ಮತ್ತೆ ಶುರುವಾಯ್ತು ಇರಾನ್- ಅಮೆರಿಕ ಕದನ; ಸೇನಾ ನೆಲೆಗಳ ಮೇಲೆ ದಾಳಿ, ಹಾರ್ಮೊಜ್ ವಶಕ್ಕೆ ಯತ್ನ
ಕಳೆದ ಒಂದು ತಿಂಗಳಿನಿಂದ ಕೊಂಚ ತಣ್ಣಗಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಮರವು ಮತ್ತೆ ಭುಗಿಲೆದಿದ್ದೆ. ಹಾರ್ಮೊಜ್ ಜಲಸಂಧಿಯ ಬಳಿ ಇರುವ ಇರಾನ್‌ನ ಲಾರಾಕ್ ದ್ವೀಪದಲ್ಲಿದ್ದ ಕ್ಷಿಪಣಿ ಮತ್ತು ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಸೇನೆ ಭಾನುವಾರ ತಡರಾತ್ರಿ ಭಾರಿ ವೈಮಾನಿಕ ದಾಳಿ ನಡೆಸಿದೆ.
ಇಂಟರ್ ನೆಟ್ ಚಿತ್ರ -
ವಾಷಿಂಗ್ಟನ್: ಕಳೆದ ಒಂದು ತಿಂಗಳಿನಿಂದ ಕೊಂಚ ತಣ್ಣಗಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಮರವು ಮತ್ತೆ (Iran- America War) ಭುಗಿಲೆದಿದ್ದೆ. ಹಾರ್ಮೊಜ್ ಜಲಸಂಧಿಯ ಬಳಿ ಇರುವ ಇರಾನ್‌ನ ಲಾರಾಕ್ ದ್ವೀಪದಲ್ಲಿದ್ದ ಕ್ಷಿಪಣಿ ಮತ್ತು ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಸೇನೆ ಭಾನುವಾರ ತಡರಾತ್ರಿ ಭಾರಿ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಗೆ ಪ್ರತ್ಯುತ್ತರವಾಗಿ ಇರಾನ್ ತಕ್ಷಣವೇ ಜೋರ್ಡಾನ್‌ನಲ್ಲಿರುವ ಅಮೆರಿಕ ಮಿಲಿಟರಿ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಆ ಕ್ಷಿಪಣಿಗಳು ವಿಫಲಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೋರ್ಡಾನಲ್ಲಿರುವ ಸೇನಾ ನೆಲೆಯಲ್ಲಿ ಸಾವಿರಾರು ಅಮೆರಿಕಾ ಸೈನಿಕರು ಇದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇರಾನ್ ಇಸ್ಲಾಮಿಕ್ ರೆವೂಲ್ಯೂಷನರಿ ಕಾರ್ಪ್ಸ್ ಪಡೆಯು ಹಾರ್ಮೊಜ್ ಜಲಸಂಧಿಯಲ್ಲಿ ಕಡಲ ಮೈನ್‌ಗಳನ್ನು ಹೊತ್ತೊಯ್ಯುವ ರಾಕೆಟ್‌ಗಳನ್ನು ಉಡಾಯಿಸಲು ಸಿದ್ಧತೆ ನಡೆಸುತ್ತಿರುವುದನ್ನು ಕಂಡುಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಕಳೆದ ಒಂದು ತಿಂಗಳಲ್ಲಿ ಮೊದಲ ದಾಳಿ
ಜುಲೈ ಅತ್ಯಂದ ನಂತರ ಅಮೆರಿಕವು ಇರಾನ್ ಭೂಪ್ರದೇಶದ ಮೇಲೆ ನಡೆಸಿದ ಮೊದಲ ಮಿಲಿಟರಿ ದಾಳಿ ಇದಾಗಿದೆ. ಈ ಹಿಂದೆ ದೊಡ್ಡ ಪ್ರಮಾಣದ ಬಾಂಬ್ ದಾಳಿಗೆ ಹೋಲಿಸಿದರೆ, ಇದು ಸೀಮಿತ ಪ್ರಮಾಣದ ದಾಳಿ. ಆದರೆ ಉಭಯ ದೇಶಗಳ ನಡುವಿನ ಈ ದಾಳಿ-ಪ್ರತಿದಾಳಿ ಮತ್ತೊಂದು ಸುತ್ತಿನ ಸಂಘರ್ಷದ ಆತಂಕ ತಂದೊಡ್ಡಿದೆ.
ಇರಾನಿನ ರೆವಲ್ಯೂಷನರಿ ಗಾರ್ಡ್ ಪಡೆಗಳು ಹಾರ್ಮುಜ್ ಜಲಸಂಧಿಗೆ ಸಮುದ್ರ ಸುರಂಗಮಾರ್ಗಗಳ ಮೂಲಕ ರಾಕೆಟ್‌ಗಳನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿರುವುದನ್ನು ಗಮನಿಸಲಾಗಿತ್ತು ಎಂದು ಹಾಕಿನ್ಸ್ ಹೇಳಿದ್ದಾರೆ.
