ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಿಸೀವ್‌ ಮಾಡದ ಕಾಲ್‌, ಲಾಕ್‌ ಆದ ಹಾಸ್ಟೆಲ್‌ ರೂಮ್‌: ಎಂಬಿಬಿಎಸ್‌ ವಿದ್ಯಾರ್ಥಿಯ ಸಾವಿಗೆ ಕಾರಣವಾಗಿದ್ದೇನು?

ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಲಾವಣ್ಯ ಪ್ರತಾಪ್ ಮೃತಳು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಹಾಸ್ಟೆಲ್  ಕೊಠಡಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನಿಗೂಢ ಸಾವು

ಸಂಗ್ರಹ ಚಿತ್ರ -

ಬಿಹಾರ: ಯುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು (medical student) ಆತ್ಮಹತ್ಯೆ (self harming) ಮಾಡಿಕೊಂಡ ಘಟನೆ ಬಿಹಾರದ (Bihar) ಪಾಟ್ನಾದಲ್ಲಿ (patna) ಶನಿವಾರ ನಡೆದಿದೆ. ಮನೆಯವರು ಪದೇ ಪದೇ ಕರೆ ಮಾಡಿದರೂ ಉತ್ತರಿಸದ ಕಾರಣ ಸ್ನೇಹಿತರು ಹಾಸ್ಟೆಲ್ ಕೊಠಡಿಗೆ ಹೋಗಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ 22 ವರ್ಷದ ಲಾವಣ್ಯ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಲಾವಣ್ಯಳ ಶವ ಹಾಸ್ಟೆಲ್ ಕೊಠಡಿಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಸ್ನೇಹಿತರು ತಡ ರಾತ್ರಿ ಬಾಗಿಲು ಒಡೆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ.

"ಚಿಪ್ಸ್‌, ಬಿಸ್ಕೆಟ್‌ ತಿಂದೇ ಬದುಕುತ್ತಿದ್ದ"; ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟ ಸಾಕೇತ್‌ ಸಾವಿನ ಹಿಂದಿನ ರಹಸ್ಯವೇನು?

ಮಾಹಿತಿ ತಿಳಿದ ತಕ್ಷಣ ದುರ್ಗಾಪುರ ಠಾಣೆಯ ಪೊಲೀಸರು ಕಾಲೇಜು ಕ್ಯಾಂಪಸ್ ಗೆ ತೆರಳಿ ಹಾಸ್ಟೆಲ್ ಕೊಠಡಿಯಿಂದ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಲಾವಣ್ಯಳ ತಂದೆ ಅನಿಲ್ ಕುಮಾರ್, ಲಾವಣ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಮಗೆ ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಏನಾಗಿದೆ ಎಂಬುದನ್ನು ಕೂಡ ತಿಳಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಮಗಳು ಫೋನ್ ಎತ್ತದಿದ್ದಾಗ ನಾನು ಆಕೆಯ ಸ್ನೇಹಿತರನ್ನು ಸಂಪರ್ಕಿಸಿದೆ. ಅವರು ಬಾಗಿಲು ಒಡೆದು ನೋಡಿದಾಗ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಕೂಡಲೇ ಅವಳಿಗೆ ಏನಾಯಿತು ಎಂದು ತಿಳಿದುಕೊಳ್ಳಲು ಕಾಲೇಜು ಆಡಳಿತ ಮಂಡಳಿಯನ್ನು ಸಂಪರ್ಕಿಸಿದೆ. ಅವರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಕುಟುಂಬಗಳಿಂದ ದೂರ ವಾಸಿಸುವ ವಿದ್ಯಾರ್ಥಿಗಳ ಬಗ್ಗೆ ಸಂಸ್ಥೆಯ ಜವಾಬ್ದಾರಿ ಕುರಿತು ಪ್ರಶ್ನಿಸಿರುವ ಅವರು, ಹೊರಗಿನ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕಾಲೇಜಿನ ಮೇಲೆ ಅವಲಂಬಿತರಾಗಿದ್ದಾರೆ. ಅವರ ಸುರಕ್ಷತೆ ಮತ್ತು ಮಾನಸಿಕ ಯೋಗಕ್ಷೇಮ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಲಾವಣ್ಯ ಇತ್ತೀಚಿನ ಪರೀಕ್ಷಾ ಫಲಿತಾಂಶಗಳಿಂದ ಒತ್ತಡದಲ್ಲಿದ್ದಳು. ಲಿಖಿತ ಪರೀಕ್ಷೆಯಲ್ಲಿ ಸುಮಾರು 50 ಅಂಕ ಪಡೆದಿದ್ದ ಅವಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಕೇವಲ ಐದು ಅಂಕಗಳನ್ನು ಪಡೆದಿದ್ದಳು. ಪ್ರಾಯೋಗಿಕ ಅಂಕಗಳ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮುಂದಿನ ಪರೀಕ್ಷೆ ಮಾರ್ಚ್ 19ರಂದು ನಿಗದಿಯಾಗಿತ್ತು. ಶಿಕ್ಷಕರು ಅವಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ಆಕೆ ಮಾನಸಿಕ ಒತ್ತಡದಿಂದ ಬಳಲಿದ್ದಳು ಎಂದು ಅವರು ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಕೆಮಿಕಲ್ ಟ್ಯಾಂಕ್ ಸ್ಫೋಟ, ಇಬ್ಬರು ಕಾರ್ಮಿಕರು ಸಾವು

ಘಟನೆಯ ಕುರಿತು ಮಾಹಿತಿ ನೀಡಿರುವ ದುರ್ಗಾಪುರದ ಉಪ ಪೊಲೀಸ್ ಆಯುಕ್ತ (ಪೂರ್ವ) ಅಭಿಷೇಕ್ ಗುಪ್ತಾ, ಲಾವಣ್ಯ ಆತ್ಮಹತ್ಯೆ ಕುರಿತು ಪ್ರಕರಣ ದಾಖಲಿಸಲಾಗಿದೆ. ಕುಟುಂಬದವರ ಹೇಳಿಕೆಗಳನ್ನು ದಾಖಲಿಸಲಾಗುತ್ತದೆ. ವಿದ್ಯಾರ್ಥಿಯ ಸ್ನೇಹಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಘಟನೆಯ ಕುರಿತು ಆಸ್ಪತ್ರೆ ಆಡಳಿತದಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಕಾಲೇಜು ಆಡಳಿತ ಮಂಡಳಿಯು ಘಟನೆಯ ಬಗ್ಗೆ ಪೊಲೀಸರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ ಎನ್ನಲಾಗಿದೆ.