Pregnancy Tips: ಸಿಸೇರಿಯನ್ ಹೆರಿಗೆಯ ಬಳಿಕ ಸೇವಿಸಬೇಕಾದ, ಸೇವಿಸಬಾರದ ಆಹಾರಗಳಿವು
ಸಿಸೇರಿಯನ್ ಬಳಿಕ ತಾಯಿಯ ಆಹಾರದಲ್ಲಿ ಏನನ್ನು ಸೇರಿಸಬೇಕು, ಏನನ್ನು ಸೇರಿಸಬಾರದು ಎನ್ನುವುದು ಮುಖ್ಯವಾಗುತ್ತದೆ. ಒಂದು ವೇಳೆ ಆಹಾರ ಸೇವನೆಯ ಬಗ್ಗೆ ಕಾಳಜಿ ವಹಿಸದಿದ್ದರೆ, ಮಾನಸಿಕ, ದೈಹಿಕ, ಭಾವನಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

cesarean delivery

ನವದೆಹಲಿ: ಹೆರಿಗೆಯ ಬಳಿಕ ಹುಟ್ಟಿದ ಮಗುವಿನ ಆರೈಕೆ ಜತೆಗೆ ತಾಯಿಯ ಆರೋಗ್ಯ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮಗುವಿನ ಬೆಳವಣಿಗೆಗೆ ತಾಯಿಯ ಎದೆ ಹಾಲು ಮುಖ್ಯವಾಗಿರುವುದರಿಂದ ತಾಯಿಯ ಪೌಷ್ಟಿಕ ಆಹಾರ ಸೇವನೆ ಮಾಡಬೇಕಾಗುತ್ತದೆ. ಅದರಲ್ಲೂ ಸಿಸೇರಿಯನ್ ಬಳಿಕ ತಾಯಿಯ ಆಹಾರದಲ್ಲಿ ಏನೆಲ್ಲ ಒಳಗೊಂಡಿರಬೇಕು ಎನ್ನುವುದು ತಿಳಿದಿರಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಒಂದು ವೇಳೆ ಆಹಾರ ಸೇವನೆಯ ಬಗ್ಗೆ ಕಾಳಜಿ ವಹಿಸದಿದ್ದರೆ ಮಾನಸಿಕ, ದೈಹಿಕ, ಭಾವನಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಈ ಬಗ್ಗೆ ಎಚ್ಚರಿಕೆ ನೀಡುತ್ತಾರೆ (Health Tips). ಸೀಸರಿಯನ್ ಹೆರಿಗೆ ಆದ ನಂತರ ತಾಯಿಯ ಆಹಾರ ಕ್ರಮ ಹೇಗಿರಬೇಕೇಂದು ತಿಳಿಯಲು ಈ ಮಾಹಿತಿ ಓದಿ.
ಕಬ್ಬಿಣಾಂಶಯುಕ್ತ ಆಹಾರ
ಸೀಸರಿಯನ್ ಹೆರಿಗೆ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ರಕ್ತ ನಷ್ಟವಾಗುವ ಹಿನ್ನೆಲೆಯಲ್ಲಿ ಬಾಣಂತಿ ಕಬ್ಬಿಣಾಂಶಯುಕ್ತ ಆಹಾರಗಳ ಸೇವಿಸಬೇಕು. ಇದಕ್ಕಾಗಿ ಬೆಲ್ಲ, ತುಪ್ಪ, ಹಣ್ಣು, ಒಣಗಿದ ಹಣ್ಣು, ಅಂಜೂರದ ಸೇವಿಸಬೇಕು. ಹಾಗೆಯೇ ಗೋಡಂಬಿ, ಬಾದಾಮಿ ಮತ್ತು ವಾಲ್‌ನಟ್‌ಗಳಂತಹ ಬೀಜಗಳು ಸಾಕಷ್ಟು ಪೌಷ್ಟಿಕಾಂಶ ಹೊಂದಿವೆ. ಅಲ್ಲದೆ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಸತು ಮತ್ತು ವಿಟಮಿನ್ ಕೆ, ಬಿ ಮತ್ತು ಇ ಹೇರಳವಾಗಿದೆ.
ಪ್ರೋಟೀನ್ ಭರಿತ ಆಹಾರ
ಹೆರಿಗೆಯ ನಂತರ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿದರೆ ತಾಯಿಯ ಆರೋಗ್ಯ ಸುಧಾರಣೆ ಆಗುತ್ತದೆ. ಹೀಗಾಗಿ ಪ್ರೋಟಿನ್‌ಯುಕ್ತ ಆಹಾರವಾದ ಮೊಟ್ಟೆ, ಮೀನು, ಕೋಳಿ, ಹಾಲು ಇತ್ಯಾದಿ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಕ್ಯಾಲ್ಸಿಯಂ ಅತ್ಯಗತ್ಯ
ಕ್ಯಾಲ್ಸಿಯಂ ಸಮೃದ್ಧ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇದಕ್ಕಾಗಿ ಕಿವಿ, ಮಾವು, ಬಾದಾಮಿ, ಕಲ್ಲಂಗಡಿ ಹಣ್ಣು, ಮೊಸರು, ಬೀನ್ಸ್, ಒಣಗಿದ ಬಟಾಣಿ, ಟೋಫು, ಹಸಿರು ಸೊಪ್ಪು, ಮೀನು, ಗೋಧಿ, ನವಣೆ, ರಾಗಿ, ಕಡಲೆ ಮತ್ತು ಸೋಯಾಬೀನ್ ಇತ್ಯಾದಿ ಆಹಾರದಲ್ಲಿ ಸೇರಿಸಬಹುದು.
ಹೆಚ್ಚು ನೀರು ಕುಡಿಯುವುದು
ಹೆರಿಗೆಯ ನಂತರ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತಿದ್ದು, ಬಾಣಂತಿಯರು ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಬಹಳ ಅಗತ್ಯ. ಇದು ತಾಯಿ ಮತ್ತು ಮಗುವಿನ ಚಯಾ ಪಚಯವನ್ನು ಸುಧಾರಿಸಿ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದವಸ ಧಾನ್ಯಗಳು
ಮಗು ಆದ ಬಳಿಕ ದವಸ ಧಾನ್ಯಗಳನ್ನು ತಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡುವುದು ಅತೀ ಅಗತ್ಯ. ಬಾಣಂತಿಯರು ಇದನ್ನು ಬಳಸಿದರೆ, ಅವರಿಗೆ ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗಲಿದೆ. ದೇಹಕ್ಕೆ ಬೇಕಾಗಿರುವಂತಹ ನಾರಿನಾಂಶವು ದೊರೆಯುವ ಜತೆಗೆ ಜೀರ್ಣಕ್ರಿಯೆ ವ್ಯವಸ್ಥೆಯ ಸುಧಾರಣೆ ಮಾಡಲು ಸಹಾಯಕವಾಗುತ್ತದೆ.
ವಿಟಮಿನ್ ಸಮೃದ್ಧ ಆಹಾರ
ಹಾಗೆಯೇ ಶೀಘ್ರ ಚೇತರಿಕೆಗಾಗಿ ವಿಟಮಿನ್ ಸಮೃದ್ಧ ವಸ್ತುಗಳನ್ನು ಆಹಾರದಲ್ಲಿ ಸೇರಿಸಿದರೆ ಉತ್ತಮ. ಇದಕ್ಕಾಗಿ ಕ್ಯಾರಟ್, ಗೆಣಸು, ಸೀತಾಫಲ, ಹಸಿರು ತರಕಾರಿಗಳು, ಪಾಲಕ್, ದಾಳಿಂಬೆ, ಸ್ಟ್ರಾಬೆರಿ, ಬ್ಲೂಬೆರಿಗಳು, ಮಾವಿನ ಹಣ್ಣುಗಳು, ಕಲ್ಲಂಗಡಿ, ಕಿತ್ತಳೆ ಮತ್ತು ದ್ರಾಕ್ಷಿಗಳ ಸೇವನೆ ಮಾಡಬಹುದು.
ಇವುಗಳನ್ನು ತಪ್ಪಿಸಿ
ಸಂಸ್ಕರಿಸಿದ ಆಹಾರ ಅಥವಾ ಜಂಕ್ ಫುಡ್: ಮಗುವಾದ ನಂತರದಲ್ಲಿ ಬಾಣಂತಿಯರು ಜಂಕ್ ಫುಡ್ ಅಥವಾ ಸಂಸ್ಕರಿಸಿದ ಆಹಾರಗಳ ಸೇವನೆ ಮಾಡಬಾರದು. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳು, ಕೊಬ್ಬು, ಸಕ್ಕರೆ ಮತ್ತು ಉಪ್ಪು ಇರಲಿದ್ದು ಇದರಿಂದ ತಾಯಿ ಮಗುವಿನ ಆರೋಗ್ಯವು ಕೆಡಲಿದೆ. ಹಾಗಾಗಿ ಹೊರಗೆ ಪ್ಯಾಕ್ ಮಾಡಿದ ರೆಡಿಮೇಡ್ ಆಹಾರವನ್ನು ತಿನ್ನದಂತೆ ತಜ್ಞರು ಸಲಹೆ ನೀಡಿದ್ದಾರೆ.
ಕೆಫೀನ್: ಹೆರಿಗೆಯ ನಂತರ ಹೆಚ್ಚಾಗಿ ಕಾಫಿ, ಚಹಾ ಕುಡಿಯುವುದನ್ನು ತಪ್ಪಿಸಿ. ಇದು ಅತಿಯಾದರೆ ಮಗುವಿನ ನಿದ್ರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ತನ್ಯಪಾನದ ಮೂಲಕ ಕೆಫೀನ್ ತಾಯಿಯಿಂದ ಮಗುವಿನ ದೇಹಕ್ಕೆ ಸೇರುತ್ತದೆ. ಕೆಫೀನ್‌ನ ಅತಿಯಾದ ಸೇವನೆಯು ಮಗುವಿನ ದೇಹದಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಮಗುವಿಗೆ ನಿದ್ದೆ ಬರದಂತೆ ಮಾಡುತ್ತದೆ.
ಇದನ್ನು ಓದಿ: Health Tips: ಸೌತೆಕಾಯಿಯನ್ನು ಈ ಆಹಾರಗಳ ಜತೆ ತಪ್ಪಿಯೂ ಸೇವಿಸಬೇಡಿ
ಸಕ್ಕರೆ ಪಾನೀಯಗಳು: ಹೆಚ್ಚು ಸಕ್ಕರೆಭರಿತ ತಂಪು ಪಾನೀಯಗಳು ಕ್ಯಾಲೋರಿಗಳಿಂದ ತುಂಬಿದ್ದು, ಬಾಣಂತಿಯರು ಇದನ್ನು ತಪ್ಪಿಸಬೇಕು. ಸಕ್ಕರೆ ಭರಿತ ಆಹಾರವು ತೂಕ ಹೆಚ್ಚಿಸಲು ಕಾರಣವಾಗುತ್ತದೆ. ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸುವುದರಿಂದ ಹೆರಿಗೆ ಬಳಿಕ ಮಹಿಳೆಯರಿಗೆ ಸುಸ್ತು ಕೂಡ ಜಾಸ್ತಿಯಾಗುವ ಸಾಧ್ಯತೆ ಇದೆ.
ಆಲ್ಕೋಹಾಲ್: ಆಲ್ಕೋಹಾಲ್ ಸೇವನೆಯು ಮಗುವಿಗೆ ಸುರಕ್ಷಿತವಲ್ಲ. ಹಾಗಾಗಿ ಹಾಲುಣಿಸುವ ತಾಯಂದಿರು ಆಲ್ಕೋಹಾಲ್ ಸೇವಿಸದಿರುವುದು ಸುರಕ್ಷಿತ ಆಯ್ಕೆಯಾಗಿದ್ದು ಇದು ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.