ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Marriage bliss for lovers: ಜೀವಾವಧಿ ಶಿಕ್ಷೆಯಲ್ಲಿದ್ದ ಪ್ರೇಮಿಗಳಿಗೆ ಮದುವೆ ಭಾಗ್ಯ: ಒಂದು ದಿನದ ಪರೋಲ್ ಮಂಜೂರು

2023ರ ಜುಲೈ 17ರಂದು ಭೀಮನ ಅಮಾವಾಸ್ಯೆಯಂದು ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶಂಕರ ಸಿದ್ದಪ್ಪ ಜಗಮುತ್ತಿ (28) ಎಂಬಾತನ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಆತನ ಪತ್ನಿ ಸಿದ್ದವ್ವ ಉರ್ಫ್ ಪ್ರಿಯಾಂಕಾ ಶಂಕರ ಜಗಮುತ್ತಿ (21) ಹಾಗೂ ಬೈರನಟ್ಟಿ ಗ್ರಾಮದ ಶ್ರೀಧರ ಅರ್ಜುನ ತಳವಾರ (21) ಆರೋಪಿಗಳಾಗಿದ್ದರು.

ಜೀವಾವಧಿ ಶಿಕ್ಷೆಯಲ್ಲಿದ್ದ ಪ್ರೇಮಿಗಳಿಗೆ ಮದುವೆ ಭಾಗ್ಯ

-

Profile
Ashok Nayak Oct 6, 2026 11:04 AM

ಮೂಡಲಗಿ (ಬೆಳಗಾವಿ): ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಜೀವಾವಧಿ ಕೈದಿಗಳು ಪರಸ್ಪರ ವಿವಾಹವಾಗಲು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ, ಮಾನವೀಯ ಆಧಾರದ ಮೇಲೆ ಇಬ್ಬರಿಗೂ ಒಂದು ದಿನದ ತಾತ್ಕಾಲಿಕ ಪರೋಲ್‌ಗೆ ಅನುಮತಿ ನೀಡಿದೆ.

ಈ ಕುರಿತು ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಪೀಠವು 2026ರ ಸೆಪ್ಟೆಂಬರ್ 25ರಂದು WP No.105612/2026ರಲ್ಲಿ ಆದೇಶ ಹೊರಡಿಸಿದೆ.

ಪತಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆ

2023ರ ಜುಲೈ 17ರಂದು ಭೀಮನ ಅಮಾವಾಸ್ಯೆಯಂದು ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶಂಕರ ಸಿದ್ದಪ್ಪ ಜಗಮುತ್ತಿ (28) ಎಂಬಾತನ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಆತನ ಪತ್ನಿ ಸಿದ್ದವ್ವ ಉರ್ಫ್ ಪ್ರಿಯಾಂಕಾ ಶಂಕರ ಜಗಮುತ್ತಿ (21) ಹಾಗೂ ಬೈರನಟ್ಟಿ ಗ್ರಾಮದ ಶ್ರೀಧರ ಅರ್ಜುನ ತಳವಾರ (21) ಆರೋಪಿಗಳಾಗಿದ್ದರು.

ಇದನ್ನೂ ಓದಿ:

ಪೊಲೀಸ್ ತನಿಖೆಯ ಪ್ರಕಾರ, ಪ್ರಿಯಾಂಕಾ ಮತ್ತು ಶ್ರೀಧರ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಾಂಕಾ ಳನ್ನು ಶಂಕರನೊಂದಿಗೆ ವಿವಾಹ ಮಾಡಿಕೊಟ್ಟ ಬಳಿಕವೂ ಇಬ್ಬರ ಸಂಪರ್ಕ ಮುಂದುವರಿದಿತ್ತು ಎನ್ನಲಾಗಿದ್ದು, ಶಂಕರನ ಕೊಲೆಗೆ ಇಬ್ಬರೂ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಘಟನಾ ಸ್ಥಳಕ್ಕೆ ಅಂದಿನ ಎಸ್ಪಿ ಸಂಜೀವ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದರು. ಗೋಕಾಕ ಡಿವೈಎಸ್ಪಿ ಮುಲ್ಲಾ, ಸಿಪಿಐ ಶ್ರೀಶೈಲ ಬ್ಯಾಕೂಡ ಹಾಗೂ ಪಿಎಸ್‌ಐ ಎಚ್.ವೈ. ಬಾಲದಂಡಿ ಪ್ರಕರಣದ ತನಿಖೆ ನಡೆಸಿದ್ದರು.

ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗೋಕಾಕದ 12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ಇಬ್ಬರಿಗೂ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ ₹3 ಲಕ್ಷ ದಂಡ ವಿಧಿಸಿದ್ದರು. ಹೀಗಾಗಿ ಇಬ್ಬರೂ ಪ್ರಸ್ತುತ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಮದುವೆಯಾಗಲು 90 ದಿನಗಳ ಪರೋಲ್ ಕೋರಿದ್ದ ಜೋಡಿ

ಶಿಕ್ಷೆ ಅನುಭವಿಸುತ್ತಿರುವ ಇಬ್ಬರೂ ಪರಸ್ಪರ ವಿವಾಹವಾಗಲು ನಿರ್ಧರಿಸಿ, ಮದುವೆಗಾಗಿ 90 ದಿನಗಳ ಪರೋಲ್ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಪೀಠವು ಕಾರಾಗೃಹ ಶಿಕ್ಷೆಯ ಉದ್ದೇಶ ಕೇವಲ ಶಿಕ್ಷೆ ನೀಡುವುದಲ್ಲ, ಕೈದಿಗಳಲ್ಲಿ ಸುಧಾರಣೆಯ ಅವಕಾಶ ಕಲ್ಪಿಸುವುದೂ ಆಗಿದೆ. ಕೈದಿಗಳಿಗೂ ಕುಟುಂಬ ಮತ್ತು ಸಮಾಜದೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳುವ ಹಕ್ಕಿದೆ ಎಂಬ ಕಾನೂನು ತತ್ವಗಳನ್ನು ನ್ಯಾಯಾಲಯ ಪರಿಗಣಿಸಿದೆ.

90 ದಿನಗಳ ಬದಲಿಗೆ ಒಂದು ದಿನದ ಪರೋಲ್

ಆದರೆ, 90 ದಿನಗಳ ಪರೋಲ್ ಮನವಿಯನ್ನು ಸಂಪೂರ್ಣವಾಗಿ ಅಂಗೀಕರಿಸದ ನ್ಯಾಯಾಲಯ, ಒಂದು ದಿನದ ತಾತ್ಕಾಲಿಕ ಪರೋಲ್‌ಗೆ ಮಾತ್ರ ಅನುಮತಿ ನೀಡಿದೆ.

ನ್ಯಾಯಾಲಯದ ನಿರ್ದೇಶನದಂತೆ ಪೊಲೀಸ್ ಭದ್ರತೆಯಲ್ಲಿ ವಿವಾಹ ನೆರವೇರಬೇಕು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೋಲ್ ಅವಧಿ ಇರಲಿದ್ದು, ವಿವಾಹ ಮುಗಿದ ಬಳಿಕ ಅದೇ ದಿನ ಇಬ್ಬರೂ ಮತ್ತೆ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಹಾಜರಾಗಬೇಕು.

ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದೊಳಗೆ ವಿವಾಹದ ದಿನಾಂಕ ನಿಗದಿಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.

ಇದೀಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈ ಇಬ್ಬರು ಕೈದಿಗಳ ವಿವಾಹ ಯಾವ ದಿನ ನಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.