ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುಲ್ವಾಮಾ ದಾಳಿ ಉಗ್ರ ಎಕೆ-47 ಹಿಡಿದ ವಿಡಿಯೋ ವೈರಲ್; ‘ಪ್ರಾಂಶುಪಾಲ’ ಎಂಬ ಪಾಕ್ ವಾದ ನುಚ್ಚುನೂರು!

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಹಮ್ಜಾ ಬುರ್ಹಾನ್ ಹತ್ಯೆಯಾಗುವ ಕೆಲವೇ ದಿನಗಳ ಮೊದಲು ಎಕೆ-47 ಹಿಡಿದಿರುವ ವಿಡಿಯೋ ಬಹಿರಂಗವಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಐಎಸ್‌ಐ ಬೆಂಬಲದೊಂದಿಗೆ ಆತ ಕಾರ್ಯನಿರ್ವಹಿಸುತ್ತಿದ್ದ ಎನ್ನುವ ಆರೋಪಗಳಿಗೆ ಈ ವಿಡಿಯೋ ಮತ್ತಷ್ಟು ಬಲ ನೀಡಿದೆ. ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಹಲವಾರು ಪಾಕಿಸ್ತಾನ ಮೂಲದ ಉಗ್ರ ನಾಯಕರು ಭಾಗವಹಿಸಿದ್ದರೆಂಬ ಸಂಗತಿ ಕೂಡ ಚರ್ಚೆಗೆ ಕಾರಣವಾಗಿದೆ.

ಪಿಒಕೆಯಲ್ಲಿ ಐಎಸ್‌ಐ ಬೆಂಬಲದ ಉಗ್ರ ಜಾಲ ಬಹಿರಂಗ..!

ಉಗ್ರ ಹಮ್ಜಾ ಬುರ್ಹಾನ್ -

Profile
Sushmitha Jain May 27, 2026 12:08 PM

ನವದೆಹಲಿ, ಮೇ 27: ಮೇ 21 ರಂದು ಅಪರಿಚಿತ ಬಂದೂಕುಧಾರಿಗಳಿಂದ ಹತನಾದ ಉಗ್ರ (terrorist ) ಹಮ್ಜಾ ಬುರ್ಹಾನ್ (Hamza Burhan), ಎಕೆ-47 ರೈಫಲ್ ಹಿಡಿದಿರುವ ಹೊಸ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ಇದು ಪಾಕಿಸ್ತಾನ (Pakistan) ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಮೋಸ್ಟ್ ವಾಂಟೆಡ್ ಉಗ್ರ (most-wanted terrorist)ನನ್ನು ರಕ್ಷಿಸುವಲ್ಲಿ ಐಎಸ್‌ಐ (ISI) ಪಾತ್ರವನ್ನು ಮತ್ತೊಮ್ಮೆ ಜಗತ್ತಿನೆದುರು ಬಹಿರಂಗಪಡಿಸಿದೆ.

ಮೂಲಗಳ ಪ್ರಕಾರ, ಬುರ್ಹಾನ್ ಹತ್ಯೆಯಾಗುವ ಕೆಲವು ದಿನಗಳ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ತನ್ನನ್ನು ಗುರಿಯಾಗಿಸಬಹುದು ಎಂಬ ಭಯದಿಂದ ಆತ ಸದಾ ಈ ಮಾರಕಾಸ್ತ್ರವನ್ನು ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ಎಂದು ಮೂಲಗಳು ಹೇಳಿವೆ. ಬುರ್ಹಾನ್‌ನನ್ನು ಐಎಸ್‌ಐ ಶಾಲೆಯೊಂದರ ಪ್ರಾಂಶುಪಾಲನನ್ನಾಗಿ ನೇಮಿಸಿತ್ತು ಮತ್ತು ಆತ ಈ ಗೌರವಾನ್ವಿತ ಹುದ್ದೆಯನ್ನು ಬಳಸಿಕೊಂಡು ಪಿಒಕೇಯ ನಿರಪರಾಧಿ ಮಕ್ಕಳಲ್ಲಿ ಭಾರತ ವಿರೋಧಿ ಪ್ರಚಾರ ಹಾಗೂ ದ್ವೇಷವನ್ನು ಹರಡುತ್ತಿದ್ದ ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.

ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡ ಉನ್ನತ ಉಗ್ರರು:

ಮೇ 22 ರಂದು ನಡೆದ ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಅಲ್-ಬದ್ರ್ ಕಮಾಂಡರ್ ಬಖ್ತ್ ಜಮೀನ್ ಖಾನ್ ಸೇರಿದಂತೆ ಪಾಕಿಸ್ತಾನ ಮೂಲದ ಹಲವು ಜಾಗತಿಕ ವಾಂಟೆಡ್ ಉಗ್ರರು ಒಂದೇ ಸೂರಿನಡಿ ಜಮಾಯಿಸಿದ್ದರು. ಹಿರಿಯ ಭಯೋತ್ಪಾದಕ ಕಾರ್ಯಕರ್ತರಲ್ಲದೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ನೇರ ಸಂಬಂಧ ಹೊಂದಿರುವ ವ್ಯಕ್ತಿಗಳು ಸಹ ಅಂತ್ಯಕ್ರಿಯೆಯಲ್ಲಿದ್ದರು ಎಂದು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ದೃಶ್ಯಗಳಿಂದ ಬಹಿರಂಗವಾಗಿದೆ. ಮುಜಾಫರಾಬಾದ್ ನಗರವು ಪಾಕ್ ಬೆಂಬಲಿತ ಭಯೋತ್ಪಾದಕ ಜಾಲಗಳ ಪ್ರಮುಖ ಸುರಕ್ಷಿತ ಕೇಂದ್ರವಾಗಿದೆ ಎಂಬ ಜಾಗತಿಕ ಆರೋಪಗಳಿಗೆ ಈ ವಿಡಿಯೋ ದೃಶ್ಯಗಳು ಮತ್ತಷ್ಟು ಪುಷ್ಟಿ ನೀಡಿವೆ.

ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಮತ್ತೆ ಪರೋಲ್; 2017ರ ಅತ್ಯಾಚಾರ ಶಿಕ್ಷೆಯ ಬಳಿಕ ಇದು 16ನೇ ಬಾರಿ ಬಿಡುಗಡೆ!

ಯಾರೀ ಹಮ್ಜಾ ಬುರ್ಹಾನ್?

ಅರ್ಜುಮಂಡ್ ಗುಲ್ಜಾರ್ ದಾರ್ ಮತ್ತು 'ಡಾಕ್ಟರ್' ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದ ಬುರ್ಹಾನ್, 2019ರ ಫೆಬ್ರವರಿಯಲ್ಲಿ 40 ಕ್ಕೂ ಹೆಚ್ಚು ಭಾರತೀಯ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಲಿಪಡೆದ ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ ಪ್ರಮುಖ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರಾ ನಿವಾಸಿಯಾಗಿದ್ದ ಈತ, ನಂತರ ಪಾಕಿಸ್ತಾನಕ್ಕೆ ಪಲಾಯನಗೈದು ಅಲ್-ಬದ್ರ್ ಉಗ್ರಗಾಮಿ ಸಂಘಟನೆಯನ್ನು ಸೇರಿಕೊಂಡಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಭಾರತದ ಕೇಂದ್ರ ಗೃಹ ಸಚಿವಾಲಯವು 2022 ರಲ್ಲಿ ಆತನನ್ನು ಅಧಿಕೃತವಾಗಿ 'ಭಯೋತ್ಪಾದಕ' ಎಂದು ಘೋಷಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಆತ ಪಿಒಕೇನಲ್ಲಿ ನಕಲಿ ಹೆಸರಿನಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದ ಹಾಗೂ ಮುಜಾಫರಾಬಾದ್‌ನ ಖಾಸಗಿ ಕಾಲೇಜೊಂದರಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.