Donald Trump: ಪ್ರಧಾನಿ ಮೋದಿ ಬಗ್ಗೆ ಗೌರವವಿದೆ... ಆದರೆ 21 ಮಿಲಿಯನ್ ಡಾಲರ್ ಏಕೆ ಕೊಡುತ್ತಿದ್ದೇವೆ? ಟ್ರಂಪ್ ಪ್ರಶ್ನೆ
ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯು ಭಾರತದ ಚುನಾವಣೆ ಸಲುವಾಗಿ 21 ಮಿಲಿಯನ್ ಡಾಲರ್ ಅನುದಾನ ಸೇರಿದಂತೆ ವಿದೇಶಿ ನೆರವು ನಿಧಿ ಕಡಿತಗೊಳಿಸಿರುವುದರ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಸುಂಕಗಳನ್ನು ಗಮನಿಸಿದರೆ ಆರ್ಥಿಕ ನೆರವಿನ ಅಗತ್ಯವಿಲ್ಲ ಎಂದೆನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೋದಿ ಜೊತೆ ಟ್ರಂಪ್

ವಾಷಿಂಗ್ಟನ್: ಈ ವಾರದ ಆರಂಭದಲ್ಲಿ, ಎಲಾನ್ ಮಸ್ಕ್ (Elon Musk) ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆಯು ಭಾರತದ ಚುನಾವಣೆ ಸಲುವಾಗಿ 21 ಮಿಲಿಯನ್ ಡಾಲರ್ ಅನುದಾನ ಸೇರಿದಂತೆ ವಿದೇಶಿ ನೆರವು ನಿಧಿಯಲ್ಲಿ 723 ಡಾಲರ್ ಮಿಲಿಯನ್ ಕಡಿತಗೊಳಿಸಿರುವುದಾಗಿ ಘೋಷಿಸಿತ್ತು. ಇದೀಗ ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಸುಂಕಗಳನ್ನು ಗಮನಿಸಿದರೆ ಆರ್ಥಿಕ ನೆರವಿನ ಅಗತ್ಯವಿಲ್ಲ ಎಂದೆನಿಸುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಟ್ರಂಪ್ ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತೇವೆ. ಅವರ ಬಳಿ ಹೆಚ್ಚು ಹಣವಿದೆ. ಅವರು ನಮ್ಮ ವಿಷಯದಲ್ಲಿ ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ; ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಾವು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ನನಗೆ ಭಾರತ ಮತ್ತು ಅವರ ಪ್ರಧಾನ ಮಂತ್ರಿಯ ಬಗ್ಗೆ ತುಂಬಾ ಗೌರವವಿದೆ, ಆದರೆ ಮತದಾನ ಹೆಚ್ಚಳಕ್ಕೆ ಯಾಕೆ ಅನುದಾನವನ್ನು ನೀಡಬೇಕು? ಎಂದು ಪ್ರಶ್ನಿಸಿದರು. ಮಾರ್-ಎ-ಲಾಗೊದಲ್ಲಿ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ ನಂತರ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ.
Terming $21 by USAID for voter turnout in India as 'fraud', Trump says,'Why are we giving $21 million to India? They have a lot more money'; Points to high tariffs but says he has a "lot of respect for India and their PM..." pic.twitter.com/jWk4RtD3hw
— Sidhant Sibal (@sidhant) February 19, 2025
ಸರ್ಕಾರಿ ವೆಚ್ಚವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸರಿಯಾದ ರೀತಿಯಲ್ಲಿ ವಿನಿಯೋಗಿಸಲು DOGE, 723 ಮಿಲಿಯನ್ ಡಾಲರ್ ವಿದೇಶಿ ನೆರವು ನಿಧಿಯನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಭಾನುವಾರ ತಿಳಿಸಿತ್ತು.ಈ ನಿಧಿಯಲ್ಲಿ ಭಾರತಕ್ಕೆ 21 ಮಿಲಿಯನ್ ಡಾಲರ್ ಅನುದಾನ ಮತ್ತು ಬಾಂಗ್ಲಾದೇಶ ಕ್ಕೇ ನೀಡುವ 29 ಮಿಲಿಯನ್ ಡಾಲರ್ ಅನುದಾನ ಕೂಡ ಸೇರಿದೆ. ರದ್ದಾದ ಎಲ್ಲಾ ವೆಚ್ಚಗಳು ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದು DOGE ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಅವರು, ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಆ ಮೂಲಕ ಚುನಾವಣಾ ಆಯೋಗದ ಆಯುಕ್ತರಾಗಿದ್ದಾಗ ಭಾರತದಲ್ಲಿ ಮತದಾನವನ್ನು ಹೆಚ್ಚಿಸಲು ಅಮೆರಿಕದ ಏಜೆನ್ಸಿಯ ನಿಧಿಯನ್ನು ಬಳಸಲಾಗಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Modi-Trump Meet: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರದಲ್ಲಿ ಮುಂದುವರಿಯಲು ಮೋದಿ-ಟ್ರಂಪ್ ಸಮ್ಮತಿ
ನಾನು ಸಿಇಸಿ ಆಗಿದ್ದಾಗ 2012 ರಲ್ಲಿ ಭಾರತದಲ್ಲಿ ಮತದಾರರ ಪ್ರಮಾಣವನ್ನು ಹೆಚ್ಚಿಸಲು ಅಮೆರಿಕದ ಏಜೆನ್ಸಿಯಿಂದ ಕೆಲವು ಮಿಲಿಯನ್ ಡಾಲರ್‌ಗಳ ನಿಧಿಯನ್ನು ಪಡೆಯುವ ಬಗ್ಗೆ ಚುನಾವಣಾ ಆಯೋಗ ಮಾಡಿಕೊಂಡ ಒಪ್ಪಂದದ ಬಗ್ಗೆ ಕೆಲವು ಕಡೆ ವರದಿಯಾಗುತ್ತಿವೆ. ಆದರೆ ಇದು ಸತ್ಯಕ್ಕೆ ದೂರದವಾದ ಮಾತು. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ.