ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Jodhpur Horror: ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾದ ಸಹೋದರಿಯರು; ವಿವಾಹ ಮಂಟಪ ಏರಬೇಕಾದವರು ಮಸಣಕ್ಕೆ ಹೋಗಿದ್ದೇಕೆ?

Self Harming: ಮದುವೆಗೆ ಕೆಲವೇ ಗಂಟೆಯ ಮೊದಲು ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೃತರನ್ನು ಮನೈ ಗ್ರಾಮದ ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾದ ಸಹೋದರಿಯರು

ಮೃತ ಸಹೋದರಿಯರು (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Feb 22, 2026 5:25 PM

ಜೈಪುರ, ಫೆ. 22: ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶಾದ್ಯಂತ ಸಂಚಲ ಮೂಡಿಸಿದ ಬೆನ್ನಲ್ಲೇ ಇದೀಗ ರಾಜಸ್ಥಾನದಲ್ಲಿ ಅಕ್ಕ-ತಂಗಿಯರಿಬ್ಬರು ಮದುವೆಗೆ ಕೆಲವೇ ಗಂಟೆಗಳ ಮೊದಲು ಸಾವಿಗೆ ಶರಣಾಗಿದ್ದಾರೆ. ಜೋಧಾಪುರದ ಈ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮನೈ ಗ್ರಾಮದ ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ (Jodhpur Horror). ದೀಪ್‌ ಸಿಂಗ್‌ ಎನ್ನುವವರ ಪುತ್ರಿಯರಾದ ಇವರು ಶಿಕ್ಷಕಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದರಿಂದ ಮದುವೆಯ ಸಂಭ್ರಮದಲ್ಲಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.

ಶೋಭಾ ಮತ್ತು ವಿಮಲಾ ಅವರ ಮದುವೆಗೆ ಮನೆಯವರು ಸಿದ್ಧತೆ ಮಾಡಿಕೊಳ್ಳುತ್ತಿರುವ ಮಧ್ಯೆ ಇವರು ಮೃತಪಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಘಟನೆ ವಿವರ

ಫೆಬ್ರವರಿ 21ರಂದು ಸಹೋದರಿಯರ ಮದುವೆ ನಿಗದಿಪಡಿಸಲಾಗಿತ್ತು. ಫೆಬ್ರವರಿ 20ರ ಮಧ್ಯರಾತ್ರಿ ತನಕ ಮನೆಯಲ್ಲಿ ಮದುವೆ ಪೂರ್ವ ಶಾಸ್ತ್ರ ನೆರವೇರಿತ್ತು. ಅದಾದ ಬಳಿಕ ಇಬ್ಬರು ಮದುಮಕ್ಕಳು ನಿದ್ದೆಗೆಂದು ರೂಮ್‌ಗೆ ತೆರಳಿ ಸಾವಿಗೆ ಶರಣಾಗಿದ್ದರು. ಮನೆಯವರು ಬೆಳಗ್ಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಗಂಡ ಮೃತಪಟ್ಟ ಒಂದೇ ವಾರಕ್ಕೆ ಪೊಲೀಸಪ್ಪನಿಂದ ಕಿರುಕುಳ; ಮನನೊಂದು ಮಹಿಳೆ ಆತ್ಮಹತ್ಯೆ

ಅಧಿಕಾರಿಗಳು ಹೇಳಿದ್ದೇನು?

ʼʼಮುಂಜಾನೆ 4 ಗಂಟೆ ಸುಮಾರಿಗೆ ಶೋಭಾ ಮತ್ತು ವಿಮಲಾ ಅವರ ಆರೋಗ್ಯ ಹದಗೆಡಲು ಆರಂಭವಾಯ್ತು. ಇದರಿಂದ ಮನೆಯವರು ಗಾಬರಿಯಾಗಿ ಅವರನ್ನು ಜೋಧಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಹೀಗಾಗಿ ಮೃತದೇಹವನ್ನು ಮನೆಗೆ ತರಲಾಯಿತು. ಇದೀಗ ಸಹೋದರಿಯರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆʼʼ ಎಂದು ತನಿಖೆ ಕೈಗೆತ್ತಿಕೊಂಡಿರುವ ಎಡಿಸಿಪಿ ರೋಷನ್‌ ಮೀನಾ ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮನೆಯವರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಬಳಿಕ ಅಸಹಜ ಸಾವಿನ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಪೋಸ್ಟ್‌ ಮಾರ್ಟಂಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಶವ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಾಗ್ಯೂ ಸಾವಿಗೆ ನಿಜವಾದ ಕಾರಣ ಪೋಸ್ಟ್‌ ಮಾರ್ಟಂ ವರದಿ ಕೈ ಸೇರಿದ ಬಳಿಕವಷ್ಟೇ ಗೊತ್ತಾಗಲಿದೆ. ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿಲ್ಲ. ಹೀಗಾಗಿ ನೈಜ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಯುವ ವೈದ್ಯೆ ಆತ್ಮಹತ್ಯೆ, ಅಂಗೈಯ ಡೆತ್‌ನೋಟ್‌ನಲ್ಲಿತ್ತು ಆತ್ಮಹತ್ಯೆಯ ರಹಸ್ಯ

ಅನುಮಾನದ ಹುತ್ತ

ಸದ್ಯ ಸಹೋದರಿಯ ಸಾವಿನ ಬಗ್ಗೆ ನಾನಾ ರೀತಿಯ ಅನುಮಾನ ಹುಟ್ಟಿಕೊಂಡಿದೆ. ಪೊಲೀಸರಿಗೆ ತಿಳಿಸದೆ ಮನೆಯವರು ತರಾತುರಿಯಿಂದ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದು ಏಕೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ತಂದೆಯ ಕಡೆಯ ಸಂಬಂಧಿಕರು ಈ ಮದುವೆಗೆ ಒತ್ತಡ ಹೇರಿದ್ದರು. ಸಹೋದರಿಯರಿಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಕೆಲವರು ತಿಳಿಸಿದ್ದಾರೆ. ಸದ್ಯ ಈ ಘಟನೆ ಮನೆಯೊಳಗೆ ಉಂಟಾಗುವ ಒತ್ತಡದ ಯಾವ ರೀತಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.