ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಹಾರದಲ್ಲಿ ಪಟಾಕಿ ತಯಾರಿಕಾ ಮನೆಯಲ್ಲಿ ಭೀಕರ ಸ್ಫೋಟ: ನಾಲ್ವರ ದುರ್ಮರಣ

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪಟಾಕಿ ತಯಾರಿಸಿ ಸಂಗ್ರಹಿಸಿಟ್ಟಿದ್ದ ಮನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಸ್ಫೋಟದ ತೀವ್ರತೆಗೆ ಕಟ್ಟಡದ ಮುಂಭಾಗ ಸಂಪೂರ್ಣ ಧ್ವಂಸಗೊಂಡಿದ್ದು, ನಿರಂತರವಾಗಿ ಸಿಡಿಯುತ್ತಿದ್ದ ಪಟಾಕಿಗಳಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಟಾಕಿ ಘಟಕಕ್ಕೆ ಪರವಾನಗಿ ಇತ್ತೇ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಬಿಹಾರದ ಸಿವಾನ್‌ನಲ್ಲಿ ಭೀಕರ ಪಟಾಕಿ ಸ್ಫೋಟ

ಭೀಕರ ಪಟಾಕಿ ಸ್ಫೋಟ -

Profile
Sushmitha Jain Oct 24, 2026 9:10 AM

ಪಟನಾ: ಬಿಹಾರ (Bihar)ದ ಸಿವಾನ್ ಜಿಲ್ಲೆಯಲ್ಲಿ ಶುಕ್ರವಾರ ಪಟಾಕಿ ತಯಾರಿಸಿ ಸಂಗ್ರಹಿಸಿಟ್ಟಿದ್ದ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಕನಿಷ್ಠ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಸ್ಫೋಟಗೊಂಡ ಸ್ಥಳದಲ್ಲಿ ಸಣ್ಣಪುಟ್ಟ ಪಟಾಕಿಗಳು ನಿರಂತರವಾಗಿ ಸಿಡಿಯುತ್ತಿರುವುದರಿಂದ, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟಾಗಿದೆ.

ಸ್ಥಳೀಯ ಪಟಾಕಿ ವ್ಯಾಪಾರಿ ಮೊಹಮ್ಮದ್ ಅಮೀರುದ್ದೀನ್ ಮಿಯಾನ್ ಎಂಬುವವರ ವಸತಿ ಹಾಗೂ ಪಟಾಕಿ ತಯಾರಿಕಾ ಘಟಕದಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಬೆಂಕಿಯ ಜ್ವಾಲೆಯು ಮನೆಯ ಆವರಣದಲ್ಲಿದ್ದ ಇತರ ಪಟಾಕಿಗಳಿಗೂ ಕ್ಷಣಾರ್ಧದಲ್ಲಿ ವ್ಯಾಪಿಸಿ, ಜನನಿಬಿಡ ಪ್ರದೇಶದಲ್ಲಿ ಸರಣಿ ಸ್ಫೋಟಗಳನ್ನು ಸೃಷ್ಟಿಸಿತು.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಕಟ್ಟಡದ ಮುಂಭಾಗ ಸಂಪೂರ್ಣ ಧ್ವಂಸಗೊಂಡು ಅವಶೇಷಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವುದನ್ನು ಸಿವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಭರತ್ ಸೋನಿ ಖಚಿತಪಡಿಸಿದ್ದಾರೆ. ಗ್ರಾಮ ಮುಖಂಡರ ಪ್ರಕಾರ, ದುರಂತದ ಸಮಯದಲ್ಲಿ ಮನೆಯೊಳಗೆ ಒಂದೇ ಕುಟುಂಬದ ಏಳು ಸದಸ್ಯರಿದ್ದರು. ಉಳಿದ ಮೂವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಸ್ಫೋಟದ ರಭಸಕ್ಕೆ ಕೆಲವು ಮೃತದೇಹಗಳು ಛಿದ್ರಗೊಂಡಿರುವುದರಿಂದ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ.

ಫ್ರಾನ್ಸ್ ಪ್ರತಿಭಟನೆಗಳಿಗೂ ಭಾರತದ ಎಸ್‌ಐಆರ್ ಆಂದೋಲನಕ್ಕೂ ಲಿಂಕ್? ಅಮೆರಿಕ ವರದಿ ಹೇಳಿದ್ದೇನು?

ಸ್ಥಳಕ್ಕೆ ಅಗ್ನಿಶಾಮಕ ದಳ, ವೈದ್ಯಕೀಯ ತಂಡಗಳು, ವಿದ್ಯುತ್ ಇಲಾಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಧಾವಿಸಿದ್ದು, ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಮನೆಯೊಳಗೆ ಇನ್ನಷ್ಟು ಸ್ಫೋಟಕ ಸಾಮಗ್ರಿಗಳು ಇರುವ ಅಪಾಯವಿರುವುದರಿಂದ ಗ್ರಾಮಸ್ಥರು ಕನಿಷ್ಠ 200 ಮೀಟರ್ ಸುರಕ್ಷಿತ ಅಂತರ ಕಾಪಾಡುವಂತೆ ಪೊಲೀಸರು ಸೂಚಿಸಿದ್ದಾರೆ.

ಈ ಘಟಕಕ್ಕೆ ಕಾನೂನುಬದ್ಧ ಪರವಾನಗಿ ಇತ್ತೇ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಕುರಿತು ಎಫ್‌ಐಆರ್ ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಕುಟುಂಬವು ಕಳೆದ 20 ವರ್ಷಗಳಿಂದ ಈ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಹಿಂದೆ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಯಾವುದೇ ಕರ್ತವ್ಯಲೋಪ ಅಥವಾ ಭದ್ರತಾ ವೈಫಲ್ಯಗಳು ಸಂಭವಿಸಿವೆಯೇ ಎಂಬುದರ ಬಗ್ಗೆಯೂ ಆಡಳಿತ ವರ್ಗ ತನಿಖೆ ಕೈಗೆತ್ತಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ದುರಂತ ಸಂಭವಿಸಿದ ಇಡೀ ಪ್ರದೇಶವನ್ನು ಪೊಲೀಸರು ಸದ್ಯಕ್ಕೆ ಸಂಪೂರ್ಣ ಸೀಲ್‌ಡೌನ್ ಮಾಡಿದ್ದು, ಅವಶೇಷಗಳನ್ನು ತೆರವುಗೊಳಿಸಿ ನಾಪತ್ತೆಯಾಗಿರುವ ಕುಟುಂಬಸ್ಥರನ್ನು ಪತ್ತೆಹಚ್ಚಲು ಜೆಸಿಬಿ ಯಂತ್ರಗಳ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಭರದಿಂದ ಮುಂದುವರಿಸಿದ್ದಾರೆ.