Savadatti News: ಐತಿಹಾಸಿಕ ಗ್ರಾಮದೇವಿ ಜಾತ್ರೆ ಆರಂಭ: ದೇವಿಯರನ್ನು ಕಣ್ತುಂಬಿಕೊಂಡು ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ
ಭಕ್ತರ ದಂಡು "ಉಧೋ ಉಧೋ" ಎಂದು ಜಯಘೋಷ ಎಲ್ಲೆಡೆ ಮೊಳಗಿತ್ತು. ಜೋಗತಿಯರು "ಗ್ರಾಮ ದೇವತೆ ನಿನ್ ಹಾಲಕ್ ಉಧೋ" ಎಂದು ಜೋಗ ಹಾಕಿದರು. ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಜಾತ್ರೆಯಲ್ಲಿ ಭಾಗಿಯಾದರು. ನಗರದ ಮನೆಮನೆಗಳಿಗೂ ಬಣ್ಣ ಹಚ್ಚಿ, ತಳಿರು ತೋರಣ ಕಟ್ಟಿ ರಸ್ತೆಯಲ್ಲಿ ರಂಗೋಲಿ ಬಿಡಿಸಿ ದೀಪಾಲಂಕಾರ ಅಳವಡಿಸಿ ಶೃಂಗರಿಸ ಲಾಗಿತ್ತು
-
ಸವದತ್ತಿ: ನಗರದಲ್ಲಿ 45 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಯು ಹಬ್ಬದ ಸಡಗರದ ವಾತಾವರಣ ಸೃಷ್ಟಿಸಿದೆ. ಗ್ರಾಮ ದೇವಿಯರ ಪುರಪ್ರವೇಶ ಅತೀ ವಿಜೃಂಭಣೆಯಿಂದ ನೆರವೇರಿದೆ. ಗ್ರಾಮದೇವಿ ಜಾತ್ರಾ ಸಮಿತಿಯ ಗೌರವಾಧ್ಯಕ್ಷ ವಿಶ್ವಾಸ ವೈದ್ಯ, ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಹಾಗೂ 16 ಮನೆತನದ ರೈತ ಮುಖಂಡರ ನೇತೃತ್ವದಲ್ಲಿ ಜಾತ್ರೆ ನಡೆಯುತ್ತಿದೆ.
ಹೋಮ ಹವನ, ಅಭಿಷೇಕ, ಮಂಗಳಾರತಿ ಸೇರಿ ವಿವಿಧ ಪೂಜಾ ಪದ್ದತಿಯೊಂದಿಗೆ ದೇವಿಯರನ್ನು ಕುಂಭ ಮೇಳ, ಡೊಳ್ಳು, ನಗಾರಿ, ಗೊಂಬೆ ಕುಣಿತ, ಸಕಲ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ದೇವಿಯರನ್ನು ಸ್ವಾಗತಿಸಲಾಗಿದೆ. ಹೊಸಪೇಟ ಓಣಿ ಮುಖಾಂತರ ಆನಿ ಅಗಸಿಯ ಶಕ್ತಿಗಡ್ಡಿಗೆ ದೇವಿಯರ ಆಗಮನವಾಗಿ ಅಲ್ಲಿಂದ ಮೊಕಾಶಿ ಓಣಿಯ ತವರು ಮನೆ ಕಟ್ಟಿಗೆ ದೇವಿ ಯರನ್ನು ಕರೆತಂದು ಅಲ್ಲಿ ವಿವಿಧ ಆಭರಣಗಳೊಂದಿಗೆ ದೇವಿಯರಿಗೆ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ: Savadatti News: ಗೂಳಿಗಳ ಹಾವಳಿ: ವಿದ್ಯಾರ್ಥಿಗಳು, ಬೈಕ್ ಸವಾರರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣ
ಬಳಿಕ ತವರು ಮನೆಯಿಂದ ಸಾಗಿ ಕೋಟೆಗೆ ತಲುಪಿ ಸಾಂಪ್ರದಾಯದಂತೆ ಮಾಂಗಲ್ಯಧಾರಣೆ ಮಾಡಿ ಪೂಜೆ ನೆರವೇರಿಸಲಾಯಿತು. ಕೋಟೆಯಿಂದ ಕಟ್ಟಿ ಓಣಿಯಲ್ಲಿ ನಿರ್ಮಿಸಿರುವ ಗ್ರಾಮ ದೇವಿಯರ ಕಟ್ಟಿಯ ಅರಮನೆ ಮಂಟಪದಲ್ಲಿ ದೇವಿಯರನ್ನು ಪ್ರತಿಷ್ಠಾಪಣೆ ಮಾಡಲಾಯಿತು.
ಈ ಐತಿಹಾಸಿಕ ಜಾತ್ರೆಯನ್ನು ಸಾವಿರಾರು ಸಂಖ್ಯೆಯ ಭಕ್ತರು, ಯುವಕರು, ಯುವತಿಯರು, ಹಿರಿಯರು ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು. ಬಹಳ ವರ್ಷಗಳ ಸಂಭ್ರಮ, ಸಂತಸ ಎಲ್ಲರಲ್ಲೂ ಮನೆಮಾಡಿತ್ತು. ಇಡೀ ನಗರವೇ ಹಬ್ಬದ ವಾತಾವರಣದಲ್ಲಿ ಮಿಂದೆದ್ದಿತು. ಗ್ರಾಮದ ಯುವಕರು ಹಳದಿ ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿ ಭಂಡಾರ ಎರಚುತ್ತಾ ಸಾಗಿದರು.
ಭಕ್ತರ ದಂಡು "ಉಧೋ ಉಧೋ" ಎಂದು ಜಯಘೋಷ ಎಲ್ಲೆಡೆ ಮೊಳಗಿತ್ತು. ಜೋಗತಿಯರು "ಗ್ರಾಮದೇವತೆ ನಿನ್ ಹಾಲಕ್ ಉಧೋ" ಎಂದು ಜೋಗ ಹಾಕಿದರು. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಜಾತ್ರೆಯಲ್ಲಿ ಭಾಗಿಯಾದರು. ನಗರದ ಮನೆ ಮನೆಗಳಿಗೂ ಬಣ್ಣ ಹಚ್ಚಿ, ತಳಿರು ತೋರಣ ಕಟ್ಟಿ ರಸ್ತೆಯಲ್ಲಿ ರಂಗೋಲಿ ಬಿಡಿಸಿ ದೀಪಾಲಂಕಾರ ಅಳವಡಿಸಿ ಶೃಂಗರಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಭಕ್ತರು ತಮ್ಮ ಮನೆಯ ಮುಂದೆ ನೀರನ್ನು ಹಾಕಿ ದೇವಿಯರನ್ನು ಸ್ವಾಗತಿಸಿದರು. ಮೇ 4ರಿಂದ 12ರವರೆಗೆ ವೈವಿಧ್ಯಮಯ, ಸಾಂಸ್ಕೃ ತಿಕ ಹಾಗೂ ಧಾರ್ಮಿಕ ಕಾರ್ಯ-ಕ್ರಮಗಳು ನಡೆಯಲಿವೆ. ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯು ನಗರದಲ್ಲಿ ಸಂಭ್ರಮದ ಕಳೆ ಹೆಚ್ಚಿಸಿದೆ. ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದು ಪುನೀತಲಾಗಲಿದ್ದಾರೆ.
ಗ್ರಾಮದೇವತೆ ಜಾತ್ರೆ ಅಂಗವಾಗಿ ಭಕ್ತರು, ತಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಕೆಲವು ಕಟ್ಟು ಪಾಡುಗಳನ್ನು ಅನುಸರಿಸುತ್ತಿದ್ದಾರೆ. ಜಾತ್ರೆ ವೇಳೆ ಗ್ರಾಮಸ್ಥರು ಪಾದರಕ್ಷೆ ಧರಿಸಬಾರದು, ಮನೆ ಗಳಲ್ಲಿ ರೊಟ್ಟಿ ಬಡಿಯಬಾರದು, ದವಸಧಾನ್ಯಗಳನ್ನು ಕುಟ್ಟಬಾರದು, ಬೀಸಬಾರದು, ಒಣ ಮೆಣಸಿನಕಾಯಿ ಕುಟ್ಟಿ ಖಾರ ಮಾಡಬಾರದು, ಎಣ್ಣೆಯಲ್ಲಿ ಯಾವುದೇ ಆಹಾರವನ್ನೂ ಕರಿಯ ಬಾರದು. ಹೀಗೆ ಹಲವು ಕಟ್ಟುಪಾಡುಗಳನ್ನು ಅನುಸರಿಸಲಾಗುತ್ತಿದೆ.
ಮೇ.12ರ ವರೆಗೆ ಜಾತ್ರಾ ವೈಭವ ನಡೆಯಲಿದ್ದು, ಪ್ರತಿನಿತ್ಯ ಗ್ರಾಮದೇವಿಯರಿಗೆ ವಿಶೇಷ ಪೂಜೆ, ಪ್ರಾರ್ಥನೆ, ಹೋಮ ಹವನ, ಉಡಿ ತುಂಬುವ ಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ರಸ ಮಂಜರಿ, ವಿವಿಧ ಸ್ಫರ್ಧೆಗಳು ನಡೆಯಲಿವೆ. ಒಟ್ಟಿನಲ್ಲಿ ಗ್ರಾಮದೇವಿ ಜಾತ್ರೆ ಪ್ರತಿ ಮನೆ ಮನಗಳಲ್ಲಿ ಸಂತಸ ತರಲಿದೆ. ಬರುವ ಭಕ್ತರಿಗೆ 9 ದಿನಗಳ ಕಾಲ ಪ್ರಸಾದ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆ ಪೂರ್ವ ತಯಾರಿ ನಡೆಸಿ ಯಾವದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದೆ.