IAF officer Attacked: ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್; ವಾಯುಸೇನೆ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್
IAF officer Attacked: ಬೆಂಗಳೂರಿನ ನಗರದ ಸಿ.ವಿ.ರಾಮನ್ ನಗರದಲ್ಲಿ ರೋಡ್ ರೇಜ್ ಪ್ರಕರಣ ನಡೆದಿದೆ. ಘಟನೆ ಬಗ್ಗೆ ನಾವು ದೂರು ನೀಡಲು ಹೋದಾಗ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ವಾಯುಸೇನೆ ಅಧಿಕಾರಿ ಆರೋಪಿಸಿದ್ದಾರೆ.
-
Prabhakara R
Apr 21, 2025 4:26 PM
ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ (IAF officer Attacked) ನಡೆದಿದೆ. ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಐಎಎಫ್ ಅಧಿಕಾರಿ ಮೇಲೆ ಕಿಡಿಗೇಡಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಸಿ.ವಿ.ರಾಮನ್ ನಗರದಲ್ಲಿ ನಡೆದಿದೆ. ಹಲ್ಲೆಯಿಂದ ಐಎಎಫ್ ಅಧಿಕಾರಿ ಮುಖ ಹಾಗೂ ಕತ್ತಿನ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ತಮ್ಮ ಮೇಲೆ ನಡೆದ ಹಲ್ಲೆ ಬಗ್ಗೆ ವಿಂಗ್ ಕಮಾಂಡರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಐಎಎಫ್ ಅಧಿಕಾರಿ ಶಿಲಾಧಿತ್ಯ ಬೋಸ್ ಹಲ್ಲೆಗೊಳಗಾದವರು. ನಗರದ ಡಿಆರ್‌ಡಿಒ ಕಾಲೋನಿ ನಿವಾಸಿಯಾದ ಇವರು ಪತ್ನಿ ಮಧುಮಿತಾ ಜತೆ ಕಾರಿನಲ್ಲಿ ಭಾನುವಾರ ಸಂಜೆ ಸಿ.ವಿ.ರಾಮನ್ ನಗರದಿಂದ ಏರ್‌ಪೋರ್ಟ್‌ಗೆ ತೆರಳುವಾಗ ಹಲ್ಲೆ ನಡೆಸಲಾಗಿದೆ. ಇವರ ಪತ್ನಿ ಕೂಡ ಐಎಎಫ್‌ನ ಸ್ಕ್ವಾಡ್ರನ್ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲ್ಲೆಯಿಂದ ಮುಖ ಹಾಗೂ ಕತ್ತಿನ ಭಾಗದಿಂದ ರಕ್ತ ಸೋರುತ್ತಿರುವ ನಡುವೆಯೇ ವಿಡಿಯೋ ಮಾಡಿರುವ ಐಎಎಫ್ ಅಧಿಕಾರಿ, ನಾವು ಕಾರಿನಲ್ಲಿ ಹೋಗುವಾಗ ಬೈಕ್‌ನಲ್ಲಿ ಹಿಂದಿನಿಂದ ಬಂದ ಒಬ್ಬ ವ್ಯಕ್ತಿ ನಮ್ಮ ಕಾರನ್ನು ನಿಲ್ಲಿಸಿ, ಏಕಾಏಕಿ ಕನ್ನಡದಲ್ಲಿ ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ. ಕಾರಿನ ಮೇಲಿನ ಸ್ಟಿಕ್ಕರ್ ನೋಡಿ ನೀವು ಡಿಆರ್‌ಡಿಒಗೆ ಸೇರಿದವರಾ? ಎಂದು ಕೇಳಿದ. ಈ ವೇಳೆ ನಾನು ಕೆಳಗಿಳಿದಾಗ, ವ್ಯಕ್ತಿಯೊಬ್ಬ ನನ್ನ ಮೇಲೆ ಬೈಕ್ ಕೀಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆ ನಡೆದಾಗ, ನಿಮ್ಮನ್ನು ರಕ್ಷಿಸುವ ಜನರನ್ನು ನೀವು ಹೇಗೆ ರಕ್ಷಿಸುತ್ತೀರಿ, ಸೈನಿಕರನ್ನು ಯಾರಾದರೂ ಈ ರೀತಿ ನಡೆಸಿಕೊಳ್ಳುತ್ತಾರಾ? ಎಂದು ಅಲ್ಲಿದ್ದ ಜನರನ್ನು ಕೇಳಿದೆ. ಆದರೆ, ಅಲ್ಲಿದ್ದವರು ನಮ್ಮನ್ನೇ ನಿಂದಿಸಲು ಪ್ರಾರಂಭಿಸಿದರು. ಹಲ್ಲೆ ಮಾಡಿದ್ದ ವ್ಯಕ್ತಿ ಮತ್ತೆ ಒಂದು ಕಲ್ಲನ್ನು ಎತ್ತಿಕೊಂಡು ನನ್ನ ಕಾರಿಗೆ ಹೊಡೆಯಲು ಯತ್ನಿಸಿದ. ಅದು ನನ್ನ ತಲೆಗೆ ಬಡಿಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಹಲ್ಲೆ ವೇಳೆ ನನ್ನ ಹೆಂಡತಿ ಪಕ್ಕದಲ್ಲೇ ಇದ್ದಿದ್ದರಿಂದ ಆಕೆ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಘಟನೆ ಬಗ್ಗೆ ನಾವು ದೂರು ನೀಡಲು ಹೋದಾಗ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ಕಿಡಿಗೇಡಿ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿದ್ದರೆ, ತಾವು ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಹಲ್ಲೆ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಐಎಎಫ್ ಅಧಿಕಾರಿಯನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ಪಡೆದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.