Delhi's New CM: ದಿಲ್ಲಿಯಲ್ಲಿ ಹಿರಿತನಕ್ಕೆ ಮಣೆ ಹಾಕಿದ ಬಿಜೆಪಿ; ಯಾರು ಈ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ?
ದಿಲ್ಲಿ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಇದೀಗ ಬಿಜೆಪಿ ತನ್ನ ಮುಖ್ಯಮಂತ್ರಿ ಹೆಸರನ್ನು ಘೋಷಿಸಿದ್ದು, ಪಕ್ಷದ ಹಿರಿಯ ನಾಯಕಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ರೇಖಾ ಗುಪ್ತಾ ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ರೇಖಾ ಗುಪ್ತ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷವನ್ನು (Aam Aadmi Party) ಅಧಿಕಾರದಿಂದ ಕೆಳಗಿಳಿಸಿ ಬರೋಬ್ಬರಿ ಎರಡೂವರೆ ದಶಕಗಳ ಬಳಿಕ ಅಧಿಕಾರ ಗದ್ದುಗೆಯನ್ನೇರಿದ ಭಾರತೀಯ ಜನತಾ ಪಕ್ಷ (Bharatiya Janata Party) ಮುಖ್ಯಮಂತ್ರಿಯಾಗಿ ಹೊಸ ಮುಖಕ್ಕೆ ಮಣೆ ಹಾಕಿದ್ದು, ಮಹಿಳೆಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ಕೇಸರಿ ಪಕ್ಷದ ಹಿರಿಯ ನಾಯಕಿ ರೇಖಾ ಗುಪ್ತಾ (Rekha Gupta) ಅವರು ದಿಲ್ಲಿಯ (Delhi) ನೂತನ ಮುಖ್ಯಮಂತ್ರಿಯಾಗಿ ಫೆ. 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯ ಆಯ್ಕೆಗಾಗಿ ಪಕ್ಷದಿಂದ ನಿಯೋಜಿತರಾಗಿದ್ದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಓಂ ಪ್ರಕಾಶ್ ಧನ್ಕರ್ (Om Prakash Dhankar) ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ (Ravi Shankar Prasad) ಅವರು ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯ ವೀಕ್ಷಕರಾಗಿದ್ದರು.
ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ಪರಮೋಚ್ಛ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಸೋಲಿನ ರುಚಿ ತೊರಿಸಿದ್ದ ಯುವ ನಾಯಕ ಪರ್ವೇಶ್ ಕುಮಾರ್ ಅವರು ದಿಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಕೇಸರಿ ಪಕ್ಷದ ನಾಯಕರು ಮಹಿಳಾ ಅಭ್ಯರ್ಥಿಯ ಆಯ್ಕೆಗೆ ಒಲವು ತೋರಿದ ಕಾರಣ ಪಕ್ಷದ ಹಿರಿಯ ನಾಯಕಿ ರೇಖಾ ಗುಪ್ತ ಅವರಿಗೆ ಮುಖ್ಯಮಂತ್ರಿ ಗಾದಿ ಒಲಿದು ಬಂದಿದೆ.
ರೇಖಾ ಗುಪ್ತಾ ಯಾರು?
ವಿದ್ಯಾರ್ಥಿ ನಾಯಕಿಯಾಗಿ ಕೇಸರಿ ಪಾಳಯದೊಂದಿಗೆ ಗುರುತಿಸಿಕೊಂಡಿರುವ ರೇಖಾ ಗುಪ್ತಾ, ಸದ್ಯ ದಿಲ್ಲಿ ಬಿಜೆಪಿಯ ಜನರ್ ಸೆಕ್ರೆಟರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 50 ವರ್ಷದ ರೇಖಾ ಗುಪ್ತಾ ಈ ಹಿಂದೆ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ರೇಖಾ ಗುಪ್ತಾ ಅವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಶಾಲಿಮಾರ್ ಭಾಗ್ (ವಾಯುವ್ಯ) ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಗೊಂಡಿದ್ದರು. ಇವರು 68,200 ಮತಗಳನ್ನು ಪಡೆದು ವಿಜಯಿಯಾಗಿದ್ದರು.
ಇದನ್ನೂ ಓದಿ: Delhi's New CM: ದಿಲ್ಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ
ವೃತ್ತಿಯಲ್ಲಿ ವಕೀಲೆಯಾಗಿರುವ ರೇಖಾ ಗುಪ್ತಾ, 1996ರಿಂದ 1997ರವರೆಗೆ ದಿಲ್ಲಿ ವಿಶ್ವ ವಿದ್ಯಾನಿಲಯದ ಅಧ್ಯಕ್ಷೆಯಾಗುವ ಮೂಲಕ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಅವರು ಮುನ್ಸಿಪಲ್ ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು. ಉತ್ತರಿ ಪಿತಾಂಪುರ (ವಾರ್ಡ್ ಸಂಖ್ಯೆ 54)ರಲ್ಲಿ 2007ರಲ್ಲಿ ಸ್ಪರ್ಧಿಸಿ ಕೌನ್ಸಿಲರ್ ಆಗಿ ಆಯ್ಕೆಗೊಂಡಿದ್ದರು. 2012ರ ಮರು-ಚುನಾವಣೆಯಲ್ಲಿ ಇವರು ಮತ್ತೆ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದರು. ದಕ್ಷಿಣ ದಿಲ್ಲಿ ಮನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಆಗಿಯೂ ರೇಖಾ ಗುಪ್ತಾ ಅವರು ಸೇವೆ ಸಲ್ಲಿಸಿದ್ದರು.
ಗುಪ್ತಾ ಅವರ ರಾಜಕೀಯ ಅನುಭವವನ್ನು ಪರಿಗಣಿಸಿ ಬಿಜೆಪಿ ಈ ಬಾರಿ ಅವರನ್ನು ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ಈ ಹಿಂದೆ ಮೇಯರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಮತ್ತು ಬಿಜೆಪಿ ನೇತೃತ್ವದ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ರೇಖಾ ಗುಪ್ತ ಅವರ ಹಿರಿತನ ಮತ್ತು ರಾಜಕೀಯ ಅನುಭವವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಿರುವ ಬಿಜೆಪಿ ನಾಯಕತ್ವವು ಅವರಿಗೆ ಮುಖ್ಯಮಂತ್ರಿ ಹುದ್ದೆಯ ಮಹತ್ವದ ಜವಾಬ್ದಾರಿಯನ್ನು ನಿಡಿದೆ ಎನ್ನಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದ ಕಾರಣ ದಿಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆ ವಿಳಂಬಗೊಂಡಿತ್ತು. ದಿಲ್ಲಿ ಮುಖ್ಯಂತ್ರಿ ಮತ್ತು ಆರು ಜನ ಕ್ಯಾಬಿನೆಟ್ ಸಚಿವರ ಹೆಸರನ್ನು ಅಂತಿಮಗೊಳಿಸುವುದಕ್ಕೂ ಮೊದಲು ಪಕ್ಷದ ಕೇಂದ್ರ ನಾಯಕರು ಇಲ್ಲಿನ ರಾಜಕಿಯ ಪರಿಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿದ್ದಾರೆಂಬ ಮಾಹಿತಿಯೂ ಲಭ್ಯವಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿದ ಬಳಿಕ ರೇಖಾ ಗುಪ್ತಾ ಮತ್ತು ಅವರ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭ ಫೆ. 20ರಂದು ನಡೆಯಲಿದೆ. ಸುದೀರ್ಘ ಅವಧಿಯ ಬಳಿಕ ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆಯನ್ನೇರಿರುವ ಭಾರತಿಯ ಜನತಾ ಪಕ್ಷವು ಇಲ್ಲಿ ಸದೃಢ ಆಡಳಿತನವನ್ನು ನೀಡುವ ಉದ್ಧೇಶವನ್ನು ಹೊಂದಿದೆ.