ಭಾರತ್ ಜೋಡೋ ಯಾತ್ರೆ ಜನಸಾಮಾನ್ಯರ ಸಂಕಷ್ಟಕ್ಕೆ ಪರಿಹಾರದ ಅಡಿಪಾಯ: ಸಿಎಂ
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಭಾರತ್ ಜೋಡೋ ಪಾದಯಾತ್ರೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿ 21 ದಿನಗಳ ಕಾಲ 500 ಕಿ.ಮೀ. ಪಾದಯಾತ್ರೆ ನಡೆದಿದ್ದು, ರಾಷ್ಟ್ರಮಟ್ಟದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸುಮಾರು 4 ಸಾವಿರ ಕಿ.ಮೀ.ಯಾತ್ರೆ ನಡೆದಿದೆ.
-
ಬೆಂಗಳೂರು: ಭಾರತ್ ಜೋಡೋ ಯಾತ್ರೆ ದೇಶದ ಯುವಕರು, ಮಹಿಳೆಯರು, ರೈತರು ಹಾಗೂ ಬಡವರ ಸಮಸ್ಯೆಗಳನ್ನು ಆಲಿಸಿ, ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಅಡಿಪಾಯ ಹಾಕಿಕೊಟ್ಟಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್(Chief Minister D K Shivakumar) ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಭಾರತ್ ಜೋಡೋ ಪಾದಯಾತ್ರೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿ 21 ದಿನಗಳ ಕಾಲ 500 ಕಿ.ಮೀ. ಪಾದಯಾತ್ರೆ ನಡೆದಿದ್ದು, ರಾಷ್ಟ್ರಮಟ್ಟದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸುಮಾರು 4 ಸಾವಿರ ಕಿ.ಮೀ.ಯಾತ್ರೆ ನಡೆದಿದೆ.
ಭಾರತ್ ಜೋಡೋ ಯಾತ್ರೆ ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ನಡೆದ ಯಾತ್ರೆಯಾಗಿದ್ದು, ಯಾತ್ರೆ ವೇಳೆ ರೈತರು, ಚಾಲಕರು, ನೇಕಾರರು, ಯುವಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ಮೂಲಕ ಪಂಚ ಗ್ಯಾರಂಟಿ ಯೋಜನೆಗಳ ರೂಪಿಸುವಿಕೆಗೆ ಅಡಿಪಾಯ ಹಾಕಲಾಯಿತು ಎಂದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಆಶಯಗಳಿಗೆ ತರಬೇತಿ ಕೇಂದ್ರ: ಯಾತ್ರೆಯಲ್ಲಿ ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲಿ ಮೂರು ದಿನ ಭಾಗವಹಿಸಿ ಹೆಜ್ಜೆ ಹಾಕಿದ್ದು ವಿಶೇಷ. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಕರ್ನಾಟಕ ದಲ್ಲಿ ಯಾತ್ರೆ ಸಾಗಿದ ಚಾಮರಾಜನಗರದಿಂದ ರಾಯಚೂರಿನವರೆಗೆ ಪಕ್ಷ ಉತ್ತಮ ಸಾಧನೆ ಮಾಡಿದೆ.
ಭಾರತ್ ಜೋಡೋ ಯಾತ್ರೆಯ ಆಶಯ ಮುಂದುವರಿಸುವ ಉದ್ದೇಶದಿಂದ ಭಾರತ್ ಜೋಡೋ ಭವನ ಟ್ರ ಮೂಲಕ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಆಶಯಗಳ ಕುರಿತು ತರಬೇತಿ ಕೇಂದ್ರ ಸ್ಥಾಪಿಸುವ ಚಿಂತನೆ ಇದೆ ಎಂದರು. 16 ರಿಂದ 35 ವರ್ಷದ ಯುವಕರಿಗಾಗಿ ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವಕರ ಸಂಘಗಳನ್ನು ಸ್ಥಾಪಿಸಲಾಗುತ್ತಿದ್ದು, ಈಗಾಗಲೇ ಲಕ್ಷಾಂತರ ಯುವಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಯುವಕರ ಪ್ರತಿಭೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ರಾಜ್ಯದಲ್ಲಿ 72 ಸಾವಿರ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಮುಂದಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಹೆಚ್ಚಿನ ನಾಯಕರು ಗೆದ್ದಿರುವುದನ್ನು ಸಹಿಸದೆ ಬಿಜೆಪಿ ನಾಯಕರು ದಾಳಿ ನಡೆಸುತ್ತಿದ್ದಾರೆ ಎಂದು ಸಿಎಂ ಡಿಕೆಶಿ ಆರೋಪಿಸಿದರು.
2028, 2029ರಲ್ಲೂ ಕಾಂಗ್ರೆಸ್ ಸರಕಾರ: 2028 ಹಾಗೂ 2029ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬರಲಿದೆ. ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಹಾಗೂ ಜೆಡಿಎಸ್‌ನ 12 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಇದರಿಂದ ಆ ಪಕ್ಷಗಳ ಶಾಸಕರಿಗೆ ತಮ್ಮ ಪಕ್ಷಗಳ ಮೇಲೆ ವಿಶ್ವಾಸವಿಲ್ಲ ಎಂಬುದು ಸ್ಪಷ್ಟವಾಗಿದೆ.
ನನ್ನ ವಿರುದ್ಧ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಎಷ್ಟೇ ಷಡ್ಯಂತ್ರ ನಡೆಸಿದರೂ ಬೆದರಿಕೆಗೆ ಹೆದರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ದೊಡ್ಡ ಪಡೆಯೇ ಪಕ್ಷದ ನಾಯಕರ ಹಿಂದೆ ಇದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಿ, ಕಾಂಗ್ರೆಸ್ ಪಕ್ಷ ಮತ್ತೆ 2028, 2029ರಲ್ಲಿ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.