ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಸ್ರೇಲ್-ಯುಎಸ್ ಜಂಟಿ ದಾಳಿಯಲ್ಲಿ ಇರಾನ್‌ನ ಉನ್ನತ ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಪಕ್ಪೌರ್ ಹತ್ಯೆ?

Israel–US joint strike on Iran: ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC)ನ ಕಮಾಂಡರ್ ಮೊಹಮ್ಮದ್ ಪಕ್ಪೌರ್ ಹತ್ಯೆಯಾಗಿದ್ದಾರೆ. ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲೊಬ್ಬರಾದ ಪಕ್ಪೌರ್ 260 ದಿನಗಳ ಕಾಲ IRGC ಕಮಾಂಡರ್ ಆಗಿದ್ದರು.

ಇರಾನ್‌ನ ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಪಕ್ಪೌರ್ ಹತ್ಯೆ?

ಮೊಹಮ್ಮದ್ ಪಕ್ಪೌರ್ (ಸಂಗ್ರಹ ಚಿತ್ರ) -

Priyanka P
Priyanka P Feb 28, 2026 6:24 PM

ಟೆಹರಾನ್‌, ಫೆ. 28: ಶನಿವಾರ (ಫೆಬ್ರವರಿ 28) ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ (Israel–US joint strike on Iran) ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಕಮಾಂಡರ್ ಮೊಹಮ್ಮದ್ ಪಕ್ಪೌರ್‌ ಹತ್ಯೆಯಾಗಿದ್ದಾರೆ (Mohammad Pakpour killed). ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲೊಬ್ಬರಾದ ಪಕ್ಪೌರ್ 260 ದಿನಗಳ ಕಾಲ IRGC ಕಮಾಂಡರ್ ಆಗಿದ್ದರು. ಪಕ್ಪೌರ್ ಸಾವಿನ ಬಗ್ಗೆ ಟೆಹ್ರಾನ್‌ನಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಹಿಂದಿನ ಕಮಾಂಡರ್ ಹುಸೇನ್ ಸಲಾಮಿ ಅವರನ್ನು ಪದಚ್ಯುತಗೊಳಿಸಿದ ನಂತರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ 2025ರಲ್ಲಿ ಪಕ್ಪೌರ್ ಅವರನ್ನು ಮೇಜರ್ ಜನರಲ್ ಹುದ್ದೆಗೆ ಬಡ್ತಿ ನೀಡಿದರು. ಮೊಹಮ್ಮದ್ ಪಕ್ಪೌರ್‌ ಅವರಿಗೆ ಐಆರ್‌ಜಿಸಿ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಸಾಮರ್ಥ್ಯ, ಸಿದ್ಧತೆ ಮತ್ತು ಆಂತರಿಕ ಏಕತೆಯನ್ನು ಹೆಚ್ಚಿಸಲು ನಿರ್ದೇಶನ ನೀಡಲಾಗಿತ್ತು.

ಕಳೆದ ತಿಂಗಳಷ್ಟೇ ಮೊಹಮ್ಮದ್ ಪಕ್ಪೌರ್‌ ಇಸ್ರೇಲ್ ಮತ್ತು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು. ಇಸ್ಲಾಮಿಕ್ ಗಣರಾಜ್ಯವು ಹಿಂದೆಂದಿಗಿಂತಲೂ ಹೆಚ್ಚು ಸಿದ್ಧವಾಗಿದೆ. ಟ್ರಿಗರ್ ಮೇಲೆ ಬೆರಳಿಟ್ಟಿದೆ ಎಂದು ಅವರು ಹೇಳಿದ್ದರು.

ಟೆಹ್ರಾನ್ ಮೇಲಿನ ದಾಳಿಯ ನಂತರ ಇಸ್ರೇಲ್ ಕಡೆಗೆ ಹಾರಿದ ಇರಾನ್‍ನ ಕ್ಷಿಪಣಿಗಳು

IRGC ಇರಾನ್‌ನ ಅತ್ಯಂತ ಪ್ರಭಾವಶಾಲಿ ಸಂಸ್ಥೆಗಳಲ್ಲಿ ಒಂದಾಗಿದೆ. ಇಸ್ಲಾಮಿಕ್ ಗಣರಾಜ್ಯದ ರಾಜಕೀಯ ವ್ಯವಸ್ಥೆಯನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಈ ಸಂಸ್ಥೆ, ದೇಶದ ಭದ್ರತಾ ವ್ಯವಸ್ಥೆಯಲ್ಲಿ ವಿಶಾಲವಾದ ಅಧಿಕಾರವನ್ನು ಹೊಂದಿದೆ. ಇದರಲ್ಲಿ ಕ್ಷಿಪಣಿ ಸಾಮರ್ಥ್ಯಗಳ ಮೇಲಿನ ಮೇಲ್ವಿಚಾರಣೆ ಹಾಗೂ ದೇಶದ ಹೊರಗಡೆಯಲ್ಲಿಯೂ ಇರುವ ಮಿತ್ರ ಶಸ್ತ್ರಸಜ್ಜಿತ ಗುಂಪುಗಳ ವಿಶಾಲ ಜಾಲದ ನಿಯಂತ್ರಣವೂ ಸೇರಿದೆ.

ಇದಕ್ಕೂ ಮುನ್ನ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಕಚೇರಿಗಳ ಬಳಿಯೂ ವಾಯುದಾಳಿ ನಡೆದಿತ್ತು. ಆದರೆ 86 ವರ್ಷದ ಖಮೇನಿ ಅವರನ್ನು ಮೊದಲೇ ಟೆಹರಾನ್‌ನ ಹೊರಗೆ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಹೀಗಾಗಿ ಅವರು ಪಾರಾಗಿದ್ದಾರೆ. ಅಮೆರಿಕದೊಂದಿಗಿನ ಉದ್ವಿಗ್ನತೆ ಹೆಚ್ಚಾದಂತೆ ಅವರು ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇನ್ನು ಇರಾನ್ ಅಧ್ಯಕ್ಷರು, ಗುಪ್ತಚರ ಇಲಾಖೆ ಕಚೇರಿ, ಸಚಿವರು ಮನೆ ಮೇಲೂ ದಾಳಿ ನಡೆದಿದೆ ಎನ್ನಲಾಗಿತ್ತು. ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಮಾಜಿ ಸಂಸದೀಯ ಸ್ಪೀಕರ್ ಅಲಿ ಲಾರಿಜಾನಿ, ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಖಲಿಬಾಫ್, ನ್ಯಾಯಾಂಗ ಮುಖ್ಯಸ್ಥ ಘೋಲಮ್‌ಹೊಸ್ಸೆನ್ ಮೊಹ್ಸೇನಿ ಎಜೆಯಿ ಮತ್ತು ಸೇನಾ ಕಮಾಂಡರ್-ಇನ್-ಚೀಫ್ ಅಬ್ದೋಲ್ರಹೀಮ್ ಮೌಸವಿ ಹತಾಮಿ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಖಮೇನಿ ಎಲ್ಲಿದ್ದಾರೆ? ಸುಪ್ರೀಂ ಲೀಡರ್ ಕಚೇರಿಯ ಮೇಲಿನ ದಾಳಿಯ ನಡುವೆ ಕಳವಳ

