ಶಾಲೆ ಮುಗಿಸಿ ಬಂದ 5 ವರ್ಷದ ಪುತ್ರನಿಗೆ ಶಾಕ್: ಡೆತ್‌ನೋಟ್ ಬರೆದಿಟ್ಟು ಪ್ರತ್ಯೇಕ ಕೊಠಡಿಗಳಲ್ಲಿ ತಂದೆ-ತಾಯಿ ನೇಣಿಗೆ ಶರಣು
Rajasthan Shocker: ರಾಜಸ್ಥಾನದ ಧೋಲ್ಪುರದಲ್ಲಿ 37 ವರ್ಷದ ಬಲರಾಮ್ ಮೀನಾ ಹಾಗೂ ಅವರ 35 ವರ್ಷದ ಪತ್ನಿ ಸರೋಜ್ ಬಾಡಿಗೆ ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೂ ಮುನ್ನ ಬಲರಾಮ್ ಡೈರಿಯಲ್ಲಿ ಸಂದೇಶ ಬರೆದಿದ್ದು, ವಾಟ್ಸ್‌ಆ್ಯಪ್‌ನಲ್ಲಿ ‘ಅಂತಿಮ ಜೋಹಾರ್’ ಎಂಬ ಸ್ಟೇಟಸ್ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ತನಿಖೆ ನಡೆಸುತ್ತಿದೆ.
ಮೃತ ದಂಪತಿ (ಸಂಗ್ರಹ ಚಿತ್ರ) -
ಜೈಪುರ, ಸೆ. 28: ರಾಜಸ್ಥಾನದ ಧೋಲ್ಪುರ (Dholpur) ನಗರದಲ್ಲಿ 37 ವರ್ಷದ ವ್ಯಕ್ತಿ ಹಾಗೂ ಅವರ 35 ವರ್ಷದ ಪತ್ನಿ ಬಾಡಿಗೆ ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೋಮವಾರ (ಸೆಪ್ಟೆಂಬರ್ 28) ಈ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರನ್ನು ಕರೌಲಿ ಜಿಲ್ಲೆಯ ನಿವಾಸಿಗಳಾದ ಬಲರಾಮ್ ಮೀನಾ ಮತ್ತು ಅವರ ಪತ್ನಿ ಸರೋಜ್ ಎಂದು ಗುರುತಿಸಲಾಗಿದೆ. ಸುಮಾರು ಎರಡೂವರೆ ವರ್ಷಗಳಿಂದ ದಂಪತಿ ಧೋಲ್ಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬಲರಾಮ್ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ದಂಪತಿಯ 5 ವರ್ಷದ ಪುತ್ರ ಆರೂಷ್ ಹಾಗೂ ಬಲರಾಮ್ ಅವರ ಅಳಿಯ ಸಂಬಂಧಿ ಬೆಳಗ್ಗೆ ಶಾಲೆಗೆ ತೆರಳಿದ್ದರು. ಶಾಲೆಯಿಂದ ವಾಪಸ್ ಬಂದು ಮನೆಯ ಬಾಗಿಲು ತೆರೆದಾಗ, ಇಬ್ಬರೂ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೈರಿಯಲ್ಲಿ ಆತ್ಮಹತ್ಯೆ ಪತ್ರ
ಪೊಲೀಸರ ಪ್ರಕಾರ, ಬಲರಾಮ್ ಬರೆದಿದ್ದ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ದಂಪತಿ ಸೆಪ್ಟೆಂಬರ್ 26ರಂದು ಈ ಹೆಜ್ಜೆ ಇಡಲು ಯೋಚಿಸಿದ್ದರೂ ಮನೆಯಲ್ಲಿ ಮಕ್ಕಳನ್ನು ಕಂಡು ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಉಲ್ಲೇಖಿಸಲಾಗಿದೆ. ತಾವು ಜೀವನದಲ್ಲಿ ಬೇಸತ್ತಿರುವುದಾಗಿ ಹಾಗೂ ತಮ್ಮ ಸಹೋದರರು, ಪೋಷಕರು ಮತ್ತು ಪುತ್ರನಿಗೆ ಅಗತ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಿಂತಾಮಣಿ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ
ಡೈರಿಯಲ್ಲಿ ಹಣಕಾಸಿನ ವ್ಯವಹಾರಗಳ ವಿವರಗಳ ಜತೆಗೆ ಕುಟುಂಬಸ್ಥರು ಹಾಗೂ ಸ್ನೇಹಿತರಿಗಾಗಿ ಹಲವು ಸಂದೇಶಗಳೂ ಇದ್ದವು. ತಮ್ಮ ಪುತ್ರನನ್ನು ನೋಡಿಕೊಳ್ಳುವಂತೆ ಸ್ನೇಹಿತ ಪುಷ್ಪೇಂದ್ರ ಅವರಿಗೆ ಬಲರಾಮ್ ಮನವಿ ಮಾಡಿದ್ದರೆ, ತಾಯಿಯ ಬಳಿ ಕ್ಷಮೆಯನ್ನೂ ಕೋರಿದ್ದರು ಎನ್ನಲಾಗಿದೆ.
ಸಾವಿಗೂ ಮುನ್ನ ವಾಟ್ಸ್‌ಆ್ಯಪ್ ಸ್ಟೇಟಸ್
ಪೊಲೀಸರ ಮಾಹಿತಿ ಪ್ರಕಾರ, ಬಲರಾಮ್ ಮಧ್ಯಾಹ್ನ ಸುಮಾರು 12.59ಕ್ಕೆ ಮೂರು ವಾಟ್ಸ್‌ಆ್ಯಪ್ ಸ್ಟೇಟಸ್‌ಗಳನ್ನು ಹಾಕಿದ್ದರು. ಮೊದಲ ಎರಡು ಸ್ಟೇಟಸ್‌ಗಳಲ್ಲಿ ತಮ್ಮ ಹಾಗೂ ಪತ್ನಿಯ ಫೋಟೋಗಳಿದ್ದರೆ, ಕೊನೆಯ ಸ್ಟೇಟಸ್‌ನಲ್ಲಿ “ಅಂತಿಮ ಜೋಹಾರ್” ಎಂದು ಬರೆದಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 21ರಿಂದ ಬಲರಾಮ್ ಕೆಲಸಕ್ಕೂ ಗೈರಾಗಿದ್ದರು. ಈ ಅಂಶವನ್ನೂ ಪೊಲೀಸರು ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಶರ್ಮಾ ಹಾಗೂ ಸಿಟಿ ಸಿಒ ಪ್ರದೀಪ್ ನೆಹ್ರಾ ಸೇರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಫ್‌ಎಸ್‌ಎಲ್ ತಂಡವು ಬೆರಳಚ್ಚು ಸೇರಿ ವಿವಿಧ ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಂಬಂಧಿಕರು, ನೆರೆಹೊರೆಯವರು ಹಾಗೂ ಬಲರಾಮ್ ಅವರ ಸಹೋದ್ಯೋಗಿಗಳನ್ನು ವಿಚಾರಣೆ ನಡೆಸಿ ಸಾವಿನ ಹಿಂದಿನ ಪರಿಸ್ಥಿತಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.