ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಿಂಗಳ ಹಿಂದೆ ನಡೆದ ತಂದೆ-ಮಗಳ ಸಾವಿನ ರಹಸ್ಯ ಈಗ ಬಯಲು; 6 ವರ್ಷದ ಬಾಲಕಿ ಮೇಲೆ 1 ವರ್ಷದಿಂದ ನಡೆದಿತ್ತು ಲೈಂಗಿಕ ದೌರ್ಜನ್ಯ

ಕೇರಳದ ಕೊಚ್ಚಿಯಲ್ಲಿ ಸುಮಾರು 1 ತಿಂಗಳ ಹಿಂದೆ ನಡೆದ 6 ವರ್ಷದ ಪುತ್ರಿ ಮತ್ತು ತಂದೆಯ ಕೊಲೆ, ಆತ್ಮಹತ್ಯೆ ಪ್ರಕರಣದ ರಹಸ್ಯ ಬಯಲಾಗಿದೆ. ಮೃತ ಬಾಲಕಿಯ ಮೇಲೆ 1 ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಿಂಗಳ ಹಿಂದೆ ನಡೆದ ತಂದೆ-ಮಗಳ ಸಾವಿನ ರಹಸ್ಯ ಈಗ ಬಯಲು

ಮೆಟಾ ಎಐ ಚಿತ್ರ ಮತ್ತು ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Feb 15, 2026 5:53 PM

ತಿರುವನಂತಪುರಂ, ಫೆ. 15: ಕೇರಳದ ಕೊಚ್ಚಿಯಲ್ಲಿ ಸುಮಾರು 1 ತಿಂಗಳ ಹಿಂದೆ ನಡೆದ 6 ವರ್ಷದ ಪುತ್ರಿ ಮತ್ತು ತಂದೆಯ ಕೊಲೆ, ಆತ್ಮಹತ್ಯೆ ಪ್ರಕರಣದ ರಹಸ್ಯ ಇದೀಗ ಒಂದೊಂದಾಗಿ ಹೊರ ಬೀಳುತ್ತಿದೆ. ಕೊಲೆ ನಡೆಯುವ ಮುನ್ನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎನ್ನುವ ಆಘಾತಕಾರಿ ವಿಚಾರ ಶವ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಜನವರಿಯಲ್ಲಿ ತಂದೆ-ಮಗಳ ಮೃತದೇಹ ಕೊಚ್ಚಿಯಲ್ಲಿನ ಅವರ ಬಾಡಿಗೆ ಮನೆಯಲ್ಲಿ ಕಂಡು ಬಂದಿತ್ತು. ಇದೀಗ ಈ ಪ್ರಕರಣದ ಹಿಂದಿನ ಕಾರಣ ಮತ್ತು ಶಾಕಿಂಗ್‌ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಶವ ಪರೀಕ್ಷೆಯ ವರದಿ ಈಗ ಪೊಲೀಸರ ಕೈ ಸೇರಿದ್ದು, ಅದರಲ್ಲಿ ಮೃತ 6 ವರ್ಷದ ಬಾಲಕಿಯ ಮೇಲೆ ಕಳೆದ 1 ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು ಎನ್ನುವುದು ಗೊತ್ತಾಗಿದೆ. ಇದೀಗ ಪೊಲೀಸರು ಪೋಸ್ಕೋ ಪ್ರಕರಣ ದಾಖಲಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆರಂಭದಲ್ಲೇ ಈ ಪ್ರಕರಣದ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು ಅಸಹಜ ಸಾವು ಎಂದೇ ಪರಿಗಣಿಸಿದ್ದರು.

ಜನವರಿ 16ರಂದು ಬಾಲಕಿಗೆ ವಿಷ ಉಣಿಸಿ ತಂದೆ ಆತ್ಮಹತ್ಯೆಗೆ ಶರಣಾಗಿದ್ದ. ಮಗುವಿನ ತಾಯಿ ದೌರ್ಜನ್ಯದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಆ ದಿನ ತನಗೂ ಮತ್ತು ಪತಿಗೂ ಹಣಕಾಸಿನ ವಿಚಾರದಲ್ಲಿ ಜಗಳವಾಗಿತ್ತು ಎಂದಿದ್ದಾರೆ.