ಈ ಜಲಮಾರ್ಗದಲ್ಲಿ ಇರಾನ್ ಇನ್ನಷ್ಟು ಸಮುದ್ರ ಮೈನ್‌ಗಳನ್ನು ನಿಯೋಜಿಸುವುದನ್ನು ತಡೆಯುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅಮೆರಿಕ ಮಿಲಿಟರಿ ತಿಳಿಸಿದೆ. ಜಲಸಂಧಿಯ ಅಂತಾರಾಷ್ಟ್ರೀಯ ಹಡಗು ಸಂಚಾರ ಮಾರ್ಗದಲ್ಲಿದ್ದ ಸಮುದ್ರ ಮೈನ್‌ಗಳನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಕಳೆದ ವಾರವಷ್ಟೇ ಘೋಷಿಸಿತ್ತು. ‘ಅಮೆರಿಕದ ಪಡೆಗಳು ಈ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಪ್ರಮುಖ ಜಲಮಾರ್ಗದಲ್ಲಿ ಮುಕ್ತ ವಾಣಿಜ್ಯ ಸಂಚಾರವನ್ನು ರಕ್ಷಿಸಲು ಸದಾ ಸಿದ್ಧವಾಗಿವೆ’ ಎಂದು ಹಾಕಿನ್ಸ್ ತಿಳಿಸಿದ್ದಾರೆ.
ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ಆರು ತಿಂಗಳನ್ನು ಪೂರೈಸಿದ ಬೆನ್ನಲ್ಲೇ ಮತ್ತೆ ಈ ದಾಳಿಯೂ ನಡೆದಿದೆ. ಏಪ್ರಿಲ್ ತಿಂಗಳ ಕದನ ವಿರಾಮವು ಎರಡು ದೇಶಗಳ ನಡುವಿನ ತೀವ್ರವಾದ ಹೋರಾಟಕ್ಕೆ ಅಂತ್ಯ ಹಾಡಿದ ನಂತರ, ಉಭಯ ದೇಶಗಳ ನಡುವಿನ ವೈರತ್ವ ಕೊಂಚ ಶಾಂತವಾಗಿತ್ತು. ಆದಾಗ್ಯೂ ಹಾರ್ಮೊಜ್ ಜಲಸಂಧಿಯ ಸುತ್ತಮುತ್ತ ನಡೆಯುತ್ತಿರುವ ನಿರಂತರ ದಾಳಿಗಳು ಅಂತಿಮ ಶಾಂತಿ ಒಪ್ಪಂದದ ಸಾಧ್ಯತೆಗಳಿಗೆ ಆತಂಕ ಒಡ್ಡುತ್ತಲೇ ಇವೆ. ಈ ಜಲಮಾರ್ಗವು ಸಂಘರ್ಷದ ಪ್ರಮುಖ ಕೇಂದ್ರಬಿಂದುವಾಗಿಯೇ ಉಳಿದಿದೆ.
ದಾಳಿ ನಂತರ ಕಚ್ಚಾ ತೈಲ ಬೆಲೆ ಏರಿಕೆ
ಇರಾನ್ ಮೇಲಿನ ಅಮೆರಿಕದ ದಾಳಿಯ ಬೆನ್ನಲೇ ಕಚ್ಚಾ ತೈಲದ ಬೆಲೆಗಳು ಹೆಚ್ಚಾಗಿವೆ. ಅಂತರಾಷ್ಟ್ರೀಯ ಮಾನದಂಡವಾಗಿರುವ ನಾರ್ತ್ ಸಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು 90 ಯುಎಸ್‌ಡಿ ಗಡಿಯನ್ನು ದಾಟಿ, ಪ್ರತಿ ಬ್ಯಾರಲ್‌ಗೆ 90.31 ಯುಎಸ್‌ಡಿಗೆ ತಲುಪಿದೆ. ಅಮೆರಿಕಾದ ಮಾನದಂಡವಾದ ವೆಸ್ಟ್ ಟೆಕ್ಸಾನ್ ಇಂಟರ್ಮೀಡಿಯೇಟ್ ಬೆಲೆಯು 85.41 ಯುಎಸ್‌ಡಿಗೆ ಏರಿದೆ. ನವೆಂಬರ್‌ನ ಮಧ್ಯಂತರ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ, ಅಮೆರಿಕಾದಲ್ಲಿ ಈ ಸಂಘರ್ಷವು ರಾಜಕೀಯವಾಗಿ ತೀರ್ವ ಚರ್ಚೆಗೆ ಗ್ರಾಸವಾಗಿರುವ ಸಮಯದಲ್ಲೇ ಉಭಯ ದೇಶಗಳ ನಡುವೆ ಮತ್ತೆ ಸೇನಾ ದಾಳಿಗಳು ನಡೆದಿವೆ.