ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Earthquake: ಇಂಡೋನೇಷ್ಯಾದ ಮೊಲುಕ್ಕಾ ಸಮುದ್ರದಲ್ಲಿ 7.4 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾದ ಮೊಲುಕ್ಕಾ ಸಮುದ್ರದಲ್ಲಿ ಸಂಭವಿಸಿದ 7.4 ತೀವ್ರತೆಯ ಭೂಕಂಪದ ಪರಿಣಾಮವಾಗಿ ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಎದ್ದಿವೆ. ಆದರೆ ಯಾವುದೇ ಜೀವಹಾನಿ ಅಥವಾ ಗಂಭೀರ ಹಾನಿ ವರದಿಯಾಗಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾದಲ್ಲಿಟ್ಟಿದ್ದಾರೆ. ಕಂಪನವು ಉತ್ತರ ಮೊಲುಕ್ಕಾ ಹಾಗೂ ಉತ್ತರ ಸುಲಾವೇಸಿ ಪ್ರಾಂತ್ಯಗಳ ಹಲವಾರು ಭಾಗಗಳಲ್ಲಿ ಸ್ಪಷ್ಟವಾಗಿ ಅನುಭವಕ್ಕೆ ಬಂದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಗಂಭೀರ ಹಾನಿ ಸಂಭವಿಸಿಲ್ಲ.

ಮೊಲುಕ್ಕಾ ಸಮುದ್ರದಲ್ಲಿ 7.4 ತೀವ್ರತೆಯ ಭೂಕಂಪ

ಇಂಡೋನೇಷ್ಯಾ ಭೂಕಂಪ -

Profile
Sushmitha Jain Apr 2, 2026 1:31 PM

ಟೆರ್ನೇಟ್: ಇಂಡೋನೇಷ್ಯಾದ(Indonesia) ಉತ್ತರ ಮೊಲುಕ್ಕಾ ಸಮುದ್ರ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭಾರೀ ಭೂಕಂಪ ಸಂಭವಿಸಿದ್ದು(Earthquake), ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಭೂಮಿಯ ಒಳಭಾಗದಲ್ಲಿ 35 ಕಿಲೋಮೀಟರ್ ಆಳದಲ್ಲಿ ಉಂಟಾಗಿದೆ. ಮೊಲುಕ್ಕಾ ಸಮುದ್ರದಲ್ಲಿ ಸಂಭವಿಸಿದ ಭೂಕಂಪದಿಂದ ಸಣ್ಣ ಸುನಾಮಿ ಅಲೆಗಳು ಎದಿದ್ದು, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ನೀಡಿದ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಟೆರ್ನೇಟ್ ನಗರದಿಂದ ಸುಮಾರು 127 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ. ಕಂಪನವು ಉತ್ತರ ಮೊಲುಕ್ಕಾ ಹಾಗೂ ಉತ್ತರ ಸುಲಾವೇಸಿ ಪ್ರಾಂತ್ಯಗಳ ಹಲವಾರು ಭಾಗಗಳಲ್ಲಿ ಸ್ಪಷ್ಟವಾಗಿ ಅನುಭವಕ್ಕೆ ಬಂದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಗಂಭೀರ ಹಾನಿ ಸಂಭವಿಸಿಲ್ಲ.

ಸುನಾಮಿ ಎಚ್ಚರಿಕೆ

ಭೂಕಂಪದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ಸುನಾಮಿ ಮುನ್ನೆಚ್ಚರಿಕೆ ಕೇಂದ್ರವು ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಿದ್ದು, ಸಮುದ್ರ ಅಲೆಗಳು 0.3ರಿಂದ 1 ಮೀಟರ್ ಎತ್ತರದವರೆಗೆ ಏರಬಹುದೆಂದು ಮುನ್ಸೂಚನೆ ಕೊಟ್ಟಿದೆ. ಫಿಲಿಪೈನ್ಸ್ ಹಾಗೂ ಜಪಾನ್ ಕರಾವಳಿಗಳಲ್ಲೂ ಸಣ್ಣ ಮಟ್ಟದ ಸಮುದ್ರ ಮಟ್ಟದ ಏರಿಳಿತಗಳು ದಾಖಲಾಗಿವೆ. ಆದರೆ ನಂತರ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಸುನಾಮಿ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ.

ಜನರಲ್ಲಿ ಹೆಚ್ಚಾದ ಭೀತಿ – ಸಾವಿರಾರು ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಭೂಕಂಪದ ನಂತರ ಉತ್ತರ ಸುಲಾವೇಸಿ ಪ್ರಾಂತ್ಯದ ಮನಾಡೋ ನಗರದಲ್ಲಿ ಜನರು ಭಯದಿಂದ ಮನೆಗಳಿಂದ ಹೊರಗೆ ಓಡಿಬಂದರು. ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರು ಮುನ್ನೆಚ್ಚರಿಕಾ ಕ್ರಮವಾಗಿ ಎತ್ತರ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳೀಯ ಆಡಳಿತವು ತುರ್ತು ಪರಿಸ್ಥಿತಿ ನಿರ್ವಹಣಾ ತಂಡಗಳನ್ನು ಸಜ್ಜುಗೊಳಿಸಿದ್ದು, ಜನರನ್ನು ಸಮುದ್ರ ತೀರದಿಂದ ದೂರವಿರಲು ಸೂಚಿಸಿದೆ.

ಎಲ್ಲೆಲ್ಲಿ ಏನು ಹಾನಿ..?

ಬಿಟುಂಗ್ ಹಾಗೂ ಟೆರ್ನೇಟ್ ನಗರಗಳಲ್ಲಿ ಹಲವು ಮನೆಗಳು, ಚರ್ಚ್‌ಗಳು ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗಿರುವ ವರದಿಗಳು ಲಭ್ಯವಾಗಿವೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿದ್ದು, ಸಂವಹನ ವ್ಯವಸ್ಥೆಯಲ್ಲೂ ಅಡಚಣೆ ಉಂಟಾಗಿದೆ. ಆದರೆ ಸದ್ಯದ ಮಾಹಿತಿಯ ಪ್ರಕಾರ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ವರದಿ ಲಭ್ಯವಾಗಿಲ್ಲ.

ಪ್ರಾಧ್ಯಾಪಕರ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ; ಮನನೊಂದು ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಅಂತಾರಾಷ್ಟ್ರೀಯ ಪ್ರತಿಕ್ರಿಯೆ

ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸುತ್ತಿದ್ದು, ತಮ್ಮ ಕರಾವಳಿಗಳಿಗೆ ಯಾವುದೇ ದೊಡ್ಡ ಮಟ್ಟದ ಸುನಾಮಿ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿವೆ. ಅಂತರರಾಷ್ಟ್ರೀಯ ಭೂಕಂಪ ನಿಗಾವಳಿ ಸಂಸ್ಥೆಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿವೆ.

ಭೂಕಂಪಗಳಿಗೆ ಕಾರಣವೇನು?

ಇಂಡೋನೇಷ್ಯಾ ಪೆಸಿಫಿಕ್ ಸಾಗರದ ‘ರಿಂಗ್ ಆಫ್ ಫೈರ್’ ಪ್ರದೇಶದಲ್ಲಿರುವುದರಿಂದ ಇದು ಭೂಕಂಪ ಹಾಗೂ ಜ್ವಾಲಾಮುಖಿ ಚಟುವಟಿಕೆಗಳಿಗೆ ಅತೀ ಸಂವೇದನಾಶೀಲ ಪ್ರದೇಶವಾಗಿದೆ. ಇಲ್ಲಿ ಟೆಕ್ಟೋನಿಕ್ ಫಲಕಗಳ ಚಲನೆಯಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅಧಿಕಾರಿಗಳು ಜನರಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ. ಮುಂದಿನ ಕೆಲ ಗಂಟೆಗಳವರೆಗೆ ಆಫ್ಟರ್‌ಶಾಕ್‌ಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗಿದೆ.