ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ಭಾರತ ಮಹಾಶಕ್ತಿಯಲ್ಲ, ವಿಶ್ವಗುರು”: ಕೆನಡಾದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

Mohan Bhagwat: ಜಗತ್ತಿನಾದ್ಯಂತ ಕಿರುಕುಳ ಮತ್ತು ಯುದ್ಧದಿಂದ ಪಲಾಯನ ಮಾಡಿ ಬರುವವರಿಗೆ ಭಾರತವು ಐತಿಹಾಸಿಕವಾಗಿ ಆಶ್ರಯ ನೀಡಿದೆ ಎಂದು ಕೆನಡಾದ ಟೊರೊಂಟೊದಲ್ಲಿ ನಡೆದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಭಾರತವು ಮಹಾಶಕ್ತಿಯಾಗಿ ನಿಲ್ಲದೆ, ವಿಶ್ವಗುರು ಆಯಿತು ಎಂದು ಅವರು ಹೇಳಿದರು.

“ಭಾರತ ಮಹಾಶಕ್ತಿಯಲ್ಲ, ವಿಶ್ವಗುರು”: ಮೋಹನ್ ಭಾಗವತ್ ಹೇಳಿಕೆ

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ -

Priyanka P
Priyanka P Aug 31, 2026 1:12 PM

ಟೊರೊಂಟೊ, ಆ.31: ಭಾರತವು ಮಹಾಶಕ್ತಿಯಾಗಿ ನಿಲ್ಲದೆ, ಮಾನವೀಯತೆಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ವಿಶ್ವಗುರು ಆಯಿತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಭಾರತದ ಸಾಂಸ್ಕೃತಿಕ ಮತ್ತು ನಾಗರಿಕತೆಯ ಡಿಎನ್‌ಎ (DNA) ಜಾಗತಿಕ ಸ್ನೇಹ, ಆಶ್ರಯ ಹಾಗೂ ವೈವಿಧ್ಯತೆಯ ಮೇಲಿನ ಗೌರವದಲ್ಲಿ ಬೇರೂರಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಕೆನಡಾದ ಟೊರೊಂಟೊದಲ್ಲಿ ನಡೆದ ‘ಹಿಂದು ವಿಶ್ವ ಬಂಧು – ಸ್ನೇಹದೊಂದಿಗೆ ವಿಶ್ವವನ್ನು ಅಪ್ಪಿಕೊಳ್ಳಿ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಜಗತ್ತಿನಾದ್ಯಂತ ಕಿರುಕುಳ ಮತ್ತು ಯುದ್ಧದಿಂದ ಪಲಾಯನ ಮಾಡಿ ಬರುವವರಿಗೆ ಭಾರತವು ಐತಿಹಾಸಿಕವಾಗಿ ಆಶ್ರಯ ನೀಡಿರುವುದನ್ನು ಒತ್ತಿ ಹೇಳಿದರು. ಭಾರತವನ್ನು ಸೂಪರ್‌ಪವರ್‌ ಎಂದು ಕರೆಯಬಹುದು. ಆದರೆ ಅದು ಸೂಪರ್‌ಪವರ್ ಆಗಿಲ್ಲ. ಭಾರತವು ಜಗತ್ತಿನ ಸೇವೆ ಮಾಡಿತು. ಮಹಾಶಕ್ತಿಯಾಗುವ ಬದಲು, ತನ್ನ ಸ್ವಭಾವ ಮತ್ತು ಗುಣಗಳಿಂದಲೇ ಅದು ವಿಶ್ವಗುರುವಾಯಿತು ಎಂದು ಅವರು ಹೇಳಿದರು.

Priyank Kharge: ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ; ಮೋಹನ್ ಭಾಗವತ್ ಅಮೆರಿಕ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಅಂತಾರಾಷ್ಟ್ರೀಯ ಮಾನವೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ಮುಂಚೂಣಿಗೆ ಬಂದು ನೆರವು ನೀಡಿದ್ದ ಬಗ್ಗೆ ಮೋಹನ್ ಭಾಗವತ್ ಅವರು ನೆನಪಿಸಿಕೊಂಡಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್ ನಿರಾಶ್ರಿತರು ಎದುರಿಸಿದ ದುಸ್ಥಿತಿಯನ್ನು ಸ್ಮರಿಸಿದ ಅವರು, ಆ ಸಮಯದಲ್ಲಿ ಜಾಮ್‌ನಗರದ ಮಹಾರಾಜರು ಆ ನಿರಾಶ್ರಿತರಿಗೆ ತಮ್ಮ ದೇಶಕ್ಕೆ ಸುರಕ್ಷಿತವಾಗಿ ಮರಳುವವರೆಗೆ ಆಶ್ರಯ ಮತ್ತು ರಕ್ಷಣೆಯನ್ನು ಹೇಗೆ ನೀಡಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ.

