ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಕಲಿ ವಧು, ಅಸಲಿ ವಂಚನೆ! ಸಾಮೂಹಿಕ ವಿವಾಹ ಹಗರಣದಲ್ಲಿ ಮೋಸಹೋದ 42 ಕುಟುಂಬಗಳು

ಮಧ್ಯ ಪ್ರದೇಶದ ದೇವಾಸ್‌ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಹೆಸರಿನಲ್ಲಿ 42 ಕುಟುಂಬಗಳಿಗೆ ಭಾರಿ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆಗೆ ವಧುಗಳನ್ನು ಒದಗಿಸುವುದಾಗಿ ನಂಬಿಸಿ ಆರೋಪಿಗಳು ಪ್ರತಿ ಕುಟುಂಬದಿಂದ 12,000ರಿಂದ 25,000 ರುಪಾಯಿವರೆಗೆ ಸಂಗ್ರಹಿಸಿದ್ದರು. ಸಾಮಾಜಿಕ ಜಾಲತಾಣಗಳಿಂದ ಯುವತಿಯರ ಫೋಟೊ ಡೌನ್‌ಲೋಡ್‌ ಮಾಡಿ ಅನಾಥಾಶ್ರಮದ ಹುಡುಗಿಯರೊಂದಿಗೆ ಮದುವೆ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಮದುವೆ ದಿನ ವರರು ಮತ್ತು ಕುಟುಂಬಸ್ಥರು ಮಂಟಪಕ್ಕೆ ಬಂದಾಗ ಯಾವುದೇ ವ್ಯವಸ್ಥೆ, ವಧುಗಳೇ ಕಾಣಿಸದಿದ್ದರಿಂದ ವಂಚನೆ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಸಾಮೂಹಿಕ ವಿವಾಹದ ಹೆಸರಲ್ಲಿ 42 ಕುಟುಂಬಗಳಿಗೆ ಲಕ್ಷಾಂತರ ರುಪಾಯಿ ವಂಚನೆ

ವಂಚನೆಗೊಳಗಾದ ಸಂತ್ರಸ್ತರು -

Profile
Sushmitha Jain May 26, 2026 6:28 PM

ಭೋಪಾಲ್, ಮೇ 26: ಮದುವೆಯ ಸುಂದರ ಕನಸುಗಳನ್ನು ಹಣ ಮಾಡುವ ಜಾಲವನ್ನಾಗಿ ಪರಿವರ್ತಿಸಿದ ಆಘಾತಕಾರಿ ವಂಚನೆ ಪ್ರಕರಣವೊಂದು ಮಧ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ದೇವಾಸ್‌ನಲ್ಲಿ ಆಯೋಜಿಸಲಾಗಿದೆ ಎನ್ನಲಾದ ಸಾಮೂಹಿಕ ವಿವಾಹ (Mass Wedding) ಮಹೋತ್ಸವದ ಹೆಸರಿನಲ್ಲಿ ಮಧ್ಯ ಪ್ರದೇಶದ ವಿವಿಧ ಜಿಲ್ಲೆಗಳ 42 ಕುಟುಂಬಗಳಿಗೆ ಲಕ್ಷಾಂತರ ರುಪಾಯಿ ವಂಚಿಸಲಾಗಿದೆ. ವರರು ಮತ್ತು ಅವರ ಕುಟುಂಬಸ್ಥರು ಮದುವೆಯ ದಿರಿಸು ಧರಿಸಿ ಮಂಟಪಕ್ಕೆ ಬಂದರೂ ಕೊನೆಗೂ ವಧುಗಳು ಮಾತ್ರ ಬರಲೇ ಇಲ್ಲ.

ಸಾಮೂಹಿಕ ವಿವಾಹದ ಭರವಸೆಯು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾದ ದೊಡ್ಡ ವಂಚನೆಯ ಜಾಲವಾಗಿತ್ತು. ಯುವಕರಿಗೆ ಸೂಕ್ತ ವಧು ಸಿಗದೆ ಕಷ್ಟಪಡುತ್ತಿದ್ದ ಕುಟುಂಬಗಳ ಭಾವನೆಗಳನ್ನು ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಯುವತಿಯರ ಫೋಟೊಗಳನ್ನು ಡೌನ್‌ಲೋಡ್ ಮಾಡಿ ತೋರಿಸಿದ ಆರೋಪಿಗಳು, ಇಂದೋರ್‌ನ ಅನಾಥಾಶ್ರಮದ ಹುಡುಗಿಯರೊಂದಿಗೆ ಮದುವೆ ಮಾಡಿಸಿಕೊಡುವುದಾಗಿ ನಂಬಿಸಿದ್ದಾರೆ. ಇದಕ್ಕಾಗಿ ಪ್ರತಿ ಕುಟುಂಬದಿಂದ 12,000 ರುಪಾಯಿಯಿಂದ 25,000 ರುಪಾಯಿವರೆಗೆ ಹಣ ವಸೂಲಿ ಮಾಡಿದ್ದು, ಒಟ್ಟು 10 ಲಕ್ಷಕ್ಕೂ ಹೆಚ್ಚು ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ.

ಅನೈತಿಕ ಸಂಬಂಧ ಶಂಕೆ: ನಿದ್ರಿಸುತ್ತಿದ್ದ ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ

ಬೇಸ್ತು ಬಿದ್ದ ಕುಟುಂಬಗಳು

ಮೇ 25ರಂದು ದೇವಾಸ್‌ನಲ್ಲಿ ಮದುವೆ ನಡೆಯಲಿದೆ ಎಂದು ಕುಟುಂಬಗಳಿಗೆ ತಿಳಿಸಲಾಗಿತ್ತು. ಮೇ 24ರಂದೇ ವರರು ಮತ್ತು ಅವರ ಸಂಬಂಧಿಕರು ರಾಧಾಗಂಜ್‌ನ ಕ್ಲಬ್ ಮೈದಾನಕ್ಕೆ ಬಂದು ತಲುಪಿದ್ದರು. ಆದರೆ ಅಲ್ಲಿ ಮದುವೆ ಮಂಟಪವಾಗಲಿ, ಯಾವುದೇ ಸಿದ್ಧತೆಗಳಾಗಲಿ ಇರಲಿಲ್ಲ. ಆಯೋಜಕರಾದ ಮುಖೇಶ್ ಬೈರಾಗಿ ಮತ್ತು ಆತನ ಪತ್ನಿ ಸುನಿತಾ, ಇಂದೋರ್‌ನಿಂದ ವಧುಗಳು ಬರುತ್ತಿದ್ದಾರೆ ಎಂದು ರಾತ್ರಿ 10 ಗಂಟೆಯವರೆಗೂ ಸುಳ್ಳು ನೆಪಗಳನ್ನು ಹೇಳುತ್ತಾ ಕಾಲ ಕಳೆದಿದ್ದಾರೆ. ಕೊನೆಗೆ ವಂಚನೆ ನಡೆದಿರುವುದು ವರನ ಕಡೆಯವರ ಅರಿವಿಗೆ ಬಂದಿದೆ.

ವಿಚಾರಣೆ ವೇಳೆ ಮುಖೇಶ್, ಇಂದೋರ್‌ನಲ್ಲಿ ಕೆಲಸ ಮಾಡುವ ತನ್ನ ಅಣ್ಣ ದಿನೇಶ್ ದಾಸ್ ಬೈರಾಗಿ ಅನಾಥಾಶ್ರಮದ ಹೆಣ್ಣುಮಕ್ಕಳ ಮದುವೆಗೆ ವ್ಯವಸ್ಥೆ ಮಾಡಲು ಹೇಳಿದ್ದಾಗಿ ಮತ್ತು ಆತನೇ ವರರ ಕುಟುಂಬಗಳ ಫೋನ್ ನಂಬರ್ ನೀಡಿದ್ದಾಗಿ ಹೇಳಿದ್ದಾನೆ. ಆದರೆ ಮದುವೆಯ ದಿನ ದಿನೇಶ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ವಂಚನೆಗೆ ಮುಖೇಶ್‌ನ ಮಾವ ನರಸಿಂಗ್ ದಾಸ್ ಬೈರಾಗಿ ಕೂಡ ಮಧ್ಯವರ್ತಿಯಾಗಿ ಸಾಥ್ ನೀಡಿದ್ದ.

ಪ್ರಸ್ತುತ ಪೊಲೀಸರು ಮುಖೇಶ್ ಬೈರಾಗಿ, ಸುನಿತಾ ಬೈರಾಗಿ, ದಿನೇಶ್ ಮತ್ತು ನರಸಿಂಗ್ ದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಖ್ಯ ಆರೋಪಿಗಳಾದ ಮುಖೇಶ್ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರಿಗಾಗಿ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ. ಸೊಸೆಯಂದಿರನ್ನು ಮನೆಗೆ ಕರೆದೊಯ್ಯುವ ಆಸೆಯೊಂದಿಗೆ ಬಂದಿದ್ದ 42 ಕುಟುಂಬಗಳ ಕನಸು ಮದುವೆ ಮಂಟಪದಲ್ಲಿ ನುಚ್ಚುನೂರಾಗಿ, ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ.