#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Milkipur Bypoll Result 2025: ಅಯೋಧ್ಯೆ ಸೋಲಿಗೆ ಭರ್ಜರಿ ಸೇಡು ತೀರಿಸಿಕೊಂಡ ಬಿಜೆಪಿ; ಮಿಲ್ಕಿಪುರ ಉಪಚುನಾವಣೆಯಲ್ಲಿ ಜಯಭೇರಿ

ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಭರ್ಜರಿ ಜಯಗಳಿಸಿದೆ. ಆ ಮೂಲಕ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯನ್ನು ಒಳಗೊಂಡ ಫೈಝಾಬಾದ್‌ ಕ್ಷೇತ್ರದ ಸೋಲಿಗೆ ಸೇಡಿ ತೀರಿಸಿಕೊಂಡಿದೆ. ಬಿಜೆಪಿಯ ಚಂದ್ರಭಾನು ಪಾಸ್ವಾನ್‌ 61,710 ಮತಗಳ ಅಂತರದಿಂದ ಗೆದ್ದಿದ್ದಾರೆ.

ಮಿಲ್ಕಿಪುರ ಉಪಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ

ಯೋಗಿ ಆದಿತ್ಯನಾಥ್‌.

Profile Ramesh B Feb 8, 2025 5:56 PM

ಲಖನೌ: ಹೊಸದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಜತೆಗೆ ಶನಿವಾರ (ಫೆ. 8) ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರಿಸಲ್ಟ್‌ (Milkipur Bypoll Result 2025) ಕೂಡ ಹೊರ ಬಿದ್ದಿದ್ದು, ಬಿಜೆಪಿ (BJP) ಜಯ ಗಳಿಸಿದೆ. 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯನ್ನು ಒಳಗೊಂಡ ಫೈಝಾಬಾದ್‌ (Faizabad) ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಹೀಗಾಗಿ ಮಿಲ್ಕಿಪುರ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಈ ಕೇತ್ರದಲ್ಲಿ ಗೆದ್ದಿದ್ದ ಸಮಾಜವಾದಿ ಪಾರ್ಟಿ (SP)ಯ ಅವಧೇಶ್‌ ಪ್ರಸಾದ್‌ ಬಳಿಕ ರಾಜೀನಾಮೆ ನೀಡಿ ಫೈಝಾಬಾದ್‌ ಸಂಸದರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು.

ಮಿಲ್ಕಿಪುರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಎಸ್‌ಪಿ ಯೋಜನೆ ರೂಪಿಸಿದ್ದರೆ, ಫೈಝಾಬಾದ್‌ ಸೋಲಿಗೆ ಸೇಡು ತೀರಿಸಲು ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡಿತ್ತು. ಮತ ಎಣಿಕೆ ಪೂರ್ಣಗೊಂಡ ಬಳಿಕ ಬಿಜೆಪಿಯ ಚಂದ್ರಭಾನು ಪಾಸ್ವಾನ್‌ 1,46,397 ಮತ ಗಳಿಸಿ ಗೆಲುವಿನ ನಗೆ ಬೀರಿದರು. ಇತ್ತ ಎಸ್‌ಪಿ ಅಭ್ಯರ್ಥಿ, ಅವಧೇಶ್‌ ಪ್ರಸಾದ್‌ ಅವರ ಪುತ್ರ ಅಜಿತ್‌ ಪ್ರಸಾದ್‌ 84,687 ಮತ ಪಡೆದು 61,710 ವೋಟುಗಳ ಅಂತರದಿಂದ ಸೋಲೋಪ್ಪಿಕೊಂಡರು.



ಸೋಲಿಗೆ ಸೇಡು ತೀರಿಸಿಕೊಂಡ ಕಮಲ ಪಡೆ

2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ರಾಮ ಮಂದಿರ ಇರುವ ಫೈಝಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದೇ ಭಾವಿಸಲಾಗಿತ್ತು. ಅದರಲ್ಲಿಯೂ ಅದೇ ವರ್ಷ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ ನಡೆದಿದ್ದರಿಂದ ಕೇಸರಿ ಪಕ್ಷಕ್ಕೆ ಗೆಲುವು ಸುಲಭವಾಗಿ ದಕ್ಕಲಿದೆ ಎನ್ನುವ ಲೆಕ್ಕಾಚಾರವಿತ್ತು. ಆದರೆ ಬಿಜೆಪಿ 54,000 ಮತಗಳ ಅಂತರದಿಂದ ಎಸ್‌ಪಿ ಅಭ್ಯರ್ಥಿ ಅವಧೇಶ್‌ ಪ್ರಸಾದ್‌ ಎದುರು ಸೋಲಿಗೆ ಶರಣಾಗಿತ್ತು.

ಇದೇ ಕಾರಣಕ್ಕೆ ಮಿಲ್ಕಿಪುರ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಬದಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಮ್ಮ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಇದು ರಾಷ್ಟ್ರೀಯತೆ ಮತ್ತು ವಂಶಪಾರಂಪರ್ಯ ರಾಜಕಾರಣದ ನಡುವಿನ ಸ್ಪರ್ಧೆ ಎಂದೇ ಅವರು ಬಣ್ಣಿಸಿದ್ದರು. ಎಸ್‌ಪಿ ಅಪರಾಧಿಗಳ ಪಕ್ಷ ಎಂದಿದ್ದರು. ಅಯೋಧ್ಯೆ ಸೋಲಿಗೆ ಪ್ರತೀಕಾರ ತೀರಿಸುವಂತೆ ಅವರು ಮತದಾರರಿಗೆ ಕರೆ ನೀಡಿದ್ದರು. ಇತ್ತ ಎಸ್‌ಪಿ ಹಿಂದುಳಿದ ವರ್ಗ, ದಲಿತ ಸಮುದಾಯದ ಹೆಸರು ಹೇಳಿ ಮತ ಯಾಚಿಸಿತ್ತು.

ಈ ಸುದ್ದಿಯನ್ನೂ ಓದಿ: Swati Maliwal: ಕೇಜ್ರಿವಾಲ್‌ಗೆ ಸೋಲು: ದ್ರೌಪದಿ ವಸ್ತ್ರಾಪಹರಣದ ಪೋಸ್ಟ್‌ ಶೇರ್‌ ಮಾಡಿದ ಸ್ವಾತಿ ಮಲಿವಾಲ್!

ಈರೋಡ್‌ ಉಪಚುನಾವಣೆಯಲ್ಲಿ ಡಿಎಂಕೆಗೆ ಗೆಲುವು

ತಮಿಳುನಾಡಿನ ಈರೋಡ್‌ ವಿಧಾನಸಭೆಯ ಉಪಚುನಾವಣೆಯಲ್ಲಿ ಡಿಎಂಕೆ (DMK) ಜಯ ಗಳಿಸಿದೆ. ಆಡಳಿತರೂಢ ಡಿಎಂಕೆಯ ವಿ.ಸಿ.ಚಂದಿರಕುಮಾರ್‌ (VC Chandirakumar) ಗೆಲುವಿನ ನಗೆ ಬೀರಿದ್ದಾರೆ. ತಮಿಳು ನ್ಯಾಶನಲಿಸ್ಟ್‌ ಪಾರ್ಟಿ, ನಾಮ್‌ ತಮಿಜರ್‌ ಕಟ್ಚಿಯ ಎಂ.ಕೆ.ಸೀತಾಲಕ್ಷ್ಮೀ 2ನೇ ಸ್ಥಾನ ಪಡೆದಿದ್ದಾರೆ. ಎಐಎಡಿಎಂಕೆ ಮತ್ತು ಬಿಜೆಪಿ ಈ ಉಪಚುನಾವಣೆಯನ್ನು ಬಹಿಷ್ಕರಿಸಿದ್ದವು. ಹೀಗಾಗಿ ಇವು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಕಾಂಗ್ರೆಸ್‌ ಶಾಸಕರಾಗಿದ್ದ ಎಲನ್‌ಗೋವನ್‌ ನಿಧನ ಹೊಂದಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.