ಮೈದುನನೊಂದಿಗೆ ಅಕ್ರಮ ಸಂಬಂಧ; ವಿಷಯ ತಿಳಿದ ಪತಿಯನ್ನೇ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತ್ನಿ

ಉದ್ಯೋಗ ಕಳೆದುಕೊಂಡಿದ್ದ

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಪತಿ ಕೆಲವು ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ಪತ್ನಿ ಕೊಚ್ಚಿಯ ಶಾಪಿಂಗ್‌ ಮಾಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ವಿಚಾರದಲ್ಲಿ ಪತಿ-ಪತ್ನಿಯರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ʼದಿ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ಸುದ್ದಿಸಂಸ್ಥೆ ವರದಿ ಮಾಡಿದೆ.

ಜನವರಿ 15ರಂದು ಕೆಲಸಕ್ಕೆ ತೆರಲಿದ್ದ ಪತ್ನಿಗೆ ಸಂದೇಶ ಕಳಿಸಿದ್ದ ಪತಿ, ʼʼನಾನು ಮಗಳೊಂದಿಗೆ ಹೋಗುತ್ತಿದ್ದೇನೆʼʼ ಎಂದು ತಿಳಿಸಿದ್ದ. ಸಂಜೆ ಹಿಂದಿರುಗಿದಾಗ ಮನೆಯ ಒಳಗಿನಿಂದ ಲಾಕ್‌ ಆಗಿರುವುದು ಕಂಡು ಬಂದಿತ್ತು. ತಂದೆ-ಮಗಳು ಹೊರ ಹೋಗಿರಬಹುದು ಎಂದು ಮಹಿಳೆ ಭಾವಿಸಿದ್ದರು.

ಪದೇ ಪದೆ ಕಾಲ್‌ ಮಾಡಿಯೂ ರಿಸೀವ್‌ ಮಾಡದಿದ್ದಾಗ ಆಕೆ ಸಂಬಂಧಿಕರ ಮನೆಗೆ ತೆರಳಿದರು. ಮಾರನೇ ದಿನ ಸಂಬಂಧಿಕರ ಸಹಾಯದಿಂದ ಮಹಿಳೆ ಮನೆ ಬಾಗಿಲು ಒಡೆದು ಒಳ ಪ್ರವೇಶಿಸಿದರು. ಈ ವೇಳೆ ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದರೆ, ಮಗಳು ಬೆಡ್‌ ಮೇಲೆ ಬಿದ್ದಿದ್ದಳು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಿ ಮೃತಪಟ್ಟಿದ್ದರು.

ನಿಲ್ಲಿಸಿದ್ದ ಕಾರೊಳಗೆ ಯುವ ಪ್ರೇಮಿಗಳ ಮೃತದೇಹ ಪತ್ತೆ: ನಿಗೂಢ ಸಾವಿಗೆ ಕಾರಣವೇನು?

ಸದ್ಯ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಂಬಂಧಿಕರು ಮತ್ತು ನೆರೆಮನೆಯವರ ಹೇಳಿಕೆ ದಾಖಲಿಸುತ್ತಿದ್ದಾರೆ. ಅಲ್ಲದೆ ಮಗು ಕಲಿತ ಶಾಲೆಯಲ್ಲಿಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ದಿನ ಅನುಮಾನಾಸ್ಪದವಾಗಿ ಯಾರಾದರೂ ಮನೆ ಬಳಿ ಬಂದಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದು ಯಾರು ಎನ್ನುವ ದೊಡ್ಡ ಪ್ರಶ್ನೆ ಎದುರಾಗಿದ್ದು, ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.