Illegal immigrants: ಭಾರತೀಯರು ಸೇರಿದಂತೆ 300 ಅಕ್ರಮ ವಲಸಿಗರು ಪನಾಮದಲ್ಲಿ ಟ್ರ್ಯಾಪ್! ರಕ್ಷಣೆಗಾಗಿ ಕೂಗುತ್ತಿರುವ ವಿಡಿಯೊ ವೈರಲ್
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತನ್ನ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಹುಡುಕಿ ಹುಡುಕಿ ಹೊರ ಹಾಕುತ್ತಿದ್ದಾರೆ. ಇದೀಗ ಅಮೆರಿಕದಿಂದ ಹೊರ ಹಾಕಲ್ಟಟ್ಟಿರುವ, ಭಾರತವೂ ಸೇರಿದಂತೆ ವಿವಿಧ ದೇಶಗಳ 300 ವಲಸಿಗರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಪನಾಮ ಹೊಟೇಲ್ ಕಿಟಕಿಯಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ವಲಸಿಗರು

ವಾಷಿಂಗ್ಟನ್: ಅಮೆರಿಕದಿಂದ ಗಡಿಪಾರಾಗಿರುವ 300ಕ್ಕೂ ಅಧಿಕ ಅಕ್ರಮ ವಲಸಿಗರು ಪನಾಮ ಹೊಟೇಲ್‌ವೊಂದರಲ್ಲಿ ಸಿಲುಕಿರುವ ಘಟನೆ ವರದಿಯಾಗಿದೆ. ಹೊಟೇಲ್‌ನ ಕಿಟಕಿಯಲ್ಲಿ ನಿಂತು ವಲಸಿಗರು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೊ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗ್ತಿದೆ. ಪನಾಮದಲ್ಲಿ ಇರಾನ್ (Iran), ಭಾರತ (India), ನೇಪಾಳ (Nepal), ಶ್ರೀಲಂಕಾ (Sri Lanka), ಪಾಕಿಸ್ಥಾನ (Pakistan), ಅಫ್ಘಾನಿಸ್ಥಾನ (Afghanistan) ಮತ್ತು ಚೀನಾ (China) ದೇಶಗಳ ಸುಮಾರು 300ಕ್ಕೂ ಅಧಿಕ ನಾಗರಿಕರನ್ನು ಟ್ರಂಪ್ (Donald Trump) ಆಡಳಿತ ಗಡಿಪಾರು ಮಾಡಿ ಇರಿಸಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಬೇರೆ ಬೇರೆ ದೇಶಗಳ ಈ ವಲಸಿಗರನ್ನು ಹೊಟೇಲ್ ಒಂದರಲ್ಲಿ ಇರಿಸಲಾಗಿದ್ದು, ಪನಾಮ (Panama) ಮತ್ತು ಅಮೆರಿಕಾ (USA) ನಡುವಿನ ವಲಸಿಗ ಒಪ್ಪಂದದ ಪ್ರಕಾರ ಅವರೆಲ್ಲರಿಗೂ ವೈದ್ಯಕೀಯ ನಿಗಾ ಮತ್ತು ಆಹಾರಗಳನ್ನು ಒದಗಿಸಲಾಗುತ್ತಿದೆ ಎಂದು ಪನಾಮದ ರಕ್ಷಣಾ ಸಚಿವ ಫ್ರ್ಯಾಂಕ್ ಅಬ್ರೆಗೋ ತಿಳಿಸಿದ್ದಾರೆ. ಆದರೆ ಈ ವಲಸಿಗರನ್ನು ಅವರಿರುವ ಹೊಟೇಲ್ ಬಿಟ್ಟು ಎಲ್ಲಿಗೂ ಹೋಗಲು ಬಿಡುತ್ತಿಲ್ಲ. ಈ ನಡುವೆ ಆಯಾದೇಶಗಳ ಅಂತರಾಷ್ಟ್ರಿಯ ಅಧಿಕಾರಿಗಳು ಇವರನ್ನೆಲ್ಲಾ ಅವರರವರ ದೇಶಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
Americaથી ડિપોર્ટ કરાયેલા 300 લોકો પનામાની હોટલમાં કેદ; બારીઓ પર લખ્યું- 'હેલ્પ'#America #Panama #illegalimmigrants #USA #Gscard #Gujaratsamachar pic.twitter.com/MB54azH3SG
— Gujarat Samachar (@gujratsamachar) February 19, 2025
ಆದರೆ, ಇಲ್ಲೊಂದು ಸಮಸ್ಯೆ ಕಾಣಿಸಿಕೊಂಡಿದ್ದು, ಇವರಲ್ಲಿ 40%ಕ್ಕೂ ಹೆಚ್ಚಿನವರು ತಮ್ಮ ದೇಶಗಳಿಗೆ ವಾಪಾಸಾಗಲು ನಿರಾಕರಿಸುತ್ತಿದ್ದಾರೆ. ಇವರಲ್ಲಿ ಕೆಲವರು ತಾವಿರುವ ಹೊಟೇಲ್ ಕೋಣೆಗಳ ಕಿಟಿಕಿಗಳಿಂದಲೇ ಫಲಕಗಳನ್ನು ಪ್ರದರ್ಶಿಸುತ್ತಿದ್ದು, ಅದರಲ್ಲಿ ‘ಹೆಲ್ಪ್’ ಮತ್ತು ‘ನಾವು ನಮ್ಮ ದೇಶದಲ್ಲಿ ರಕ್ಷಿಸಲ್ಪಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಕೆಲವೊಂದು ದೇಶಗಳಿಗೆ ಅಮೆರಿಕಾದಲ್ಲಿರುವ ಅನಧಿಕೃತ ವಲಸಿಗರನ್ನು ನೇರವಾಗಿ ಕಳುಹಿಸಲು ಕಷ್ಟಸಾಧ್ಯವಿರುವ ಪರಸ್ಥಿತಿಯಲ್ಲಿ ಅಮೆರಿಕಾ ಪನಾಮ ದೇಶವನ್ನು ವರ್ಗಾವಣಾ ದೇಶವನ್ನಾಗಿ ಬಳಸಿಕೊಳ್ಳುತ್ತಿದೆ. ಪನಾಮ ಮಾತ್ರವಲ್ಲದೇ ಕೋಸ್ಟರಿಕಾ ದೇಶಕ್ಕೂ ಸಹ ತೃತೀಯ ದೇಶಗಳ ಅನಧಿಕೃತ ವಲಸಿಗರಿರುವ ವಿಮಾನ ಬುಧವಾರದಂದು ಬಂದು ಇಳಿಯುವ ನಿರೀಕ್ಷೆಯಿದೆ. 299 ಜನರಲ್ಲಿ 171 ಜನರು ತಮ್ಮ ತಮ್ಮ ದೇಶಗಳಿಗೆ ಮರಳಲು ಒಪ್ಪಿಗೆ ಸೂಚಿಸಿದ್ದು, ಇವರೆಲ್ಲರೂ ಅಂತರಾಷ್ಟ್ರೀಯ ವಲಸಿಗರಿಗಾಗಿರುವ ಸಂಸ್ಥೆ ಮತ್ತು ವಿಶ್ವ ಸಂಸ್ಥೆಯ ನಿರಾಶ್ರಿತ ಏಜೆನ್ಸಿ ಸಹಾಯದಿಂದ ತಮ್ಮ ದೇಶಗಳಿಗೆ ವಾಪಾಸಾಗಲಿದ್ದಾರೆ.
ಇದನ್ನೂ ಓದಿ: Donald Trump: ಪ್ರಧಾನಿ ಮೋದಿ ಬಗ್ಗೆ ಗೌರವವಿದೆ... ಆದರೆ 21 ಮಿಲಿಯನ್ ಡಾಲರ್ ಏಕೆ ಕೊಡುತ್ತಿದ್ದೇವೆ? ಟ್ರಂಪ್ ಪ್ರಶ್ನೆ
ಆದರೆ, ಇನ್ನುಳಿದ 128 ವಲಸಿಗರು ಇನ್ನೂ ಇಲ್ಲೇ ಸಿಲುಕಿಕೊಂಡಿದ್ದು, ವಿಶ್ವದ ತೃತೀಯ ರಾಷ್ಟ್ರಗಳಲ್ಲಿ ಇವರಿಗೊಂದು ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅಬ್ರೆಗೋ ತಿಳಿಸಿದ್ದಾರೆ. ಇಲ್ಲಿದ್ದ ಐರಿಶ್ ಪ್ರಜೆಯೊಬ್ಬರು ಈಗಾಗಲೇ ತಮ್ಮ ದೇಶಕ್ಕೆ ಹಿಂತಿರುಗಿದ್ದು, ಇನ್ನು ತಮ್ಮ ತಮ್ಮ ದೇಶಕ್ಕೆ ಮರಳಲು ನಿರಾಕರಿಸುತ್ತಿರುವವರನ್ನು ತಾತ್ಕಾಲಿಕವಾಗಿ ಪ್ರತ್ಯೇಕವಾಗಿರುವ ಡ್ಯಾರಿನ್ ಪ್ರಾಂತ್ಯದಲ್ಲಿ ಇರಿಸಲಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.
ಅಮೆರಿಕಾದಿಂದ ಹೊರದಬ್ಬಲ್ಪಡುವ ಅಕ್ರಮ ವಲಸಿಗರಿಗೆ ಸೇತುವೆಯಂತೆ ಕಾರ್ಯನಿರ್ವಹಿಸಲು ಪನಾಮ ಸರಕಾರ ಒಪ್ಪಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚಗಳನ್ನು ಅಮೆರಕಾ ಸರಕಾರವೇ ಭರಿಸಲಿದೆ. ಈ ತಿಂಗಳ ಪ್ರಾರಂಭದಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು.
ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮಾರ್ಕೊ ರೂಬಿಯೋ ಪನಾಮಾಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಬರಲಾಗಿತ್ತು. ಪನಾಮ ಕಾಲುವೆ ಮೇಲಿನ ನಿಯಂತ್ರಣವನ್ನು ವಾಪಾಸು ಪಡೆದುಕೊಳ್ಳುವ ಬೆದರಿಕೆಯನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ ಮಾಡಿದ ಬಳಿಕ, ಪನಾಮಾ ಅಧ್ಯಕ್ಷ ಜೋಸ್ ರೌಲ್ ಅವರು ರಾಜಕೀಯ ಒತ್ತಡಕ್ಕೆ ಒಳಗಾಗಿದ್ದರು. ಪನಾಮದ ಒಂಬುಡ್ಸ್ ಮನ್ ಅಧಿಕಾರಿಗಳು ತಮ್ಮ ದೇಶದಲ್ಲಿರುವ ಅಮೆರಿಕಾದಿಂದ ಹೊರದಬ್ಬಲ್ಪಟ್ಟಿರುವ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳನ್ನು ಸದ್ಯದಲ್ಲೆ ನೀಡುವ ನಿರೀಕ್ಷೆಯಿದೆ.