ಪ್ರಧಾನಿಯ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ
ಪ್ರಧಾನಿಯ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ
Vishwavani News
August 17, 2022
ಬಾಗಲಕೋಟೆ: ಪ್ರಧಾನಿ ಮೋದಿಯಿಂದ ಪ್ರಶಂಸೆಗೆ ಒಳಗಾಗಿದ್ದ ಶ್ವಾನ ಪ್ರಧಾನಿ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆಗೆ ಸೇರ್ಪಡೆಯಾಗಿದೆ. ಈ ಮೂಲಕ ಭಾರತೀಯ ಸೇನೆ, ಐಟಿಬಿಪಿ, ಪೊಲೀಸ್ ಇಲಾಖೆ ಸೇರಿದಂತೆ ದೇಶದ ಭದ್ರತಾ ಪಡೆಯಲ್ಲಿದ್ದ ಮುಧೋಳ ಶ್ವಾನ ತಳಿಗೆ ಮತ್ತೊಂದು ಗರಿ ಸಿಕ್ಕಿದೆ.
ಮುಧೋಳ ಶ್ವಾನ ಪಕ್ಕಾ ಬೇಟೆ ನಾಯಿ ಎಂದೇ ಹೆಸರಾಗಿರುವ ಶ್ವಾನ. ಶರವೇಗದಲ್ಲಿ ಓಡುವ ಮುಧೋಳ ಹೌಂಡ್ ಶ್ವಾನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಣಕಲು ದೇಹದ, ಉದ್ದನೆಯ ಕಾಲುಳ್ಳ, ಕೋಲು ಮುಖದ ಶ್ವಾನ. ಈ ಹಿಂದೆ ಪ್ರಧಾನಿ ಮೋದಿ ಮುಧೋಳ ಶ್ವಾನವನ್ನು ಪ್ರಶಂಸಿಸಿದ್ದರು.
ಈಗಾಗಲೇ ಈ ಶ್ವಾನ ಭಾರತೀಯ ಭೂ ಸೇನೆಯ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಭೂ ಸೇನೆಯ ಬಳಿಕ ವಾಯುಸೇನೆ, ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್, ರಾಜ್ಯ ಪೊಲೀಸ್ ಇಲಾಖೆ, ಸಶಸ್ತ್ರ ಸೀಮಾ ಪಡೆ, ಸಿಆರ್ ಪಿಎಫ್ ಸೇರಿ ವಿವಿಧ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಮುಧೋಳ ಶ್ವಾನ ಇದೀಗ ಮಹತ್ವದ ಜವಾಬ್ದಾರಿಗೆ ನಿಯೋಜನೆ ಗೊಳ್ಳಲು ಸಜ್ಜಾಗಿದೆ. ದೇಶದ ಪ್ರಧಾನಿಗೆ ಭದ್ರತೆ ಒದಗಿಸುತ್ತಿದ್ದ ಎಸ್‌ಪಿಜಿ ಕಮಾಂಡೊ ಪಡೆ ಜೊತೆ ಮುಧೋಳ ಶ್ವಾನ ಸಹ ಕಾರ್ಯ ನಿರ್ವಹಿಸಲಿದೆ.
2020ರ ಆಗಸ್ಟ್ 30 ರಂದು ನಡೆದಿದ್ದ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಧೋಳ ನಾಯಿಗಳ ಮಹತ್ವವನ್ನು ದೇಶದ ಜನತೆಗೆ ತಿಳಿಸಿದ್ದರು.