#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election Result 2025: ಅಭಿವೃದ್ಧಿ ಗೆದ್ದಿದೆ; ದಿಲ್ಲಿಯ ಪ್ರಚಂಡ ಗೆಲುವಿಗೆ ಮತದಾರರಿಗೆ ಧನ್ಯವಾದ ಅರ್ಪಿಸಿದ ಮೋದಿ

ದಿಲ್ಲಿಯಲ್ಲಿ ಸುಮಾರು 27 ವರ್ಷಗಳ ಬಳಿಕ ಬಿಜೆಪಿ ಗದ್ದುಗೆ ಏರಿದ್ದು, ಹ್ಯಾಟ್ರಿಕ್‌ ಕನಸು ಕಾಣುತ್ತಿದ್ದ ಆಪ್‌ಗೆ ನಿರಾಸೆಯಾಗಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಂಡ ಗೆಲುವಿಗಾಗಿ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ದಿಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ.

Profile Ramesh B Feb 8, 2025 3:24 PM

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, 27 ವರ್ಷಗಳ ಬಳಿಕ ಬಿಜೆಪಿ (BJP) ಗದ್ದುಗೆಗೆ ಏರಿದೆ (Delhi Election Result 2025). ಹ್ಯಾಟ್ರಿಕ್‌ ಕನಸು ಕಂಡಿದ್ದ ಆಮ್‌ ಆದ್ಮಿ ಪಾರ್ಟಿಗೆ ತೀವ್ರ ನಿರಾಸೆಯಾಗಿದ್ದು, 3ನೇ ಬಾರಿಗೆ ಕಾಂಗ್ರೆಸ್‌ ನೆಲಕಚ್ಚಿದೆ. ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಐತಿಹಾಸಿಕ ಗೆಲವುಗೆ ಕಾರಣಕರ್ತರಾದ ದಿಲ್ಲಿಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ʼʼನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ದಿಲ್ಲಿಯ ಮತದಾರರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದ ತಿಳಿಸುತ್ತಿದ್ದೇನೆʼʼ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಪಕ್ಷ ರಾಷ್ಟ್ರ ರಾಜಧಾನಿಯ ಸರ್ವಾಂಗೀಣ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಮತ್ತು ನಿವಾಸಿಗಳ ಜೀವನವನ್ನು ಉತ್ತಮಗೊಳಿಸಲು ನಿರಂತರವಾಗಿ ಶ್ರಮಿಸುತ್ತದೆ ಎಂದು ಹೇಳಿದ್ದಾರೆ. ಇದರೊಂದಿಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ದಿಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.



ʼʼಈ ಬೃಹತ್ ಜನಾದೇಶಕ್ಕಾಗಿ ಹಗಲು-ರಾತ್ರಿ ಶ್ರಮಿಸಿದ ಎಲ್ಲ ಬಿಜೆಪಿ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆʼʼ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.



27 ವರ್ಷಗಳ ಬಳಿಕ ಅರಳಿದ ಕಮಲ

ಸದ್ಯದ ಮಾಹಿತಿ ಪ್ರಕಾರ ದಿಲ್ಲಿಯ ಒಟ್ಟು 70 ಕ್ಷೇತ್ರಗಳ ಪೈಕಿ ಬಿಜೆಪಿ 48 ಕಡೆ ಜಯ ಗಳಿಸಿದೆ. ಇನ್ನು ಆಮ್‌ ಆದ್ಮಿ ಪಾರ್ಟಿ 22 ಕ್ಷೇತ್ರಕ್ಕೆ ಸೀಮಿತವಾಗಿದ್ದು, ಕಾಂಗ್ರೆಸ್‌ ಖಾತೆ ತೆರಯುವಲ್ಲಿ ವಿಫಲವಾಗಿದೆ. ಇಲ್ಲಿ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 36. ಚುನಾವಣೋತ್ತರ ಸಮೀಕ್ಷೆಗಳೆಲ್ಲ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದೇ ಭವಿಷ್ಯ ನುಡಿದಿದ್ದವು. 2015ರಲ್ಲಿ 67 ಮತ್ತು 2020ರಲ್ಲಿ 62 ಕ್ಷೇತ್ರಗಳನ್ನು ಗೆದ್ದ ಆಪ್‌ ಈ ಬಾರಿ ಎಡವಿದೆ. ಇತ್ತ ಬಿಜೆಪಿ 3 (2015), 8 (2020) ಸ್ಥಾನಗಳಿಂದ ಬರೋಬ್ಬರಿ 48 ಸ್ಥಾನಕ್ಕೆ ಜಿಗಿದಿದೆ.

ಈ ಸುದ್ದಿಯನ್ನೂ ಓದಿ: Delhi Election Results 2025: ದಿಲ್ಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಬಿಜೆಪಿಯ ಪರ್ವೇಶ್‌ ವರ್ಮಾಗೆ ಜಯ; ಯಾರಿವರು? ಹಿನ್ನೆಲೆ ಏನು?

ಅರವಿಂದ್‌ ಕೇಜ್ರಿವಾಲ್‌ಗೆ ಸೋಲು

ಆಪ್‌ ನೆಲಕಚ್ಚುವ ಜತೆಗೆ ಘಟಾನುಘಟಿ ಅಭ್ಯರ್ಥಿಗಳು ಸೋತಿದ್ದಾರೆ. ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರಿಗೆ ಬಿಜೆಪಿ ಅಭ್ಯರ್ಥಿಗಳು ಸೋಲಿನ ರುಚಿ ತೋರಿಸಿದ್ದಾರೆ.

ಹೊಸದಿಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ ಸೋಲಿಸಿದ್ದಾರೆ. ಈ ಹಿಂದೆ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಪರ್ವೇಶ್‌ ವರ್ಮಾ ಅವರು ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಪರ್ವೇಶ್‌ ಅವರು ಜಾಟ್‌ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಇವರ ತಂದೆ ಸಾಹಿಬ್‌ ಸಿಂಗ್‌ ವರ್ಮಾ ಕೂಡ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದರು. ಅಲ್ಲದೆ ಇವರು ದಿಲ್ಲಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ದಿಲ್ಲಿ ಸಿಎಂ ಹುದ್ದೆಯ ರೇಸ್‌ನಲ್ಲಿ ಪರ್ವೇಶ್‌ ಅವರ ಹೆಸರೂ ಇದೆ.