ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Eye Blinking: ಸರಿಯಾಗಿ ಕಣ್ಣು ಮಿಟುಕಿಸುತ್ತೀರಾ?

Health Tips: ಕಣ್ಣು ಮಿಟುಕಿಸುವುದನ್ನೇ ಮರೆಯುವುದರಿಂದ ಹಲವು ಆರೋಗ್ಯ ಸಮಸ್ಯೆ ಕಂಡುಬರುತ್ತದೆ. ಕೇವಲ ಎವೆಯಿಕ್ಕದಿದ್ದ ಮಾತ್ರಕ್ಕೆ ಕಣ್ಣಿನ ಸಮಸ್ಯೆ ಬರಬಹುದೇ? ಇಷ್ಟಕ್ಕೂ ಕಣ್ಣನ್ನೇಕೆ ಮಿಟುಕಿಸಬೇಕು? ಸ್ವರ್ಗದ ದೇವತೆಗಳಂತೆ ನಾವೂ ಅನಿಮಿಷರಾಗಿ ಇರುವುದರಲ್ಲಿ ಸಮಸ್ಯೆಯೇನಿದೆ? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸರಿಯಾಗಿ ಕಣ್ಣು ಮಿಟುಕಿಸುತ್ತೀರಾ?

ಸಾಂದರ್ಭಿಕ ಚಿತ್ರ.

Profile Ramesh B Mar 18, 2025 7:00 AM

ಬೆಂಗಳೂರು: ʻಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಕೆಲಸ ಆಗಿರುತ್ತದೆʼ ಎಂದರೇನರ್ಥ? ಅತೀ ಸುಲಭದ ಕೆಲಸವದು, ಏನೂ ಕಷ್ಟವಿಲ್ಲ ಎಂದರಲ್ಲವೇ? ಆದರೆ ಇತ್ತೀಚೆಗೆ ಕಣ್ಣು ಮುಚ್ಚಿ ಬಿಡುವುದೇ ಜನಕ್ಕೆ ಕಷ್ಟ ಎನ್ನುವಂತಾಗಿದೆ (Eye Blinking). ಹೌದು, ಪರದೆಗೆ ಕಣ್ಣು ಕೀಲಿಸಿ ಬಿಡುಗಣ್ಣಾಗಿ ಕುಳಿತಿರುವ ಇಂದಿನ ಎಲ್ಲರೂ ಕಣ್ಣು ಮಿಟುಕಿಸುವುದನ್ನೇ ಮರೆಯುತ್ತಿದ್ದಾರೆ, ಹಲವು ಬಗೆಯ ಕಣ್ಣಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಕೇವಲ ಎವೆಯಿಕ್ಕದಿದ್ದ ಮಾತ್ರಕ್ಕೆ ಕಣ್ಣಿನ ಸಮಸ್ಯೆ ಬರಬಹುದೇ? ಇಷ್ಟಕ್ಕೂ ಕಣ್ಣನ್ನೇಕೆ ಮಿಟುಕಿಸಬೇಕು? (Health Tips) ಸ್ವರ್ಗದ ದೇವತೆಗಳಂತೆ ನಾವೂ ಅನಿಮಿಷರಾಗಿ ಇರುವುದರಲ್ಲಿ ಸಮಸ್ಯೆಯೇನಿದೆ?

ಕಣ್ಣು ಮಿಟುಕಿಸುವುದು

ಇದು ದೇಹದ ಪರಾವರ್ತಿತ ಪ್ರತಿಕ್ರಿಯೆ. ನಾವು ತಲೆ ಕೆರೆದುಕೊಳ್ಳುವಂತೆ ನೆನಪಿನಿಂದ ಕಣ್ಣು ಮಿಟಕಿಸಬೇಕೆಂದಿಲ್ಲ, ಅದು ತನ್ನಷ್ಟಕ್ಕೆ ಆಗುತ್ತಿರುತ್ತದೆ. ಕಣ್ಣಿನಲ್ಲಿ ಸಾಕಷ್ಟು ತೇವವನ್ನು ಕಾಪಾಡಿಕೊಂಡು, ಸೋಂಕುಗಳು ಕಾಡದಂತೆ ರಕ್ಷಿಸಿ, ದೂಳು, ಹೊಗೆ, ಪರಾಗ, ಕಸ ಮುಂತಾದ ಬೇಡದ ವಸ್ತುಗಳು ಕಣ್ಣಿಗೆ ತೊಂದರೆ ನೀಡುವುದನ್ನು ತಪ್ಪಿಸುವುದೇ ಕಣ್ಣು ಮಿಟುಕಿಸುವುದರ ಮುಖ್ಯ ಉದ್ದೇಶ. ಕಾರಿನ ವಿಂಡ್‌ಶೀಲ್ಡ್‌ ಮೇಲಿನ ವೈಪರ್‌ ಮಾಡುವ ಕೆಲಸವನ್ನು ಗಮನಿಸಿದ್ದೀರಲ್ಲವೇ? ಕಣ್ಣು ರೆಪ್ಪೆಗಳೂ ಹಾಗೆಯೇ ಕಣ್ಣನ್ನು ಸದಾ ಕಾಲ ಸ್ವಚ್ಛ ಮಾಡುತ್ತಲೇ ಇರುತ್ತವೆ.

ಈ ಸುದ್ದಿಯನ್ನೂ ಓದಿ: Summer Health Tips: ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆ!

ಎಷ್ಟು ಸಾರಿ?

ಎವೆಯಿಕ್ಕುವುದಕ್ಕೂ ಲೆಕ್ಕವಿದೆಯೇ ಎಂದು ನಗಬೇಡಿ… ಇದೆ! ನೈಸರ್ಗಿಕವಾಗಿ ಕಣ್ಣು ಮಿಟುಕಿಸುವುದು ನಿಮಿಷಕ್ಕೆ 15ರಿಂದ 17 ಸಾರಿ. ಆದರೆ ಕಂಪ್ಯೂಟರ್‌ ಅಥವಾ ಫೋನಿನ ಪರದೆಗೆ ಕಣ್ಣು ಒತ್ತಿಟ್ಟುಕೊಂಡವರು 5 ಸಾರಿ ಕಣ್ಣು ಮಿಟುಕಿಸುವುದೂ ಕಷ್ಟವಂತೆ. ಅದರಲ್ಲೂ ಏರ್‌ ಕಂಡೀಶನ್‌ ಇರುವ ಸ್ಥಳಗಳಾಗಿದ್ದರೆ, ಹೀಟರ್‌ ಹಾಕಿಕೊಂಡಿದ್ದರೆ, ಆ ಜಾಗಗಳ ತೇವಾಂಶ ಸಹಜವಾಗಿಯೇ ಕಡಿಮೆ ಇರುತ್ತದೆ. ಅಂಥದ್ದರಲ್ಲಿ ಪರದೆಗೆ ಕಣ್ಣು ನೆಟ್ಟಿಕೊಂಡವರು ಮಿಟುಕಿಸಲೂ ಮರೆತರೆ ಕಣ್ಣಿನ ತೇವಾಂಶ ಯಾವ ಪ್ರಮಾಣದಲ್ಲಿ ಕಡಿಮೆಯಾಗಬಹುದು ಎಂಬುದನ್ನು ಊಹಿಸಿ. ಹಾಗಾಗಿಯೇ ʻಡ್ರೈ ಐʼ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಹೆಚ್ಚುತ್ತಿದೆ.

ದಿನಕ್ಕೆ ಎಂಟು ತಾಸು ಪರದೆಯನ್ನು ನೋಡುವುದು ಇಂದಿನ ದಿನಗಳಲ್ಲಿ ದೊಡ್ಡ ವಿಷಯವೇ ಅಲ್ಲ. ಟಿವಿ, ಕಂಪ್ಯೂಟರ್‌, ಟ್ಯಾಬ್‌, ಮೊಬೈಲು ಎನ್ನುತ್ತಾ ನಮಗೇ ತಿಳಿಯದಂತೆ 8 ತಾಸುಗಳು ಕಳೆದೇ ಹೋಗುತ್ತವೆ. ಇದರಿಂದ ಡಿಜಿಟಲ್‌ ಐ ಸ್ಟ್ರೇನ್‌ ಎನ್ನಲಾಗುವ ಗೆಜೆಟ್‌-ಸಂಜಾತ ಕಣ್ಣುಗಳ ಒತ್ತಡದ ಸಮಸ್ಯೆ ಎಲ್ಲರಲ್ಲೂ ಹೆಚ್ಚುತ್ತಿದೆ. ಕಣ್ಣು ಕೆಂಪಾಗುವುದು, ಉರಿ, ಉಜ್ಜುವಂತೆ ಪ್ರೇರೇಪಿಸುವ ಕಿರಿಕಿರಿ, ಕಣ್ಣಲ್ಲಿ ನೀರಿಳಿಯುವುದು, ಕಣ್ಣುಗಳ ಮೇಲೆ ಒತ್ತಡ ಹೆಚ್ಚಿದಂಥ ಅನುಭವ, ಏನೋ ಕಸ ಬಿದ್ದಂತೆ ಅನಿಸುವುದು, ಉರಿಯೂತ ಮುಂತಾದವೆಲ್ಲ ಈ ಸಮಸ್ಯೆಯಿಂದಲೇ ಆಗುವಂಥವು.

Eye Blinking 2

ತಡೆಯಲಾಗದೆ?

ಆಗುತ್ತದೆ. ಇದಕ್ಕಾಗಿ ಕೆಲವು ಕ್ರಮಗಳನ್ನು ನಾವು ಅಳವಡಿಸಿಕೊಳ್ಳಬೇಕು. ಮೊದಲ ಕ್ರಮ ಅತ್ಯಂತ ಸರಳ- ನೆನಪಿನಿಂದ ಕಣ್ಣು ಮಿಟುಕಿಸುವುದು! ಇದಕ್ಕೆ ಪರ್ಯಾಯಗಳಿಲ್ಲ. ಎಂತಹ ಮುಖ್ಯವಾದ ಕೆಲಸವನ್ನೇ ನೀವು ಮಾಡುತ್ತಿದ್ದರೂ ಕಣ್ಣು ಮುಚ್ಚಿ-ಬಿಟ್ಟು ಮಾಡಲೇಬೇಕು. ಎರಡನೆಯದು, 20-20-20 ನಿಯಮವನ್ನು ಪಾಲಿಸುವುದು. ಅಂದರೆ ಪ್ರತಿ 20 ನಿಮಿಷಗಳಿಗೆ 20 ಸೆಕೆಂಡ್‌ಗಳ ಕಾಲ ಕಣ್ಣಿನ ದೃಷ್ಟಿಯನ್ನು ಕಂಪ್ಯೂಟರ್‌ನಿಂದ ತೆಗೆದು, 20 ಅಡಿ ದೂರದ (ಗೆಜೆಟ್‌ ಅಲ್ಲದಿರುವ) ಏನನ್ನಾದರೂ ದಿಟ್ಟಿಸುವುದು. ಕಿಟಕಿಯಾಚೆಗೆ, ಬಾಗಿಲಿನಿಂದ ಹೊರಗೆ, ಯಾವುದೋ ಗಿಡ, ಹೂವು, ಪ್ರಾಣಿ ಮುಂತಾದ ಯಾವುದನ್ನಾದರೂ ಸರಿ, 20 ಸೆಕೆಂಡುಗಳ ಕಾಲ ದಿಟ್ಟಿಸಿ. ಮೂರನೆಯದು, ನೇರವಾಗಿ ಫ್ಯಾನು, ಎಸಿ ಮುಂತಾದ ಕೃತಕ ಗಾಳಿ ಬೀಸುವಂಥ ಉಪಕರಣಗಳಿಗೆ ಮುಖವನ್ನು ಒಡ್ಡಿಕೊಳ್ಳಬೇಡಿ. ಇದರಿಂದ ಕಣ್ಣಿನ ಶುಷ್ಕತೆ ಮತ್ತೂ ಹೆಚ್ಚುತ್ತದೆ. ನಾಲ್ಕನೆಯದು, ಕೃತಕ ಕಂಬನಿಗಳನ್ನು (ಐ ಡ್ರಾಪ್ಸ್‌) ಉಪಯೋಗಿಸುವುದು. ಇದಕ್ಕಾಗಿ ನಿಮ್ಮ ನೇತ್ರ ವೈದ್ಯರಲ್ಲಿ ಸಲಹೆ ಪಡೆಯುವುದು ಅಗತ್ಯ.