Crime News: 9 ತಿಂಗಳ ಗರ್ಭಿಣಿಯ ಬರ್ಬರ ಹತ್ಯೆ; ಬೆಳಗಾವಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ
Crime News: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, 9 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬೆಳಗಾವಿ: ಜಿಲ್ಲೆಯ ಅಥಣಿ (Athani) ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, 9 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ತುಂಬು ಗರ್ಭಿಣಿಯನ್ನು ಕೊಲೆ ಮಾಡಲಾಗಿದೆ. ಸುವರ್ಣಾ ಮಠಪತಿ (33) ಮೃತರು (Crime News).
ಸುವರ್ಣಾ ಮಠಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಅವರು ಐದನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಮುಂದಿನ ವಾರ ಹೆರಿಗೆ ನಡೆಯುವ ಸಾಧ್ಯತೆ ಇತ್ತು. ಆದರೆ ವಾರದ ಹಿಂದೆ ಮನೆಯೊಳಗೆ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಗರ್ಭಿಣಿ ಸುವರ್ಣ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡ ಸುವರ್ಣ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೂರ್ವ ದ್ವೇಷದಿಂದ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೃತ ಸುವರ್ಣ 18 ವರ್ಷಗಳ ಹಿಂದೆ, ಮಹಾಂತಯ್ಯಾ ದುಂಡಯ್ಯಾ ಮಠಪತಿ ಅವರನ್ನು ವಿವಾಹವಾಗಿದ್ದರು.
ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಸಾವು
ಶಿವಮೊಗ್ಗ: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ನಂಜಪ್ಪ ಲೇಔಟ್‌ನಲ್ಲಿರುವ ಇಂಪಿರಿಯರ್ ಕಾಲೇಜಿನಲ್ಲಿ ಬುಧವಾರ (ಡಿ. 18) ನಡೆದಿದೆ. ಮುಬಷಿರ್ ಬಾನು (17) ಮೃತ ದುರ್ದೈವಿ. ದ್ವಿತೀಯ ಪಿಯುಸಿ ಓದುತ್ತಿದ್ದ ಮುಬಷಿರ್ ಬಾನು, ಕಾಲೇಜಿನಲ್ಲಿ ಪ್ರಜ್ಞೆ ತಪ್ಪಿ ಏಕಾಏಕಿ ಹಿಮ್ಮುಖವಾಗಿ ಬಿದ್ದಿದ್ದಾಳೆ. ಪ್ರೌಢ ಶಾಲೆಯ ಶಿಕ್ಷಕರು ಕಾಲೇಜಿಗೆ ಬಂದ ಹಿನ್ನೆಲೆಯಲ್ಲಿ ಮಾತನಾಡಿಸಲೆಂದು ಪ್ರಿನ್ಸಿಪಾಲ್ ಕಚೇರಿಗೆ ಬರುತ್ತಿದ್ದ ವೇಳೆ ಲೋ ಬಿಪಿಯಿಂದ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಯುವತಿ ಬಿದ್ದು ಸಾವನ್ನಪ್ಪಿದ ವಿಡಿಯೋ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಈ ಸುದ್ದಿಯನ್ನೂ ಓದಿ: Road Accident: ಕೋಲಾರದಲ್ಲಿ ಭೀಕರ ಅಪಘಾತ; ಬೊಲೆರೋ ಡಿಕ್ಕಿಯಾಗಿ ಐವರ ದುರ್ಮರಣ