ಆತ್ಮಹತ್ಯಾ ಬಾಂಬ್ ದಾಳಿ: 30 ಪಾಕಿಸ್ತಾನಿ ಅರೆಸೈನಿಕ ಸಿಬ್ಬಂದಿಯ ಹತ್ಯೆ ಎಂದ BLA
ಬಲೂಚಿಸ್ತಾನದ ಗ್ವಾದರ್ ಜಿಲ್ಲೆಯ ಪಾಕಿಸ್ತಾನಿ ಕರಾವಳಿ ಕಾವಲುಗಾರರ ಶಿಬಿರದ ಆತ್ಮಹತ್ಯಾ ಬಾಂಬ್ ದಾಳಿಯಾಗಿದ್ದು, ಇದರಲ್ಲಿ 30ಕ್ಕೂ ಹೆಚ್ಚು ಅರೆಸೈನಿಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿರುವುದಾಗಿ ಹೇಳಿದೆ. ಈ ದಾಳಿಯಲ್ಲಿ ಹಲವು ಜನರು ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ (Suicide Bomb attack) ಪಾಕಿಸ್ತಾನದ (Pakistan) 30ಕ್ಕೂ ಹೆಚ್ಚು ಅರೆಸೈನಿಕ ಸಿಬ್ಬಂದಿ (Pakistani Paramilitary Personnel) ಸಾವನ್ನಪ್ಪಿರುವ ಘಟನೆ ಬಲೂಚಿಸ್ತಾನದ ಗ್ವಾದರ್‌ನಲ್ಲಿ ನಡೆದಿದೆ. ಈ ದಾಳಿಯ ಹೊಣೆಯನ್ನು ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಹೊತ್ತುಕೊಂಡಿದೆ. ಗ್ವಾದರ್ ಜಿಲ್ಲೆಯ ಪಾಕಿಸ್ತಾನಿ ಕರಾವಳಿ ಕಾವಲುಗಾರರ ಶಿಬಿರದ ಮೇಲೆ ಸ್ಫೋಟಕಗಳನ್ನು ತುಂಬಿದ ವಾಹನದ ಮೂಲಕ ಬಲೂಚ್ ಲಿಬರೇಶನ್ ಆರ್ಮಿ ದಾಳಿ ನಡೆಸಿದ್ದು ಇದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯ ಕುರಿತು ಹೇಳಿಕೆ ನೀಡಿರುವ ಬಲೂಚ್ ಲಿಬರೇಶನ್ ಆರ್ಮಿ, ಜಿವಾನಿಯಲ್ಲಿರುವ ಪನ್ವಾನ್ ಕರಾವಳಿ ಕಾವಲುಗಾರರ ನೆಲೆಯ ಮೇಲೆ ಸ್ಫೋಟಕಗಳನ್ನು ತುಂಬಿದ ವಾಹನದ ಮೂಲಕ ದಾಳಿ ನಡೆಸಲಾಗಿದೆ. ಇದು ಸಂಘಟಿತ ಕಾರ್ಯಾಚರಣೆಯ ಭಾಗವಾಗಿದ್ದು, ಇದಕ್ಕಾಗಿ ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿರುವುದಾಗಿ ತಿಳಿಸಿದೆ.
700 ವರ್ಷದ ವಿಶ್ವದ ಅತ್ಯಂತ ಹಳೆಯ ಆಲದ ಮರ ಭಾರತದ ಈ ರಾಜ್ಯದಲ್ಲಿದೆ! ಏನಿದರ ವಿಶೇಷತೆ?
ಬಿಎಲ್‌ಎ ವಕ್ತಾರ ಜೀಯಂಡ್ ಬಲೂಚ್ ಅವರು ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದು, ದಾಳಿಯ ಪರಿಣಾಮದಿಂದ ಕರಾವಳಿ ಕಾವಲುಗಾರರ ಕೋಟೆಯ ವಸಾಹತುಶಾಹಿ ಶಿಬಿರ ಸಂಪೂರ್ಣ ಹಾನಿಗೀಡಾಗಿದೆ. ದಾಳಿಯ ವೇಳೆ ಸಂಘಟನೆಯ ಮುಂಚೂಣಿ ಘಟಕವಾದ ಫತೇಹ್ ಸ್ಕ್ವಾಡ್ ವೇಗವಾಗಿ ಮತ್ತು ಸಂಘಟಿತ ರೀತಿಯಲ್ಲಿ ಎಲ್ಲಾ ಕಡೆಯಿಂದಲೂ ದಾಳಿ ನಡೆಸಿತು ಎಂದು ಹೇಳಿದ್ದಾರೆ.
ಘಟನೆಯಲ್ಲಿ ಪಾಕಿಸ್ತಾನದ ಅರೆಸೈನಿಕ ಪಡೆಗಳ 30 ಕ್ಕೂ ಹೆಚ್ಚು ಸದಸ್ಯರು ಸಾವನ್ನಪ್ಪಿದರು. ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಹೇಳಿದೆ.
ಅವಶೇಷಗಳ ಅಡಿಯಲ್ಲಿ ಮೃತರು, ಗಾಯಗೊಂಡವರು ಸಿಲುಕಿರುವ ಸಾಧ್ಯತೆ ಇದೆ. ಇದರಿಂದ ಶತ್ರುಗಳ ಸಾವುನೋವುಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಕೋಸ್ಟ್ ಗಾರ್ಡ್‌ನ ನೆಲೆಯನ್ನು ಗುರಿಯಾಗಿಸಿಕೊಂಡ ಆತ್ಮಹತ್ಯಾ ಬಾಂಬ್ ದಾಳಿಯ ಬಳಿಕ ಸಶಸ್ತ್ರ ಬಿಎಲ್‌ಎ ಘಟಕಗಳು ಇನ್ನು ಹಲವು ಕಡೆಗಳಲ್ಲಿ ದಾಳಿಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಜಾಹೀರಾತು; ಮೆಟಾಗೆ ಕೇಂದ್ರದಿಂದ ಸಮನ್ಸ್ ಜಾರಿ
ದಾಳಿಯ 43 ಸೆಕೆಂಡುಗಳ ವೀಡಿಯೊವನ್ನು ಕೂಡ ಬಿಎಲ್‌ಎಯ ಮಾಧ್ಯಮ ವಿಭಾಗ ಹಕ್ಕಲ್ ಬಿಡುಗಡೆ ಮಾಡಿದೆ. ಇದರಲ್ಲಿ ಸ್ಫೋಟಕಗಳಿಂದ ತುಂಬಿದ ಟ್ರಕ್ ವೊಂದು ಸ್ಫೋಟಕ್ಕೆ ಕೆಲವೇ ಕ್ಷಣಗಳ ಮೊದಲು ಶಿಬಿರವನ್ನು ಪ್ರವೇಶಿಸುವುದನ್ನು ಕಾಣಬಹುದಾಗಿದೆ. ಇದರ ಬಳಿಕ ಭಾರಿ ಬೆಂಕಿ ಕಾಣಿಸಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ಕುರಿತು ಪಾಕಿಸ್ತಾನಿ ಅಧಿಕಾರಿಗ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.