಡೆಯಲು ಲಷ್ಕರ್ ಮತ್ತೆ ಕೆಲಸಕ್ಕೆ ಸೇರಿದರೂ ವೇತನ ಸಿಗಲಿಲ್ಲ. ಇದರಿಂದ ಶುಕ್ರವಾರ ರಾತ್ರಿ ಗುಪ್ತಾ ಅವರ ವರ್ಸೋವಾ ನಿವಾಸದಲ್ಲಿ ಜಗಳವಾಗಿ, ಗುಪ್ತಾ ಅವರು ಚಾಕುವಿನಿಂದ ಲಷ್ಕರ್ಗೆ ಗಾಯಗೊಳಿಸಿದ್ದಾರೆ ಎಂದು FIRನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಲಷ್ಕರ್ ತಕ್ಷಣ ಸಮೀಪದ ಕೂಪರ್ ಆಸ್ಪತ್ರೆಗೆ ಧಾವಿಸಿ, ಚಿಕಿತ್ಸೆ ಪಡೆದ ಬಳಿಕ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಗುಪ್ತಾ ವಿರುದ್ಧ ದೂರು ದಾಖಲಿಸಿದ್ದಾರೆ.
ಮನೀಶ್ ಗುಪ್ತಾ ಯಾರು?
ಮನೀಶ್ ಗುಪ್ತಾ ಚಿತ್ರಕಥೆಗಾರ ಮತ್ತು ನಿರ್ದೇಶಕರಾಗಿದ್ದು, ದಿ ಸ್ಟೋನ್ಮ್ಯಾನ್ ಮರ್ಡರ್ಸ್ ಮತ್ತು 420 IPC ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2023ರಲ್ಲಿ ರವೀನಾ ಟಂಡನ್ ಮತ್ತು ಮಿಲಿಂದ್ ಸೋಮನ್ ಅಭಿನಯದ ವನ್ ಫ್ರೈಡೇ ನೈಟ್ ಎಂಬ ಕಾನೂನು ಡ್ರಾಮಾ ಚಿತ್ರವು ಆವರ ಕೊನೆಯ ನಿರ್ದೇಶನವಾಗಿತ್ತು. ರಾಮಗೋಪಾಲ್ ವರ್ಮಾ ತಂಡದಲ್ಲಿ ಚಿತ್ರಕಥೆಗಾರರಾಗಿ ಕೆಲಸ ಮಾಡಿದ ಗುಪ್ತಾ, D ಮತ್ತು ಸರ್ಕಾರ್ ಚಿತ್ರಗಳ ಚಿತ್ರಕಥೆಯನ್ನು ಬರೆದಿದ್ದಾರೆ.