ಶನಿವಾರ ಇಸ್ರೇಲ್ ಹಾಗೂ ಅಮೆರಿಕ ಜಂಟಿ ಕಾರ್ಯಾಚರಣೆ ನಡೆಸಿದ್ದು, ಇರಾನ್‌ನ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಿವೆ. ಹಲವು ಕಡೆಗಳಲ್ಲಿ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದೆ. ಜತೆಗೆ ಇರಾನ್‍ನ ಸರ್ವೋಚ್ಛ ನಾಯಕ ಅಲಿ ಖಮೇನಿ ಅವರ ಕಚೇರಿಯ ಕಡೆಗೆ ಏಳು ಕ್ಷಿಪಣಿಗಳನ್ನು ಹಾರಿಸಲಾಯಿತು. ಇರಾನ್‌ನಲ್ಲಿ ನಾಯಕತ್ವವನ್ನು ಅಳಿಸಿ ಹಾಕುವುದೇ ಈ ಎರಡು ದೇಶಗಳ ಉದ್ದೇಶ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಖಮೇನಿಯ ಕಚೇರಿ ಮೇಲೆ ದಾಳಿ ಮಾಡಿರುವುದರಿಂದ ಈ ಸಂಕೇತ ಸ್ಪಷ್ಟವಾಗಿದೆ.

ಇಸ್ರೇಲ್‌-ಅಮೆರಿಕ ದಾಳಿ: ಇರಾನ್‌ನ 40 ಶಾಲಾ ವಿದ್ಯಾರ್ಥಿನಿಯರು ಸಾವು

ಇದೀಗ ಖಮೇನಿ ಎಲ್ಲಿದ್ದಾರೆ ಎಂಬುದರ ಕುರಿತು ಇರಾನ್‌ನಿಂದ ಇಲ್ಲಿಯವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಅಮೆರಿಕ-ಇಸ್ರೇಲ್‍ನ ಮೊದಲ ದಾಳಿಯು ಖಮೇನಿಯ ಕಚೇರಿಗಳು ಮತ್ತು ತಜ್ಞರ ಸಭೆಯನ್ನು ಗುರಿಯಾಗಿಸಿಕೊಂಡಿತು. ಆದರೆ, ದಾಳಿಯ ಸಮಯದಲ್ಲಿ ಖಮೇನಿಯು ಟೆಹ್ರಾನ್‌ನಲ್ಲಿ ಇರಲಿಲ್ಲ. ಅವರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಸರ್ಕಾರಿ ಮೂಲವೊಂದು ತಿಳಿಸಿದೆ.

ಇದಲ್ಲದೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಖಿಯಾನ್ ಅವರ ನಿವಾಸವನ್ನೂ ಗುರಿಯಾಗಿಸಲಾಗಿತ್ತು. ಆದರೆ ಯಾವುದೇ ಅಧಿಕಾರಿಯ ಹತ್ಯೆ ದೃಢಪಟ್ಟಿಲ್ಲ. ಪ್ರಬಲ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಲಾಯಿತು. ಒಟ್ಟಾರೆಯಾಗ, ಈ ತಂತ್ರವು ಇರಾನ್‌ನ ರಾಜಕೀಯ ನಾಯಕತ್ವವನ್ನು ಅಳಿಸಿಹಾಕುವುದಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದಾಗ, ನಾಗರಿಕ ಪ್ರದೇಶಗಳಿಂದ ದೂರದಲ್ಲಿದ್ದ ಪರಮಾಣು ಸೌಲಭ್ಯಗಳ ಮೇಲೆ ಗುರಿಯಾಗಿಸಲಾಗಿತ್ತು. ಆದರೆ ಇಂದು ದಾಳಿಗೊಳಗಾದ ಸ್ಥಳಗಳು ಇರಾನಿನ ನಾಯಕತ್ವದ ಕಚೇರಿಗಳು ಅಥವಾ ನಿವಾಸಗಳಾಗಿದ್ದವು. ಅಮೆರಿಕ-ಇಸ್ರೇಲ್‌ ದಾಳಿಯ ಮೊದಲ ಗುರಿಯಾಗಿದ್ದು ಇರಾನ್‌ನ ಅಧಿಕಾರಿಗಳು ಎಂದು ಅಮೆರಿಕ ಸರ್ಕಾರಿ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ.