2020ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಲಿದ್ದಾರೆ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. 2020ರ ಬಳಿಕ ಡೊನಾಲ್ಡ್ ಟ್ರಂಪ್ ಅವರ ಮೊದಲ ಭಾರತ ಭೇಟಿ ಇದಾಗಲಿದೆ ಎಂದು ಶುಕ್ರವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ. ಫ್ರಾನ್ಸ್ ನಲ್ಲಿ ನಡೆದ ಜಿ 7 ಶೃಂಗಸಭೆಯ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಭಾರತ ಪ್ರವಾಸ (India tour) ಮಾಡಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (US secretary of state Marco Rubio) ತಿಳಿಸಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಜಿ 7 ಶೃಂಗಸಭೆಯ (France G7 summit) ಬಳಿಕ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2020ರ ಬಳಿಕ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಫ್ರಾನ್ಸ್‌ನಲ್ಲಿ ನಡೆದ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ತಿಳಿಸಿದ ಮಾರ್ಕೊ ರುಬಿಯೊ, 2026 ರ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸಿದ್ದೇವೆ. ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಆಶಿಸುತ್ತಿದ್ದೇವೆ. ಅದನ್ನು ಶೀಘ್ರದಲ್ಲೇ ಪೂರ್ಣಗೊಳಿಸುವುದನ್ನು ಎದುರು ನೋಡುತ್ತಿದ್ದೇವೆ. ವ್ಯಾಪಾರ ಒಪ್ಪಂದದ ನಿಟ್ಟಿನಲ್ಲಿ ಇದು ತುಂಬಾ ಸಕಾರಾತ್ಮಕ ಬೆಳವಣಿಗೆಯಾಗಿದೆ. ಶೀಘ್ರದಲ್ಲೇ ಮತ್ತೊಂದು ಕ್ವಾಡ್ ಸಭೆಯಲ್ಲಿ ಮತ್ತೆ ಭಾಗವಹಿಸಲು ಎದುರು ನೋಡುತ್ತಿದ್ದೇವೆ. ವರ್ಷಾಂತ್ಯದ ಮೊದಲು ನಾನು ಭಾರತಕ್ಕೆ ಆಗಮಿಸಿ ಅಧ್ಯಕ್ಷರ ಭೇಟಿಯ ತಯಾರಿ ನಡೆಸಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.
2020ರಲ್ಲಿ ಡೊನಾಲ್ಡ್ ಟ್ರಂಪ್ ಅವರು ನವದೆಹಲಿ, ಆಗ್ರಾ ಮತ್ತು ಅಹಮದಾಬಾದ್‌ಗೆ ಭೇಟಿ ನೀಡಿದ್ದರು. ಅದರ ಬಳಿಕ ಟ್ರಂಪ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ಕಳೆದ ಭೇಟಿಯಲ್ಲಿ ಅವರು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ 1,00,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಫ್ರಾನ್ಸ್ ನಲ್ಲಿ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ರಕ್ಷಣಾ ಸಹಕಾರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಈ ಕುರಿತ ಹಲವಾರು ಪ್ರಮುಖ ಘೋಷಣೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಗೋರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ನಡುವಿನ ಬಾಂಧವ್ಯ ಇನ್ನೂ ಬಲವಾಗಿ ಉಳಿದಿದೆ. ಮಾಧ್ಯಮಗಳು ಏನೇನೋ ಬಿಂಬಿಸುತ್ತವೆ. ಆದರೆ ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಅವರ ಆ ಸ್ನೇಹವು ವರ್ಷಗಳ ಹಿಂದಿನದು ಮತ್ತು ಮುಂಬರುವ ವರ್ಷಗಳಲ್ಲಿ ಇದು ಹೀಗೆಯೇ ಮುಂದುವರಿಯುತ್ತದೆ. ಇವರಿಬ್ಬರ ಭೇಟಿಯಲ್ಲಿ ಏನಾದರೂ ವಿಶೇಷ ಸಂಭವಿಸುತ್ತವೆ ಎಂದು ಹೇಳಿದರು.