GKVK: ಪ್ರತಿ ರೈತರಿಗೆ 5 ಸಾವಿರ ರು. ಪರಿಹಾರ, 37.5 ಲಕ್ಷ ರೈತರಿಂದ ಬೆಳೆ ವಿಮೆ ನೋಂದಣಿ: ನರೇಂದ್ರಸ್ವಾಮಿ
ರೈತರ ಅಭಿವೃದ್ಧಿಯೇ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಅಡಿಪಾಯ. ಕೃಷಿ ಕೇವಲ ಉದ್ಯೋಗವಲ್ಲ, ಅದು ನಮ್ಮ ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಆರ್ಥಿಕತೆಯ ಜೀವನಾಡಿಯಾಗಿದೆ ಎಂದರು. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ೨೪೦ ತಾಲೂಕುಗಳ ಪೈಕಿ 226 ತಾಲೂಕು ಬರಪೀಡಿತವಾಗಿವೆ
-
ಬೆಂಗಳೂರು: ಕೃಷಿ ಮೇಳ(Krishi Mela) ಕೇವಲ ಹೊಸ ಯಂತ್ರೋಪಕರಣಗಳು ಮತ್ತು ಕೃಷಿ ಉತ್ಪನ್ನಗಳ ಪ್ರದರ್ಶನಕ್ಕೆ ಸೀಮಿತವಾಗದೆ, ರೈತರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸುವ ವೇದಿಕೆಯಾಗಬೇಕು ಎಂದು ಕೃಷಿ ಸಚಿವ ನರೇಂದ್ರ ಸ್ವಾಮಿ(Narendra swamy) ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಜಿಕೆವಿಕೆ(GKVK)ಯಲ್ಲಿ ಆಯೋಜಿಸಿರುವ 2026ನೇ ಸಾಲಿನ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಅಭಿವೃದ್ಧಿಯೇ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಅಡಿಪಾಯ. ಕೃಷಿ ಕೇವಲ ಉದ್ಯೋಗವಲ್ಲ, ಅದು ನಮ್ಮ ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಆರ್ಥಿಕತೆಯ ಜೀವನಾಡಿಯಾಗಿದೆ ಎಂದರು. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ೨೪೦ ತಾಲೂಕುಗಳ ಪೈಕಿ 226 ತಾಲೂಕು ಬರಪೀಡಿತವಾಗಿವೆ.
ಸುಮಾರು ಶೇ.90ರಷ್ಟು ಬೆಳೆ ಹಾನಿಯಾಗಿದ್ದು, ಹಲವು ಪ್ರದೇಶಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳೂ ಒಣಗಿವೆ. ಈ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರಕಾರ, ಕೇಂದ್ರದ ನೆರವಿಗಾಗಿ ಕಾಯದೆ ಪ್ರತಿ ರೈತರಿಗೆ ತಕ್ಷಣದ ಪರಿಹಾರವಾಗಿ 5 ಸಾವಿರ ರು. ನೀಡಲು ನಿರ್ಧರಿಸಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ 37.5 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿ ಕೊಂಡಿರುವುದು ದಾಖಲೆಯಾಗಿದೆ ಎಂದರು.
ಕೃಷಿಗೆ ತಂತ್ರಜ್ಞಾನದ ಸ್ಪರ್ಶ: ರೈತ ಚೈತನ್ಯ ಯೋಜನೆಯಡಿ ರೈತರ ಜಮೀನಿನ ಮಣ್ಣಿನ ಗುಣಮಟ್ಟ, ಬೆಳೆಗಳಿಗೆ ತಗಲುವ ರೋಗಗಳ ಮುನ್ಸೂಚನೆ ಹಾಗೂ ಅವುಗಳ ನಿಯಂತ್ರಣಕ್ಕೆ ಅಗತ್ಯವಾದ ಔಷಧಗಳ ಮಾಹಿತಿ ಮೊಬೈಲ್ ಆಪ್ ಮೂಲಕ ಒದಗಿಸುವ ವ್ಯವಸ್ಥೆ ರೂಪಿಸಲಾಗಿದೆ. ರೋಗ ಕಾಣಿಸಿಕೊಂಡ ನಂತರ ಚಿಕಿತ್ಸೆ ನೀಡುವ ಬದಲು ಮುನ್ನೆಚ್ಚರಿಕೆ ಮೂಲಕ ಬೆಳೆ ನಷ್ಟ ತಡೆಯುವುದು ಯೋಜನೆಯ ಉದ್ದೇಶವಾಗಿದೆ. ರೈತರು ಡ್ರೋನ್, ಕೃತಕ ಬುದ್ಧಿಮತ್ತೆ, ಡಿಜಿಟಲ್ ಕೃಷಿ, ಇ-ಮಾರುಕಟ್ಟೆ ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಳ್ಳಬೇಕು. ಮಹಿಳಾ ರೈತರಿಗೆ ತರಬೇತಿ, ಸಾಲ ಸೌಲಭ್ಯ, ಮಾರುಕಟ್ಟೆ ಅವಕಾಶ ಮತ್ತು ಆಧುನಿಕ ತಂತ್ರಜ್ಞಾನ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಯುವಕರು ಹಾಗೂ ಮಹಿಳೆಯರು ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಾಗ ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ ಎಂದರು.
ನೇಗಿಲ ಯೋಗಿ ಯೋಜನೆ ಶೀಘ್ರ ಜಾರಿ: ಸಣ್ಣ ರೈತರು ಕೃಷಿ ಆರಂಭಿಸುವ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಹಿಂದೆ ಸರಿಯಬಾರದು ಎಂಬ ಉದ್ದೇಶದಿಂದ ಸರಕಾರ ನೇಗಿಲ ಯೋಗಿ ಯೋಜನೆಯನ್ನು ಶೀಘ್ರದ ಜಾರಿಗೊಳಿಸಲಿದೆ. ಮುಖ್ಯಮಂತ್ರಿ ಅವರ ಸಮಯಾವಕಾಶ ಪಡೆದು ಯೋಜನೆ ಲೋಕಾರ್ಪಣೆ ಮಾಡಲಾಗುವುದು. ಆಪ್ ಮೂಲಕ ರೈತರ ಬೇಡಿಕೆಗೆ ಅನುಗುಣವಾಗಿ ಉಳುಮೆ, ಬಿತ್ತನೆ ಮತ್ತು ಕಟಾವಿಗೆ ಸರಕಾರವೇ ಸಹಕಾರ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮಾತನಾಡಿ, ಬೆಳೆ ವಿಮೆ ಕಟ್ಟಿಸಿಕೊಳ್ಳುವಾಗ ತ್ವರಿತವಾಗಿ ಕ್ರಮ ಕೈಗೊಳ್ಳುವ ವಿಮಾ ಕಂಪನಿಗಳು, ರೈತರಿಗೆ ಬೆಳೆ ನಷ್ಟವಾದಾಗ ಪರಿಹಾರ ನೀಡುವ ಸಂದರ್ಭದಲ್ಲಿ ವಿಳಂಬ ಮಾಡುತ್ತಿವೆ. ಬರ ಮತ್ತು ನೆರೆ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನ್ಯಾಯಯುತ ವಾಗಿ ಬೆಳೆ ವಿಮೆ ತಲುಪಿಸಲು ವಿಮಾ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.
ಕರ್ನಾಟಕದಲ್ಲಿ 220ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ವಿಮಾ ಕಂಪನಿಗಳು ಲಾಭದ ದೃಷ್ಟಿಯಿಂದ ಮಾತ್ರ ಯೋಚಿಸದೆ ರೈತರ ನೆರವಿಗೆ ಧಾವಿಸಬೇಕು. ಬೆಳೆ ವಿಮೆ ಪಾವತಿಸುವ ರೈತರಿಗೆ ಬೆಳೆ ನಷ್ಟವಾದಾಗ ಸಕಾಲದಲ್ಲಿ ಪರಿಹಾರ ದೊರೆಯಬೇಕು. ಈ ಸಂಬಂಧ ವಿಮಾ ಕಂಪನಿಗಳ ಪ್ರತಿನಿಽ ಕರೆದು ಚರ್ಚಿಸಿ, ರೈತರ ದೂರುಗಳಿಗೆ ಸ್ಪಂದಿಸುವಂತೆ ಕೃಷಿ ಇಲಾಖೆಯ ಕಾರ್ಯದರ್ಶಿ ತಿಲಕ್ ಚಂದ್ರ ಅವರಿಗೆ ಮನವಿ ಮಾಡಿದರು.
ಮೌಲ್ಯವರ್ಧನೆಗೆ ಆದ್ಯತೆ ಅಗತ್ಯ: ಕೃಷಿ ಕೇವಲ ಆಹಾರ ಉತ್ಪಾದನೆಗೆ ಸೀಮಿತವಾಗಬಾರದು. ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸಬೇಕು. ಎಪಿಎಂಸಿ ಮಾರುಕಟ್ಟೆಗಳಲ್ಲಿ ತರಕಾರಿ, ಧಾನ್ಯಗಳು ಹಾಗೂ ಹಣ್ಣುಗಳು ಹಾಳಾಗಿ ಅಪಾರ ಪ್ರಮಾಣದ ಆಹಾರ ವ್ಯರ್ಥವಾಗುತ್ತಿದೆ. ಹೊಲದಿಂದ ನೇರವಾಗಿ ಮಾರುಕಟ್ಟೆ ಹಾಗೂ ಗ್ರಾಹಕರ ತಟ್ಟೆಗೆ ಉತ್ಪನ್ನಗಳು ತಲುಪುವ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಆಹಾರ ಸಂಸ್ಕರಣಾ ಘಟಕ ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ರಾಜ್ಯಮಟ್ಟದ ಕೃಷಿ ಪ್ರಶಸ್ತಿಗೆ 6 ರೈತರು ಆಯ್ಕೆ
ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಪೂರ್ಣಚಂದ್ರ, ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಗೆ ನರಸಿಂಹನಹಳ್ಳಿಯ ಬಿ.ಶ್ರೀಕಾಂತ್, ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗೆ ಎಚ್.ಪಿ.ರೂಪಾ, ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಗೆ ಸಿ.ಆರ್.ರಾಧಾಕೃಷ್ಣ ಹಾಗೂ ಅತ್ಯುತ್ತಮ ರೈತ ಪ್ರಶಸ್ತಿಗೆ ಟಿ.ಎನ್. ಯೋಗಾ ನಂದಮೂರ್ತಿ ಆಯ್ಕೆಯಾಗಿದ್ದಾರೆ. ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಡಾ.ಸಿ.ರಾಮಚಂದ್ರ ಆಯ್ಕೆಯಾಗಿದ್ದಾರೆ. ಇದಲ್ಲದೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಗಳ ಪ್ರಗತಿಪರ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗಳಿಗೆ ತಲಾ ಇಬ್ಬರು ಮತ್ತು ಯುವ ರೈತ ಹಾಗೂ ಯುವ ರೈತ ಮಹಿಳೆ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಯುವ ರೈತ ವಿಭಾಗದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವಿವಿಧ ತಾಲೂಕುಗಳ ಎಂಟು ಮಂದಿ ಆಯ್ಕೆಯಾಗಿದ್ದಾರೆ.
ಕೃಷಿ ಮೇಳದಲ್ಲಿ ಪ್ಲಾಸ್ಟಿಕ್ ಬಳಕೆ: 4 ಸಾವಿರ ರು. ದಂಡ ಜಿಕೆವಿಕೆ ಆವರಣದಲ್ಲಿ ನಡೆಯು ತ್ತಿರುವ ಕೃಷಿ ಮೇಳ-2026ರಲ್ಲಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಹಾಗೂ ಎಂದರಲ್ಲಿ ಕಸ ಎಸೆಯುವ ಮೂಲಕ ಸ್ವಚ್ಛತಾ ನಿಯಮ ಉಲ್ಲಂಘಿಸಿದ ಮಳಿಗೆಗಳಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಒಟ್ಟು 4 ಸಾವಿರ ರು. ದಂಡ ವಿಧಿಸಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಬ್ಯಾಟರಾಯನಪುರ ವಿಭಾಗದ ಕಿರಿಯ ಆರೋಗ್ಯ ನಿರೀಕ್ಷಕರು ಮತ್ತು ಮಾರ್ಷಲ್ ಮೇಳದ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಹಾಗೂ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಮಳಿಗೆದಾರರಿಗೆ ಜಾಗೃತಿ ಮೂಡಿಸಿ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ದರು. ಇದೇ ವೇಳೆ ಕೃಷಿ ಮೇಳವನ್ನು ಶೂನ್ಯ ತ್ಯಾಜ್ಯ ಕಾರ್ಯಕ್ರಮವನ್ನಾಗಿ ಆಯೋಜಿಸುವಂತೆ ಸಂಬಂಧಪಟ್ಟ ಆಯೋಜಕರಿಗೆ ಪಾಲಿಕೆ ನೋಟಿಸ್ ನೀಡಿದೆ.
ಮೂರು ಹೊಸ ತಳಿಗಳ ಪರಿಚಯ
ಕೃಷಿ ಮೇಳದಲ್ಲಿ ಬರ ಪರಿಸ್ಥಿತಿ ಎದುರಿಸಲು ಅನುಕೂಲವಾಗುವ ಮೂರು ಹೊಸ ಬೆಳೆ ತಳಿಗಳನ್ನು ಪರಿಚಯಿಸಲಾಗಿದೆ. ಜಿಪಿಯು- 101 ಕಡಿಮೆ ನೀರಿನಲ್ಲೂ ಬೆಳೆಯಬಹುದಾದ ಮಧ್ಯಮಾವಧಿಯ ಬರ ಸಹಿಷ್ಣು ರಾಗಿ ತಳಿಯಾಗಿದೆ. ಕೆಬಿಜಿಎ-18 ಉತ್ತಮ ಪ್ರೋಟೀನ್ ಅಂಶ ಮತ್ತು ಇಳುವರಿ ಸಾಮರ್ಥ್ಯ ಹೊಂದಿರುವ ದಂಟಿನ ತಳಿಯಾಗಿದೆ. ಎಂಎಎಚ್-2045 ಹೈಬ್ರಿಡ್ ಮುಸಿಕಿನಜೋಳ ತಳಿಯು ಉತ್ತಮ ಇಳುವರಿ ಹಾಗೂ ಮೇವು ಉತ್ಪಾದನೆಗೆ ಅನುಕೂಲಕರವಾಗಿದೆ. ಈ ತಳಿಗಳ ಗುಣಲಕ್ಷಣಗಳು, ಬಿತ್ತನೆ ವಿಧಾನ ಮತ್ತು ನಿರ್ವಹಣೆ ಕುರಿತು ರೈತರಿಗೆ ತರಬೇತಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ ಎಂದು ಸಚಿವ ನರೇಂದ್ರ ಸ್ವಾಮಿ ತಿಳಿಸಿದರು.
ಕಿಸಾನ್ ಸಮ್ಮಾನ್ಗೆ ರಾಜ್ಯದ ನೆರವು ನೀಡಲು ಮನವಿ
ಕೇಂದ್ರ ಸರಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6000 ರು. ನೀಡಲಾಗುತ್ತಿದೆ. ರಾಜ್ಯ ಸರಕಾರ ಇದಕ್ಕೆ ಹೆಚ್ಚುವರಿಯಾಗಿ 4000 ರು. ಸೇರಿಸಿ ನೀಡಿದರೆ ರೈತರಿಗೆ ಹೆಚ್ಚಿನ ಅನುಕೂಲ ವಾಗಲಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಈ ನೆರವನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಸರಕಾರ ಗಮನಹರಿಸಬೇಕು ಎಂದು ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.*
![]()
ದೇಶಾದ್ಯಂತ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ 1500ಕ್ಕೂ ಹೆಚ್ಚು ಹೊಸ ತಳಿಗಳು ಬಿಡುಗಡೆ ಯಾಗಿದ್ದು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು.
- ಶೋಭಾ ಕರಂದ್ಲಾಜೆ, ಕೇಂದ್ರ ರಾಜ್ಯ ಸಚಿವೆ
![]()
ರೈತರಿಗೆ ಉತ್ತಮ ಇಳುವರಿ ದೊರೆತರೆ ಸಾಲದು, ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯೂ ಸಿಗಬೇಕು. ರೈತ ಉತ್ಪಾದಕ ಸಂಸ್ಥೆ ಬಲಪಡಿಸಿ, ಕೃಷಿ ಉತ್ಪನ್ನಗಳ ಸಂಗ್ರಹಣೆ, ಆಹಾರ ಸಂಸ್ಕರಣೆ, ಶೀತಲ ಗೋದಾಮು ಹಾಗೂ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು. ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡಿ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಅಗತ್ಯ.
- ನರೇಂದ್ರ ಸ್ವಾಮಿ, ಕೃಷಿ ಸಚಿವ