ಅಪರೂಪದ ಮಲ್ಟಿಪಲ್ ಮೈಲೋಮಾದಿಂದ ನರಳುತ್ತಿದ್ದ ವ್ಯಕ್ತಿಗೆ ದಕ್ಕಿತು ಓಡಾಡುವ ಶಕ್ತಿ ಮತ್ತು ಹೊಸ ಜೀವನ
ಕೆಂಗೇರಿಯ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಫಿಸಿಯೋಥೆರಪಿಸ್ಟ್ ಹಾಗೂ ವಿಭಾಗದ ಮುಖ್ಯಸ್ಥ ರಾದ (ಎಚ್‌ಓಡಿ) (ಸಿಒಒ) ಬಾಬು ಜಾರ್ಜ್ ಅವರ ನೇರ ಮೇಲ್ವಿಚಾರಣೆ ಮತ್ತು ಆಪ್ತ ಆರೈಕೆಯಲ್ಲಿ, ಸದರಿ ರೋಗಿಯು ಬರೋಬ್ಬರಿ ಒಂಬತ್ತು ತಿಂಗಳುಗಳ ಕಾಲ ಅತ್ಯಂತ ಎಚ್ಚರಿಕೆ ಯಿಂದ ನಿಯಂತ್ರಿಸಲ್ಪಟ್ಟ ಪುನರ್ವಸತಿ ಚಿಕಿತ್ಸಾ ಪ್ರಕ್ರಿಯೆಗೆ ಒಳಗಾದರು.
-
ಬೆಂಗಳೂರು: ಫೋರ್ಟಿಸ್ ಹೆಲ್ತ್ ಕೇರ್ ಜಾಲದ ಅಂಗವಾಗಿರುವ ಬೆಂಗಳೂರಿನ ಉಪನಗರ ಕೆಂಗೇರಿಯ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯು, ವಿಶ್ವ ಫಿಸಿಯೋಥೆರಪಿ ದಿನದ ವಿಶೇಷ ಸಂದರ್ಭದಲ್ಲಿ ಅಪರೂಪದ ವೈದ್ಯಕೀಯ ಯಶೋಗಾಥೆಯೊಂದನ್ನು ಬೆಳಕಿಗೆ ತಂದಿದೆ. ತೀರಾ ಅಪರೂಪದ ಬಗೆಯ ಮಲ್ಟಿಪಲ್ ಮೈಲೋಮಾ ರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ಹಾಸಿಗೆ ಹಿಡಿದು ಅಸಹಾಯಕರಾಗಿದ್ದ ಮೂವತ್ತೊಂಬತ್ತು ವರ್ಷದ ವ್ಯಕ್ತಿಯೊಬ್ಬರು, ನಿರಂತರ ಚಿಕಿತ್ಸೆಯ ಬಳಿಕ ಮರಳಿ ತಮ್ಮ ನಡಿಗೆ, ಓಡಾಟ ಹಾಗೂ ಸಂಪೂರ್ಣ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡ ಘಟನೆಯನ್ನು ಆಸ್ಪತ್ರೆ ಹಂಚಿಕೊಂಡಿದೆ.
ಕೆಂಗೇರಿಯ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಫಿಸಿಯೋಥೆರಪಿಸ್ಟ್ ಹಾಗೂ ವಿಭಾಗದ ಮುಖ್ಯಸ್ಥರಾದ (ಎಚ್‌ಓಡಿ) (ಸಿಒಒ) ಬಾಬು ಜಾರ್ಜ್ ಅವರ ನೇರ ಮೇಲ್ವಿಚಾರಣೆ ಮತ್ತು ಆಪ್ತ ಆರೈಕೆಯಲ್ಲಿ, ಸದರಿ ರೋಗಿಯು ಬರೋಬ್ಬರಿ ಒಂಬತ್ತು ತಿಂಗಳುಗಳ ಕಾಲ ಅತ್ಯಂತ ಎಚ್ಚರಿಕೆ ಯಿಂದ ನಿಯಂತ್ರಿಸಲ್ಪಟ್ಟ ಪುನರ್ವಸತಿ ಚಿಕಿತ್ಸಾ ಪ್ರಕ್ರಿಯೆಗೆ ಒಳಗಾದರು.
ಆರಂಭದಲ್ಲಿ ತಾವಾಗಿಯೇ ಸ್ವತಂತ್ರವಾಗಿ ಹಾಸಿಗೆಯ ಮೇಲೆ ಎದ್ದು ಕುಳಿತುಕೊಳ್ಳಲೂ ಸಾಧ್ಯ ವಾಗದ ಸ್ಥಿತಿಯಲ್ಲಿದ್ದ ಹಾಗೂ ಸೊಂಟದಿಂದ ಕೆಳಭಾಗದ ಎರಡೂ ಕಾಲುಗಳಲ್ಲಿ ಅತ್ಯಂತ ತೀವ್ರವಾದ ಸ್ನಾಯು ನಿಶ್ಯಕ್ತಿಯನ್ನು ಎದುರಿಸುತ್ತಿದ್ದ ಈ ರೋಗಿ, ಹಂತಹಂತವಾಗಿ ಅದ್ಭುತ ಚೇತರಿಕೆ ಕಂಡರು. ಕೊನೆಗೆ ಯಾವುದೇ ಆಸರೆಯಿಲ್ಲದೆ ಸ್ವತಂತ್ರವಾಗಿ ಹೆಜ್ಜೆ ಹಾಕಿ ನಡೆಯುವುದು, ಸ್ವಂತ ವಾಹನ ಚಾಲನೆ ಮಾಡುವುದು, ದಿನನಿತ್ಯ ಅಡುಗೆ ಕೆಲಸಗಳನ್ನು ನಿಭಾಯಿಸುವುದು, ಒಬ್ಬರೇ ಹೊರಗಡೆ ಓಡಾಡುವುದು ಮತ್ತು ಯಶಸ್ವಿಯಾಗಿ ಮರಳಿ ತಮ್ಮ ಕಚೇರಿಯ ಉದ್ಯೋಗಕ್ಕೆ ಹಾಜರಾಗುವ ಹಂತಕ್ಕೆ ತಲುಪುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ರೋಗಿಗೆ ಮೊದಲು ತೀವ್ರವಾದ ಮತ್ತು ನಿರಂತರ ಬೆನ್ನುನೋವಿನಿಂದ ಸಮಸ್ಯೆ ಶುರುವಾಯಿತು. ದಿನಗಳು ಕಳೆದಂತೆ ನೋವು ಉಲ್ಬಣಗೊಂಡು, ಕೊನೆಗೆ ಅವರು ತಾವಾಗಿಯೇ ಹಾಸಿಗೆಯಿಂದ ಏಳಲು ಅಸಾಧ್ಯವಾದ ಗಂಭೀರ ಪರಿಸ್ಥಿತಿ ತಲುಪಿತು. ಆಸ್ಪತ್ರೆಯಲ್ಲಿ ನಡೆಸಲಾದ ಎಂಆರ್‌ಐ ಸ್ಕ್ಯಾನಿಂಗ್ ತಪಾಸಣೆಯು ಅವರ ಬೆನ್ನುಹುರಿಯ ಮೂಳೆಗಳಲ್ಲಿ ಬಹು ಮುರಿತಗಳು (ಮಲ್ಟಿಪಲ್ ಫ್ರ್ಯಾಕ್ಚರ್ಸ್) ಇರುವುದನ್ನು ದೃಢಪಡಿಸಿತು. ತದನಂತರ ನಡೆಸಲಾದ ಹೆಚ್ಚಿನ ಕ್ಲಿನಿಕಲ್ ತಪಾಸಣೆಗಳು ಅವರಿಗೆ ನಾನ್- ಪೋಮ್ಸ್ ಆಸ್ಟಿಯೋಸ್ಕ್ಲೆರೋಟಿಕ್ ಮಲ್ಟಿಪಲ್ ಮೈಲೋಮಾ ಎಂಬ ಅತ್ಯಂತ ಅಪರೂಪದ ಕಾಯಿಲೆ ಇರುವುದನ್ನು ಪತ್ತೆಹಚ್ಚಿದವು.
ಇದು ಪ್ರಮುಖವಾಗಿ ಮೂಳೆಗಳ ಸಾಂದ್ರತೆ ಮೇಲೆ ತೀವ್ರ ಪರಿಣಾಮ ಬೀರುವ ರೋಗವಾಗಿದ್ದು, ಜಗತ್ತಿನ ಒಟ್ಟು ಮಲ್ಟಿಪಲ್ ಮೈಲೋಮಾ ಪ್ರಕರಣಗಳ ಪೈಕಿ ಶೇಕಡಾ ಮೂರಕ್ಕಿಂತಲೂ ಕಡಿಮೆ ಜನರಲ್ಲಿ ಮಾತ್ರ ಇಂತಹ ಅಪರೂಪದ ಸ್ಥಿತಿ ಕಾಣಸಿಗುತ್ತದೆ. ಈ ಕಾಯಿಲೆಯು ಅವರ ಶರೀರದ ಮೂಳೆಗಳನ್ನು ಅತ್ಯಂತ ದುರ್ಬಲ ಹಾಗೂ ಪೆಡಸಾಗುವಂತೆ ಮಾಡಿತು. ಪರಿಣಾಮವಾಗಿ ಬೆನ್ನುಹುರಿಯ ಮೂಳೆಗಳಲ್ಲಿ ಹಲವು ಕಡೆ ಮುರಿತಗಳು ಮತ್ತು ಬಲ ಸೊಂಟದ ಮೂಳೆಯಲ್ಲಿ ಗಂಭೀರ ಬಿರುಕು ಉಂಟಾಗಿ, ಅವರ ದೇಹದ ಚಲನವಲನಗಳು ಸಂಪೂರ್ಣವಾಗಿ ಸ್ಥಗಿತಗೊಂಡವು.
ರೋಗಿಯ ಮೂಲ ಕ್ಯಾನ್ಸರ್ ರೋಗ ಗುಣಪಡಿಸುವ ಉದ್ದೇಶದಿಂದ ತಕ್ಷಣವೇ ಕೀಮೋಥೆರಪಿ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಆದರೆ, ತಿಂಗಳುಗಟ್ಟಲೆ ಯಾವುದೇ ಚಲನೆಯಿಲ್ಲದೆ ಒಂದೇ ಕಡೆ ಮಲಗಿದ್ದರಿಂದ ಅವರ ಶರೀರದಲ್ಲಿ ತೀವ್ರ ಸ್ನಾಯು ದೌರ್ಬಲ್ಯ, ಕೀಲುಗಳು ಬಿಗಿಯಾಗುವುದು ಮತ್ತು ಶ್ವಾಸಕೋಶ ಸಂಬಂಧಿತ ಉಸಿರಾಟದ ತೊಂದರೆಗಳು ಕಾಣಿಸಿಕೊಂಡವು. ಅವರು ಪುನರ್ವಸತಿ ಮತ್ತು ಫಿಸಿಯೋಥೆರಪಿ ತಂಡದ ಸುಪರ್ದಿಗೆ ಬಂದ ಹೊತ್ತಿಗೆ, ಅವರಲ್ಲಿ ಚಲನವಲನ ಶಕ್ತಿ ಬಹುತೇಕ ಶೂನ್ಯವಾಗಿತ್ತು.
ಜೊತೆಗೆ ಮಲ ಮತ್ತು ಮೂತ್ರ ವಿಸರ್ಜನೆಯ ಮೇಲಿನ ನಿಯಂತ್ರಣವೂ ಸಂಪೂರ್ಣವಾಗಿ ತಪ್ಪಿ ಹೋಗಿತ್ತು. ಇದು ಅವರ ದೈನಂದಿನ ಕನಿಷ್ಠ ಅಗತ್ಯ ಕೆಲಸಗಳನ್ನೂ ಅತ್ಯಂತ ಕ್ಲಿಷ್ಟಕರವಾಗಿಸಿತ್ತು. ಅದೇ ಸಂದರ್ಭದಲ್ಲಿ, ಅವರ ಮೂಳೆಗಳು ಗಾಜಿನಂತೆ ತೀರಾ ನಾಜೂಕಾಗಿದ್ದರಿಂದ, ಯಾವುದೇ ಸಣ್ಣ ಚಲನೆಯೂ ಮತ್ತಷ್ಟು ಗಂಭೀರ ಮೂಳೆ ಮುರಿತಕ್ಕೆ ದಾರಿ ಮಾಡಿಕೊಡದಂತೆ ಪ್ರತಿ ವ್ಯಾಯಾಮವನ್ನು ಅತ್ಯಂತ ಸೂಕ್ಷ್ಮವಾಗಿ ಯೋಜಿಸಬೇಕಿತ್ತು.
ಹಾಸಿಗೆಯಿಂದ ಸ್ವತಂತ್ರ ನಡಿಗೆಯತ್ತ ಕಠಿಣ ಮೇಲ್ವಿಚಾರಣೆಯ ಪಯಣ: ರೋಗಿಯ ಆರೋಗ್ಯ ಸ್ಥಿತಿಯ ಗಂಭೀರತೆ ಮತ್ತು ಸಂಕೀರ್ಣತೆಯನ್ನು ಮನಗಂಡು, ತಜ್ಞ ವೈದ್ಯಕೀಯ ಪುನರ್ವಸತಿ ತಂಡವು ಮೊದಲಿಗೆ ಹಾಸಿಗೆಯಲ್ಲೇ ಅತ್ಯಂತ ಸುರಕ್ಷಿತವಾಗಿ ಮಾಡಬಹುದಾದ ಉಸಿರಾಟದ ವ್ಯಾಯಾಮಗಳು, ಶರೀರದ ಸೂಕ್ತ ಭಂಗಿ ನಿರ್ವಹಣೆ ಮತ್ತು ಅತ್ಯಂತ ಮೃದುವಾದ ಅಂಗಾಂಗ ಚಲನೆಗಳ ಮೂಲಕ ಚಿಕಿತ್ಸೆಗೆ ಚಾಲನೆ ನೀಡಿತು.
ಆರಂಭಿಕ ಹಂತದಲ್ಲಿ ಕೀಲುಗಳ ಜಡತ್ವವನ್ನು ಕಳೆದು ಚಲನಶೀಲತೆ ಸುಧಾರಿಸುವುದು ಮತ್ತು ಹಂತ ಹಂತವಾಗಿ ಸ್ನಾಯುಗಳ ಬಲವನ್ನು ಮರುನಿರ್ಮಾಣ ಮಾಡುವುದರ ಕಡೆಗೆ ಸಂಪೂರ್ಣ ಗಮನ ಹರಿಸಲಾಯಿತು. ಇದಾದ ನಂತರವೇ ಅವರನ್ನು ಕೂರಿಸುವ ಮತ್ತು ದೇಹದ ಸಮತೋಲನ ಕಾಯ್ದುಕೊಳ್ಳುವ ಮುಂದುವರಿದ ತರಬೇತಿಗೆ ಅಣಿಗೊಳಿಸಲಾಯಿತು.
ಅವರ ಶಕ್ತಿ ಹಾಗೂ ದೇಹದ ಸ್ಥಿರತೆ ಉತ್ತಮಗೊಂಡಂತೆ, ಕ್ರಮೇಣವಾಗಿ ಎದ್ದು ನಿಲ್ಲುವ ಮತ್ತು ಹೆಜ್ಜೆ ಇಡುವ ನಡಿಗೆಯ ವ್ಯಾಯಾಮಗಳನ್ನು ಪರಿಚಯಿಸಲಾಯಿತು. ಆಸ್ಪತ್ರೆಯಲ್ಲಿ ತರಬೇತಿ ನೀಡುವ ಸಂದರ್ಭದಲ್ಲಿ ಬೆನ್ನುಹುರಿ ಜಾರದಂತೆ ಸ್ಪೈನಲ್ ಬ್ರೇಸ್ ಹಾಗೂ ಕಾಲುಗಳ ಸ್ಥಿರತೆಗಾಗಿ ನೀ ಬ್ರೇಸ್‌ಗಳನ್ನು ತೊಡಿಸಲಾಯಿತು. ತದನಂತರ ವಾಕರ್ ನೆರವಿನೊಂದಿಗೆ ಹೆಜ್ಜೆ ಇಡಲು ಪ್ರೋತ್ಸಾಹಿಸಲಾಯಿತು.
ರೋಗಿಯ ಸಮತೋಲನ ಹಾಗೂ ಶಕ್ತಿ ಹೆಚ್ಚಿದಂತೆಲ್ಲಾ, ಅವರಿಗೆ ನೀಡಲಾಗುತ್ತಿದ್ದ ಕೃತಕ ಆಸರೆ ಮತ್ತು ವೈದ್ಯಕೀಯ ನೆರವನ್ನು ಹಂತಹಂತವಾಗಿ ಕಡಿತಗೊಳಿಸಲಾಯಿತು. ಕೀಮೋಥೆರಪಿಯ ಸಮಾಂತರವಾಗಿಯೇ ಒಂಬತ್ತು ತಿಂಗಳುಗಳ ಕಾಲ ಈ ಪುನರ್ವಸತಿ ನಿರಂತರವಾಗಿ ಸಾಗಿತು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಹೊರರೋಗಿ ವಿಭಾಗದ ಮೂಲಕ ನಿರಂತರ ಆರೈಕೆ ಮುಂದುವರಿಯಿತು, ಪ್ರತಿ ಹಂತದಲ್ಲೂ ಅವರ ದೇಹದ ಚೇತರಿಕೆಗೆ ತಕ್ಕಂತೆ ವ್ಯಾಯಾಮಗಳು ಮತ್ತು ಅವುಗಳ ತೀವ್ರತೆಯನ್ನು ಜಾಗರೂಕತೆಯಿಂದ ಬದಲಾಯಿಸಲಾಯಿತು.
ಈ ಪರಿವರ್ತನೆಯು ನಿಧಾನವಾಗಿದ್ದರೂ, ಅತ್ಯಂತ ಅದ್ಭುತ ಮತ್ತು ಆಶಾದಾಯಕ ಫಲಿತಾಂಶ ವನ್ನು ನೀಡಿತು. ಸಂಪೂರ್ಣವಾಗಿ ಹಾಸಿಗೆ ಹಿಡಿದು, ಆಸರೆಯಿಲ್ಲದೆ ಸ್ವತಃ ಕುಳಿತುಕೊಳ್ಳಲೂ ಸಾಧ್ಯವಾಗದಿದ್ದ ಆ ರೋಗಿಯು, ಮೊದಲು ಸಣ್ಣ ಬೆಂಬಲದೊಂದಿಗೆ ಎದ್ದು ನಿಂತು, ಅಂತಿಮ ವಾಗಿ ಯಾರಿಗೂ ಅವಲಂಬಿತವಾಗದೆ ತಾವೇ ಸ್ವತಂತ್ರವಾಗಿ ಹೆಜ್ಜೆ ಹಾಕಿ ನಡೆದರು.
ಪ್ರಸ್ತುತ ಅವರು ತಾವೇ ಸ್ವಂತ ವಾಹನ ಚಲಾಯಿಸುತ್ತಿದ್ದಾರೆ, ಮನೆಯಲ್ಲಿ ಅಡುಗೆ ಮಾಡುತ್ತಾರೆ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ಸಾರ್ವಜನಿಕವಾಗಿ ಹೊರಗೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಎಂದಿನ ವೃತ್ತಿಪರ ಕಚೇರಿ ಕೆಲಸಗಳಿಗೂ ಮರಳಿ ಹಾಜರಾಗುತ್ತಿದ್ದು, ಕೆಲವೇ ಕೆಲವು ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಅತ್ಯಲ್ಪ ಬಾಹ್ಯ ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಕೆಂಗೇರಿಯ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಫಿಸಿಯೋಥೆರಪಿಸ್ಟ್ ಮತ್ತು ವಿಭಾಗದ ಮುಖ್ಯಸ್ಥರಾದ (ಸಿಒಒ) ಬಾಬು ಜಾರ್ಜ್ ಮಾತನಾಡಿ, “ಕ್ಯಾನ್ಸರ್ ಆರೈಕೆಯ ವಿಚಾರಕ್ಕೆ ಬಂದಾಗ ವೈದ್ಯಕೀಯವಾಗಿ ಕೇವಲ ರೋಗವನ್ನು ಗುಣಪಡಿಸುವುದರ ಮೇಲೆಯೇ ಎಲ್ಲರ ಗಮನ ಕೇಂದ್ರಿಕೃತವಾಗಿರುತ್ತದೆ, ಅದು ಸಹಜ ಕೂಡ. ಆದರೆ ಅದೇ ಹೊತ್ತಿನಲ್ಲಿ ಶರೀರದ ದೈಹಿಕ ಶಕ್ತಿ, ಚಲನಶೀಲತೆ ಮತ್ತು ಸ್ವಾವಲಂಬನೆಯನ್ನು ಕಳೆದುಕೊಳ್ಳುವುದು ರೋಗಿಯ ಒಟ್ಟಾರೆ ಜೀವನವನ್ನೇ ಅಷ್ಟೇ ತೀವ್ರವಾಗಿ ಬದಲಿಸಿಬಿಡುತ್ತದೆ.
ದುರದೃಷ್ಟವಶಾತ್, ರೋಗಿಯು ಸಂಪೂರ್ಣವಾಗಿ ನಿಶ್ಯಕ್ತನಾಗಿ ಹಾಸಿಗೆ ಹಿಡಿದ ನಂತರವಷ್ಟೇ ಬಹುತೇಕ ಸಂದರ್ಭಗಳಲ್ಲಿ ಫಿಸಿಯೋಥೆರಪಿ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಅಂತಹ ಹಂತದಲ್ಲಿ ಚೇತರಿಕೆ ತರುವುದು ವೈದ್ಯರಿಗೂ ಅತ್ಯಂತ ಕಠಿಣ ಸವಾಲಾಗುತ್ತದೆ. ಆದರೆ ಈ ನಿರ್ದಿಷ್ಟ ಪ್ರಕರಣದಲ್ಲಿ, ಮೂಳೆಗಳಿಗೆ ಯಾವುದೇ ಹೊಸ ಹಾನಿಯಾಗದಂತೆ ರಕ್ಷಣಾತ್ಮಕವಾಗಿ ಎಚ್ಚರ ವಹಿಸುತ್ತಲೇ, ಅವರ ಅಂಗಾಂಗಗಳ ಚಲನೆಯನ್ನು ಹಂತ ಹಂತವಾಗಿ ಮರಳಿ ತರಬೇಕಾಯಿತು. ಇಂದು ಆ ವ್ಯಕ್ತಿ ಮತ್ತೆ ತನ್ನ ಸ್ವಾವಲಂಬನೆಯನ್ನು ಪಡೆದುಕೊಂಡಿರುವುದನ್ನು ಕಣ್ಣಾರೆ ನೋಡುವುದು ನಮಗೆ ಅಪಾರ ತೃಪ್ತಿ ತಂದಿದೆ. ನಿಜವಾದ ಚೇತರಿಕೆ ಎಂದರೆ ಕೇವಲ ಕಾಯಿಲೆ ಓಡಿಸುವುದಷ್ಟೇ ಅಲ್ಲ, ಒಬ್ಬ ವ್ಯಕ್ತಿಗೆ ಆತನ ಹಳೆಯ ಬದುಕನ್ನು ಮರಳಿ ಕೊಡುವುದಾಗಿದೆ ಎಂಬುದಕ್ಕೆ ಇದು ಸಾಕ್ಷಿ” ಎಂದು ತಿಳಿಸಿದರು.
ಕೆಂಗೇರಿಯ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ರವಿ ಬಾಗಲಿ ಮಾತನಾಡಿ, “ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ನಾವು ರೋಗಿಯ ಆರೈಕೆ ಎಂದರೆ ಕೇವಲ ಕಾಯಿಲೆಗೆ ಮಾತ್ರ ಔಷಧಿ ನೀಡುವುದಕ್ಕಿಂತ ಮೀರಿದ ಮಹತ್ತರ ಜವಾಬ್ದಾರಿ ಎಂದು ದೃಢ ವಾಗಿ ನಂಬಿದ್ದೇವೆ. ವೈದ್ಯಕೀಯ ಚಿಕಿತ್ಸೆ ಮತ್ತು ಭೌತಿಕ ಪುನರ್ವಸತಿಯಿಂದ ಹಿಡಿದು ದೇಹದ ಚಲನಶೀಲತೆ ಹಾಗೂ ದೈನಂದಿನ ಸ್ವಾತಂತ್ರ್ಯವನ್ನು ಮರಳಿ ಒದಗಿಸುವವರೆಗಿನ ರೋಗಿಯ ಚೇತರಿಕೆಯ ಪ್ರತಿಯೊಂದು ಹಂತವೂ ನಮಗೆ ಅಷ್ಟೇ ಮುಖ್ಯವಾಗಿರುತ್ತದೆ.
ನಮ್ಮ ಸಮಗ್ರ ಮತ್ತು ಬಹುಶಿಸ್ತೀಯ ಆರೋಗ್ಯ ಆರೈಕಾ ವಿಧಾನವು ಈ ಎಲ್ಲಾ ವೈದ್ಯಕೀಯ ಅಂಶಗಳನ್ನು ಒಟ್ಟಾಗಿ ಬೆಸೆಯುತ್ತದೆ. ಇದರಿಂದಾಗಿ ಚಿಕಿತ್ಸೆಯ ಪ್ರತಿ ಹಂತದಲ್ಲೂ ರೋಗಿಗೆ ಸೂಕ್ತ ಬೆಂಬಲ ಸಿಗುವುದು ನಿಶ್ಚಿತವಾಗುತ್ತದೆ. ಕೇವಲ ಜೀವ ಉಳಿಸುವುದಷ್ಟೇ ಅಲ್ಲದೆ, ಸಮಗ್ರ ವೈದ್ಯ ಕೀಯ ಆರೈಕೆಯು ಒಬ್ಬ ರೋಗಿಯನ್ನು ಮತ್ತೆ ಸಮಾಜದಲ್ಲಿ ಘನತೆಯಿಂದ ಸ್ವತಂತ್ರ ಜೀವನ ನಡೆಸುವಂತೆ ಹೇಗೆ ಮರಳಿಸಬಹುದು ಎಂಬುದಕ್ಕೆ ಈ ಯಶಸ್ವಿ ಪ್ರಕರಣವು ಅತ್ಯುತ್ತಮ ನಿದರ್ಶನ ವಾಗಿದೆ” ಎಂದು ಅಭಿಪ್ರಾಯಪಟ್ಟರು.