ಇದೊಂದೇ ಅಲ್ಲ, ಇಂತಹ ಹಲವಾರು ನಿದರ್ಶನಗಳಿವೆ. ಇದು ಇಂದಿಗೂ ಮುಂದುವರಿಯುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದರು. ಮಧ್ಯಪ್ರಾಚ್ಯದಲ್ಲಿ (Middle East) ಇತ್ತೀಚೆಗೆ ನಡೆದ ಸಂಘರ್ಷದ ವೇಳೆ ಸ್ಥಳಾಂತರಿಸುವಿಕೆ ಕಾರ್ಯಾಚರಣೆಗಳ ಬಗ್ಗೆ ವಿವರಿಸಿದ ಅವರು, ಭಾರತೀಯ ಮಿಲಿಟರಿಯು ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದ ಭಾರತದ ನಾಗರಿಕರನ್ನು ಮಾತ್ರವಲ್ಲದೆ, ಇತರ ಏಳು ದೇಶಗಳ ಪ್ರಜೆಗಳನ್ನೂ ಸಹ ಹೇಗೆ ರಕ್ಷಿಸಿದವು ಎಂಬುದನ್ನು ತೆರೆದಿಟ್ಟರು.

ಮುಸ್ಲಿಮರು, ಕ್ರಿಶ್ಚಿಯನ್ನರು, ಯಹೂದಿಗಳು ಮತ್ತು ಪಾರ್ಸಿಗಳು ಕಿರುಕುಳದ ಭಯವಿಲ್ಲದೆ ಭಾರತದಲ್ಲಿ ಐತಿಹಾಸಿಕವಾಗಿ ಶಾಂತಿಯುತ ಆಶ್ರಯ ಮತ್ತು ಜ್ಞಾನವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಜಗತ್ತಿನ ಯಾವುದೇ ಸ್ಥಳದಲ್ಲಿ, ಯಾರಾದರೂ ಕಿರುಕುಳಕ್ಕೊಳಗಾಗಿದ್ದರೆ, ಅವರಿಗೆ ಭಾರತದಲ್ಲಿ ಮಾತ್ರ ಆಶ್ರಯ ಸಿಗುತ್ತಿತ್ತು. ಭಾರತೀಯ ನಾಗರಿಕತೆಯು ಪ್ರಾಬಲ್ಯಕ್ಕಿಂತ ಹೆಚ್ಚಾಗಿ ಜ್ಞಾನವನ್ನು ಹರಡುತ್ತದೆ ಎಂದು ಭಾಗವತ್ ಹೇಳಿದರು.

ಇತರರಿಗೆ ಸಹಾಯ ಮಾಡುವ ಭಾರತದ ನಾಗರಿಕ ಸಂಪ್ರದಾಯವನ್ನು ಒತ್ತಿ ಹೇಳಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಸಂಕಷ್ಟದಲ್ಲಿರುವ ಜನರು ಸಹಾಯವನ್ನು ಕೋರಿದಾಗ ದೇಶವು ಎಂದಿಗೂ ಸಹಾಯವನ್ನು ನಿರಾಕರಿಸಲಿಲ್ಲ. ಸಹಾಯ ಕೇಳದೆ ಇದ್ದರೂ ಕೂಡ ಸಂಕಷ್ಟದಲ್ಲಿರುವವರಿಗೆ ತನ್ನ ಸಹಕಾರವನ್ನು ನೀಡಿತು. ಇದು ಸಂಪ್ರದಾಯ, ಇದು ಭಾರತದ ಡಿಎನ್ಎ ಎಂದು ಭಾಗವತ್ ಒತ್ತಿ ಹೇಳಿದರು.