ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಯೋತ್ಪಾದಕ ಸಂಘಟನೆ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಪಾಕಿಸ್ತಾನದಲ್ಲಿ ನಿಗೂಢ ಸಾವು

Masood Azhar brother death: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢವಾಗಿ ಸತ್ತಿದ್ದಾನೆ. ಅನ್ವರ್‌ನ ಅಂತ್ಯಕ್ರಿಯೆಯನ್ನು ಪಾಕಿಸ್ತಾನದ ಬಹಾವಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ವಾಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ಉಗ್ರ ಮಸೂದ್ ಅಜರ್ ಸಹೋದರ ನಿಗೂಢ ಸಾವು

ಜೈಶ್ ಮುಖ್ಯಸ್ಥ ಮಸೂದ್ ಅಜರ್ (ಸಂಗ್ರಹ ಚಿತ್ರ) -

Priyanka P
Priyanka P Mar 31, 2026 2:04 PM

ಇಸ್ಲಾಮಾಬಾದ್, ಮಾ. 31: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammed) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ (Masood Azhar) ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಅನ್ವರ್‌ನ ಅಂತ್ಯಕ್ರಿಯೆಯನ್ನು ಪಾಕಿಸ್ತಾನದ ಬಹಾವಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ವಾಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ನಿಷೇಧಿತ ಉಗ್ರಗಾಮಿ ಸಂಘಟನೆ ಹೇಳಿದೆ. ಆದರೆ ಅವನ ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಅನ್ವರ್ ಮಸೂದ್ ಅಜರ್‌ನ ಐವರು ಸಹೋದರರಲ್ಲಿ ಮೊಹಮ್ಮದ್ ತಾಹಿರ್ ಅನ್ವರ್ ಒಬ್ಬನೆಂದು ಹೇಳಲಾಗಿದೆ. ಆತ ಜೈಶ್-ಎ-ಮೊಹಮ್ಮದ್ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಭಯೋತ್ಪಾದಕ ಸಂಘಟನೆಯ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಅಡಿಯಲ್ಲಿ ನಡೆಸಿದ ವಾಯುದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಮೃತಪಟ್ಟಿದ್ದಾರೆ ಎಂದು ಮಸೂದ್ ಅಜರ್ ಕಳೆದ ವರ್ಷ ಹೇಳಿಕೊಂಡಿದ್ದ.

ʼʼಒಂದಲ್ಲ, ಸಾವಿರ ಅಲ್ಲ, ಅದಕ್ಕೂ ಹೆಚ್ಚುʼʼ: ತನ್ನ ಬಳಿ ಇರುವ ಆತ್ಮಹತ್ಯಾ ಬಾಂಬರ್‌ಗಳ ಲೆಕ್ಕ ಹೇಳಿದ ಎಂದ ಉಗ್ರ ಮಸೂದ್ ಅಜರ್

1994ರಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟು ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣದ ನಂತರ ಬಿಡುಗಡೆಯಾದ ಅಜರ್ ಹೇಳಿಕೆಯ ಪ್ರಕಾರ, ಬಹಾವಲ್ಪುರದ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ನ ಜೆಇಎಂ ಪ್ರಧಾನ ಕಚೇರಿಯ ಮೇಲಿನ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಆತನ ಅಕ್ಕ, ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಸೊಸೆ ಮತ್ತು ಕುಟುಂಬದ ಐದು ಮಕ್ಕಳು ಸೇರಿದ್ದರು.

ʼʼಐದು ಮಂದಿ ಮಕ್ಕಳು, ನನ್ನ ಹಿರಿಯ ಸಹೋದರಿ ಮತ್ತು ಅವಳ ಪತಿ, ನನ್ನ ಸೋದರಳಿಯ ಫಾಜಿಲ್ ಭಾಂಜೆ ಮತ್ತು ಅವನ ಪತ್ನಿ ಹಾಗೂ ನನ್ನ ಸೊಸೆ ಫಾಜಿಲಾ, ನನ್ನ ಪ್ರಿಯ ಸಹೋದರ ಹುಜೈಫಾ ಮತ್ತು ಆತನ ತಾಯಿ, ಇನ್ನೂ ಇಬ್ಬರು ಆತ್ಮೀಯ ಸ್ನೇಹಿತರು ಹತ್ಯೆಯಾಗಿದ್ದು, ಅಲ್ಲಾಹನ ಅತಿಥಿಗಳಾಗಿದ್ದಾರೆʼʼ ಎಂದು ಹೇಳಿದ್ದ.

ಇದಕ್ಕೆ ವಿಷಾದವೂ ಇಲ್ಲ, ಹತಾಶೆಯೂ ಇಲ್ಲ ಎಂದಿದ್ದ. ಬದಲಿಗೆ, ʼʼನಾನು ಕೂಡ ಈ ಹದಿನಾಲ್ಕು ಸದಸ್ಯರ ಸಂತೋಷದ ಕಾರವಾನ್‌ಗೆ ಸೇರುತ್ತಿದ್ದೆ ಎಂದು ಮತ್ತೆ ಮತ್ತೆ ನನ್ನ ಮನಸ್ಸಿಗೆ ಬರುತ್ತದೆʼʼ ಎಂದು ಅವನು ಹೇಳಿದ್ದ. ʼʼಅವರು ಹೊರಡುವ ಸಮಯ ಬಂದಿತ್ತು, ಆದರೆ ಅವರನ್ನು ಕೊಂದಿದ್ದು ಭಗವಂತನಲ್ಲʼʼ ಎಂದು ಭಯೋತ್ಪಾದಕ ಹೇಳಿದ್ದ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತು ಮಾಡಲಾದ ಮಸೂದ್ ಅಜರ್, 2001ರ ಸಂಸತ್ತಿನ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್‌ಕೋಟ್ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದ.