‘ಕರುನಾಡ ವೈಭವ 2026’ ಕಾರ್ಯಕ್ರಮ; ಕರ್ನಾಟಕ ಸಂಘ ಕತಾರ್‌ನಿಂದ ಸಂಸದ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಸನ್ಮಾನ
ʼಕರ್ನಾಟಕ ಸಂಘ ಕತಾರ್’ ಆಯೋಜಿಸಿದ್ದ ‘ಕರುನಾಡ ವೈಭವ 2026’ ಸಾಂಸ್ಕೃತಿಕ ಸಮ್ಮೇಳನದ ವೇದಿಕೆಯಲ್ಲಿ, ಖ್ಯಾತ ಹೃದ್ರೋಗ ತಜ್ಞರು ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್ ಮತ್ತು ಅನಸೂಯಾ ಮಂಜುನಾಥ್ ದಂಪತಿಯನ್ನು ಕತಾರ್ ಕನ್ನಡಿಗರ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
-
ದೋಹಾ: ಕತಾರ್‌ನಲ್ಲಿರುವ ಕನ್ನಡಿಗರ ಪ್ರಮುಖ ಸಂಸ್ಥೆಯಾದ ‘ಕರ್ನಾಟಕ ಸಂಘ ಕತಾರ್’ (KSQ) ಆಯೋಜಿಸಿದ್ದ ‘ಕರುನಾಡ ವೈಭವ 2026’ ಸಾಂಸ್ಕೃತಿಕ ಸಮ್ಮೇಳನದ ವೇದಿಕೆಯಲ್ಲಿ, ಖ್ಯಾತ ಹೃದ್ರೋಗ ತಜ್ಞರು ಹಾಗೂ ಪದ್ಮಶ್ರೀ ಪುರಸ್ಕೃತ, ಸಂಸದ ಡಾ. ಸಿ.ಎನ್. ಮಂಜುನಾಥ್ ಮತ್ತು ಅನಸೂಯಾ ಮಂಜುನಾಥ್ ದಂಪತಿಯನ್ನು ಕತಾರ್ ಕನ್ನಡಿಗರ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ಅಲ್ ವಕ್ರಾ ನಗರದ DPS MIS ಆಡಿಟೋರಿಯಂನಲ್ಲಿ ನಡೆದ ಈ ವೈಭವೋಪೇತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕತಾರ್‌ನಲ್ಲಿರುವ ಭಾರತದ ರಾಯಭಾರಿ ಎಚ್.ಇ. ಡಾ. ಕೆ. ಶ್ರೀಕರ್ ರೆಡ್ಡಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಅಧ್ಯಕ್ಷ ಎ.ಪಿ. ಮಣಿಕಂಠನ್, ಕತಾರ್ ಸಾಂಸ್ಕೃತಿಕ ಸಚಿವಾಲಯದ ಸಂಗೀತ ವ್ಯವಹಾರಗಳ ಕೇಂದ್ರದ ನಿರ್ದೇಶಕ ಖಾಲಿದ್ ಅಲ್ ಸಾಲೆಮ್ ಹಾಗೂ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್ ಸಂಸ್ಥೆಯು, ಡಾ. ಸಿ.ಎನ್. ಮಂಜುನಾಥ್ ಅವರ ದಶಕಗಳ ನಿಸ್ವಾರ್ಥ ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿತು.
ಕರ್ನಾಟಕ ಸಂಘ ಕತಾರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ; ʼಕರುನಾಡ ವೈಭವ-2026ʼ ಸಾಂಸ್ಕೃತಿಕ ಮಹೋತ್ಸವ
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಂಜುನಾಥ್ ಅವರು, ಸಂಸತ್ತಿನಲ್ಲಿ ಬಡ ಮತ್ತು ಮನುಕುಲದ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಮತ್ತು ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೌಲಭ್ಯಗಳು ತಲುಪುವಂತೆ ಮಾಡಲು ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ತಮ್ಮ ಸರಳತೆ, ಕಾರುಣ್ಯ ಮತ್ತು ನಿರಂತರ ಸೇವೆಯ ಮೂಲಕ ಕರ್ನಾಟಕ ಹಾಗೂ ಭಾರತ ದೇಶದ ಕೀರ್ತಿಯನ್ನು ಎತ್ತಿಹಿಡಿದ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಕತಾರ್‌ನ ಸಮಸ್ತ ಕನ್ನಡಿಗರು ತಮ್ಮ ಗೌರವ ಮತ್ತು ಪ್ರೀತಿ ಸಮರ್ಪಿಸಿದರು.